ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸಾಲ ತೀರಿಸಲು ಸರ್ಕಾರದ ಪರಿಹಾರ ಪಡೆಯುವ ಉದ್ದೇಶದಿಂದ ಪತ್ನಿಯೊಬ್ಬಳು ಪತಿಗೆ ವಿಷ ಹಾಕಿ ಕೊಲೆ ಮಾಡಿ, ವನ್ಯಪ್ರಾಣಿ ದಾಳಿ ಎಂದು ಬಿಂಬಿಸಲು ಯತ್ನಿಸಿದ ಘಟನೆ ನಡೆದಿದೆ. ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.

ಹುಣಸೂರು(ಸೆ.12): ಮಾಡಿದ್ದ ಸಾಲ ತೀರಿಸಲು ಸರ್ಕಾರದ ಪರಿಹಾರ ಪಡೆಯುವ ಸಲುವಾಗಿ ಪತಿಯನ್ನೇ ವಿಷ ಹಾಕಿ ಸಾಯಿಸಿ, ವನ್ಯಪ್ರಾಣಿಗೆ ಬಲಿಯಾಗಿದ್ದಾರೆಂದು ಬಿಂಬಿಸಲು ಹೋದ ಪತ್ನಿ ಸಿಕ್ಕಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ ಚಿಕ್ಕ ಹೆಜ್ಜೂರಿನಲ್ಲಿ ನಡೆದಿದೆ.

ನಾಗರಹೊಳೆ ಉದ್ಯಾನದಂಚಿನ ತೋಟವೊಂದರಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಡ್ಯದ ವೆಂಕಟಸ್ವಾಮಿ (45) ಕೊಲೆ ಆದವರು, ಈತನ ಪತ್ನಿ ಸೊಲ್ಲಾಪುರಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೆಂಕಟಸ್ವಾಮಿ ಹಾಗೂ ಸೊಲ್ಲಾಪುರಿ ತಮ್ಮೂರಲ್ಲಿ ಮನೆ ಕಟ್ಟಲು ₹15 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸುವ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಜಗಳವಾಗುತ್ತಿತ್ತು. ವನ್ಯಜೀವಿಗಳ ದಾಳಿಗೆ ಒಳಗಾದಲ್ಲಿ ಸರ್ಕಾರದಿಂದ ₹15 ಲಕ್ಷ ಪರಿಹಾರ ಸಿಗಲಿದೆ ಮಾಹಿತಿ ಪಡೆದಿದ್ದ ಈಕೆ, ಮಂಗಳವಾರ ರಾತ್ರಿ ಕುಡಿದು ಬಂದಿದ್ದ ಗಂಡನಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಹಾಕಿದ್ದಾಳೆ.

ಇದನ್ನೂ ಓದಿ: ಹುಡುಗಿ ವಿಚಾರಕ್ಕೆ ಗಲಾಟೆ, ಸ್ಮೇಹಿತನನ್ನ ರೈಲಿಗೆ ತಳ್ಳೋಕೆ ಹೋದವನೇ ಕೊಲೆ, ರೀಲ್ಸ್ ಮಾಡಲು ಹೋಗಿ ಸತ್ತನೆಂದ ಸ್ನೇಹಿತ!

ಬೆಳಗ್ಗೆ ವೇಳೆಗೆ ಮೃತಪಟ್ಟಿದ್ದ ಪತಿಯ ಶವವನ್ನು ಪೆಟ್ರೋಲ್ ಹಾಕಿ ಸುಟ್ಟಿದ್ದಾಳೆ. ಮೃತ ದೇಹ ಅರೆಬರೆ ಬೆಂದಿದ್ದನ್ನು ನೋಡಿ ಗಾಬರಿಗೊಂಡ ಆಕೆ ತಿಪ್ಪೆಯಲ್ಲಿ ಮುಚ್ಚಿ, ಗಂಡ ನಾಪತ್ತೆ ಆಗಿದ್ದಾನೆ, ಯಾವುದೋ ಕಾಡು ಪ್ರಾಣಿ ಹೊತ್ಯೊಯ್ದಿರಬೇಕು ಎಂದು ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಸ್ಥಳ ಪರಿಶೀಲನೆಗೆ ಬಂದಾಗ ಈಕೆಯ ವರ್ತನೆಯಿಂದ ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ತಾನು ಸಾಲ ತೀರಿಸಲು ಮಾಡಿದ ಪ್ಲಾನ್ ಇದು ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ.