1980ರ ದಶಕದಲ್ಲಿ 'ಮಿಂಚಿನ ಓಟ' ಚಿತ್ರದ ಮೂಲಕ ಪರಿಚಿತರಾದ ನಟಿ ಪ್ರಿಯಾ ತೆಂಡುಲ್ಕರ್ (priya tendulkar) , ಕನ್ನಡದ ನಟರೊಬ್ಬರ ಜೊತೆ ಪ್ರೀತಿ ಪ್ರೇಮ ಪ್ರಣಯ ಹೊಂದಿದ್ದರು ಎಂಬುದು ಇಡೀ ಇಂಡಸ್ಟ್ರಿ ಮಾತನಾಡಿಕೊಂಡಿದ್ದ ಗಾಸಿಪ್.‌  

ಈಕೆ ಕನ್ನಡ, ಮರಾಠಿ ಮತ್ತು ಹಿಂದಿಯ ಕೆಲವು ಫಿಲಂಗಳಲ್ಲಿ 1980ರ ದಶಕದಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ ನಟಿ. ಆಗಿನ ದಶಕದಲ್ಲಿ ಯಾವುದೇ ಕಲಾತ್ಮಕ ಚಿತ್ರ ತೆಗದರೂ ನಾಯಕಿ ಪಾತ್ರಕ್ಕೆ ಈಕೆಯ ಹೆಸರು ಪರಿಗಣಿಸಲಾಗುತ್ತಿತ್ತು. ಕನ್ನಡದ ಒಬ್ಬ ಹೀರೋ ಜೊತೆಗೂ ಈಕೆಯ ಹೆಸರು ಕೇಳಿಬಂದಿತ್ತು. ಇಬ್ಬರೂ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿ ಇದ್ದರು ಎಂದೂ ಹೇಳಲಾಗುತ್ತದೆ. ಆದರೆ ಮುಂದೆ ಆ ಹೀರೋ ಬೇರೊಬ್ಬರನ್ನು ಮದುವೆಯಾದರು. ಈಕೆಯ ಹೆಸರು ಪ್ರಿಯಾ ತೆಂಡುಲ್ಕರ್ (priya tendulkar).‌ 

1980ರಲ್ಲಿ ಶಂಕರನಾಗ್‌ ನಿರ್ದೇಶನದ ಚಿತ್ರ ʼಮಿಂಚಿನ ಓಟʼದಲ್ಲಿ ಮೋಟರ್ ಮೆಕ್ಯಾನಿಕ್ ಟೋನಿ ಪಾತ್ರ ಮಾಡಿದ್ದ ಅನಂತನಾಗ್‌ ಅವರ ಪ್ರೇಯಸಿ ಮಂಜು ಪಾತ್ರವನ್ನು ಪ್ರಿಯಾ ತೆಂಡುಲ್ಕರ್‌ ಮಾಡಿದ್ದರು. ಇದರಲ್ಲಿ ಶಂಕರನಾಗ್‌ ಮತ್ತು ಲೋಕನಾಥ್‌ ಹೆದ್ದಾರಿ ಮೇಲೆ ವಾಹನ ಕಳ್ಳರು. ಕದ್ದ ವಾಹನಗಳ ಬಿಡಿಭಾಗ ಬಿಚ್ಚಿ ಅದರ ಪಾರ್ಟ್ಸ್ ಇದಕ್ಕೆ, ಇದರ ಪಾರ್ಟ್ಸ್ ಅದಕ್ಕೆ ಮಾಡಿ ಮಾರಾಟ ಮಾಡಲು ಟೋನಿ ಹೆಲ್ಪ್ ನೀಡುತ್ತಾನೆ. ಈ ಇಡೀ ಚಿತ್ರದ ಶೂಟಿಂಗ್ ಪುಣೆ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಧಾರವಾಡದಿಂದ ಕಾರವಾರ ನಡುವೆ ಆಗಿತ್ತು. ಓಡಿ ಹೋಗಲು ಯತ್ನಿಸುವ ಟೋನಿ ಪಾತ್ರಧಾರಿ ಅನಂತ, ಕಟ್ಟೆ ಪಾತ್ರ ಮಾಡಿದ್ದ ಶಂಕರ ಪೊಲೀಸ್ ಎನ್ ಕೌಂಟರ್‌ನಲ್ಲಿ ಸಾಯುತ್ತಾರೆ. ತನ್ನ ಅನಾರೋಗ್ಯ, ತಾಯಿಯ ಚಿಕಿತ್ಸೆ ಹಣಕ್ಕಾಗಿ ಕಳ್ಳರೊಂದಿಗೆ ಸೇರಿ ಕಳ್ಳಿ ಪಾತ್ರ ಮಾಡಿದ್ದ ನಾಯಕಿ ಮಂಜು ಜೈಲು ಸೇರುವದರೊಂದಿಗೆ ಚಿತ್ರ ಮುಗಿಯುತ್ತದೆ. ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಬಂದವು.

ಜನಪ್ರಿಯ ನಾಟಕಕಾರ ಮತ್ತು ಬರಹಗಾರ, ಪದ್ಮಭೂಷಣ ಪುರಸ್ಕೃತ ವಿಜಯ್ ತೆಂಡೂಲ್ಕರ್ ಅವರ ಪುತ್ರಿ ಪ್ರಿಯಾ ತೆಂಡೂಲ್ಕರ್. ಬಾಲ್ಯದಿಂದಲೂ ಕಲೆ ಮತ್ತು ಸಂಸ್ಕೃತಿಯ ಒಲವು. ಪ್ರಿಯಾ ನಂತರ ಪಂಚತಾರಾ ಹೋಟೆಲ್‌ನಲ್ಲಿ ಸ್ವಾಗತಕಾರಿಣಿಯಾಗಿ, ಗಗನಸಖಿಯಾಗಿ ಮತ್ತು ಅರೆಕಾಲಿಕ ರೂಪದರ್ಶಿಯಾಗಿ, ಕಿರುತೆರೆಯಲ್ಲಿನ ಸುದ್ಧಿ ವಾಚಕಿಯಾಗಿ ಹೀಗೆ ಅನೇಕ ಕೆಲಸ ಮಾಡಿದರು. ಕಾರ್ಯಕ್ರಮ ನಿರೂಪಕಿಯಾಗಿ, ನಟಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಮತ್ತು ಬರಹಗಾರ್ತಿಯಾಗಿ ಪ್ರಸಿದ್ಧರಾದರು.

ಬಿ.ವಿ ಕಾರಂತ ನಿರ್ದೇಶನದ ಗಿರೀಶ ಕಾರ್ನಾಡರ ʼಹಯವದನʼ ನಾಟಕದ ಮರಾಠಿ ಅವತರಣಿಕೆಯಲ್ಲಿಯೂ ಪ್ರಿಯಾ ನಟಿಸಿದ್ದಳು. ಅದು 1969ರಲ್ಲಿ, ಕಲ್ಪನಾ ಲಾಜ್ಮಿ ಅವರೊಂದಿಗೆ ಗೊಂಬೆಯಾಗಿ ನಟಿಸಿದರು. ಅದರಲ್ಲಿ ಅನಂತನಾಗ್, ದೇವದತ್ತನ ಪಾತ್ರ ಮಾಡಿದ್ದರು. ಕನ್ನಡಿಗ ಶ್ಯಾಮ್ ಬೆನಗಲ್ ಅವರ 'ಅಂಕುರ್' (1974) ಚಿತ್ರದಲ್ಲಿ ಅನಂತ್ ನಾಗ್ ಅವರ ಪತ್ನಿಯ ಪಾತ್ರ ಮಾಡಿದರು. ಇಬ್ಬರೂ ಆಧುನಿಕ ಮರಾಠಿ ರಂಗಭೂಮಿಯ ಹಲವು ನಾಟಕಗಳು ಮತ್ತು ಹೊಸ ಅಲೆಯ ಹಲವಾರು ಸಿನೆಮಾಗಳಲ್ಲಿ ನಟಿಸಿದ್ದರು. ಪ್ರಿಯಾ ಮುಂದೆ ಮರಾಠಿಯ ಪ್ರಸಿದ್ಧ ನಟರ ಜೊತೆ ಸುಮಾರು ಹನ್ನೆರಡು ಮರಾಠಿ ಕೌಟುಂಬಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದರು.

ಕನ್ನಡದ ನಟನ ಜೊತೆ ತುಂಬಾ ಅನ್ಯೋನ್ಯ ಸಂಬಂಧ ಹೊಂದಿದ್ದಳು, ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಇಬ್ಬರೂ ಲಿವ್‌ ಇನ್‌ನಲ್ಲಿದ್ದಾರೆ ಎಂದೂ ಗಾಸಿಪ್‌ ಹಬ್ಬಿತ್ತು. ಆದರೆ ಆ ನಟ ಕನ್ನಡಕ್ಕೆ ಮರಳಿ ಬಂದು ಬೇರೊಬ್ಬರನ್ನು ಮದುವೆಯಾದರು. ಪ್ರಿಯಾ ಮರಾಠಿಯಲ್ಲಿ ತಮ್ಮ ನಟನೆ ಮುಂದುವರಿಸಿದರು.

ಪ್ರಿಯಾ ತೆಂಡೂಲ್ಕರ್ ಅವರು 1985ರ ಟಿವಿ ಸರಣಿ 'ರಜನಿ'ಯೊಂದಿಗೆ ರಾಷ್ಟ್ರೀಯ ಖ್ಯಾತಿಗೆ ಏರಿದರು. ಅನ್ಯಾಯವನ್ನು ಸಹಿಸದ ಮತ್ತು ಸಾರ್ವಜನಿಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ರಜನಿ ಎಂಬ ಗೃಹಿಣಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ಪ್ರಿಯಾ ಮುಕ್ತರೀತಿಯ ಜೀವನದ ಪ್ರತಿಪಾದಕರಾಗಿದ್ದು, ನಿರ್ಭೀತಿಯಿಂದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಭಿವ್ಯಕ್ತಿಸುತ್ತಿದ್ದರು. ಪ್ರಿಯಾ ತೆಂಡೂಲ್ಕರ್ ಟಾಕ್ ಶೋ ಮತ್ತು ಜಿಮ್ಮೆದಾರ್ ಕೌನ್‌ನಂತಹ ಟಾಕ್ ಶೋಗಳನ್ನು ನಡೆಸಿಕೊಟ್ಟರು. ಅವರ ಹಮ್ ಪಂಚ್ ಟಿವಿ ಸರಣಿಯಲ್ಲಿನ ಪಾತ್ರ ಸಹ ಬಹಳ ಜನಪ್ರಿಯವಾಗಿತ್ತು. ಮುಂದೆ ಕರಣ್‌ ರಾಜ್ದಾನ್‌ ಅವರನ್ನು ಮದುವೆಯಾದರು. ಪ್ರಿಯಾ ತೆಂಡುಲ್ಕರ್ 47ರ ವಯಸ್ಸಿನಲ್ಲೇ ಅನಾರೋಗ್ಯದ ದೆಸೆಯಿಂದ 2002ರ ಸೆಪ್ಟೆಂಬರ್ 19ರಂದು ನಿಧನರಾದರು.