ನಟಿ ದಿಶಾ ಪಟಾನಿ ಸಹೋದರಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಈ ದಾಳಿ ನಡೆಸಿದವರನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಬಾಲಿವುಡ್ ನಟಿ ದಿಶಾ ಪಠಾಣಿ ಮನೆ ಮೇಲೆ ಗುಂಡಿನ ದಾಳಿ

ನವದೆಹಲಿ: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬು ಪಠಾಣಿ ಹಿಂದೂ ಧರ್ಮ ಹಾಗೂ ಧಾರ್ಮಿಕ ಗುರುಗಳ ಅವಹೇಳನ ಮಾಡಿದ್ದಾರೆಂದು ಆರೋಪಿಸಿ, ಅದಕ್ಕೆ ಪ್ರತೀಕಾರವಾಗಿ ನಟಿಯ ಮನೆಯತ್ತ ಗುಂಡಿನ ದಾಳಿ ಮಾಡಿದ್ದ 2 ಆರೋಪಿಗಳು ಪೊಲೀಸರೊಂದಿಗಿನ ಗುಂಡಿನ ಚಕಮಕಿ ವೇಳೆ ಸಾವನ್ನಪ್ಪಿದ್ದಾರೆ.

ಗುಂಡಿನ ದಾಳಿ ನಡೆಸಿದ ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಮೃತರನ್ನು ರವೀಂದ್ರ, ಅರುಣ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋಡಾರ ಗ್ಯಾಂಗ್‌ಗೆ ಸೇರಿದವರಾಗಿದ್ದು, ಸೆ.12ರಂದು ದಿಶಾ ಪಠಾಣಿ ಅವರ ಬರೇಲಿಯಲ್ಲಿರುವ ನಿವಾಸದ ಎದುರು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದರು. ಬಳಿಕ ಅವರ ಗ್ಯಾಂಗಿನವನೊಬ್ಬ ಫೇಸ್‌ಬುಕ್‌ನಲ್ಲಿ, ಇದು ಟ್ರೇಲರ್‌ ಅಷ್ಟೇ. ನಮ್ಮ ಧರ್ಮದ ಅವಹೇಳನ ಸಹಿಸುವುದಿಲ್ಲ. ಯಾರಾದರೂ ಧರ್ಮದ ವಿರುದ್ಧ ಅಗೌರವ ತೋರಿದರೆ ದಿಶಾರ ಪರಿವಾರದ ಯಾರನ್ನೂ ಉಳಿಸುವುದಿಲ್ಲ. ಇದು ಎಲ್ಲಾ ಕಲಾವಿದರಿಗೆ ಎಚ್ಚರಿಕೆ ಎಂದು ಬೆದರಿಸಿದ್ದರು.

ಇದರ ಬೆನ್ನಲ್ಲೇ, ಎಸ್‌ಟಿಎಫ್‌ನ ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ಜಂಟಿ ತಂಡವು ಗಾಜಿಯಾಬಾದ್‌ನ ಟ್ರೋನಿಕಾ ನಗರದಲ್ಲಿ ಇಬ್ಬರನ್ನು ಬಂಧಿಸಿತ್ತು. ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿ ವೇಳೆ ಗಾಯಗೊಂಡಿದ್ದ ಆರೋಪಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.