ಒಂದು ಕಾಲದ ಗ್ಲಾಮರಸ್‌ ಮಾಡೆಲ್‌, ನೃತ್ಯಗಾತಿ ಪ್ರೊತಿಮಾ ಬೇಡಿ ತಮ್ಮ ದಿಟ್ಟ ಲೈಂಗಿಕ ಸಂಬಂಧಗಳಿಗೆ ಖ್ಯಾತಳಾದವಳು. ʼಟೈಂಪಾಸ್‌ʼ ಖ್ಯಾತಿಯ ಆಕೆ ಕೊನೆಗಾಲದಲ್ಲಿ ಪ್ರಕೃತಿಯಲ್ಲಿ ನಿಗೂಢವಾಗಿ ಕಣ್ಮರೆಯಾದಳು. 

ಈಕೆ ಪ್ರಖ್ಯಾತ ಮಾಡೆಲ್‌ ಹಾಗೂ ಒಡಿಸ್ಸಿ ನೃತ್ಯಗಾತಿ. ಒಂದು ಕಾಲದಲ್ಲಿ ತನ್ನ ಬೆಂಕಿಯಂಥ ಗ್ಲಾಮರ್‌ ಹಾಗೂ ಮುಕ್ತ ಲೈಂಗಿಕ ಸಂಬಂಧಗಳಿಂದ ಪ್ರಸಿದ್ಧಳಾಗಿದ್ದಳು. ಆ ಸಂಬಂಧಗಳನ್ನು ತನ್ನ ಟೈಂಪಾಸ್‌ ಎಂಬ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾಳೆ ಕೂಡ. ಅದನ್ನು ರವಿ ಬೆಳಗೆರೆ ಕನ್ನಡದಲ್ಲೂ ತಂದಿದ್ದಾರೆ. ಆ ಗ್ಲಾಮರಸ್‌ ಲೇಡಿ ಬೇರೆ ಯಾರೂ ಅಲ್ಲ- ಪ್ರೊತಿಮಾ ಬೇಡಿ. ಆಕೆಯ ಮಗಳು ನಟಿ ಪೂಜಾ ಬೇಡಿ. ತನ್ನ ತಾಯಿ ಹಿಮಾಲಯದಲ್ಲಿ ಚಾರಣ ಮಾಡುತ್ತಿದ್ದಾಗ ಹಿಮಪಾತಕ್ಕೆ ತುತ್ತಾಗಿ ಜೀವ ತೆತ್ತರು. ಅವರ ಶವ ಸಿಗಲೇ ಇಲ್ಲ. ಅದು ಎಲ್ಲೋ ಹಿಮದಡಿ ಸಮಾಧಿಯಾಗಿದೆ. ಆದರೆ ಇಂಥದೊಂದು ಸಾವನ್ನು ಸ್ವತಃ ಆಕೆಯೇ ಬಯಸಿದ್ದರು ಎಂದು ಪೂಜಾ ಬೇಡಿ ಹೇಳುತ್ತಾರೆ.

ಪ್ರೊತಿಮಾ ಬೇಡಿ ಮಾಡೆಲ್, ಶಾಸ್ತ್ರೀಯ ಒಡಿಸ್ಸಿ ನರ್ತಕಿಯಾಗಿದ್ದವರು. ತಮ್ಮ ಕಾಲದ ಬಹು ಗ್ಲಾಮರ್‌ ವ್ಯಕ್ತಿ. ಪ್ರೊತಿಮಾ ಜನಿಸಿದ್ದು 1948ರಲ್ಲಿ, ದೆಹಲಿಯಲ್ಲಿ. ಹರಿಯಾಣಿ ತಂದೆ ಮತ್ತು ಬಂಗಾಳಿ ತಾಯಿಗೆ ಜನಿಸಿದವರು. 1960ರ ದಶಕದಲ್ಲಿ ಆಕೆ ಮಾಡೆಲಿಂಗ್ ಕೆರಿಯರ್‌ ಪ್ರಾರಂಭಿಸಿದರು. ಆಕೆ ಜೀವನದಲ್ಲಿ ಮಾಡಿದ ಒಂದು ಗ್ಲಾಮರಸ್‌ ಕೃತ್ಯಕ್ಕಾಗಿ ಈಗಲೂ ಅಂದಿನ ಯುವಕರು, ಈಗಿನ ವೃದ್ಧರು ಆಕೆಯನ್ನು ನೆನಪಿಸಿಕೊಳ್ಳುತ್ತಾರೆ. 1974ರಲ್ಲಿ ಸಿನೆಬ್ಲಿಟ್ಜ್ ಮ್ಯಾಗಜೈನ್‌ ಬಿಡುಗಡೆಗಾಗಿ ಮುಂಬೈನ ಜುಹು ಬೀಚ್‌ನಲ್ಲಿ ನಗ್ನವಾಗಿ ಓಡಿದರು. ಆ ಫೋಟೋವನ್ನು ಸಿನೆಬ್ಲಿಟ್ಸ್‌ ಪ್ರಕಟಿಸಿತು. ಪ್ರೊತಿಮಾ ರಾತ್ರೋರಾತ್ರಿ ದೇಶದ ಮನೆಮಾತಾದರು. ಒಂದು ವರ್ಷದ ನಂತರ ಅವರು ಒಡಿಸ್ಸಿ ನೃತ್ಯ ಕಲಿಯಲು ಆರಂಭಿಸಿದರು.

1990ರಲ್ಲಿ ಪ್ರೊತಿಮಾ ಬೆಂಗಳೂರಿಗೆ ಬಂದರು. ಆಗಿನ ಕರ್ನಾಟಕ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೂ ಪ್ರೊತಿಮಾ ಬೇಡಿಗೂ ಆತ್ಮೀಯತೆಯಿತ್ತು. ಅವರ ಮೂಲಕ ಬೇಡಿ ಬೆಂಗಳೂರಿನ ಹೊರವಲಯದ ಹೆಸರಘಟ್ಟ ಎಂಬಲ್ಲಿ ಒಂದಷ್ಟು ಜಾಗವನ್ನು ಪಡೆದು ಾಲ್ಲಿ ನೃತ್ಯಗ್ರಾಮ ಎಂಬ ಉಚಿತ ನೃತ್ಯ ಗುರುಕುಲವನ್ನು ನಿರ್ಮಿಸಿದರು. ಪ್ರೊತಿಮಾ 1969ರಲ್ಲಿ ನಟ, ಮಾಡೆಲ್‌ ಕಬೀರ್ ಬೇಡಿ ಅವರನ್ನು ವಿವಾಹವಾದರು. 1974ರಲ್ಲಿ ಇಬ್ಬರೂ ಬೇರ್ಪಟ್ಟರು. ಈ ಜೋಡಿಗೆ ಇಬ್ಬರು ಮಕ್ಕಳು - ಪೂಜಾ ಮತ್ತು ಅವರ ಸಹೋದರ ಸಿದ್ಧಾರ್ಥ್. ಸಿದ್ಧಾರ್ಥ್‌ 1997ರಲ್ಲಿ ಆತ್ಮಹತ್ಯೆ ಮಾಡಿಕೊಂಡ. ಅವನ ಮರಣದ ನಂತರ ಪ್ರೊತಿಮಾ ನಿವೃತ್ತಿ ಘೋಷಿಸಿದರು. 18 ಆಗಸ್ಟ್ 1998ರಂದು ನಿಧನರಾದರು. ನಿಧನರಾದ ರೀತಿ ವಿಚಿತ್ರ.

ಸುಭಾಷ್ ಕೆ ಝಾ ಅವರೊಂದಿಗಿನ ಸಂದರ್ಶನದಲ್ಲಿ, ಮಗಳು ಪೂಜಾ ಬೇಡಿ ತಮ್ಮ ತಾಯಿಯ ದುರಂತದ ನಂತರ ತಮ್ಮ ತಾಯಿಯ ದೇಹ ಎಂದಿಗೂ ಪತ್ತೆಯಾಗಲಿಲ್ಲ ಎಂದು ಬಹಿರಂಗಪಡಿಸಿದರು. ಕೈಲಾಸ ಮಾನಸ ಸರೋವರ ಯಾತ್ರೆಯ ಸಮಯದಲ್ಲಿ ಭೂಕುಸಿತದಲ್ಲಿ ಪ್ರೊತಿಮಾ ನಿಧನರಾದರು. ಪೂಜಾ ಅವರು ಹೇಳಿದ್ದು ಇಲ್ಲಿದೆ.

"ತಾಯಿ ಪ್ರೊತಿಮಾ 50 ವರ್ಷ ತುಂಬುವ ಮೊದಲೇ ನಿಧನರಾದರು. ಆದರೆ ಅವರು ಬಯಸಿದ ರೀತಿಯಲ್ಲಿ ನಿಧನರಾದರು. ಅವರು ಅಷ್ಟು ಬೇಗ ಬದುಕು ತೊರೆದಿದ್ದಕ್ಕೆ ತುಂಬಾ ವಿಷಾದವಿದೆ. ನಾನು ಅವರೊಂದಿಗೆ ಇನ್ನಷ್ಟು ಕಾಲ ಇರಬೇಕಿತ್ತು. ಆದರೆ ಅವರು ತಮ್ಮದೇ ಷರತ್ತುಗಳ ಮೇಲೆ ಜೀವನವನ್ನು ನಡೆಸಿದ ಮಹಿಳೆ. ಅವರು ಬಯಸಿದ ರೀತಿಯಲ್ಲಿ ಬದುಕಿದರು ಮತ್ತು ಅಕ್ಷರಶಃ ಅವರು ಬಯಸಿದ ರೀತಿಯಲ್ಲಿ ನಿಧನರಾದರು."

“ಅವಳು ಯಾವಾಗಲೂ ಪ್ರಕೃತಿಯಲ್ಲಿ ಇರಲು, ಅಲ್ಲಿಯೇ ಸಾಯಲು ಮತ್ತು ಪ್ರಕೃತಿಯೊಂದಿಗೆ ಒಂದಾಗಲು ಬಯಸುತ್ತೇನೆ ಎಂದು ಹೇಳುತ್ತಿದ್ದಳು. ಈ ಸುಂದರವಾದ, ಅದ್ಭುತವಾದ ಜೀವನದ ಕೊನೆಯಲ್ಲಿ, ತನ್ನ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ಹಾಕುವ ಅಣಕು ಸಮಾರಂಭ ಅಥವಾ ಯಾವುದೇ ಸ್ಮಶಾನದಲ್ಲಿ ಸುಡಲ್ಪಡುವುದೋ ಹೂಳುವುದನ್ನೋ ಆಕೆ ಬಯಸಲಿಲ್ಲ. ಅವಳು ಪ್ರಕೃತಿಯಲ್ಲಿ ಒಂದಾಗಲು ಬಯಸಿದ್ದಳು. ಅದು ಒಂದು ಭವ್ಯವಾದ ಅಂತ್ಯಕ್ರಿಯೆಯಾಗುತ್ತದೆ. ಮತ್ತು ಅದು ಾಕೆ ಬಯಸಿದಂತೆಯೇ ನಡೆಯಿತು. ಅವಳ ದೇಹವು ಎಂದಿಗೂ ಸಿಗಲಿಲ್ಲ. ಆಕೆ ವಿಶ್ವದೊಂದಿಗೆ, ಭೂಮಿಯೊಂದಿಗೆ ಒಂದಾದಳು” ಎಂದು ಪೂಜಾ ಹೇಳಿದ್ದಾರೆ.