ದರ್ಶನ್ ಜೈಲು ಸೇರಿ ನಾಲ್ಕು ದಿನಗಳು ಕಳೆದಿವೆ. ಜೈಲಿನಲ್ಲಿ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲಾಗಿದೆ. 'ಇದ್ರೆ ನೆಮ್ಮದಿಯಾಗಿರ್ಬೇಕು' ಟೀ ಶರ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು (ಆ.18): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾಗಿ ನಟ ದರ್ಶನ್ ತೂಗುದೀಪ ಮತ್ತು ಸಹಚರರ ತಂಡ ಪರಪ್ಪನ ಅಗ್ರಹಾರ ಜೈಲುಪಾಲಾಗಿ ನಾಲ್ಕು ದಿನಗಳು ಕಳೆದಿವೆ. ಸುಪ್ರೀಂ ಕೋರ್ಟ್ ಚಾಟಿ ಹಿನ್ನೆಲೆ ಜೈಲು ಅಧಿಕಾರಿಗಳು ಸಹ ಹದ್ದಿನ ಕಣ್ಣಿಟ್ಟಿದ್ದಾರೆ. ಸಾಮಾನ್ಯ ವಿಚಾರಣಾಧೀನ ಖೈದಿಯಂತೆಯೇ ದರ್ಶನ್ ಮತ್ತು ತಂಡವು ಜೈಲಿನ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿದ್ದು, ದಿನದ ಬಹುತೇಕ ಸಮಯವನ್ನು ನಾಲ್ಕು ಗೋಡೆಗಳ ಮಧ್ಯೆ ಕಳೆಯುತ್ತಿದ್ದಾರೆ. ಈ ನಡುವೆ ಡೆವಿಲ್ ಸಿನಿಮಾದ ಹಾಡು 'ಇದ್ರೆ ನೆಮ್ಮದಿಯಾಗಿರ್ಬೇಕು' ಹಾಡು ಸದ್ಯ ಸದ್ದು ಮಾಡುತ್ತಿದೆ.

'ಇದ್ರೆ ನೆಮ್ಮದಿಯಾಗಿರ್ಬೇಕು' ಈಗ ಟೀ ಶರ್ಟ್‌ ವೈರಲ್:

ಡೆವಿಲ್ ಸಿನಿಮಾದ ಹಾಡು 'ಇದ್ರೆ ನೆಮ್ಮದಿಯಾಗಿರ್ಬೇಕು' ಈಗ ಟೀ ಶರ್ಟ್‌ನಲ್ಲಿ ಪ್ರಿಂಟ್ ಆಗಿ ಸಂಚಲನ ಮೂಡಿಸಿದೆ. ಆಗಸ್ಟ್ 15ರಂದೇ ಈ ಹಾಡು ಬಿಡುಗಡೆಯಾಗಬೇಕಿತ್ತು. ಆದ್ರೆ ಆಗಸ್ಟ್ 14 ರಂದೇ ನಟ ದರ್ಶನ್ ಜೈಲು ಸೇರಿದ್ದರು. ಹೀಗಾಗಿ ಹಾಡು ಬಿಡುಗಡೆಯಾಗಲಿಲ್ಲ. ಆದ್ರೆ ಇದೀಗ ಡೆವಿಲ್ ಸಿನಿಮಾ 'ಇದ್ರೆ ನೆಮ್ಮದಿಯಾಗಿರ್ಬೇಕು' ಅನ್ನೋ ಹಾಡಿನ ಬರಹವಿರುವ ಟೀಶರ್ಟ್ ಸೇಲ್ ಆಗೋಕೆ ರೆಡಿಯಾಗಿದೆ. 'WHAT YOU PEOPLE ARE DOING..?' ಎಂಬ ಟ್ಯಾಗ್ ಲೈನ್‌ನೊಂದಿಗೆ ಪ್ರಿಂಟ್ ಆದ ಈ ಶರ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಹೇಗಿದೆ ನಟ ದರ್ಶನ್ ಇರೋ ಬ್ಯಾರಕ್ ಭದ್ರತೆ?

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ನಾಲ್ಕು ದಿನಗಳ ಕಳೆದಿವೆ. ಕಳೆದಸಲದಂತೆ ಈ ಬಾರಿ ಯಾವುದೇ ರೀತಿ ಕರ್ತವ್ಯಲೋಪವಾಗದಂತೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಹಿನ್ನೆಲೆ ಜೈಲು ಸಿಬ್ಬಂದಿ ಎಚ್ಚೆತ್ತಿದ್ದು, ದರ್ಶನ್ ಅವರ ಬ್ಯಾರಕ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲಾಗಿದೆ. ಕಳೆದ ಬಾರಿ ಲಾನ್ ಕುಳಿತು ಸಿಗರೇಟ್ ಸೇವಿಸಿದ ಘಟನೆಯ ನಂತರ, ಈ ಬಾರಿ ಸಂಪೂರ್ಣ ಸೆಟಪ್ ಮತ್ತು ಗೆಟಪ್‌ನಲ್ಲಿ ಬದಲಾವಣೆಯಾಗಿದೆ. ದರ್ಶನ್ ಮತ್ತು ಗ್ಯಾಂಗ್‌ ಮೇಲೆ 24 ಗಂಟೆಯೂ ಹದ್ದಿನ ಕಣ್ಣಿಟ್ಟಿರುವ ಜೈಲು ಅಧಿಕಾರಿಗಳು, ನೂತನ ಮಹಿಳಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 1ರಲ್ಲಿ ಇರಿಸಲಾಗಿದೆ.

ಉದ್ಘಾಟನೆಯಾಗದ ಬ್ಯಾರಕ್‌ನಲ್ಲಿ ದರ್ಶನ್ ಗ್ಯಾಂಗ್

500 ಖೈದಿಗಳ ಸಾಮರ್ಥ್ಯವಿರುವ ಈ ಬ್ಯಾರಕ್, ಇನ್ನೂ ಉದ್ಘಾಟನೆಯಾಗದೆ ಕೋವಿಡ್ ಸಮಯದಲ್ಲಿ ಕ್ವಾರಂಟೈನ್ ಜೈಲಾಗಿ ಮಾರ್ಪಟ್ಟಿದ್ದು, ಈಗ ದರ್ಶನ್ ಗ್ಯಾಂಗ್‌ಗೆ ನೆಲೆಯಾಗಿದೆ. ಒಬ್ಬ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್, ಇಬ್ಬರು ಜೈಲರ್, ಇಬ್ಬರು ಅಸಿಸ್ಟೆಂಟ್ ಜೈಲರ್, ಇಬ್ಬರು ಹೆಡ್ ವಾರ್ಡರ್ ಮತ್ತು ಇಬ್ಬರು ವಾರ್ಡರ್‌ಗಳ ನಿಯೋಜನೆಯೊಂದಿಗೆ ಸದಾ ನಿಗಾ ಇಡಲಾಗುತ್ತಿದೆ. ಜೈಲಿನಲ್ಲಿ ದರ್ಶನ್‌ಗೆ ಯಾರೊಂದಿಗೂ ಭೇಟಿ ಅವಕಾಶವಿಲ್ಲ; ಸಿಬ್ಬಂದಿಗಳು ವಿನಾಕಾರಣ ಮಾತನಾಡುವಂತೂ ಇಲ್ಲ. ಬಾಡಿ ಹೋರ್ನ್ ಕ್ಯಾಮೆರಾ ವ್ಯವಸ್ಥೆಯ ಮೂಲಕ ಸಿಬ್ಬಂದಿ ಚಟುವಟಿಕೆ ಮತ್ತು ಬ್ಯಾರಕ್ ಚಲನವಲನದ ಮೇಲೆ ಹಿರಿಯ ಅಧಿಕಾರಿಗಳ ನಿಗಾ ಇದೆ. ಕಳೆದ ಬಾರಿ 'ಪುಲ್ ಫ್ರೀ' ಆಗಿದ್ದರೆ, ಈ ಬಾರಿ 'ಪುಲ್ ಟೈಟ್' ಎಂಬಂತೆ ಸೆಲ್‌ನಲ್ಲಿ ಖಾಲಿ ಕೂರಬೇಕು ಅಥವಾ ಪುಸ್ತಕ ಓದುವುದಕ್ಕಷ್ಟೇ ಅವಕಾಶವಿದೆ. ಈ ಸಂದರ್ಭದಲ್ಲಿ 'ಇದ್ರೆ ನೆಮ್ಮದಿಯಾಗಿರ್ಬೇಕು' ಎನ್ನುವ ಸಾಲಿನ ಪ್ರಿಂಟ್ ಇರುವ ಟೀ ಶರ್ಟ್ ಸೇಲ್‌ಗೆ ರೆಡಿಯಾಗಿದೆ!