ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ತೂಗುದೀಪ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅಭಿಮಾನಿಗಳ ಹುಚ್ಚಾಟವೂ ದರ್ಶನ್‌ಗೆ ಮುಳುವಾಗಿದೆ.
ಬೆಂಗಳೂರು (ಆ.15): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ತೂಗುದೀಪ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾದ ಬೆನ್ನಲ್ಲೇ, ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಿವಾಸದಿಂದ ಆಗಸ್ಟ್ 14, 2025 ರಂದು ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಜೊತೆಗೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ಜಾಮೀನು ರದ್ದಾಗಿದೆ.
ದರ್ಶನ್‌ಗೆ ಮುಳುವಾಯ್ತು ಅಭಿಮಾನಿಗಳ ಹುಚ್ಚಾಟ
ಚಿತ್ರನಟ ದರ್ಶನ್ ಅವರಿಗೆ ಅವರ ಅಭಿಮಾನಿಗಳ ಹುಚ್ಚಾಟವೂ ಮುಳುವಾಗಿದೆ. ನಟನ ವಿರುದ್ಧ ಯಾರಾದರೂ ವಿರುದ್ಧ ಅಭಿಪ್ರಾಯವನ್ನು ಮಂಡಿಸಿದರೆ ಅವರ ಚಾರಿತ್ರ್ಯಹರಣ ಮಾಡುವುದು, ತುಚ್ಛವಾಗಿ ಅಶ್ಲೀಲ ಬಳಸಿ ನಿಂದಿಸುವುದು, ಬೆದರಿಕೆ ಹಾಕುವುದು ಇಂಥದ್ದನ್ನೆಲ್ಲಾ ಅಭಿಮಾನಿಗಳು ಮಾಡಿಕೊಂಡೇ ಬಂದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿತ್ತು. ಈ ಬಗ್ಗೆ ಅಭಿಮಾನಿಗಳಿಗೆ ತಿಳಿಹೇಳುವ ಕೆಲಸವನ್ನು ದರ್ಶನ್ ಮಾಡಲೇ ಇಲ್ಲ.
ಇದ್ರೆ ನೆಮ್ದಿಯಾಗ್ ಇರ್ಬೇಕು: ಹಾಡು ಬಿಡುಗಡೆ ಇಂದು ಇಲ್ಲ
- ಡೆವಿಲ್ ಸಿನಿಮಾ ಗೀತೆ ಬಿಡುಗಡೆ ಮುಂದೂಡಿಕೆ
ನಟ ದರ್ಶನ್ ನಟನೆಯ ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾದ ಹಾಡು ‘ಇದ್ರೆ ನೆಮ್ದಿಯಾಗ್ ಇರ್ಬೇಕು’ ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಹಿಂದೊಮ್ಮೆ ದರ್ಶನ್ ಅವರನ್ನು ಬೈಯಲು ಬಳಸಿದ್ದ ಸಾಲನ್ನೇ ಹಾಡಾಗಿ ಪರಿವರ್ತಿಸಲಾಗಿತ್ತು. ಆದರೆ ದರ್ಶನ್ ಜೈಲು ಪಾಲು ಬೆನ್ನಲ್ಲೇ ಹಾಡು ಬಿಡುಗಡೆ ಮುಂದೂಡಿಕೆಯಾಗಿದೆ.
ಜಾಮೀನು ರದ್ದುಗೊಳಿಸಿದ ಹೀರೋಗಳು
ದರ್ಶನ್ ಅವರ ಜಾಮೀನು ರದ್ದಾಗಲು ಬಹುಮುಖ್ಯ ಕಾರಣ ಪೊಲೀಸರು ನಡೆಸಿದ ತನಿಖೆ ಹಾಗೂ ವಕೀಲರು ಕೋರ್ಟಲ್ಲಿ ಮಂಡಿಸಿದ ವಾದ. ರೇಣುಕಾಸ್ವಾಮಿ ಕೊಲೆ ನಡೆದ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ, ಡಿಸಿಪಿ ಎಸ್.ಗಿರೀಶ್, ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್, ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್, ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಜಾಮೀನು ರದ್ದಾಗಲು ಪ್ರಮುಖ ಕಾರಣಕರ್ತರಾಗಿದ್ದಾರೆ.
ಕಾನೂನು ಮುಂದೆ ಎಲ್ಲರೂ ಒಂದೇ ಎಂದ ನಟಿ ರಮ್ಯಾ
ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ
2024ರ ಜೂನ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಾಗ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರ ದಿಟ್ಟ ನಿಲುವಿನಿಂದಾಗಿ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ ಇತರರ ಬಂಧನವಾಗಿತ್ತು. ಈಗ ಜಾಮೀನು ರದ್ದುಗೊಂಡು ಮತ್ತೆ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದ ಹೊತ್ತಿನಲ್ಲೇ ದಯಾನಂದ್ ಅವರು ಬಂದೀಖಾನೆ ಇಲಾಖೆಯ ಮುಖ್ಯಸ್ಥರಾಗಿದ್ದಾರೆ.
ದರ್ಶನ್ ಯಾವ ಜೈಲಿಗೆ ಶಿಫ್ಟ್?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ ಚಲನಚಿತ್ರ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಬೇರೆಡೆ ಸ್ಥಳಾಂತರಿಸುವ ಬಗ್ಗೆ ಸಹ ಚರ್ಚೆ ನಡೆದಿದೆ. ಜಾಮೀನು ಪಡೆದಾಗ ಅವರು ಬಳ್ಳಾರಿ ಜೈಲಿನಲ್ಲಿದ್ದರು. ಈಗ ಅದೇ ಜೈಲಿಗೆ ಹೋಗುತ್ತಾರಾ? ಕುತೂಹಲವಿದೆ.
