ರೇಪಿಸ್ಟ್‌ಗಳಿಗೆ ಉಳಿಗಾಲವಿಲ್ಲ, ಮರಣ ದಂಡನೆಯೊಂದೇ ಶಿಕ್ಷೆ: ಸುಗ್ರೀವಾಜ್ಞೆ ಜಾರಿ!

By Suvarna NewsFirst Published Oct 14, 2020, 5:36 PM IST
Highlights

ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಏರಿಕೆ| ಇತ್ತೀಚೆಗಷ್ಟೇ ನಡೆದಿದ್ದ ಅತ್ಯಾಚಾರ ಪ್ರಕರಣದ ವಿರುದ್ಧ ತೀವ್ರ ಆಕ್ರೋಶ| ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಸರ್ಕಾರ

ಢಾಕಾ(ಅ.14): ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ವೃದ್ಧಿಸುತ್ತಿರುವ ಸಂದರ್ಭದಲ್ಲೇ ಭಾರತದ ನೆರೆ ರಾಷ್ಟ್ರ ಬಾಂಗ್ಲಾದೇಶ ರೇಪಿಸ್ಟ್‌ಗಳನ್ನು ಹೆಡೆಮುರಿ ಕಟ್ಟಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಸೋಮವಾರ ಸರ್ಕಾರದ ವಿರುದ್ಧ ಬೀದಿಗಿಳಿದು ಹಾಗೂ ಸೋಶಿಯಲ್ ಮಿಡಿಯಾ ಮೂಲಕ ಇಂತಹ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ವಿಧಿಸಲಾಗುತ್ತಿದ್ದ ಶಿಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ವಿಧಿಸಲಾಗುತ್ತಿದ್ದ ಜೀವಾವಧಿ ಶಿಕ್ಷೆಯಿಂದ ಮರಣ ದಂಡನೆಯಾಗಿ ಬದಲಾಯಿಸಿದೆ.

ಕ್ಯಾಬಿನೆಟ್‌ ಅಂಗೀಕಾರ ನೀಡಿದ ಈ ಮಸೂದೆಗೆ ರಾಷ್ಟ್ರಪತಿ ಗ್ರೀನ್ ಸಿಗ್ನಲ್ ನೀಡಿದ್ದು, ಬಾಂಗ್ಲಾದೇಶದಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದೆ.

 ಬಾಂಗ್ಲಾದೇಶದ ಕ್ಯಾಬಿನೆಟ್ ವಕ್ತಾರ ಖಂಡೇಕರ್ ಅನ್ವಾರುಲ್ ಇಸ್ಲಾಮ್ ಈ ಸಂಬಂಧ ಪ್ರತಿಕ್ರಿಯಿಸಿದ್ದು,  ರಾಷ್ಟ್ರಪತಿ ಅಬ್ದುಲ್ ಹಮೀದ್ ಮಹಿಳಾ ಮತ್ತು ಮಕ್ಕಳ ನಿಗ್ರಹ ತಡೆ ಕಾಯ್ದೆ ತಿದ್ದುಪಡಿಗೊಳಿಸಿ ಸುಗ್ರೀವಾಜ್ಞೆ ಜಾರಿಗೊಳಿಸಿದ್ದಾರೆ ಎಂದಿದ್ದಾರೆ. 

ಮಂತ್ರಿಮಂಡಲ ಒಂದು ಪ್ರಸ್ತಾಪಕ್ಕೆ ಅಂಗೀಕಾರ ನೀಡಿದ್ದು, ಇದರಲ್ಲಿ ಅತ್ಯಾಚಾರ ಪ್ರಕರಣಗಳ ತನಿಖೆ ಅತೀ ಶೀಘ್ರವಾಗಿ ನಡೆಸುವ ವಿಚಾರವಿದೆ. ಅಲ್ಲದೇ ಸದ್ಯ ಜಾರಿಯಲ್ಲಿರುವ ಜೀವಾವಧಿ ಶಿಕ್ಷೆಯನ್ನು ಹೆಚ್ಚಿಸಿ ಮರಣ ದಂಡನೆಯಾಗಿಸುವ ವಿಚಾರವೂ ಇದೆ ಎಂದು ಖಂಡೇಕರ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಪೈಶಾಚಿಕ ಕೃತ್ಯವನ್ನು ಖಂಡಿಸಿ ಜನರು ಬೀದಿಗಿಳಿದಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಬಾಂಗ್ಲಾದೇಶದ ಕ್ಯಾಬಿನೆಟ್ ಇಂತಹುದ್ದೊಂದು ಮಹತ್ವದ ಮಸೂದೆಗೆ ಅಂಗೀಕಾರ ನೀಡಿದೆ. 

click me!