ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಆಕೆಯ ಅಂಗರಕ್ಷಕನ ನಡುವೆ ಸುಂದರವಾದ ಅಣ್ಣ- ತಂಗಿ ಸಂಬಂಧವಿದೆ. ಒಂದು ದಶಕದಿಂದ ಆಕೆಯ ರಕ್ಷಣೆ ಮಾಡುತ್ತಿರುವ ಜಲಾಲುದ್ದೀನ್, ವಾರ್ಷಿಕವಾಗಿ ಪಡೆಯುವ ಸಂಬಳದ ಮೊತ್ತ ಕೇಳಿದರೆ ನೀವು ಹುಬ್ಬೇರಿಸಬಹುದು!

ದೀಪಿಕಾ ಪಡುಕೋಣೆ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಹಿಟ್‌ಗಳನ್ನು ನೀಡಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಇನ್ನೂ ಅನೇಕ ಟಾಪ್‌ ಲೆವೆಲ್‌ ಹೀರೋಗಳ ಜೊತೆಗೆ ಹೀರೋಯಿನ್‌ ಆಗಿ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಅತಿದೊಡ್ಡ ನಟಿಯರಲ್ಲಿ ಒಬ್ಬಳಾಗಿರುವ ದೀಪಿಕಾಗೆ ಹೀಗಾಗಿ ಭಾರಿ ಸೆಕ್ಯುರಿಟಿ ಅಗತ್ಯವಿರುವುದೂ ಸಹಜ. ಆದರೆ ಒಂದು ಸೋಜಿಗ ಗೊತ್ತೆ? ದೀಪಿಕಾ ಪಡುಕೋಣೆಯ ಬಾಡಿಗಾರ್ಡ್‌ ಅಥವಾ ಅಂಗರಕ್ಷಕ ಆಕೆಯ ಸಹೋದರನೇ!

ವಿಚಿತ್ರ ಅನಿಸಿತಾ? ಸಹೋದರ ಎಂದರೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವನೋ ಕಸಿನ್ನೋ ಕುಟುಂಬದವನೋ ಎಂದು ಭಾವಿಸಬೇಡಿ. ಆತ ದೀಪಿಕಾಳ ರಾಖಿ ಸಹೋದರ. ಹಲವು ವರ್ಷಗಳಿಂದ ದೀಪಿಕಾ ಪಡುಕೋಣೆ ಪಕ್ಕದಲ್ಲಿ ಸದಾ ಇರುವ ಆಕೆಯ ಅಂಗರಕ್ಷಕ ಜಲಾಲುದ್ದೀನ್. ದೀಪಿಕಾ ಅವರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆತ ಪಕ್ಕದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಜಲಾಲುದ್ದೀನ್ ಒಂದು ದಶಕದಿಂದ ದೀಪಿಕಾ ಅವರ ಅಂಗರಕ್ಷಕರಾಗಿದ್ದಾರೆ.

ದೀಪಿಕಾ ಮತ್ತು ಜಲಾಲ್ ಅವರಿಗೆ ವಿಶಿಷ್ಟ ಸಹೋದರ ಸಂಬಂಧವಿದೆ. ಪ್ರತಿ ವರ್ಷ ರಕ್ಷಾ ಬಂಧನದ ಸಮಯದಲ್ಲಿ ಈ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ. ಭಾರತದಾದ್ಯಂತ ವ್ಯಾಪಕವಾಗಿ ಆಚರಿಸಲಾಗುವ ಈ ಹಬ್ಬವನ್ನು ರಾಖಿ ಎಂದೂ ಕರೆಯುತ್ತಾರೆ. ಸಹೋದರಿಯರು ಪ್ರೀತಿ ಮತ್ತು ರಕ್ಷಣೆಯ ಸಂಕೇತವಾಗಿ ತಮ್ಮ ಸಹೋದರರ ಮಣಿಕಟ್ಟಿನ ಸುತ್ತಲೂ ಪವಿತ್ರ ದಾರವನ್ನು (ರಾಖಿ) ಕಟ್ಟುತ್ತಾರೆ. ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ ಮತ್ತು ಅವರಿಗೆ ಉಡುಗೊರೆಗಳನ್ನು ನೀಡುತ್ತಾರೆ.

ದೀಪಿಕಾಗೆ ಜೈವಿಕ ಸಹೋದರ ಇಲ್ಲದ ಕಾರಣ ಅವರು ಜಲಾಲ್‌ಗೆ ರಾಖಿಯನ್ನು ಕಟ್ಟುತ್ತಾರೆ. ಹೀಗಾಗಿ ದೀಪಿಕಾ ಅವರ ಅಂಗರಕ್ಷಕ ಜಲಾಲ್ ಅವರ ಸಹೋದರ ಕೂಡ ಹೌದು. ದೀಪಿಕಾ ಬಂದರೆ ಅಭಿಮಾನಿಗಳ ದಂಡೇ ನೆರೆಯುತ್ತದೆ. ಪ್ರತಿ ಬಾರಿ ಅವರು ಹೊರಗೆ ಬಂದಾಗಲೂ, ಫೋಟೋ ತೆಗೆಯಲು, ಸ್ಪರ್ಶಿಸಲು ಅಭಿಮಾನಿಗಳು ಅವರತ್ತ ಧಾವಿಸುತ್ತಾರೆ. ಇಂಥ ಕ್ರೌಡ್‌ ಅನ್ನು ಜಲಾಲು ಬಲು ಸಂಯಮ, ಗಟ್ಟಿತನದಿಂದ ನಿಭಾಯಿಸುತ್ತಾರೆ. ಆತ ಅವರ ವಿಶ್ವಾಸಾರ್ಹ ಅಂಗರಕ್ಷಕ. ಹೊರಾಂಗಣದಲ್ಲಿ ಚಿತ್ರೀಕರಣ ಮಾಡುವಾಗ ಅಥವಾ ಪ್ರಯಾಣಿಸುವಾಗಲೆಲ್ಲಾ ದೀಪಿಕಾ ಸುರಕ್ಷಿತವಾಗಿದ್ದಾರೆ ಎಂದು ಜಲಾಲ್‌ ಖಚಿತಪಡಿಸಿಕೊಳ್ಳುತ್ತಾರೆ. ಜಲಾಲ್‌ರನ್ನು ದೀಪಿಕಾ ಕೇವಲ ಅಂಗರಕ್ಷಕನಂತಲ್ಲ, ಸಹೋದರನಂತೆಯೇ ಪರಿಗಣಿಸುತ್ತಾರೆ.

ಆದರೂ ಜಲಾಲ್‌ ಸೇವೆಗಾಗಿ ಅವರಿಗೆ ಸಂಬಳ ಕೊಡಬೇಕಲ್ಲವೇ? ಎಷ್ಟು ಕೊಡುತ್ತಾರೆ ಎಂದು ಊಹಿಸಬಲ್ಲಿರಾ? ಈ ಸುದ್ದಿಯನ್ನು ನಂಬುವುದಾದರೆ ನಂಬಿ. ಜಲಾಲ್ ವರ್ಷಕ್ಕೆ ಸುಮಾರು 80 ಲಕ್ಷ ರೂ. ಗಳಿಸುತ್ತಾರೆ! ಇದು ಯಾವುದೇ ಐಎಎಸ್‌ ಅಫೀಸರ್‌ಗಿಂತ ಹೆಚ್ಚು. ನಿಜ ಹೇಳುವುದಾದರೆ ಅವರಿಗಿಂತ ದುಪ್ಪಟ್ಟು - ಮೂರು ಪಟ್ಟು ಎನ್ನಬಹುದು. ಇದು 2017ರ ಸುದ್ದಿ. ಆ ದೃಷ್ಟಿಯಿಂದ ನೋಡಿದರೆ ಈಗ ಜಲಾಲ್ ಅವರ ಸಂಭಾವನೆ ವರ್ಷಕ್ಕೆ ಸುಮಾರು 1 ಕೋಟಿ ರೂ.ಗಳಿಗೆ ಏರಿದ್ದರೆ ಆಶ್ಚರ್ಯವೇನಿಲ್ಲ.

ದೀಪಿಕಾ ಪಡುಕೋಣೆ ಈಗ ತಾಯಿ ಕೂಡ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪುತ್ರಿ ದುವಾಗೆ ಇದೀಗ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ನಟಿ ದೀಪಿಕಾ ಮನೆಯಲ್ಲಿ ತಾವೇ ಕೇಕ್ ತಯಾರಿಸುವ ಮೂಲಕ ತನ್ನ ಪುಟ್ಟ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 2024ರ ಸೆಪ್ಟೆಂಬರ್ 8ರಂದು ದುವಾ ಜನಿಸಿದ್ದಳು.

ದೀಪಿಕಾ ಸದ್ಯ ನಿರ್ದೇಶಕ ಅಟ್ಲೀ ಅವರ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ತಾತ್ಕಾಲಿಕವಾಗಿ ಚಿತ್ರಕ್ಕೆ AA22 x A6 ಎಂದು ಹೆಸರಿಸಲಾಗಿದ್ದು, ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ದೀಪಿಕಾ ಇದೇ ಮೊದಲ ಬಾರಿಗೆ ನಟ ಅಲ್ಲು ಅರ್ಜುನ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಟ್ಲೀ ನಿರ್ದೇಶನದ ಶಾರುಖ್ ಖಾನ್ ನಟಿಸಿದ್ದ 'ಜವಾನ್' ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು.