ನಾಳೆ ವರ್ಷದ ಕೊನೆಯ ಚಂದ್ರಗ್ರಹಣ. ರಕ್ತ ವರ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ ಚಂದಿರ. ಗರ್ಭಿಣಿಯರಿಗೂ ಗ್ರಹಣಕ್ಕೂ ನೇರ ಸಂಬಂಧ ಇದ್ಯಾ? ಗರ್ಭಿಣಿಯರು ಏನು ಮಾಡ್ಬೇಕು, ಏನು ಮಾಡ್ಬಾರ್ದು? ಡಿಟೇಲ್ಸ್ ಇಲ್ಲಿದೆ....
ವರ್ಷದ ಎರಡನೇ ಮತ್ತು ಕೊನೆಯ ಚಂದ್ರ ಗ್ರಹಣವು ಸೆಪ್ಟೆಂಬರ್ 7, 2025 ರಂದು ರಾತ್ರಿ 9:58 ರಿಂದ ಬೆಳಗಿನ ಜಾವ 1:26 ರವರೆಗೆ ಇರುತ್ತದೆ. ಆದಾಗ್ಯೂ, ಅದರ ಸೂತಕವು ಮಧ್ಯಾಹ್ನ 12:19 ಕ್ಕೆ ಪ್ರಾರಂಭವಾಗುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಚಂದ್ರಗ್ರಹಣವನ್ನು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಚಂದ್ರಗ್ರಹಣವು ವಿಶ್ವದಲ್ಲಿ ಬಹಳಷ್ಟು ನಕಾರಾತ್ಮಕ ಅಲೆಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ, ತಾಯಿ ಮತ್ತು ಹುಟ್ಟಲಿರುವ ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚುವರಿ ಕಾಳಜಿ ವಹಿಸಲು ಶಿಫಾರಸು ಮಾಡಲಾಗಿದೆ. ಆದ್ದರಿಂದ ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಹೇಳಲಾಗುತ್ತದೆ.
ಹಾಗೆ ನೋಡಿದರೆ, ವೈಜ್ಞಾನಿಕವಾಗಿ ಗರ್ಭಿಣಿ ಮಹಿಳೆ ಅಥವಾ ಆಕೆಯ ಹುಟ್ಟಲಿರುವ ಮಗುವಿನ ಮೇಲೆ ಗ್ರಹಣಗಳು ಯಾವುದೇ ದೈಹಿಕ ಪರಿಣಾಮ ಬೀರುವುದಿಲ್ಲ. ಇದಕ್ಕೆ ಸೂಕ್ತ ವೈಜ್ಞಾನಿಕ ಪುರಾವೆಗಳಿಲ್ಲ. ಗ್ರಹಣವು ಕೆಟ್ಟ ಶಕುನ ಅಥವಾ ಜನ್ಮ ದೋಷಗಳನ್ನು ಉಂಟುಮಾಡುತ್ತದೆ ಎಂಬ ನಂಬಿಕೆಗಳು ಜನರಲ್ಲಿ ಇರುವುದು ಹೌದಾದರೂ ಇದು ವೈಜ್ಞಾನಿಕ ಸಂಗತಿಗಳಲ್ಲ ಎನ್ನಲಾಗಿದೆ. ಆದಾಗ್ಯೂ, ಕೆಲವು ಜನರು ಮನಸ್ಸಿನ ಶಾಂತಿಗಾಗಿ ಒಳಾಂಗಣದಲ್ಲಿ ಉಳಿಯುವುದು, ತಿನ್ನುವುದನ್ನು ತಪ್ಪಿಸುವುದು ಅಥವಾ ಸ್ನಾನ ಮಾಡುವಂತಹ ಸಾಂಸ್ಕೃತಿಕ ಪದ್ಧತಿಗಳನ್ನು ಅನುಸರಿಸುತ್ತಾರೆ.
ಇದಕ್ಕೆ ಕಾರಣವೂ ಇದೆ. ಚಂದ್ರ ಎಂದರೆ ಮನಸ್ಸು. ಈ ಸಂದರ್ಭದಲ್ಲಿ ಚಂದ್ರನಿಗೆ ಗ್ರಹಣ ಹಿಡಿಯುವ ಕಾರಣ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯರ ಮನಸ್ಸು ಈ ಸಂದರ್ಭದಲ್ಲಿ ಹೆಚ್ಚು ಸೂಕ್ಷ್ಮವಾಗಿರುವ ಕಾರಣ, ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆಯೇ ವಿನಾ ವೈಜ್ಞಾನಿಕವಾಗಿ ಈ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಇದರ ಹೊರತಾಗಿಯೂ ಸೆಪ್ಟೆಂಬರ್ 7 ರಂದು ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ಕೆಲವೊಂದು ನಿಯಮಗಳನ್ನು ಹಿರಿಯರು ಹೇಳುತ್ತಾರೆ.
ಇದನ್ನೂ ಓದಿ: Pitru Paksha + ಚಂದ್ರಗ್ರಹಣ: ಪೂರ್ವಜರ ಆಶೀರ್ವಾದ ಪಡೆಯಲು ತರ್ಪಣ ಹೇಗೆ? ಸೂಕ್ತ ಸಮಯ ಯಾವುದು?
ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬೇಕು?
- ಗ್ರಹಣ ಪ್ರಾರಂಭವಾಗುವ ಮೊದಲು ಗರ್ಭಿಣಿಯರು ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಬೇಕು.
- ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಧ್ಯಾನ ಮಾಡಲು ಮತ್ತು ಮಂತ್ರಗಳನ್ನು ಪಠಿಸಲು ಸೂಚಿಸಲಾಗಿದೆ. ಇದು ಗ್ರಹಣದ ದುಷ್ಪರಿಣಾಮಗಳನ್ನು ಸಹ ತಡೆಯುತ್ತದೆ.
- ಚಂದ್ರಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಲು ಮರೆಯದಿರಿ.
- ಗ್ರಹಣದ ಅವಧಿಯಲ್ಲಿ ಮಂತ್ರಗಳು ಅಥವಾ ಸ್ತೋತ್ರಗಳನ್ನು ಪಠಿಸಬೇಕು.
ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬಾರದು?
- ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು, ಏಕೆಂದರೆ ಈ ಸಮಯದಲ್ಲಿ ಹೊರಸೂಸುವ ಹಾನಿಕಾರಕ ಕಿರಣಗಳು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಹಾನಿ ಮಾಡುತ್ತದೆ ಎಂದು ನಂಬಲಾಗಿದೆ.
- ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಬ್ಲೇಡ್‌ಗಳು, ಕತ್ತರಿ ಇತ್ಯಾದಿಗಳಂತಹ ಚೂಪಾದ ಅಥವಾ ಮೊನಚಾದ ವಸ್ತುಗಳನ್ನು ಬಳಸಬಾರದು.
- ಈ ಸಮಯದಲ್ಲಿ, ಬಳೆಗಳು, ಪಿನ್‌ಗಳು ಮತ್ತು ಸುರಕ್ಷತಾ ಪಿನ್‌ಗಳಂತಹ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ತಡೆಯಿರಿ.
- ಚಂದ್ರಗ್ರಹಣದ ಸಮಯದಲ್ಲಿ ನೀವು ಮಲಗಬಾರದು, ಆದರೆ ನೀವು ವಿಶ್ರಾಂತಿ ಪಡೆಯಬಹುದು.
ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನನ್ನಾದರೂ ತಿನ್ನಬಹುದೇ?
- ಸಾಮಾನ್ಯವಾಗಿ, ಗ್ರಹಣದ ಸಮಯದಲ್ಲಿ ಏನನ್ನಾದರೂ ತಿನ್ನುವುದನ್ನು ನಿಷೇಧಿಸಲಾಗಿದೆ, ಆದರೆ ಆರೋಗ್ಯ ಕಾರಣಗಳಿಂದಾಗಿ ಗರ್ಭಿಣಿಯರು ಈ ಸಮಯದಲ್ಲಿ ತಾಜಾ ಹಣ್ಣುಗಳು, ಸಾತ್ವಿಕ ಆಹಾರ ಮತ್ತು ಅಗತ್ಯ ಔಷಧಿಗಳನ್ನು ಸೇವಿಸಬಹುದು.
ಇದನ್ನೂ ಓದಿ:ಸೆ.7ರಂದು 82 ನಿಮಿಷ ರಕ್ತ ಚಂದ್ರನ ಅದ್ಭುತ ನೋಟ! Blood Moon ಗ್ರಹಣದ ವಿಶೇಷತೆ ಏನು?
