Bollywood Senior ActorAnupam Kher, ಅಪಾರ ಖ್ಯಾತಿ ಹಾಗೂ ಹಣ ಗಳಿಸಿದ್ದರೂ ಇಂದಿಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದರ ಹಿಂದೆ ಒಂದು ಕೌಟುಂಬಿಕ ರಹಸ್ಯವಿದೆ. ಬಾಂಧವ್ಯಕ್ಕಾಗಿ ತಮ್ಮ ಸುಖವನ್ನು ತ್ಯಜಿಸಿದ ನಟ.

Bollywood Senior Actor ಅನುಪಮ್ ಖೇರ್ (Anupam Kher) ಅವರು ಯಾವಾಗಲೂ ತಮ್ಮ ಆಯ್ಕೆಗಳ ಬಗ್ಗೆ ನೇರವಾಗಿ ಮಾತನಾಡುತ್ತಾರೆ ಮತ್ತು ಧ್ವನಿ ಎತ್ತುತ್ತಾರೆ. ವಿವಿಧ ಸಂದರ್ಶನಗಳಲ್ಲಿ ಖೇರ್ ತಮ್ಮ ಮೌಲ್ಯಗಳು ಮತ್ತು ಸರಳತೆಯ ಬಗ್ಗೆ ಪ್ರತಿಬಿಂಬಿಸಿದ್ದಾರೆ. ಅಂತಹ ಒಂದು ಸಂದರ್ಶನದಲ್ಲಿ ಖೇರ್ ಅವರು, ತಾವು ಉದ್ಯಮದಲ್ಲಿ ದೊಡ್ಡ ಖ್ಯಾತಿ ಪಡೆದಿದ್ದರೂ, ಇನ್ನೂ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. ಅದಕ್ಕೆ ಕಾರಣ ಅವರ ಫ್ಯಾಮಿಲಿ ಬಾಂಡಿಂಗ್.‌ ತಮ್ಮ ಸಹೋದರ ರಾಜು ಖೇರ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ಅನುಪಮ್ ಅವರು, ತಮ್ಮ ಸಹೋದರನ ಹಣಕಾಸನ್ನು ತಾನು ವರ್ಷಗಳಿಂದ ನಿರ್ವಹಿಸುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. ಈ ವಿಷಯದಲ್ಲಿ ತಮ್ಮ ಪತ್ನಿ ಕಿರಣ್ ಖೇರ್ ಅವರ ನಿರಂತರ ತಿಳುವಳಿಕೆ ಮತ್ತು ಬೆಂಬಲವನ್ನು ಶ್ಲಾಘಿಸಿದರು.

ಯೂಟ್ಯೂಬ್‌ನಲ್ಲಿ ಒಂದು ಸಂದರ್ಶನದಲ್ಲಿ ಅನುಪಮ್ ತಮ್ಮ ಸಹೋದರ ರಾಜು ಬಗ್ಗೆ ಪ್ರೀತಿಯಿಂದ ಮಾತನಾಡಿದರು. “ಎಲ್ಲಾ ಸಹೋದರರೂ ತಾವು ಚಿಕ್ಕವರಿದ್ದಾಗ ಹೇಗಿದ್ದೆವು ಎಂಬುದನ್ನು ನೆನಪಿಟ್ಟುಕೊಂಡರೆ, ಮುಂದೆ ಯಾವುದೇ ಜಗಳ ಇರುವುದಿಲ್ಲ. ನಾನು ನನ್ನ ಜೀವನವನ್ನು ಚಲನಚಿತ್ರದಂತೆ ನೋಡುತ್ತೇನೆ. ನಾವು ಒಟ್ಟಿಗೆ ಬೆಳೆದಿದ್ದೇವೆ ಎಂಬುದನ್ನು ನಾನು ಹೇಗೆ ಮರೆಯಲು ಸಾಧ್ಯ” ಎಂದು ಅವರು ಹೇಳುತ್ತಾರೆ.

ಪತ್ನಿಯನ್ನು ಹೊಗಳಿದ ಅನುಮಪ್ ಖೇರ್

"ಕಿರಣ್‌ ಖೇರ್ ಅನ್ನು ನಾನು ಹೊಗಳಲೇಬೇಕು. ಏಕೆಂದರೆ ಅವಳು ಎಂದಿಗೂ, 'ನೀನು ನಿನ್ನ ಸಹೋದರನಿಗಾಗಿ ಏಕೆ ಇಷ್ಟೊಂದು ಖರ್ಚು ಮಾಡುತ್ತೀಯಾ?' ಎಂದು ನನ್ನನ್ನು ಕೇಳಲಿಲ್ಲ. ಸಮಸ್ಯೆಗಳು ಪ್ರಾರಂಭವಾಗುವುದು ಅಂಥ ಸಮಯದಲ್ಲಿ. ನಾನು ರಾಜು, ಮನೆ ಮತ್ತು ಇತರ ವಿಷಯಗಳಿಗೆ ಚೆಕ್‌ಗಳಿಗೆ ಸಹಿ ಹಾಕುತ್ತಿದ್ದೆ. ನಾನು ಬಹಳ ಹಿಂದೆಯೇ ನನ್ನ ಮ್ಯಾನೇಜರ್‌ಗೆ ಹೇಳಿದ್ದೆ, 'ಜೀವನದಲ್ಲಿ ಒಂದು ವಿಷಯವನ್ನು ನೆನಪಿಡಿ, ನಾನು ನನ್ನ ಸಹೋದರನಿಗೆ ಎಷ್ಟು ಹಣ ನೀಡುತ್ತಿದ್ದೇನೆ ಎಂದು ಎಂದಿಗೂ ಕೇಳಬೇಡಿ."

ಅನುಪಮ್ ಅವರಲ್ಲಿ ಕುಟುಂಬ ಮೌಲ್ಯಗಳು ಆಳವಾಗಿ ಬೇರೂರಿವೆ. ಪ್ರೀತಿ ಮತ್ತು ನ್ಯಾಯ ಅವರ ಪ್ರಜ್ಞೆಯ ಸೆಲೆ. "ನನ್ನ ಸಹೋದರ ಎಂದಿಗೂ ನನ್ನ ಬಗ್ಗೆ ಅಸೂಯೆ ಪಟ್ಟಿಲ್ಲ, ನಾನು ಅವನಿಗಿಂತ ಹೆಚ್ಚು ಯಶಸ್ವಿಯಾಗಿದ್ದೇನೆ. ಅವನು ಆ ರೀತಿಯಲ್ಲಿ ಅದ್ಭುತ. ನನ್ನ ಹೆತ್ತವರು ನನ್ನೊಂದಿಗೆ ಬದುಕಿದ್ದಕ್ಕಿಂತ ಹೆಚ್ಚಾಗಿ ನನ್ನ ಸಹೋದರ ಮತ್ತು ಅವನ ಹೆಂಡತಿಯೊಂದಿಗೆ ವಾಸಿಸಿದ್ದಾರೆ. ಆಸ್ತಿಗಾಗಿ ಸಹೋದರರು ಪರಸ್ಪರ ಕೊಲ್ಲುವುದನ್ನು ನೋಡಿದಾಗ ನಾನು ತುಂಬಾ ಬೇಜಾರಾಗುತ್ತೇನೆ. ನಾನು ಬಾಡಿಗೆ ಮನೆಯಲ್ಲಿ ವಾಸಿಸಲು ಇದು ಒಂದು ಕಾರಣವಾಗಿದೆ" ಎಂದು ಅನುಪಮ್‌ ಹೇಳುತ್ತಾರೆ.

ಜೀವನಕ್ಕೆ ನಾನು ಕೃತಜ್ಞ

ಜೀವನವು ತನಗೆ ಎಲ್ಲವನ್ನೂ ನೀಡಿದೆ. ಅದನ್ನು ತನ್ನ ಹತ್ತಿರದ ಮತ್ತು ಆತ್ಮೀಯ ಜನರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಅನ್ನುತ್ತಾರೆ ಖೇರ್.‌

540ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ವಯಸ್ಸು 70. ಅವರು ಬಯೋಲೋಜಿಕಲ್‌ ಮಗು ಮಾಡಿಕೊಂಡಿಲ್ಲ. 1985ರಲ್ಲಿ ವಿವಾಹವಾದ ಅನುಪಮ್, ಕಿರಣ್ ಖೇರ್, ಆರಂಭದಲ್ಲಿ ಫ್ರೆಂಡ್ಸ್ ಆಗಿದ್ದರು, ಆ ಬಳಿಕ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೂ, ನಮ್ಮ ಸ್ವಂತ ಮಕ್ಕಳ ಬೆಳವಣಿಗೆಯನ್ನು ಕಣ್ಣಾರೆ ಕಾಣದಿರೋದು ಒಂದು ರೀತಿಯ ಕೊರತೆ ಎಂದು ಹೇಳಿದ್ದಾರೆ. ರಾಜ್ ಶಮಾನಿಯವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, "ಕಿರಣ್ ಗರ್ಭದಲ್ಲಿ ಮಗು ಸರಿಯಾಗಿ ಬೆಳೆಯುತ್ತಿರಲಿಲ್ಲ.‌ ಹೀಗಾಗಿ ಗರ್ಭಪಾತ ಮಾಡಬೇಕಾಯಿತು. ನಾನು ದೊಡ್ಡ ದೊಡ್ಡ ಗುರಿ ಇಟ್ಕೊಂಡು ತುಂಬಾ ಬ್ಯುಸಿಯಾಗಿದ್ದೆ. ವೈಯಕ್ತಿಕ ವಿಷಯಕ್ಕಿಂತ ವೃತ್ತಿ ಜೀವನದ ಕಡೆಗೆ ಜಾಸ್ತಿ ಟೈಮ್‌ ಕೊಟ್ಟಿದ್ದೆ” ಎಂದು ಹೇಳಿದ್ದಾರೆ.