ಮುಂಬಯಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು, 'ದಿಲ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಳು. ಅಮೀರ್ ಖಾನ್, ಮಾಧುರಿ ದೀಕ್ಷಿತ್ ಜೊತೆ ನಟಿಸಿ, ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರೂ, ಆಕೆಯ ಬದುಕು ಮತ್ತು ಆಕೆಯ ನಿಜವಾದ ಗುರುತು ನಿಗೂಢವಾಗಿಯೇ ಉಳಿಯಿತು.
ಇದು ಒಬ್ಬಳು ಬಾಲಿವುಡ್ ನಟಿಯ ವಿಚಿತ್ರ- ವಿಲಕ್ಷಣ ಜೀವನದ ಕತೆ. ಈಕೆ ಮೊದಲು ಮುಂಬಯಿಯ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಅನಿರೀಕ್ಷಿತವಾಗಿ ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದು, ಅಮೀರ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಜೊತೆ ನಟಿಸುವಂತಾಯಿತು. ಅದರಿಂದ ಆಕೆಯ ಬದುಕು ಬಂಗಾರವೇನೂ ಆಗಲಿಲ್ಲ. ಆಕೆಯ ಕಥೆ ಅನಿರೀಕ್ಷಿತದಷ್ಟೇ ದುರಂತವೂ ಆಗಿತ್ತು. ಹಾಗಾದರೆ ಏನಾಯಿತು? ಆಕೆಯ ಕತೆ ಕೇಳಿ.
ಅಮೀರ್ ಖಾನ್ ಮತ್ತು ಮಾಧುರಿ ದೀಕ್ಷಿತ್ ನಟಿಸಿದ 1990ರ ಬಾಲಿವುಡ್ ಕ್ಲಾಸಿಕ್ ಚಿತ್ರ ದಿಲ್. ಅದರಲ್ಲಿ, ಹೆಚ್ಚು ಚರ್ಚಿಸಲ್ಪಟ್ಟ ದೃಶ್ಯಗಳಲ್ಲಿ ಒಂದು ಬಾಕ್ಸಿಂಗ್ ರಿಂಗ್‌ನೊಳಗೆ ನಡೆಯುತ್ತದೆ. ಮಾಧುರಿಯ ಪಾತ್ರವು ಅಮೀರ್ ಖಾನ್ ಮತ್ತು ಆದಿ ಇರಾನಿಯನ್ನು ಪರಸ್ಪರ ವಿರುದ್ಧವಾಗಿ ಎತ್ತಿ ಕಟ್ಟುತ್ತದೆ. ಸೋತವರು ಮಿಸ್ ಮಿಮಿಯನ್ನು ಚುಂಬಿಸಬೇಕು ಎಂದು ಘೋಷಿಸುತ್ತದೆ. ಈ ದೃಶ್ಯ ಪ್ರೇಕ್ಷಕರನ್ನು ನಗಿಸುತ್ತದೆ. ಮಿಸ್ ಮಿಮಿ ಪಾತ್ರವನ್ನು ನಿರ್ವಹಿಸಿದ ಮಹಿಳೆಯೇ ಈ ಮಹಿಳೆ- ಆಕೆಯೇ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವಳು. ಆಕೆಯ ರೂಪವೂ ವಿಕಾರವಾಗಿ ಇತ್ತು.
2022ರಲ್ಲಿ ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ, ನಟ ಆದಿ ಇರಾನಿ ಮಿಸ್ ಮಿಮಿಯ ಆಯ್ಕೆಯ ಹಿಂದಿನ ನೈಜ ಕಥೆಯನ್ನು ಬಹಿರಂಗಪಡಿಸಿದರು. ಆ ಮಹಿಳೆ ತರಬೇತಿ ಪಡೆದ ನಟಿಯಾಗಿರಲಿಲ್ಲ. ಬೀದಿಯಿಂದಲೇ ನೇರವಾಗಿ ಆಯ್ಕೆ ಮಾಡಿ ತಂದ ಭಿಕ್ಷುಕಿಯಾಗಿದ್ದಳು. "ಚಿತ್ರೀಕರಣದ ಸಮಯದಲ್ಲಿ, ನಿರ್ಮಾಪಕರು ಕುರೂಪಿಯಾದ ಹುಡುಗಿಯನ್ನು ಹುಡುಕುತ್ತಿದ್ದರು. ಕಿಸ್ ದೃಶ್ಯದ ಕಲ್ಪನೆಯನ್ನು ತಮಾಷೆ ಮತ್ತು ಶಾಕಿಂಗ್ ಆಗಿ ಮಾಡುವ ವ್ಯಕ್ತಿಯನ್ನು ಅವರು ಬಯಸಿದ್ದರು" ಎಂದು ಅದಿ ನೆನಪಿಸಿಕೊಂಡರು.
ನಿರ್ದೇಶಕ ಇಂದ್ರ ಕುಮಾರ್ ಅದಕ್ಕೆ ತಕ್ಕ ಹುಡುಗಿಯನ್ನು ಹುಡುಕುತ್ತಿದ್ದರು. ಬಾಲಿವುಡ್‌ನ ಹೊಳಪು ಇಲ್ಲದ ಸಾಮಾನ್ಯ ವ್ಯಕ್ತಿ ಅವರಿಗೆ ಬೇಕಾಗಿತ್ತು. ಒಂದು ದಿನ ಟ್ರಾಫಿಕ್ ಸಿಗ್ನಲ್ ಅನ್ನು ಹಾದುಹೋಗುವಾಗ, ಇಂದ್ರ ಕುಮಾರ್ ಅವರ ಕಣ್ಣುಗಳು ರಸ್ತೆಬದಿಯಲ್ಲಿ ನಿಂತಿದ್ದ ಈ ಮಿಮಿಯ ಮೇಲೆ ಬಿದ್ದವು. ಅವಳು ವಿಭಿನ್ನವಾಗಿದ್ದಳು. ಅವಳ ಮುಖ, ಅವಳ ಅಭಿವ್ಯಕ್ತಿ ಇಂದ್ರಕುಮಾರ್ ಹುಡುಕುತ್ತಿದ್ದದಕ್ಕೆ ತಕ್ಕನಾದ ಹಾಗಿತ್ತು.
ಕುಮಾರ್ ಅವರ ಸಹಾಯಕರು ಆಕೆಯನ್ನು ಭಿಕ್ಷುಕಿ ಎಂದು ಆಕ್ಷೇಪಿಸಿದರು. ಆಗ ಇಂದ್ರಕುಮಾರ್, ಆಕೆಯಿಂದ ಬೇಕಾದ ನಟನೆ ನಾನು ತೆಗೆಸಬಲ್ಲೆ. ಪಾತ್ರಕ್ಕೆ ನನಗೆ ಬೇಕಾದ ಮುಖ ಇದು ಎಂದು ಖಂಡತುಂಡವಾಗಿ ಉತ್ತರಿಸಿದರು. ಹಾಗೆ ಆ ಅಪರಿಚಿತ ಮಹಿಳೆಯನ್ನು ಮಿಸ್ ಮಿಮಿ ಎಂದು ಆಯ್ಕೆ ಮಾಡಲಾಯಿತು. ಆದರೆ ಆಕೆಯ ನಿಜವಾದಹ ಹೆಸರು ಅದಾಗಿರಲಿಲ್ಲ.
ದಿಲ್ ಸಿನಿಮಾ ನಂತರ ಮಿಸ್ ಮಿಮಿಗೆ ಏನಾಯಿತು? ದಿಲ್ ನಂತರ ಮಿಸ್ ಮಿಮಿಯ ಜೀವನ ಬದಲಾಯಿತು. ಯಾವುದೇ ಔಪಚಾರಿಕ ತರಬೇತಿಯನ್ನು ಹೊಂದಿರದಿದ್ದರೂ, ಆಕೆ ನಂತರ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಆಗಾಗ್ಗೆ ಸಣ್ಣ ಆದರೆ ಸ್ಮರಣೀಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಸೋನಾಲಿ ಬೇಂದ್ರೆ, ಟ್ವಿಂಕಲ್ ಖನ್ನಾ ಮತ್ತು ಆಮಿರ್ ಖಾನ್‌ರಂತಹ ತಾರೆಯರೊಂದಿಗೆ ಮತ್ತೆ ಕೆಲಸ ಮಾಡಿದರು. ದಿಲ್ ಜಲೇ, ಮೇಲಾ ಮತ್ತು ಬೇಟಾದಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಅವರು ಗುರುತಿಸಬಹುದಾದ ಮುಖವಾಗಿ ಹೊರಹೊಮ್ಮಿದರು. ವಿಶೇಷವಾಗಿ ಅಜಯ್ ದೇವಗನ್ ಅವರೊಂದಿಗಿನ ಒಂದು ದೃಶ್ಯ. ಅಜಯ್, ಮಿಮಿಯನ್ನು ತಮ್ಮ ತೋಳುಗಳಲ್ಲಿ ಎತ್ತಿಕೊಂಡು ನಟಿಸಿದ ದೃಶ್ಯ ಪ್ರೇಕ್ಷಕರಿಗೆ ಇನ್ನೂ ನೆನಪಿದೆ.
ಆದರೂ ಮಿಸ್ ಮಿಮಿಯ ಕಥೆ ಸುಖಾಂತ್ಯವನ್ನು ಹೊಂದಲ್ಲ. ಆದಿ ಇರಾನಿ ಅವರ ಚಲನಚಿತ್ರಗಳಲ್ಲಿ ಅಲ್ಪಾವಧಿ ನಟನೆಯ ನಂತರ ಆಕೆ ಒಬ್ಬ ಟ್ರಕ್ ಚಾಲಕನನ್ನು ಮದುವೆಯಾದರು. ವಿವಾಹ ದೊಡ್ಡದಾಗಿ ನಡೆಯಿತು. ಸ್ವಲ್ಪ ಸಮಯದವರೆಗೆ ಅವರು ಶಾಂತಿಯುತ ಜೀವನವನ್ನು ನಡೆಸಿದರು. ಆದರೆ ಶೀಘ್ರದಲ್ಲೇ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಬಾಲಿವುಡ್‌ಗೆ ಬರುವ ಹಿಂದೆ ಬಹಳ ವರ್ಷಗಳ ಕಾಲ ಭಿಕ್ಷೆ ಬೇಡುತ್ತ, ಸಿಕ್ಕದ್ದನ್ನು ಸೇವಿಸುತ್ತ ಕಳಪೆ ಸ್ಥಿತಿಯಲ್ಲಿ ವಾಸಿಸುತ್ತಿದ್ದ ಕಾರಣ ಅವರ ದೇಹ ಮತ್ತು ಮಾನಸಿಕ ಆರೋಗ್ಯ ಹದಗೆಟ್ಟಿತ್ತು. ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ತನ್ನನ್ನು ತಾನು ಕಾಳಜಿಯಿಂದ ನೋಡಿಕೊಳ್ಳಲಿಲ್ಲ. ಹಾಗೇ ಯಾವ ಸುದ್ದಿಯೂ ಇಲ್ಲದೇ ಸತ್ತುಹೋದರು.
ಮಿಸ್ ಮಿಮಿಯ ನಿಜವಾದ ಗುರುತು ಇಂದಿಗೂ ನಿಗೂಢವಾಗಿ ಉಳಿದಿದೆ. ಅವರ ಬಗ್ಗೆ ಪ್ರೀತಿಯಿಂದ ಮಾತನಾಡಿದ ಆದಿ ಇರಾನಿ ಕೂಡ ಹೆಸರನ್ನು ಬಹಿರಂಗಪಡಿಸಿಲ್ಲ. "ಅವರು ವಿಶೇಷವಾಗಿದ್ದರು. ಆ ಪಾತ್ರಕ್ಕೆ ಅವರು ತಂದ ಪ್ರಾಮಾಣಿಕತೆಯನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ" ಎಂದರು ಆದಿ. ಅವರ ಹೆಸರು ಮರೆತುಹೋಗಿದ್ದರೂ, ದಿಲ್‌ನಲ್ಲಿ ಅವರ ಪರದೆಯ ಮೇಲಿನ ಉಪಸ್ಥಿತಿಯು ಹಿಂದಿ ಸಿನಿಮಾ ಪ್ರಿಯರ ನೆನಪುಗಳಲ್ಲಿ ಉಳಿದಿದೆ.
