Adi Shri Shankaracharya ಗುರುಕುಲದಲ್ಲಿದ್ದಾಗ ಹೊಂದಿದ್ದ ನಾಲ್ಕು ಪ್ರಮುಖ ಗುಣಗಳನ್ನು ಶಂಕರ ದಿಗ್ವಿಜಯದ ಶ್ಲೋಕದ ಆಧಾರದ ಮೇಲೆ ಇಲ್ಲಿ ವಿವರಿಸಲಾಗಿದೆ. ಈ ಗುಣಗಳು ಇಂದಿನ ವಿದ್ಯಾರ್ಥಿಗಳಿಗೆ ಹೇಗೆ ಮಾರ್ಗದರ್ಶಕವಾಗಿವೆ ಎಂಬುದನ್ನು ನೀವೇ ನೋಡಿ. 

ಆದಿ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಒಂದುಗೂಡಿಸಿದ ಮಹಾ ದಾರ್ಶನಿಕ. ಅವರ ಉಪದೇಶಗಳು, ಮಹಾಗ್ರಂಥಗಳು ಎಲ್ಲರಿಗೆ ದಾರಿ ತೋರುವ ಮಹಾನ್‌ ಕೃತಿಗಳಾಗಿವೆ. ಸೌಂದರ್ಯ ಲಹರಿಯಿಂದ ಹಿಡಿದು ಬ್ರಹ್ಮಸೂತ್ರ ಭಾಷ್ಯದ ವರೆಗೆ ಅವರ ಅನೇಕ ನೀತಿ ಗ್ರಂಥಗಳು ಸಣ್ಣವರಿಗೂ ದೊಡ್ಡವರಿಗೂ ಮಾರ್ಗದರ್ಶಕ ಗುಣ ಹೊಂದಿವೆ. ಒಂದೇ ಒಂದು ಸಣ್ಣ ಶ್ಲೋಕದಲ್ಲಿ ಕೂಡ ಅವರು ಬಾಳಿಗೆ ಬೆಳಕು ನೀಡುತ್ತಾರೆ. ಅಂಥ ಆಚಾರ್ಯ ಶಂಕರರು ಗುರುಕುಲದಲ್ಲಿ ಕಲಿಯುವಾಗ ಹೇಗೆ ಇದ್ದರು ಎಂಬುದನ್ನು ವರ್ಣಿಸುವ ಒಂದು ಶ್ಲೋಕ ಶಂಕರ ದಿಗ್ವಿಜಯದಲ್ಲಿದೆ. ಅದು ಎಲ್ಲ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡುವಂತೆ ಇದೆ. ಅವರಲ್ಲಿ ಕಲಿಕೆಗೆ ಪೂರಕವಾದ ನಾಲ್ಕು ಗುಣಗಳು ಇದ್ದವಂತೆ. ಯಾವುದು ಆ ನಾಲ್ಕು ಗುಣಗಳು? ಇಲ್ಲಿ ನೋಡೋಣ.

ಶ್ಲೋಕ ಹೀಗಿದೆ:

ಅಜನಿದುಃಖಕರೋನಗುರೋರಸೌ ಶ್ರವಣತಃಸಕೃದೇವಪರಿಗ್ರಹಿ

ಸಹನಿಪಾಠಜನಸ್ಯ ಗುರುಸ್ವಯಂ ಸಚಪಪಾಠ ತಥೋ ಗುರುಣಾ ವಿನಾ

1) ಗುರುವಿಗೆ ಗೌರವ: ಶಂಕರರು ತಮಗೆ ಪಾಠ ಮಾಡುತಿದ್ದ ಗುರುಗಳಿಗೆ ಯಾವತ್ತೂ ದುಃಖ, ಬೇಸರ ಉಂಟುಮಾಡುತ್ತಿರಲಿಲ್ಲ. ಬೇರೇನು ತುಂಟ ಚೇಷ್ಟೆ ಮಾಡಿದರೂ ಗುರುಗಳು ಸಹಿಸಿಕೊಳ್ತಾರೆ. ಮಕ್ಕಳಾದ್ದರಿಂದ ಮಕ್ಕಳಿಗೆ ಸಹಜವಾದ ತುಂಟತನ ಇದ್ದದ್ದೇ. ಆದರೆ ಹೇಳಿಕೊಟ್ಟ ಪಾಠವನ್ನ ಸರಿಯಾಗಿ ಕಲಿಯಲಿಲ್ಲ ಎಂದರೆ ಮಾತ್ರ ಬೇಸರಪಟ್ಟುಕೊಳ್ತಾರೆ. ಗುರುವಿಗೆ ದುಃಖ ಆದರೆ ಶಿಷ್ಯರಿಗೆ ಒಳ್ಳೆಯದಲ್ಲ. ಗುರುಗಳು ಹೇಳಿಕೊಟ್ಟದ್ದನ್ನು ಶಂಕರರು ಚೆನ್ನಾಗಿ ಮನನ ಮಾಡುತ್ತಿದ್ದರು.

2) ಏಕಾಗ್ರತೆಯಿಂದ ಪಾಠ ಗ್ರಹಿಸುವುದು: ಗುರುಗಳು ಯಾವ ಪಾಠವನ್ನು ಮಾಡುತ್ತಿದ್ದರೋ ಅದನ್ನು ತುಂಬಾ ಸಾವಧಾನವಾಗಿ ಆಲಿಸುತ್ತಿದ್ದರು, ಮನನ ಮಾಡುತ್ತಿದ್ದರು. ಎಷ್ಟು ಸಾವಧಾನವಾಗಿ ಕೇಳುತ್ತಿದ್ದರು ಎಂದರೆ, ಒಂದು ಸಲ ಹೇಳಿಕೊಟ್ಟರೆ ಸಾಕು, ಜೀವಮಾನಪೂರ್ತಿ ಅದು ಅವರಿಗೆ ನೆನಪಿನಲ್ಲಿ ಉಳಿಯುತ್ತಿತ್ತು. ಸಾವಧಾನವಾಗಿ, ಪೂರ್ತಿ ಮನಸ್ಸು ಕೊಟ್ಟು ಕೇಳಿದಾಗ ಮಾತ್ರವೇ ಆ ಪಾಠ ನಮಗೆ ಸದಾಕಾಲ ಜ್ಞಾಪಕದಲ್ಲಿರುತ್ತದೆ. ಒಮ್ಮೆ ಹೇಳಿದ್ದನ್ನು ಶಂಕರರು ತಕ್ಷಣ ಪರಿಗ್ರಹಣ ಮಾಡುತ್ತಿದ್ದರು.

3) ಸಹಪಾಠಿಗಳಿಗೆ ಸಹಾಯ: ಶಂಕರರ ಜೊತೆಗೆ ಕಲಿಯುತ್ತಿದ್ದ ಸಹಪಾಠಿಗಳು, ಪಾಠದ ವಿಷಯದಲ್ಲಿ ತಮ್ಮಲ್ಲೇನಾದರೂ ಸಂದೇಹ ಬಂದರೆ ಅದನ್ನು ಪರಿಹರಿಸಿಕೊಳ್ಳಲು ಗುರುಗಳ ಬಳಿಗೆ ಹೋಗದೆ ಶಂಕರರ ಬಳಿಗೇ ಬರುತ್ತಿದ್ದರು. ಅಂದರೆ ಶಂಕರರಲ್ಲಿ ಆ ಪಾಠ ಚೆನ್ನಾಗಿ ಬೇರೂರಿದೆ ಎಂದು ಅವರಿಗೆ ವಿಶ್ವಾಸ. ಜೊತೆಗೆ ಶಂಕರರಿಗೂ, ತಾನು ಅದನ್ನು ಇತರರಿಗೆ ಹೇಳಿಕೊಡಬಲ್ಲೆ ಎಂಬ ಆತ್ಮವಿಶ್ವಾಸ. ಅಂದರೆ ಪಾಠವನ್ನೂ ಚೆನ್ನಾಗಿ ಕಲಿತುಕೊಂಡು, ಅದರ ಮೇಲೆ ಬರಬಹುದಾದ ಪ್ರಶ್ನೆಗಳಿಗೆ ಉತ್ತರವನ್ನೂ ಕೊಡುವಷ್ಟ ಚೆನ್ನಾಗಿ ಮನನ ಮಾಡಿಕೊಳ್ಳುತ್ತಿದ್ದರು.

4) ಸ್ವಯಂ ಕಲಿಕೆ: ಗುರುಗಳು ಪಾಠದಲ್ಲಿರುವ ಮುಖ್ಯವಾದ ಅಂಶಗಳನ್ನು ಹೇಳಿಕೊಡುತ್ತಾರೆ. ಆದರೆ ಎಲ್ಲವನ್ನೂ ಹೇಳಿಕೊಡಲಾರರು. ಉಳಿದದ್ದನ್ನೆಲ್ಲ ಕಲಿಕಾರ್ಥಿಯು ತಾನೇ ತಿಳಿದುಕೊಳ್ಳಬೇಕು. ಅಂದರೆ ಒಂದಕ್ಕೆ ಒಂದು ಕೂಡಿಸಿದರೆ ಎರಡು ಎಂದು ಗುರುಗಳು ಹೇಳಿಕೊಡುತ್ತಾರೆ. ಹಾಗೇ ಒಂದಕ್ಕೆ ಎರಡು, ಮೂರು ಕೂಡಿಸಿದರೆ ಎಷ್ಟಾಗುತ್ತದೆ ಎಂದು ಮುಂದಿನ ಹಂತಗಳನ್ನು ತಾನೇ ಕಲಿಯಲು ವಿದ್ಯಾರ್ಥಿ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

ಈ ನಾಲ್ಕು ಗುಣಗಳು ಇಂದಿನ ವಿದ್ಯಾರ್ಥಿಗಳಿಗೂ ಅಗತ್ಯವಾಗಿವೆ. ಕ್ಲಾಸಿರೂಮಿನಲ್ಲಿ ವಿದ್ಯಾರ್ಥಿಗಳು ಕಲಿಯುವುದು ಸಾಕಷ್ಟಿದೆಯಾದರೂ ಅದರ ಬಹಳಷ್ಟು ಪಟ್ಟು ತನ್ನ ಸ್ವಂತ ಗುಣಗಳಿಂದ, ಆಲೋಚನೆಯಿಂದ ಶಿಷ್ಯರು ಕಲಿಯಬೇಕಾಗುತ್ತದೆ. ಆ ಗುಣಗಳನ್ನು ನಾವು ಶಂಕರಾಚಾರ್ಯರಿಂದ ಕಲಿಯಬಹುದು.