ಜನಸಾಮಾನ್ಯರಿಗೆ ದೀಪಾವಳಿ ಗಿಫ್ಟ್​ ಆಗಿ ಕೇಂದ್ರ ಸರ್ಕಾರ ಜಿಎಸ್​ಟಿ ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯು ಚಿನ್ನ-ಬೆಳ್ಳಿಯ ದರದ ಮೇಲೆ ಪ್ರಭಾವ ಬೀರುತ್ತಾ? ರೇಟ್​ ಎಷ್ಟಾಗತ್ತೆ? ಇಲ್ಲಿದೆ ಡಿಟೇಲ್ಸ್​.. 

ದೀಪಾವಳಿಗೆ ಗುಡ್​ನ್ಯೂಸ್​ ಕೊಡುವುದಾಗಿ ತಿಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಎಲ್ಲಾ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು GST ಪರಿಷ್ಕರಣೆ ಮಾಡುವ ಮೂಲಕ ಬಹುದೊಡ್ಡ ಸರ್​ಪ್ರೈಸ್​ ನೀಡಿದ್ದಾರೆ. ಇದೇ ಸೆ.22ರಿಂದ ಅನ್ವಯ ಆಗುವಂತೆ ಬಹುತೇಕ ವಸ್ತುಗಳು ಅದರಲ್ಲಿಯೂ ವೈದ್ಯಕೀಯ ಅವಶ್ಯಕತೆಗಳ ದರಗಳು ಕಡಿಮೆಯಾಗುವ ಮೂಲಕ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ದರಗಳಿಂದ ಬೇಸತ್ತು ಹೋಗಿದ್ದ ಜನಸಾಮಾನ್ಯರ ಮೊಗದಲ್ಲಿ ಈ ಪರಿಷ್ಕರಣೆ ತುಂಬಾ ಖುಷಿ ಕೊಟ್ಟಿದೆ.

ಚಿನ್ನ-ಬೆಳ್ಳಿ ಪ್ರಿಯರಿಗೆ ಇದ್ಯಾ ಗುಡ್​ನ್ಯೂಸ್​? 

ಹಾಗಿದ್ದರೆ ಚಿನ್ನ-ಬೆಳ್ಳಿಯಲ್ಲಿ ಏನಾದ್ರೂ ವ್ಯತ್ಯಾಸ ಆಗಿದ್ಯಾ? ಇದರ ರೇಟ್​ ಕಡಿಮೆಯಾಗಿದ್ಯಾ ಎಂದೆಲ್ಲಾ ಹಲವರಿಗೆ ಪ್ರಶ್ನೆ ಕಾಡಬಹುದು. ಏಕೆಂದರೆ, ಹಲವಾರು ವಸ್ತುಗಳ ದರಗಳು, ಸ್ಲ್ಯಾಬ್​ಗಳು ಇವೆಲ್ಲಾ ಗೊಂದಲಗಳ ನಡುವೆ ಕೆಲವರ ಕಣ್ಣು ನೆಟ್ಟಿರುವುದು ಚಿನ್ನ, ಬೆಳ್ಳಿ, ವಜ್ರಗಳ ಮೇಲೆ. ಇವುಗಳ ದರದಲ್ಲಿ ಏನಾದರೂ ಪ್ರಭಾವ ಬೀರ್ತಿದೆಯಾ ಎನ್ನುವ ಪ್ರಶ್ನೆ ಹಲವರನ್ನು ಕಾಡುವುದು ಇದೆ. ಇದರ ಬಗ್ಗೆ ತಿಳಿಯಬೇಕು ಎಂದರೆ ಸಿಂಪಲ್​ ಲೆಕ್ಕಾಚಾರವನ್ನು ತಿಳಿಯಬೇಕಾಗುತ್ತದೆ.

ಚಿನ್ನ- ಬೆಳ್ಳಿಗಳಿಗೆ ಈ ಪರಿಷ್ಕರಣೆಯಿಂದ ಸದ್ಯ ಯಾವುದೇ ಲಾಭವೂ ಇಲ್ಲ, ನಷ್ಟವೂ ಇಲ್ಲ. ಹಿಂದಿನಂತೆಯೇ ಸ್ಲ್ಯಾಬ್ ಮುಂದುವರೆಯಲಿದೆ. ಏಕೆಂದರೆ ಇವುಗಳಿಗೆ ಪ್ರತ್ಯೇಕ GST ದರ ಇದೆ. ಅದು ಶೇಕಡಾ 3ರಷ್ಟು ದರವಾಗಿದೆ. ಚಿನ್ನ ಮತ್ತು ಬೆಳ್ಳಿಗಳ ಮೇಲೆ ಶೇಕಡಾ 3ರಷ್ಟು ಜಿಎಸ್​ಟಿಯನ್ನು ವಿಧಿಸಲಾಗುತ್ತಿದೆ. ಈಗ ಪರಿಷ್ಕರಣೆಯಲ್ಲಿ ಅದೇ ಮುಂದುವರೆದಿರುವುದರಿಂದ ಯಾವುದೇ ಬದಲಾವಣೆ ಇಲ್ಲ.

ಮೇಕಿಂಗ್ ಚಾರ್ಜ್​ಗಳ ಮೇಲೆ ಶೇ. 5ರಷ್ಟು ಜಿಎಸ್​ಟಿ

ಆದರೆ ಇವುಗಳ ಮೇಕಿಂಗ್​ ಚಾರ್ಜ್​ ಮೇಲೆ ಮೊದಲಿನಂತೆಯೇ ಶೇ. 5ರಷ್ಟು ಜಿಎಸ್​ಟಿ ಅನ್ವಯ ಆಗಲಿದೆ. ಇದರ ಲೆಕ್ಕಾಚಾರವನ್ನು ಇಂದಿನ 22 ಕ್ಯಾರೆಟ್​ ಚಿನ್ನದ ಬೆಲೆಯನ್ನು ತೆಗೆದುಕೊಂಡು ನೋಡೋಣ. ಇಂದಿನ 22 ಕ್ಯಾರೆಟ್​ ಚಿನ್ನದ ಬೆಲೆ 1 ಗ್ರಾಮ್​ಗೆ 9,795 ರೂಪಾಯಿ ಇದೆ. 10 ಗ್ರಾಮ್​ಗೆ 97,950 ರೂಪಾಯಿ ಆಗುತ್ತದೆ. ಅದರ ಆಧಾರದ ಮೇಲೆ ಲೆಕ್ಕಾಚಾರ ಹಾಕುವುದಾದರೆ, 97,950 ರೂಪಾಯಿಗೆ ಶೇಕಡಾ 3ರಷ್ಟು ಜಿಎಸ್​ಟಿ ಹಿಂದಿನಂತೆಯೇ ಅನ್ವಯ ಆಗಲಿದೆ. ಅದು 2,937 ರೂ. ಆಗುತ್ತದೆ. ಮೇಕಿಂಗ್​ ಚಾರ್ಜ್​ 9,795 ರೂಪಾಯಿ ಆದರೆ, ಅದರ ಮೇಲೆ ಶೇ.5ರಷ್ಟು GST ಎಂದರೆ 490 ರೂಪಾಯಿ ಹೆಚ್ಚುವರಿ ಚಾರ್ಜ್​ ಆಗುತ್ತದೆ.

ಈ ಲೆಕ್ಕಾಚಾರದಲ್ಲಿ ಹೇಳುವುದಾದರೆ, ನೀವು ಕೊಳ್ಳುವ ಚಿನ್ನದ ಮೇಲಿನ ವೇಸ್ಟೇಜ್ ಚಾರ್ಜ್ ಅನ್ನು ಹೊರತುಪಡಿಸಿ, ಆಭರಣದ ಖರೀದಿ ಬೆಲೆ 1 ಲಕ್ಷದ 11 ಸಾವಿರದ 172 ರೂ ಆಗುತ್ತದೆ. ಈ ಮೇಕಿಂಗ್​ ಚಾರ್ಜ್​ ಇರುವುದು ಆಭರಣ ಖರೀದಿಸಿದರೆ ಮಾತ್ರ. ಆದರೆ ಗೋಲ್ಡ್ ಬಿಸ್ಕತ್, ಗೋಲ್ಡ್ ಕಾಯಿನ್ (Gold Coin) ಇತ್ಯಾದಿ 24 ಕ್ಯಾರಟ್ ಚಿನ್ನ ಖರೀದಿಸಿದರೆ ಜಿಎಸ್​ಟಿ ದರ ಶೇ. 3 ಮಾತ್ರವೇ ಅನ್ವಯ ಆಗುತ್ತದೆ. ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಚಿನ್ನ ಕೊಂಡರೂ ಶೇ. 3 ಜಿಎಸ್​ಟಿ ಅನ್ವಯ ಆಗುತ್ತದೆ.

ಇದನ್ನೂ ಓದಿ: ತಂಬಾಕು ಉತ್ಪನ್ನಗಳ ಮೇಲೆ ಶೇ. 40 ಜಿಎಸ್‌ಟಿ, ಭಾರೀ ತೆರಿಗೆ ಕಡಿತದೊಂದಿಗೆ ಬಚಾವ್‌ ಆದ ಬೀಡಿ!