ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ಜಮೀನು ವಿವಾದವು ಎರಡು ಕುಟುಂಬಗಳ ನಡುವಿನ ಗಲಾಟೆಗೆ ಕಾರಣವಾಗಿ, ಸುನೀಲ್ ಎಂಬ 27 ವರ್ಷದ ಯುವಕನ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿಗಳಾದ ಪಾರ್ಥಸಾರಥಿ ಮತ್ತು ಆತನ ಸ್ನೇಹಿತರು ಕೊಲೆ ಬಳಿಕ ತಲೆಮರೆಸಿಕೊಂಡಿದ್ದು ಪೊಲೀಸರು ಬಲೆ ಬೀಸಿದ್ದಾರೆ.

ಕನಕಪುರ (ಅ.12): ಜಮೀನು ವಿಚಾರಕ್ಕೆ ನಡೆದ ಎರಡು ಕುಟುಂಬಗಳ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡ ಭೀಕರ ಘಟನೆ ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಸುನಿಲ್ (27) ಕೊಲೆಯಾದ ಯುವಕ. ತುಂಗಣಿ ಗ್ರಾಮದ ನಿವಾಸಿಯಾಗಿರುವ ಮೃತ ಸುನೀಲ್ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಭೀಕರವಾಗಿ ಕೊಂದಿದ್ದಾರೆಂದು ಆರೋಪಿಸಲಾಗಿದೆ. ಪಾರ್ಥಸಾರಥಿ ಮತ್ತು ಅವನ ಸ್ನೇಹಿತರು ಕೊಲೆಯ ಆರೋಪಿಗಳಾಗಿದ್ದಾರೆ.

ಜಮೀನು ವಿವಾದ ಕೊಲೆಯಲ್ಲಿ ಅಂತ್ಯ:

ಸುನೀಲ್‌ನ ತಂದೆಯಿಂದ ಪಾರ್ಥಸಾರಥಿ ಎರಡು ಎಕರೆ ಜಮೀನನ್ನು ಕುಟುಂಬಸ್ಥರಿಗೆ ಮಾಹಿತಿ ನೀಡದೆ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಪಾರ್ಥಸಾರಥಿ ಮನೆ ಬಳಿ ಹೋಗಿ ಸುನೀಲ್ ಹಾಗೂ ಸಹೋದರ ಕಿರಣ್ ಗಲಾಟೆ ಮಾಡಿದ್ದರು. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಸುನೀಲ್ ಮೇಲೆ ಪಾರ್ಥಸಾರಥಿ ಹಾಗೂ ಸ್ನೇಹಿತರಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸುನೀಲ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸಹೋದರ ಕಿರಣ್‌ ಮೇಲೆ ಹಲ್ಲೆ ನಡೆಸಿದ್ದರಿಂದ ಸಹೋದರನೂ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಉತ್ತರ ಕನ್ನಡ: ಪತ್ನಿಯ ಶೀಲ ಶಂಕಿಸಿ ಬೆಂಕಿ ಹಚ್ಚಿದ ಪತಿ ಏಳು ದಿನ ನರಳಾಡಿ ಜೀವಬಿಟ್ಟ ಮಹಿಳೆ!

ಪೊಲೀಸರು ಭೇಟಿ:

ಘಟನೆಯ ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳಾದ ಪಾರ್ಥಸಾರಥಿ ಮತ್ತು ಸ್ನೇಹಿತರು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.