ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಆಗಸ್ಟ್ 23 ರಂದು 39ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಆದ್ರೆ ಈ ಬಾರಿಯೂ ಅವರು ಫ್ಯಾನ್ಸ್ ಜೊತೆ ಬರ್ತ್ ಡೇ ಆಚರಿಸಿಕೊಳ್ತಿಲ್ಲ. 

ಫ್ಯಾನ್ಸ್ (Fans) ಜೊತೆ ಮಧ್ಯರಾತ್ರಿ ಕೇಕ್ ಕತ್ತರಿಸಿ, ದೊಡ್ಡ ಹಬ್ಬದಂತೆ ತಮ್ಮ ಬರ್ತ್ ಡೇಯನ್ನು ಕಲಾವಿದರು ಆಚರಿಸಿಕೊಳ್ತಿದ್ದರು. ನಟರ ಮನೆ ಮುಂದೆ ದೊಡ್ಡ ಕ್ಯೂ ಇರ್ತಿತ್ತು. ಸೂಪರ್ ಸ್ಟಾರ್ ಗಳ ಹುಟ್ಟುಹಬ್ಬ ಅಂದ್ರೆ ಫ್ಯಾನ್ಸ್ ಗೆ ಹಬ್ಬ. ಸ್ಟಾರ್ಸ್ ತಮ್ಮ ಬರ್ತ್ ಡೇ ದಿನವನ್ನು ಅಭಿಮಾನಿಗಳಿಗಾಗಿಯೇ ಮೀಸಲಿಡ್ತಿದ್ರು. ಆದ್ರೆ ಈಗ ಆ ಟ್ರೆಂಡ್ ಮರೆಯಾಗ್ತಿದೆ. ಈಗ ಸೆಲೆಬ್ರಿಟಿಗಳ ಸ್ಟೈಲ್ ಬದಲಾಗಿದೆ. ಸ್ಟಾರ್ಸ್ ಬರ್ತ್ ಡೇ ಆಚರಿಸೋಕೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರಲ್ಲ ಎನ್ನುವ ಭಯವಾ ಅಥವಾ ನಿಜವಾಗ್ಲೂ ಸ್ಟಾರ್ಸ್, ಕೆಲ್ಸದಲ್ಲಿ ಬ್ಯುಸಿಯಾಗಿದ್ದಾರಾ ಗೊತ್ತಿಲ್ಲ. ಸ್ಯಾಂಡಲ್ ವುಡ್ (Sandalwood )ನ ಬಹುತೇಕ ನಟರು ತಮ್ಮ ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ನಾನು ಬ್ಯುಸಿ ಎನ್ನುವ ಪೋಸ್ಟ್ ಹಾಕಿ ಕೈತೊಳೆದುಕೊಳ್ತಿದ್ದಾರೆ.

ನಟ ದರ್ಶನ್ ಅರೆಸ್ಟ್ ಆದಾಗಿನಿಂದ ಈ ಟ್ರೆಂಡ್ ಶುರುವಾಗಿದೆ. ದರ್ಶನ್ ಜೈಲಿನಲ್ಲಿರೋದ್ರಿಂದ ಸ್ಟಾರ್ಸ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಅಂತ ಆರಂಭದಲ್ಲಿ ಫ್ಯಾನ್ಸ್ ಅಂದ್ಕೊಂಡಿದ್ರು. ಆದ್ರೆ ದರ್ಶನ್ ಹೊರಗೆ ಬಂದಾಗ್ಲೂ ಕೆಲ ಕಲಾವಿದರು ಬರ್ತ್ ಡೇ ಸೆಲೆಬ್ರೇಷನ್ ನಿಂದ ತಪ್ಪಿಸಿಕೊಂಡಿದ್ರು. ಈಗ ನಟ ರಾಕ್ಷಸ ಎಂದೇ ಪ್ರಸಿದ್ಧಿ ಪಡೆದಿರುವ ಡಾಲಿ ಧನಂಜಯ್ ಸರದಿ. ಡಾಲಿ ಧನಂಜಯ್ ಈ ಬಾರಿ ಹುಟ್ಟುಹಬ್ಬವನ್ನು ಫ್ಯಾನ್ಸ್ ಜೊತೆ ಆಚರಿಸಿಕೊಳ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ (Daali Dhananjay )ಪೋಸ್ಟ್ ಹಾಕಿದ್ದಾರೆ. ಇದೇ 23 ಅಂದ್ರೆ ನಾಳೆ ಡಾಲಿ ಧನಂಜಯ್ ಹುಟ್ಟುಹಬ್ಬ. ಒಂದು ದಿನ ಮೊದಲೇ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಡಾಲಿ ಸಂದೇಶ ರವಾನೆ ಮಾಡಿದ್ದಾರೆ.

ಆಗಸ್ಟ್ 23, ಪ್ರತಿ ವರ್ಷ ನನ್ನ ಬರ್ತ್ ಡೇ ಅಂದ್ರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ – ಅದೇ ನನ್ನ ಶಕ್ತಿ. ಆದ್ರೆ ಈ ಸಲ ನಾನು ಕೆಲಸದ ನಿಮಿತ್ತ ಹೊರಗೆ ಹೋಗ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ.

ಮುಂದಿನ ಸಲ ಇನ್ನೂ ಡಬಲ್ ಎನರ್ಜಿ, ಡಬ್ಬಲ್ ಸಂಭ್ರಮದ ಜೊತೆಗೆ ಆಚರಿಸೋಣ, ಲವ್ ಯೂ ಆಲ್, ಪ್ರೀತಿಯಿಂದ ಡಾಲಿ. ಹೀಗಂತ ಧನಂಜಯ್ ಪೋಸ್ಟ್ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆದಾರರ ರಿಯಾಕ್ಷನ್ : ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಪೋಸ್ಟ್ ನೋಡಿದ ಬಹುತೇಕರು ರೊಚ್ಚಿಗೆದ್ದಿದ್ದಾರೆ. ಪ್ರತಿ ಬಾರಿ ಎಲ್ಲ ಸ್ಟಾರ್ಸ್ ಇದೇ ಕಾರಣ ಹೇಳ್ತಿದ್ದಾರೆ. ಯಾರೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಿನಿಮಾ ಬಿಡುಗಡೆಯಾದಾಗ್ಲೂ ನಾವು ಬ್ಯೂಸಿ ಅಂತ ಥಿಯೇಟರ್ ಗೆ ಬರದೆ ಹೋದ್ರೆ ಏನಾಗುತ್ತೆ ಅಂತ ಜನರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಡಾಲಿ ಧನಂಜಯ್ ಈ ಬಾರಿ ಮದುವೆ ಆಗಿದ್ದು, ಪತ್ನಿ ಜೊತೆ ಬರ್ತ್ ಡೇ ಆಚರಿಸಿಕೊಳ್ಳುವ ಪ್ಲಾನ್ ನಲ್ಲಿರಬೇಕು ಅಂದ್ರೆ, ಇನ್ನು ಕೆಲವರು, ಹಿಂದಿನ ಬಾರಿಯೂ ಡಾಲಿ ಇದ್ದನ್ನೇ ಹೇಳಿದ್ರು. ಈ ವರ್ಷವೂ ಇದನ್ನೇ ಹೇಳ್ತಿದ್ದಾರೆ, ಸ್ಟಾರ್ಸ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಹಣ ಖರ್ಚು ಮಾಡೋ ಬದಲು ಅದನ್ನು ಸರಿಯಾಗಿ ಬಳಸಿಕೊಳ್ಳಿ ಎನ್ನುವ ಸಲಹೆ ನೀಡಿದ್ದಾರೆ.

ಡಾಲಿ ಧನಂಜಯ್ ಸದ್ಯ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಒಂದ್ಕಡೆ ಹಲಗಲಿ ಇನ್ನೊಂದು ಕಡೆ 666 ಶೂಟಿಂಗ್ ನಡೆಯುತ್ತಿದೆ.

View post on Instagram