ಚಿತ್ರಹಿಂಸೆ ನೀಡಿ ತಾಲಿಬಾನ್‌ನಿಂದ ಪತ್ರಕರ್ತ ಸಿದ್ದಿಖಿ ಹತ್ಯೆ: ವರದಿ!

By Suvarna NewsFirst Published Jul 30, 2021, 9:28 AM IST
Highlights

* ಗುಂಡಿನ ಚಕಮಕಿ ವೇಳೆ ಅಚಾತುರ್ಯವಾಗಿ ಗುಂಡು ತಗುಲಿದ್ದರಿಂದ ಪುಲಿಟ್ಜರ್‌ ಪ್ರಶಸ್ತಿ ವಿಜೇತ ಭಾರತೀಯ ಛಾಯಾಗ್ರಾಹಕ ಡ್ಯಾನಿಶ್‌ ಸಿದ್ದಿಖಿ ಹತ್ಯೆ

* ಸಿದ್ದಿಖಿ ಅವರನ್ನು ತಾಲಿಬಾನ್‌ ಉಗ್ರರು ಹುಡುಕಾಟ ನಡೆಸಿ ಒತ್ತೆಯಾಳು

* ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದರು ಎಂದು ಅಮೆರಿಕದ ನಿಯತಕಾಲಿಕೆಯೊಂದು ವರದಿ 

ವಾಷಿಂಗ್ಟನ್‌(ಜು.30): ಆಷ್ಘಾನಿಸ್ತಾನದ ಸೇನೆ ಮತ್ತು ತಾಲಿಬಾನ್‌ ಉಗ್ರರ ನಡುವಿನ ಗುಂಡಿನ ಚಕಮಕಿ ವೇಳೆ ಅಚಾತುರ್ಯವಾಗಿ ಗುಂಡು ತಗುಲಿದ್ದರಿಂದ ಪುಲಿಟ್ಜರ್‌ ಪ್ರಶಸ್ತಿ ವಿಜೇತ ಭಾರತೀಯ ಛಾಯಾಗ್ರಾಹಕ ಡ್ಯಾನಿಶ್‌ ಸಿದ್ದಿಖಿ ಹತ್ಯೆಯಾಗಿದ್ದಾರೆ ಎಂಬುದು ಸುಳ್ಳು. ಆದರೆ ಸಿದ್ದಿಖಿ ಅವರನ್ನು ತಾಲಿಬಾನ್‌ ಉಗ್ರರು ಹುಡುಕಾಟ ನಡೆಸಿ ಒತ್ತೆಯಾಳಾಗಿಸಿಕೊಂಡು ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದರು ಎಂದು ಅಮೆರಿಕದ ನಿಯತಕಾಲಿಕೆಯೊಂದು ವರದಿ ಮಾಡಿದೆ.

ವಾಷಿಂಗ್ಟನ್‌ ಎಕ್ಸಾಮಿನರ್‌ ವರದಿ ಪ್ರಕಾರ, ಆಷ್ಘಾನಿಸ್ತಾನದ ರಾಷ್ಟ್ರೀಯ ಸೇನಾ ತಂಡದೊಂದಿಗೆ ಯುದ್ಧದ ವರದಿಗಾಗಿ ಸ್ಪಿನ್‌ ಬೋಲ್ಡಾಕ್‌ ಪ್ರಾಂತ್ಯಕ್ಕೆ ತೆರಳಿದ್ದರು. ಈ ವೇಳೆ ಸೇನೆ ಮೇಲೆ ದಾಳಿ ಎಸಗುವ ಮುಖಾಂತರ ಪತ್ರಕರ್ತ ಸಿದ್ದಿಖಿ ಅವರನ್ನು ಸೇನಾ ಪಡೆಗಳಿಂದ ಪ್ರತ್ಯೇಕಗೊಳಿಸಿದರು.

ಈ ವೇಳೆ ತಾಲಿಬಾನ್‌ ಉಗ್ರರ ಗುಂಡು ಸಿದ್ದಿಖಿ ಅವರ ದೇಹ ಹೊಕ್ಕಿತು. ಆಗ ಸಿದ್ದಿಖಿ ತಮ್ಮ ತಂಡದೊಂದಿಗೆ ಮಸೀದಿಯೊಂದರಲ್ಲಿ ಆಶ್ರಯ ಪಡೆದರು. ಅಲ್ಲೇ ಪ್ರಥಮ ಚಿಕಿತ್ಸೆಯನ್ನೂ ಪಡೆದರು. ಸಿದ್ದಿಖಿ ಅವರ ಹತ್ಯೆಗಾಗಿಯೇ ತಾಲಿಬಾನ್‌ ಮಸೀದಿ ಮೇಲೆ ದಾಳಿ ನಡೆಸಿತು. ಬಳಿಕ ಆತನನ್ನು ಜೀವಂತವಾಗಿ ಹಿಡಿದು ಬಳಿಕ ನಿರ್ದಯವಾಗಿ ಕೊಂದು ಹಾಕಿತ್ತು. ಜೊತೆಗೆ ಸಿದ್ದಿಖಿ ಅವರ ಜೊತೆಗಿದ್ದವರನ್ನೂ ತಾಲಿಬಾನ್‌ ಹತ್ಯೆ ಮಾಡಿದೆ ಎಂದು ತಿಳಿಸಲಾಗಿದೆ.

ಆಘ್ಘನ್‌ ಸೇನೆ ಮತ್ತು ತಮ್ಮ ಮಧ್ಯೆ ನಡುವಿನ ಯುದ್ಧದ ಗುಂಡಿನ ಚಕಮಕಿ ವೇಳೆ ಭಾರತದ ಫೋಟೋ ಪತ್ರಕರ್ತ ಸಿದ್ಧಿಕಿ ಅವರು ಸಾವಿಗೀಡಾಗಿದ್ದಾರೆ. ಅವರ ಸಾವಿಗೆ ವಿಷಾದಿಸುವುದಾಗಿ ತಾಲಿಬಾನ್‌ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿತ್ತು. ಆದರೆ ಅದು ಸುಳ್ಳು ಎಂಬುದು ಈಗಿನ ವರದಿಯಿಂದ ಗೊತ್ತಾಗಿದೆ.

click me!