ಋಷಿಮುನಿಗಳನ್ನು ಕೆಣಕಿ ಹಾಳಾದವರು ಪುರಾಣಗಳಲ್ಲಿ ಬಹಳ ಮಂದಿ ಕಾಣಸಿಗುತ್ತಾರೆ. ದುರ್ಯೋಧನ ಕೂಡ ಅಂತಹವನೇ. ಕೊನೆಗೂ ಅವನು ತೊಡೆ ಮುರಿದು ಸಾಯುವ ಹಾಗಾದುದು ಅಂಥ ಒಂದು ಶಾಪದಿಂದಲೇ. ಆ ಕತೆ ಇಲ್ಲಿದೆ. 

ಮಹಾಭಾರತದಲ್ಲಿ ಪಾಂಡವರನ್ನು ಮೋಸದ ಜೂಜಿನಲ್ಲಿ ಸೋಲಿಸಿ ಕೌರವರು ಕಾಡಿಗೆ ಕಳುಹಿಸಿದ ಕತೆ ನಿಮಗೆ ಗೊತ್ತಿದೆ ತಾನೆ? ನಂತರವೂ ಕೌರವರು ಪಾಂಡವರ ನಾಶ ಮಾಡಲು ನಾನಾ ರೀತಿಗಳಲ್ಲಿ ಹೊಂಚು ಹಾಕುತ್ತಲೇ ಇದ್ದರು. 'ರಾಜನ್, ನೀನು ಅಪ್ಪಣೆ ಕೊಟ್ಟರೆ ಕೂಡಲೇ ವನಕ್ಕೆ ಹೋಗಿ ಅವರನ್ನು ಬಗ್ಗುಬಡಿಯೋಣ,'' ಎಂದು ಕರ್ಣನು ಹೇಳಿದ. ಅವರು ಈ ಬಗ್ಗೆ ಯೋಜನೆ ತಯಾರಿಸತೊಡಗಿದರು.

ಅದೇ ಹೊತ್ತಿಗೆ ಕುರುಕುಲದ ಈ ತಲೆಮಾರಿಗೆಲ್ಲ ಪಿತಾಮಹರಾದ ವ್ಯಾಸರು ಅರಮನೆಯನ್ನು ಪ್ರವೇಶಿಸಿದರು. ಕೌರವರ ಕುಹಕವನ್ನು ಜ್ಞಾನದೃಷ್ಟಿಯಿಂದ ತಿಳಿದರು. ನೇರವಾಗಿ ಧೃತರಾಷ್ಟ್ರನ ಬಳಿಗೆ ಹೋದರು. “ಮಗು, ನಿನ್ನ ಮಗ ದುರ್ಯೋಧನ ಮತ್ತೆ ಪಾಂಡವರನ್ನು ಅರಣ್ಯದಲ್ಲಿ ಹೋಗಿ ಕೆಣಕುವ ಯೋಚನೆ ಮಾಡುತ್ತಿದ್ದಾನೆ. ಅವನಿಗೆ ತಿಳಿಹೇಳು. ಹಾಗೆ ಮಾಡಿದರೆ ಅವನು ಕೆಣಕಿದ ಹಾವಿನ ಹುತ್ತಕ್ಕೆ ಕೈಹಾಕಿದಂತಾದೀತು. ಪಾಂಡವರನ್ನು ಕರೆತಂದು ಮಾನವಾಗಿ ಬದುಕುವಂತೆ ಮಾಡು'' ಎಂದು ತಿಳಿಹೇಳಿದರು. ಆದರೆ ಧೃತರಾಷ್ಟ್ರ ಮಾತ್ರ, "ನನ್ನ ಮಾತನ್ನು ಅವನು ಕೇಳುವುದಿಲ್ಲ. ಅವನು ಈ ಕುಲದ ನಾಶಕ್ಕಾಗಿಯೇ ಹುಟ್ಟಿದ್ದಾನೆ ಎಂದು ನನಗೆ ಅನಿಸುತ್ತಿದೆ. ನೀನೇ ಅವನಿಗೆ ತಿಳಿಹೇಳಬೇಕು'' ಎಂದು ಕೈಚೆಲ್ಲಿದ. ''ನಾನು ಹಾಗೆ ಮಾಡಲಾರೆ. ಆದರೆ ಮಹಾಮುನಿ ಮೈತ್ರೇಯರು ಆ ಕೆಲಸ ಮಾಡಲು ಬರಲಿದ್ದಾರೆ'' ಎಂದು ಹೇಳಿ ವ್ಯಾಸರು ಹೊರಟುಹೋದರು.

ವನವಾಸದಲ್ಲಿದ್ದ ಪಾಂಡವರಿಗೆ ಹಲವಾರು ಋಷಿಮುನಿಗಳು ಸಾಂತ್ವನ ಹೇಳುತ್ತಿದ್ದರು. ಹಸ್ತಿನಾವತಿಗೆ ತೆರಳಿ ದುರ್ಯೋಧನನಿಗೂ ಬುದ್ಧಿ ಮಾತು ಹೇಳುತ್ತಿದ್ದರು. ಹೀಗೆ ದುರ್ಯೋಧನನನ್ನು ತಿದ್ದಿ ಪಾಂಡವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಭಾವಿಸಿ ಕೌರವನಲ್ಲಿಗೆ ತೆರಳಿ ಹಿತವಚನ ಹೇಳಿದವರಲ್ಲಿ ಮಹರ್ಷಿ ಮೈತ್ರೇಯರೂ ಒಬ್ಬರು. ಮೈತ್ರೇಯರು ಬ್ರಹ್ಮರ್ಷಿ. ಈತನ ತಂದೆ ಕುಶಾರವ. ತಾಯಿಯ ಹೆಸರು ಮಿತ್ರೆ. ಪಾಂಡವರಿಗೆ ವನವಾಸವಾದ ವಿಚಾರ ತಿಳಿದ ಮೈತ್ರೇಯ ಮಹರ್ಷಿ ಬಹಳವಾಗಿ ನೊಂದುಕೊಳ್ಳುತ್ತಾನೆ.

ಹಾಗೆ ಮುನಿ ಮೈತ್ರೇಯರು ಅರಮನೆಗೆ ಆಗಮಿಸಿದರು. ಧೃತರಾಷ್ಟ್ರ ಅವರನ್ನು ಸ್ವಾಗತಿಸಿ ಸತ್ಕರಿಸಿದ. ಮೈತ್ರೇಯರು ಹೇಳಿದರು: “ನರಾಧಿಪ, ನಾನು ಕಾಮ್ಯಕವನಕ್ಕೆ ಹೋಗಿದ್ದೆ. ಇಲ್ಲಿ ನಡೆದ ದ್ಯೂತ, ಪಾಂಡವರು ವನವಾಸಿಗಳಾಗುವಂತಾದುದು ನನಗೆ ತಿಳಿಯಿತು. ನೀನು ನನ್ನ ಸ್ನೇಹಿತನಾದ್ದರಿಂದ ಹೇಳುತ್ತೇನೆ- ಪಾಂಡವರು ಮಹಾವೀರರು, ಸಜ್ಜನರು. ಅವರನ್ನು ಸೇರಿಕೊಂಡು ಬಾಳುವುದು ನಿನಗೂ ಪುತ್ರರಿಗೂ ಈ ಕುಲಕ್ಕೂ ಶ್ರೇಯಸ್ಸು.ʼʼ

ಇದನ್ನು ಕೇಳಿ ಅಲ್ಲೇ ಇದ್ದ ದುರ್ಯೋಧನ, ಅಪಹಾಸ್ಯದ ನಗುವನ್ನು ನಗುತ್ತಾ ತನ್ನ ತೊಡೆಯನ್ನೊಮ್ಮೆ ತಟ್ಟಿಕೊಂಡ. ಇದನ್ನು ಕಂಡು ಮೈತ್ರೇಯರು ರೋಷಾವಿಷ್ಟರಾದರು. ಅವರ ಕಣ್ಣುಗಳು ಕೆಂಡದುಂಡೆಗಳಾದವು. “ಪಾಪಿ! ನಿನಗೆ ಹಿರಿಯರ ಮೇಲೆ ಗೌರವವಿಲ್ಲ. ಬಂಧುಗಳ ಮೇಲೆ ಕರುಣೆಯಿಲ್ಲ. ನಿನ್ನ ಪಾಪಿಷ್ಟ ಕೆಲಸಕ್ಕೆ ಇಷ್ಟರಲ್ಲೇ ಫಲವನ್ನು ಉಣ್ಣಲಿದ್ದೀಯೆ. ನೀನೀಗ ತಟ್ಟಿಕೊಂಡ ತೊಡೆ, ನೀನು ಅಭಿಮಾನವಿಟ್ಟುಕೊಂಡ ಆ ತೊಡೆಯನ್ನು ಭೀಮ ನಿಸ್ಸಂಶಯವಾಗಿ ರಣಾಂಗಣದಲ್ಲಿ ಮುರಿದುಹಾಕಲಿದ್ದಾನೆ!'' ಈ ಶಾಪವಾಕ್ಯವನ್ನು ಕೇಳಿ ಧೃತರಾಷ್ಟ್ರ ನಡುಗಿಹೋದ. ಮೈತ್ರೇಯರನ್ನು ಬೇಡಿಕೊಂಡರೂ ಅವರ ಸಿಟ್ಟು ಶಮನವಾಗಲಿಲ್ಲ. ಅವರು ಹೊರಟುಹೋದರು.

ಮೈತ್ರೇಯರ ಶಾಪವೂ ಭೀಮನ ಪ್ರತಿಜ್ಞೆಯೂ ಸೇರಿದುದರಿಂದ, ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನನು ಭೀಮನಿಂದ ತೊಡೆ ಮುರಿಸಿಕೊ೦ಡು ಸಾಯುತ್ತಾನೆ.