ನೀಲಿ ಚಿತ್ರದ ಕೇಸ್​ ಇನ್ನೂ ಚಾಲ್ತಿಯಲ್ಲಿ ಇರುವಾಗಲೇ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್​ ಕುಂದ್ರಾ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಏನಿದು ಕೇಸ್​? 

ಬಾಲಿವುಡ್​ ಬ್ಯೂಟಿ, ಫಿಟ್​ನೆಸ್​ ತಾರೆ ಎಂದೆಲ್ಲಾ ಫೇಮಸ್​ ಆಗಿರೋ ನಟಿ ಶಿಲ್ಪಾ ಶೆಟ್ಟಿ ಬಾಳಲ್ಲಿ ಮತ್ತೊಮ್ಮೆ ಬರಸಿಡಿಲು ಬಡಿದಿದೆ. ಕೆಲ ವರ್ಷಗಳ ಹಿಂದಷ್ಟೇ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ನೀಲಿ ಚಿತ್ರದ ಕೇಸ್​ನಲ್ಲಿ ಸಿಲುಕಿದ್ದರು. ಈ ಕೇಸ್​ ವಿಚಾರಣೆ ಇನ್ನೂ ಮುಗಿದಿಲ್ಲ. ಇದರ ನಡುವೆಯೇ ಮತ್ತೊಂದು ಕೇಸ್​ ಇವರ ವಿರುದ್ಧ ದಾಖಲಾಗಿದೆ. ಅದು, ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ ಈ ಜೋಡಿ 60 ಕೋಟಿ ರೂ. ವಂಚನೆ ಮಾಡಿರುವುದಾಗಿ ಕೇಳಿಬಂದಿದೆ. ಈ ಆರೋಪದ ಅಡಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್‌ ಕುಂದ್ರಾ ವಿರುದ್ಧ ದೂರು ದಾಖಲಾಗಿದೆ (Shilpa Shetty Fraud Case).

ಈಗ ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್‌ನ ನಿರ್ದೇಶಕ ದೀಪಕ್ ಕೊಠಾರಿ ದಂಪತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅವರು ತಮ್ಮ ದೂರಿನಲ್ಲಿ, ರಾಜೇಶ್ ಆರ್ಯ ಎಂಬುವವರು ತಮಗೆ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿಯನ್ನು ಪರಿಚಯಿಸಿದ್ದರು. ಆಗ ಅವರು ಮನೆ ಶಾಪಿಂಗ್ ಮತ್ತು ಆನ್‌ಲೈನ್ ಚಿಲ್ಲರೆ ವೇದಿಕೆಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು. ಆ ಸಮಯದಲ್ಲಿ, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿ ಕಂಪನಿಯ 87.6% ಷೇರುಗಳನ್ನು ಹೊಂದಿದ್ದರು. ಇದರಲ್ಲಿಯೇ ಭಾರಿ ಮೋಸ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2015-2023 ರ ಸುಮಾರಿಗೆ ವ್ಯವಹಾರ ವಿಸ್ತರಣೆಗಾಗಿ ತಮಗೆ 60.48 ಕೋಟಿ ರೂ.ಗಳನ್ನು ನೀಡಿದ್ದೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿಕೊಂಡಿದ್ದಾರೆ ಎನ್ನುವುದು ಅವರ ದೂರು. ಆರ್ಯ ಕಂಪನಿಗೆ ವಾರ್ಷಿಕ ಶೇ.12 ರಷ್ಟು ಬಡ್ಡಿದರದಲ್ಲಿ 75 ಕೋಟಿ ರೂ. ಸಾಲ ಕೇಳಿದ್ದರು. ಆದರೆ, ಹೆಚ್ಚಿನ ತೆರಿಗೆಗಳನ್ನು ತಪ್ಪಿಸಲು ಆ ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸುವಂತೆ ಸೂಚಿಸಿದ್ದರು ಎಂದು ದೀಪಕ್ ಕೊಠಾರಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಚರ್ಚೆ ನಡೆದಾಗ ಹಣವನ್ನು ಸಮಯಕ್ಕೆ ಹಿಂದಿರುಗಿಸುವಾಗಿ ಭರವಸೆ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

2015 ರ ಏಪ್ರಿಲ್‌ನಲ್ಲಿ ಮೊದಲ ಕಂತಿನ ಸುಮಾರು 31.95 ಕೋಟಿ ರೂ. ಕಳುಹಿಸಿದ್ದೆ. ಆದರೆ ತೆರಿಗೆ ಸಮಸ್ಯೆ ಹಾಗೆಯೇ ಉಳಿದು ಸೆಪ್ಟೆಂಬರ್‌ನಲ್ಲಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2015 ಮಾರ್ಚ್‌ ಮತ್ತು 2016 ರ ಮಾರ್ಚ್‌ ನಡುವೆ ಅವರು 28.54 ಕೋಟಿ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದರೆಂದು ಉದ್ಯಮಿ ತಿಳಿಸಿದ್ದಾರೆ. 60.48 ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ. ಜೊತೆಗೆ 3.19 ಲಕ್ಷ ರೂ. ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ. 2016ರ ಏಪ್ರಿಲ್‌ನಲ್ಲಿ ಶೆಟ್ಟಿ ಅವರು ವೈಯಕ್ತಿಕ ಗ್ಯಾರಂಟಿ ಕೂಡ ನೀಡಿದ್ದರು ಎಂದು ಭಾರಿ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದಂಪತಿ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.