ಇಂದು ಲಂಕಾ ಅಧ್ಯಕ್ಷರ ಚುನಾವಣೆ: ತ್ರಿಕೋನ ಸ್ಪರ್ಧೆ: ಮೂವರಲ್ಲಿ ರನಿಲ್ ಮುಂದೆ!

By Suvarna NewsFirst Published Jul 20, 2022, 8:49 AM IST
Highlights

ಶ್ರೀಲಂಕಾದ ಅಧ್ಯಕ್ಷ ಹುದ್ದೆಗೆ ಜು.20ರ ಬುಧವಾರ ಚುನಾವಣೆ ನಡೆಯಲಿದೆ. ಸ್ಪರ್ಧೆಯ ಕಣದಲ್ಲಿ ಹಂಗಾಮಿ ಅಧ್ಯಕ್ಷ, ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ರನಿಲ್‌ ವಿಕ್ರಮಸಿಂಘೆ, ಸಿಂಹಳ ಬುದ್ಧಿಸ್ಟ್‌ ನ್ಯಾಷನಲ್‌ ಪಾರ್ಟಿಯ ಡಲ್ಲಾಸ್‌ ಅಲಹೆಪ್ಪೆರುಮ ಮತ್ತು ಜನತಾ ವಿಮುಕ್ತಿ ಪೆರುಮುನ ಪಕ್ಷದ ಅನುರ ಕುಮಾರ ದಿಸ್ಸನಾಯಕೆ ಇದ್ದಾರೆ.

ಕೊಲಂಬೋ(ಜು.20): ಗೊಟಬಯ ರಾಜಪಕ್ಸೆ ರಾಜೀನಾಮೆಯಿಂದ ತೆರವಾಗಿರುವ ಶ್ರೀಲಂಕಾದ ಅಧ್ಯಕ್ಷ ಹುದ್ದೆಗೆ ಜು.20ರ ಬುಧವಾರ ಚುನಾವಣೆ ನಡೆಯಲಿದೆ. ಸ್ಪರ್ಧೆಯ ಕಣದಲ್ಲಿ ಹಂಗಾಮಿ ಅಧ್ಯಕ್ಷ, ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ರನಿಲ್‌ ವಿಕ್ರಮಸಿಂಘೆ, ಸಿಂಹಳ ಬುದ್ಧಿಸ್ಟ್‌ ನ್ಯಾಷನಲ್‌ ಪಾರ್ಟಿಯ ಡಲ್ಲಾಸ್‌ ಅಲಹೆಪ್ಪೆರುಮ ಮತ್ತು ಜನತಾ ವಿಮುಕ್ತಿ ಪೆರುಮುನ ಪಕ್ಷದ ಅನುರ ಕುಮಾರ ದಿಸ್ಸನಾಯಕೆ ಇದ್ದಾರೆ.

ಈ ನಡುವೆ, ಸಮಗಿ ಜನ ಬಲವೇಗಯಾ ಪಕ್ಷದ ಸಜಿತ್‌ ಪ್ರೇಮದಾಸ ನಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

225 ಸದಸ್ಯ ಬಲದ ಲಂಕಾ ಸಂಸತ್‌ನಲ್ಲಿ ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ 100 ಸದಸ್ಯರಿರುವ ಕಾರಣ, ಎಲ್ಲಾ ಸಂಸದರು ರನಿಲ್‌ ಪರ ಮತ ಹಾಕಿ, ವಿಪಕ್ಷಗಳ ಮತ ವಿಭಜನೆಯಾದರೆ ರನಿಲ್‌ ವಿಕ್ರಮಸಿಂಘೆ ಸುಲಭವಾಗಿ ಜಯಸಾಧಿಸುವ ಸಾಧ್ಯತೆ ಇದೆ.

ಸಂಸತ್ತಲ್ಲಿ ಆಯ್ಕೆ ಅಪರೂಪ:

ಶ್ರೀಲಂಕಾ ಸಂಸತ್‌ನಲ್ಲಿ ಮತದಾನದ ಮೂಲಕ ಅಧ್ಯಕ್ಷರ ಆಯ್ಕೆ ಕೂಡಾ ತೀರಾ ಅಪರೂಪ. 1978ರ ಬಳಿಕ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆದೇ ಇಲ್ಲ.1982,1988, 1994, 1999, 2005, 2010, 2015 ಮತ್ತು 2019ರಲ್ಲಿ ಜನಪ್ರಿಯ ಮತಗಳ ಮೂಲಕವೇ ಅಧ್ಯಕ್ಷರ ಆಯ್ಕೆಯಾಗಿತ್ತು. 1993ರಲ್ಲಿ ಅಂದಿನ ಅಧ್ಯಕ್ಷೆ ರಣಸಿಂಘೆ ಪ್ರೇಮದಾಸ ಹತ್ಯೆ ಬಳಿಕ ಮಾತ್ರವೇ ಡಿ.ಬಿ.ವಿಜೆತುಂಗ ಅವರನ್ನು ಉಳಿದ ಅವಧಿಗಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಅಧ್ಯಕ್ಷರಾಗಿ ಆಯ್ಕೆಯಾದವರು ಕೂಡಾ 2024ರವರೆಗೆ ಮಾತ್ರ ಅಧಿಕಾರ ಹೊಂದಿರಲಿದ್ದಾರೆ.

ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಶ್ರೀಲಂಕಾ ಮುಂದಿರುವ ಮಾರ್ಗಗಳೇನು?

ಶ್ರೀಲಂಕಾದಲ್ಲಿ ಪ್ರಸ್ತುತ ಅರಾಜಕತೆಯಿದೆ. ಸ್ಥಿರ ಸರ್ಕಾರ ರಚನೆ ಶ್ರೀಲಂಕಾದ ಎದುರಿಗಿರುವ ದೊಡ್ಡ ಸವಾಲಾಗಿದೆ. ಪ್ರತಿಭಟನಾಕಾರರ ಒತ್ತಡದಿಂದಾಗಿ ಅಧ್ಯಕ್ಷರು ಹಾಗೂ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಕೆಲ ದಿನಗಳಲ್ಲೇ ನೂತನ ಅಧ್ಯಕ್ಷ ಹಾಗೂ ಪ್ರಧಾನಿಯ ಆಯ್ಕೆ ನಡೆಯಲಿದೆ. ಈ ಆಯ್ಕೆ ಸಂಸದರಿಂದ ನಡೆಯಲಿದೆ. ಹೀಗಾಗಿ ಆಯ್ಕೆಯಾದ ಪ್ರಧಾನಿ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಣೆಯತ್ತ ಗಮನ ಹರಿಸಬೇಕು ಮಾತ್ರವಲ್ಲದೇ ಮುಂದಿನ 6-8 ತಿಂಗಳಲ್ಲಿ ನಡೆಯಬಹುದಾದ ಸಾರ್ವತ್ರಿಕ ಚುನಾವಣೆಗೂ ಸಿದ್ಧರಾಗಬೇಕಾಗಿದೆ. ಹಂಗಾಮಿ ಅಧ್ಯಕ್ಷರಾಗಿರುವ ರನಿಲ್‌ ವಿಕ್ರಮಸಿಂಘೆ ಮತ್ತೆ ತಾವೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಸಂಸದರು ಅವರನ್ನೇ ಮತ್ತೆ ಆಯ್ಕೆ ಮಾಡಿದರೂ ಜನರು ಅದನ್ನು ವಿರೋಧಿಸಿ ಪ್ರತಿಭಟಿಸುವ ಸಾಧ್ಯತೆ ಇದೆ. ಹೀಗಾಗಿ ಜನರಿಂದಲೇ ಪ್ರಧಾನಿ, ರಾಷ್ಟ್ರಪತಿ ಆಯ್ಕೆ ನಡೆದಾಗಲೇ ಅದು ನ್ಯಾಯಸಮ್ಮತ ಎನಿಸಿಕೊಳ್ಳುತ್ತದೆ. ಒಮ್ಮೆ ರಾಜಕೀಯ ಸ್ಥಿರತೆ ಸಾಧಿಸಿದ ಬಳಿಕವೇ ಐಎಂಎಫ್‌ ಹಾಗೂ ಅಂತಾರಾಷ್ಟ್ರೀಯ ಸಮುದಾಯಗಳ ನೆರವು ಪಡೆದು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಬಹುದಾಗಿದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ನೀತಿಗಳಲ್ಲಿ ತೀವ್ರ ಬದಲಾವಣೆಯನ್ನು ನಿರೀಕ್ಷಿಸಬಹುದೇ?

ಅಂತಾರಾಷ್ಟ್ರೀಯ ಆರ್ಥಿಕ ಬಿಕ್ಕಟ್ಟು ನಿರ್ವಹಣಾ ವ್ಯವಸ್ಥಾಪಕರಂತೆ ಐಎಂಎಫ್‌ ಕಾರ್ಯ ನಿರ್ವಹಿಸುತ್ತದೆ. ವಿಶ್ವ ಬ್ಯಾಂಕು ದೇಶಗಳಿಗೆ ದೀರ್ಘಾವಧಿಯಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಲು ನೆರವಾಗುತ್ತದೆ. ಐಎಂಎಫ್‌ ಇಂತಹ ಬಿಕ್ಕಟ್ಟುಗಳನ್ನು ನಿರ್ವಹಿಸಲೆಂದೇ ಸೃಷ್ಟಿಯಾಗಿದೆ. 1965ರಿಂದಲೂ ಶ್ರೀಲಂಕಾ ಐಎಂಎಫ್‌ ನೆರವಿಗಾಗಿ 13 ಬಾರಿ ಧಾವಿಸಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಕ್ಕೆ ಐಎಂಎಫ್‌ ನಿಗದಿತ ಧನಸಹಾಯ ಒದಗಿಸಿ, ಆರ್ಥಿಕ ಸ್ಥಿರತೆ ಸಾಧಿಸಲು ನೆರವಾಗುತ್ತದೆ. ಇದರೊಂದಿಗೆ ಆರ್ಥಿಕತೆಯ ಚೇತರಿಕೆಗೆ ವಿಧಾನಗಳನ್ನು ಸೂಚಿಸುತ್ತದೆ. ಸಾಲ ಒದಗಿಸಿ ಆರ್ಥಿಕ ಬಿಕ್ಕಟ್ಟನ್ನು ನೀವೆ ಬಗೆಹರಿಸಿಕೊಳ್ಳಿ ಎಂದು ಸುಮ್ಮನಾಗದೇ, ತಾನು ಸೂಚಿಸಿದ ಕ್ರಮಗಳನ್ನು ದೇಶ ಪಾಲಿಸುತ್ತ ಹೋದಂತೆ ಹಂತ ಹಂತವಾಗಿ ಧನಸಹಾಯ ಬಿಡುಗಡೆ ಮಾಡುತ್ತ ಹೋಗುತ್ತದೆ. ಆದರೆ ಸರ್ಕಾರ ಈ ಸೂಚನೆಗಳನ್ನು ಅನುಷ್ಠಾನಕ್ಕೆ ತರುವುದು ಅತ್ಯಗತ್ಯ.

ಐಎಂಎಫ್‌ ಹೊರತುಪಡಿಸಿ ಶ್ರೀಲಂಕಾ ಬಿಕ್ಕಟ್ಟು ಪರಿಹಾರಕ್ಕೆ ಬೇರೆ ಪರ್ಯಾಯ ಹಾದಿಗಳಿವೆಯೇ?

ನನ್ನ ಪ್ರಕಾರ ಐಎಂಎಫ್‌ ಬಿಟ್ಟು ಈ ಬಿಕ್ಕಟ್ಟು ನಿರ್ವಹಣೆಗೆ ಪರ್ಯಾಯ ಮಾರ್ಗಗಳೇನೂ ಇಲ್ಲ. ಚೀನಾ ನೆರವಾಗಬಹುದು ಎಂದು ಕೆಲವರು ಊಹಿಸಿದ್ದರು. ರಾಜಪಕ್ಸೆಗಳೊಂದಿಗೆ ಚೀನಾ ಉತ್ತಮ ಸಂಬಂಧ ಕಾಯ್ದುಕೊಂಡಿದ್ದರೂ, ಅವರು ಈಗಾಗಲೇ ಪರಾರಿಯಾಗಿದ್ದಾರೆ. ಹೊಸ ನಾಯಕರಾಗಿ ಯಾರು ಆಯ್ಕೆಯಾಗಬಹುದು ಎಂಬುದು ಸ್ಪಷ್ಟವಾಗಿಲ್ಲ. ಚೀನಾ ಸಾಲದ ರೂಪದಲ್ಲಿ ಆರ್ಥಿಕ ನೆರವು ಒದಗಿಸಿದರೂ, ಆ ಮೊತ್ತ ಹಿಂತಿರುಗಿಸುವ ಸಾಮರ್ಥ್ಯ ಶ್ರೀಲಂಕಾಕ್ಕೆ ಇಲ್ಲ. ಹೀಗಾಗಿ ಚೀನಾ ನೆರವಿಗೆ ಮುಂದೆ ಬರುತ್ತಿಲ್ಲ. ಆದರೆ ಕಳೆದ ವರ್ಷದಿಂದ ಭಾರತ ಶ್ರೀಲಂಕಾಗೆ ನೆರವು ನೀಡುತ್ತಲೇ ಬಂದಿದೆ. 3.8 ಬಿಲಿಯನ್‌ ಡಾಲರ್‌ ಧನಸಹಾಯವನ್ನು ಈವರೆಗೆ ಒದಗಿಸಿದೆ. ಭಾರತಕ್ಕೆ ಶ್ರೀಲಂಕಾ ಅತಿ ಸಮೀಪದಲ್ಲಿರುವುದರಿಂದ ಅಲ್ಲಿನ ಬದಲಾವಣೆಗಳು ಭಾರತದ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಶ್ರೀಲಂಕಾದ ಸ್ಥಿರತೆ ಭಾರತಕ್ಕೂ ಬೇಕಾಗಿದೆ. ತನ್ನಿಂದ ಸಾಧ್ಯವಾದಷ್ಟುನೆರವು ಭಾರತ ಒದಗಿಸಿದರೂ, ಇಡೀ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ. ಐಎಂಎಫ್‌ ಆರ್ಥಿಕ ನೆರವಿನ ಪ್ಯಾಕೇಜ್‌ನೊಂದಿಗೆ ಬರುವುದರಿಂದ ಬಿಕ್ಕಟ್ಟು ನಿರ್ವಹಣೆಗಾಗಿ ಏಕೈಕ ಮಾರ್ಗವಾಗಿದೆ.

click me!