ಯಶ್ ರಾಜ್ ಫಿಲ್ಮ್ಸ್‌ನ 'ವಾರ್ 2' ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರಗಳ ನಡುವಿನ ಸಂಬಂಧ ಏನೆಂಬುದು ಸಿನಿಮಾ ಬಿಡುಗಡೆಗೂ ಮುನ್ನವೇ ಬಹಿರಂಗವಾಗಿದೆ. ಬಾಲಿವುಡ್ ಮತ್ತು ಮತ್ತು ದಕ್ಷಿಣ ಭಾರತದ ನಟರ ನಡುವಿನ ಈ ಆಕ್ಷನ್ ಥ್ರಿಲ್ಲರ್ ಹಾಗೂ ಡ್ಯಾನ್ಸ್ ಜುಗಲ್‌ಬಂದಿ ಹೇಗಿರಲಿದೆ ನೋಡಿ.

ಬೆಂಗಳೂರು (ಆ.08): ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಬಹು ನಿರೀಕ್ಷಿತ ಸಿನಿಮಾ 'ವಾರ್ 2' ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಆಗಸ್ಟ್ 14ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಕುರಿತು ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ನಟರಾದ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಮಲತಾಯಿ ಸಹೋದರರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸಿನಿಮಾ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿಯಿದ್ದು, ಅಭಿಮಾನಿಗಳ ತೀವ್ರ ಕುತೂಹಲಕ್ಕೆ ತೆರೆ ಬೀಳಲಿದೆ. ಸಿನಿಮಾ ಕುರಿತಾಗಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರು ಜಂಟಿಯಾಗಿ ನಟಿಸುತ್ತಿರುವ ಚಿತ್ರದ ವೀಕ್ಷಣೆಗೆ ಹಲವರು ಕಾತುರದಿಂದ ಕಾಯುತ್ತಿದ್ದಾರೆ.

ಬಾಲಿವುಡ್‌ಗೆ ಜೂನಿಯರ್ ಎನ್‌ಟಿಆರ್ ಎಂಟ್ರಿ:

ಇನ್ನು ದಕ್ಷಿಣ ಭಾರತದಲ್ಲಿ ಆರ್‌ಆರ್‌ಆರ್ ಸಿನಿಮಾ ಮಾಡಿ ಬಾಲಿವುಡ್ ಸೇರಿದಂತೆ ಎಲ್ಲೆಡೆ ಭಾರೀ ಸದ್ದು ಮಾಡಿದ್ದ ಜ್ಯೂ.ಎನ್‌ಟಿಆರ್ ಇದೀಗ ವಾರ್-2 ಸಿನಿಮಾದ ಮೂಲಕ ಅಧಿಕೃತವಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ವಾರ್ 2' ಸಿನಿಮಾ ಜೂನಿಯರ್ ಎನ್‌ಟಿಆರ್ ಅವರ ಮೊದಲ ಬಾಲಿವುಡ್ ಚಿತ್ರವಾಗಿದೆ. ಈ ಚಿತ್ರದ ಕುರಿತು ಅವರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ. ಇದೊಂದು ಆಕ್ಷನ್-ಥ್ರಿಲ್ಲರ್ ಸಿನಿಮಾವಾಗಿದ್ದು, ಇದರ ಬಜೆಟ್ ಸುಮಾರು 400 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಜನಬೇ ಆಲಿ' ಹಾಡು ಸದ್ದು:

ಚಿತ್ರತಂಡ ಇತ್ತೀಚೆಗೆ 'ವಾರ್ 2' ಚಿತ್ರದ 'ಜನಬೇ ಆಲಿ' ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಅದ್ಭುತ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಪೂರ್ಣ ಹಾಡನ್ನು ನೋಡಲು ಆಗಸ್ಟ್ 14ರವರೆಗೆ ಕಾಯಬೇಕಿದ್ದು, ಚಿತ್ರಮಂದಿರಗಳಲ್ಲಿ ಮಾತ್ರ ಅದನ್ನು ವೀಕ್ಷಿಸಬಹುದಾಗಿದೆ.

ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್:

'ವಾರ್ 2' ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನಲ್ಲಿ 6ನೇ ಚಿತ್ರವಾಗಿದೆ. ಈ ಸರಣಿಯ ಹಿಂದಿನ ಚಿತ್ರಗಳಾದ 'ಪಠಾನ್', 'ವಾರ್', 'ಏಕ್ ಥಾ ಟೈಗರ್', 'ಟೈಗರ್ ಜಿಂದಾ ಹೈ' ಮತ್ತು 'ಟೈಗರ್ 3' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದವು. ವಿಶೇಷವಾಗಿ, ಶಾರುಖ್ ಖಾನ್ ಅವರ 'ಪಠಾನ್' ಚಿತ್ರವು 1,050.50 ಕೋಟಿ ರೂಪಾಯಿ ಗಳಿಸಿತ್ತು. 2019ರಲ್ಲಿ ಬಂದ 'ವಾರ್' ಚಿತ್ರದ ಸೀಕ್ವೆಲ್ ಆಗಿರುವ 'ವಾರ್ 2' ಕುರಿತು ಚಿತ್ರತಂಡಕ್ಕೆ ಭಾರಿ ನಿರೀಕ್ಷೆಗಳಿವೆ.

Scroll to load tweet…


ಜ್ಯೂ.ಎನ್‌ಟಿಆರ್ ಮುಂಬರುವ ಸಿನಿಮಾಗಳು:

ಇನ್ನು ಜ್ಯೂ.ಎನ್‌ಟಿಆರ್ ಕನ್ನಡದಲ್ಲಿ ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾಗೆ ಪರಿಚಿತವಾದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮೊದಲ ಸಹಯೋಗದ ಡ್ರ್ಯಾಗನ್‌ನಲ್ಲಿ ಕೆಲಸ ಮಾಡಲಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸುವ ಹೆಸರಿಡದ ಯೋಜನೆಗಾಗಿ ಅವರು ನಿರ್ದೇಶಕ ನೆಲ್ಸನ್ ಅವರೊಂದಿಗೆ ಒಪ್ಪಂದ ಮಾಡಿಕೊಡಿದ್ದಾರೆ. ದೇವರ: ಭಾಗ-1 ರ ಮುಂದುವರಿದ ಭಾಗವಾದ ದೇವರ: ಭಾಗ 2 ಗಾಗಿ ರಾವ್ ಕೊರಟಾಲ ಶಿವ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ.