ನಿಮ್ಮದು ಕಣ್ಣೀರಿನ ಕಥೆನಾ? ಕೇಳಿದಾಗಲೆಲ್ಲಾ ಅಳಲು ಬರತ್ತಾ? ಇಷ್ಟು ಟ್ಯಾಲೆಂಟ್‌ ಇದ್ರೆ ಸಾಕು ಬಿಡಿ, ಸೆಲೆಕ್ಟೆಡ್‌! ಇದೇನು ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್​... 

ಇಂದು ಯಾವುದೇ ಭಾಷೆಯ ಯಾವುದೇ ರಿಯಾಲಿಟಿ , ಟ್ಯಾಲೆಂಟ್​ ಷೋಗಳನ್ನು ತೆಗೆದುಕೊಳ್ಳಿ. ಅಲ್ಲಿ ಟ್ಯಾಲೆಂಟ್‌ ಇದ್ದವರಿಗೆ ಆದ್ಯತೆ ಎನ್ನುವುದು ನಿಜವಾದರೂ, ಅಲ್ಲಿ ಆ ಷೋದ ಉದ್ದೇಶ ಬಿಟ್ಟು, ಸ್ಪರ್ಧಿಗಳು ಅಳುವುದು, ತಮ್ಮ ಕಣ್ಣೀರಿನ ಕಥೆಯನ್ನು ಹೇಳುವುದು, ಸ್ಪರ್ಧಿಗಳ ಕುಟುಂಬದವರು ಬಂದು ಕಣ್ಣೀರು ಹಾಕುವುದು, ಅದಕ್ಕೆ ತೀರ್ಪುಗಾರರು ಕಣ್ಣೀರು ಸುರಿಸುವುದು... ಇವೇ ರಾರಾಜಿಸುತ್ತಿರುವುದನ್ನು ನೋಡಬಹುದು. ಡಾನ್ಸ್‌, ಸಂಗೀತದಂಥ ರಿಯಾಲಿಟಿ ಷೋಗಳಲ್ಲಿಯೂ ಅವರಲ್ಲಿ ಆ ಟ್ಯಾಲೆಂಟ್​ ಇದ್ಯೋ ಇಲ್ವೋ, ಒಟ್ಟಿನಲ್ಲಿ ಕೇಳಿದಾಗಲೆಲ್ಲಾ ಅಳಬೇಕು, ಅವರ ಹಿನ್ನೆಲೆ ಸ್ವಲ್ಪ ಕಣ್ಣೀರಿನದ್ದು ಆಗಿರಬೇಕು. ಇಲ್ಲದಿದ್ದರೆ ನಿಮ್ಮಲ್ಲಿ ನೃತ್ಯ, ಹಾಡಿನ ಅದೆಷ್ಟು ಟ್ಯಾಲೆಂಟ್​ ಇದ್ದರೂ ಪ್ರಯೋಜನವೇ ಇಲ್ಲ! ಹೆಚ್ಚೆಚ್ಚು ಕಣ್ಣೀರು ಹಾಕಿದರೆ, ನಿಮ್ಮ ಕುಟುಂಬದವರನ್ನು ವೇದಿಕೆಯ ಮೇಲೆ ಕರೆತಂದು ಅವರಿಂದಲೂ ಕಣ್ಣೀರು ಹಾಕಿಸಿ, ನೋಡುವ ವೀಕ್ಷಕರ ಕಣ್ಣಲ್ಲೂ ನೀರು ತರಿಸುವ ಟ್ಯಾಲೆಂಟ್​ ಇದ್ದರೆ ಬಹುತೇಕ ಎಲ್ಲಾ ಭಾಷೆಯ ಯಾವುದೇ ರಿಯಾಲಿಟಿ ಷೋಗೂ ನೀವು ಸೈ, ನೀವೇ ಜೈ...

ಪ್ರತಿನಿತ್ಯ ಟಿವಿಯಲ್ಲಿ ಬರುವ ಹಲವು ರಿಯಾಲಿಟಿ ಷೋಗಳನ್ನು ಅದರಲ್ಲಿಯೂ ವೀಕೆಂಡ್​ಗಳಲ್ಲಿ ಬರುವ ಬೇರೆ ಬೇರೆ ಭಾಷೆಗಳ ಚಾನೆಲ್​ಗಳಲ್ಲಿಯೂ ನೀವು ಇದನ್ನೇ ನೋಡಿರಬಹುದು. ಅಲ್ಲಿಯ ಸ್ಪರ್ಧಿಗಳು ತಾವು ಬಂದಿರುವ ಷೋನಲ್ಲಿ ಎಷ್ಟು ಟ್ಯಾಲೆಂಟ್​ ಇದೆ ಎಂದು ತೋರಿಸುವುದಕ್ಕಿಂತಲೂ ಹೆಚ್ಚಾಗಿ ಒಂದೆಡೆ ಹಾರಾಟ, ಕೂಗಾಟ, ಚೀರಾಟಗಳ ಜೊತೆ ತೀರ್ಪುಗಾರರ ಜೊತೆ ಒಂದಿಷ್ಟು ಡಬಲ್​ ಮೀನಿಂಗ್​ಗಳು ಇದ್ದರೆ, ಮತ್ತೆ ಇರುವುದು ಸ್ಪರ್ಧಿಗಳ, ಅವರ ಕುಟುಂಬದವರ ಕಣ್ಣೀರಿನ ಕಥೆ. ಅಷ್ಟು ಆದ ಮೇಲೆ ಉಳಿದಿದ್ದರೆ ಅದು ಸ್ಪರ್ಧಿಗಳ ನಿಜವಾದ ಟ್ಯಾಲೆಂಟ್​ ಅಷ್ಟೇ. ಹಾಗೆಂದು ಇದನ್ನು ಯಾರ್ಯಾರೋ ಸುಖಾ ಸುಮ್ಮನೇ ಹೇಳುತ್ತಿಲ್ಲ. ಇಂದಿನ ರಿಯಾಲಿಟಿ ಷೋಗಳ ನಿಜವಾದತನವನ್ನು ತೆರೆದಿಟ್ಟಿದ್ದಾರೆ ಖ್ಯಾತ ಗಾಯಕಿ ಅರ್ಚನಾ ಉಡುಪ.

ಅಷ್ಟಕ್ಕೂ ಸದ್ಯ ಅರ್ಚನಾ ಉಡುಪ ಅವರು ಶ್ರೀರಸ್ತು, ಶುಭಮಸ್ತು ಸೀರಿಯಲ್​ನಲ್ಲಿ ರಾಧಾ ಕ್ಯಾರೆಕ್ಟರ್​ ಮಾಡುತ್ತಿದ್ದಾರೆ. ಆದರೆ ಇವರು ಇದಾಗಲೇ ಹಲವು ವರ್ಷಳಿಂದ ಹಿನ್ನೆಲೆ ಗಾಯಕಿಯಾಗಿ ತಮ್ಮ ಸುಮಧುರ ಕಂಠದಿಂದ ಜನರನ್ನು ಮೋಡಿ ಮಾಡಿದವರು. ಇದೀಗ ಅವರು ಸುವರ್ಣ ಪಾಡ್​ಕಾಸ್ಟ್​ಗೆ ನೀಡಿರೋ ಸಂದರ್ಶನದಲ್ಲಿ ಬಹುತೇಕ ರಿಯಾಲಿಟಿ ಷೋಗಳ ಹಣೆಬರಹವನ್ನು ತೆರೆದಿಟ್ಟಿದ್ದಾರೆ. ಬರುವ ಸ್ಪರ್ಧಿಗಳ ಟ್ಯಾಲೆಂಟ್​ಗಳಿಂತಲೂ ಹೆಚ್ಚಾಗಿ ಬೇರೆಯದ್ದೆ ಇಲ್ಲಿ ರಾರಾಜಿಸುತ್ತದೆ ಎಂದು ಅವರು ಹೇಳಿದ್ದಾರೆ. ಅದರಲ್ಲಿಯೂ ಸ್ಪರ್ಧಿಗಳ ಬಡತನ, ಅವರ ಕಣ್ಣೀರಿನ ಕಥೆ ಇದನ್ನೇ ಹೈಲೈಟ್ ಮಾಡಲಾಗುತ್ತದೆ. ಅದಾದ ಬಳಿಕ ಜನರಿಂದ ವೋಟಿಂಗ್​ ಕೇಳಲಾಗುತ್ತದೆ. ಆ ಸಂದರ್ಭದಲ್ಲಿ ವೀಕ್ಷಕರು ಭಾವುಕರಾಗಿರುತ್ತಾರೆ. ಸ್ಪರ್ಧಿಗಳ ನಿಜವಾದ ಟ್ಯಾಲೆಂಟ್​ ಬಿಟ್ಟು ಅವರ ವೈಯಕ್ತಿಕ ಜೀವನ ನೋಡಿ ವೋಟಿಂಗ್​ ಮಾಡುತ್ತಾರೆ. ಇದರಿಂದ ನಿಜವಾಗಿಯೂ ಟ್ಯಾಲೆಂಟ್​ ಇರುವವರಿಗೆ ಅನ್ಯಾಯ ಆಗುತ್ತಿದೆ ಎಂದು ಅರ್ಚನಾ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ರಿಯಾಲಿಟಿ ಷೋ, ಟ್ಯಾಲೆಂಟ್​ ಷೋಗಳನ್ನು ನೋಡುವ ದೊಡ್ಡ ವರ್ಗವೇ ಇದೆ. ಹಲವರು ಈ ಕೂಗಾಟ, ಚೀರಾಟ ಕೇಳಲಾಗದೇ ಅಥವಾ ಡಬಲ್​ ಮೀನಿಂಗ್​ ಡೈಲಾಗ್​ ಕೇಳಲಾಗದೇ ಇಲ್ಲವೇ ಸ್ಪರ್ಧಿಗಳು ಷೋ ಮಾಡುವುದಕ್ಕಿಂತ ಹೆಚ್ಚಾಗಿ ಕಣ್ಣೀರು ಹಾಕುವುದನ್ನು ನೋಡಲಾಗದೇ ಚಾನೆಲ್ ಚೇಂಜ್​ ಮಾಡುವವರೂ ಇದ್ದಾರೆ. ಪ್ರತಿಭೆಗಳ ಅನಾವರಣ ಆಗಬೇಕಿರುವ ಇಂಥ ಷೋಗಳು ಈಗ ದಿಕ್ಕು ತಪ್ಪುತ್ತಿರುವುದಕ್ಕೆ ಅರ್ಚನಾ ಉಡುಪ ಅವರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

View post on Instagram