ಕೊರೋನಾ ಔಷಧಕ್ಕೆ 4 ಕಂಪನಿಗಳ ದಾಪುಗಾಲು: 100ಕ್ಕೂ ಹೆಚ್ಚು ಕಡೆ ನಡೆದಿದೆ ಪ್ರಯೋಗ!

By Kannadaprabha NewsFirst Published May 12, 2020, 7:19 AM IST
Highlights

ಕೊರೋನಾ ಔಷಧಕ್ಕೆ 4 ಕಂಪನಿಗಳ ದಾಪುಗಾಲು| ಸಂಶೋಧನೆಯಲ್ಲಿ ಭಾರೀ ಪ್ರಗತಿ| ಶೀಘ್ರ ಔಷಧ ಲಭ್ಯ ಸಾಧ್ಯತೆ| ವಿಶ್ವಾದ್ಯಂತ 100ಕ್ಕೂ ಹೆಚ್ಚು ಕಡೆ ಪ್ರಯೋಗ

ನವದೆಹಲಿ(ಮೇ.12): ವಿಶ್ವದ 200ಕ್ಕೂ ಹೆಚ್ಚು ದೇಶಗಳ 40 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿ, 2.80 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ಸೋಂಕಿಗೆ ಔಷಧ ಕಂಡುಹಿಡಿಯಲು ಜಗತ್ತಿನ ಹಲವು ದೇಶಗಳ ವಿಜ್ಞಾನಿಗಳು ಇನ್ನಿಲ್ಲದ ಸಾಹಸ ಪಡುತ್ತಿದ್ದಾರೆ. 100ಕ್ಕೂ ಹೆಚ್ಚು ಕಂಪನಿಗಳು ಔಷಧ ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ಅವೆಲ್ಲಾ ಇದೀಗ ವಿವಿಧ ಹಂತಗಳನ್ನು ದಾಟುತ್ತಾ ಮುಂದೆ ಸಾಗುತ್ತಿವೆ. ಈ ಪೈಕಿ 4 ಕಂಪನಿಗಳು ಮಾತ್ರ ನಾಗಾಲೋಟದಲ್ಲಿ ಸಾಗುತ್ತಿದ್ದು, ಔಷಧ ಶೀಘ್ರ ಬಳಕೆಗೆ ಸಿಗುವ ವಿಶ್ವಾಸ ಮೂಡಿಸಿವೆ.

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ, ಅಮೆರಿಕದ ಮೊಡೆರ್ನಾ ಕಂಪನಿ, ಅಮೆರಿಕದ ಫೈಜರ್‌ ಹಾಗೂ ಚೀನಾ ಮೂಲದ ಸಿನೋವ್ಯಾಕ್‌ ಕಂಪನಿಗಳು ಔಷಧ ತಯಾರಿಸುವತ್ತ ದಾಪುಗಾಲು ಇಟ್ಟಿವೆ. ಹೀಗಾಗಿ ಕೊರೋನಾಗೆ ಔಷಧ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗತೊಡಗಿದೆ.

ಲಸಿಕೆ ಬೆನ್ನಲ್ಲೇ ಕೊರೋನಾ ಸಂಹಾರಕ್ಕೆಇಸ್ರೇಲ್‌ನಿಂದ ‘ಆ್ಯಂಟಿಬಾಡಿ’ ಸಿದ್ಧ!

ಚಿಂಪಾಂಜಿ ವೈರಸ್‌ನಿಂದ ಆಕ್ಸ್‌ಫರ್ಡ್‌ ಔಷಧ:

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿಯು ಜೆನ್ನೆರ್‌ ಇನ್ಸ್‌ಟಿಟ್ಯೂಟ್‌ ಜೊತೆಗೂಡಿ ‘ಸಿಎಚ್‌ಎಡಿಒಎಕ್ಸ್‌1 ಎನ್‌ ಸಿಒವಿ-19’ ಹೆಸರಿನ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಚಿಂಪಾಂಜಿಗಳಲ್ಲಿ ಶೀತಕ್ಕೆ ಕಾರಣವಾಗುವ ವೈರಸ್‌ ಅನ್ನು ಪಡೆದು ಅದನ್ನು ದುರ್ಬಲಗೊಳಿಸಿ, ಅದಕ್ಕೆ ಸಾರ್ಸ್‌ ಸಿಒವಿ-2 ಎಂಬ ಕೊರೋನಾ ಸೋಂಕಿನಲ್ಲಿರುವ ಮುಳ್ಳಿನಂಥ ವಂಶವಾಹಿ ವಸ್ತುವನ್ನು ಸೇರಿಸಿದೆ. ಈ ಲಸಿಕೆಯನ್ನು ರೋಗಿಗಳಿಗೆ ನೀಡಿದಾಗ, ಅದು ರೋಗಿಯ ದೇಹ ರಕ್ಷಣಾ ವ್ಯವಸ್ಥೆಗೆ ಕೊರೋನಾ ಆಗಮನದ ಸೂಚನೆ ನೀಡಿ ಅದರ ವಿರುದ್ಧ ಹೋರಾಡುವಂತೆ ಸೂಚನೆ ನೀಡುತ್ತದೆ. ಕೊರೋನಾ ಮಾದರಿಯ ಬೇರೊಂದು ರೋಗಕ್ಕೆ ಔಷಧಿ ಕಂಡುಹಿಡಿಯುತ್ತಿದ್ದ ಈ ತಂಡ ಕೊರೋನಾ ವ್ಯಾಪಕವಾಗುತ್ತಲೇ, ತನ್ನ ಪ್ರಯೋಗವನ್ನು ಈ ದಿಕ್ಕಿಗೆ ಬದಲಾಯಿಸಿದೆ. ಹೀಗಾಗಿ ಇತರ ಸಂಸ್ಥೆಗಳಿಗಿಂತ ಇದಕ್ಕೆ ಮುನ್ನಡೆ ಸಿಕ್ಕಿದೆ. ಈ ಔಷಧಿ ಈಗಾಗಲೇ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟಿದೆ. ಇದರ ಪರೀಕ್ಷಾ ವರದಿ ಬಂದ ಬಳಿಕ 2 ಮತ್ತು 3ನೇ ಹಂತದ ಪರೀಕ್ಷೆಗೆ ಅನುಮತಿ ಸಿಗಲಿದೆ. ಭಾರತದಲ್ಲಿ ಪುಣೆ ಮೂಲದ ಸೆರಂ ಇನ್ಸ್‌ಟಿಟ್ಯೂಟ್‌ ಈ ಲಸಿಕೆ ಉತ್ಪಾದಿಸುವ ಒಪ್ಪಂದ ಮಾಡಿಕೊಂಡಿದೆ.

ಮೊಡೆರ್ನಾ ಆರ್‌ಎನ್‌ಎ ಲಸಿಕೆ

ಅಮೆರಿಕದ ಮೆಸಾಚ್ಯುಸೆಟ್ಸ್‌ ಮೂಲದ ಮೊಡೆರ್ನಾ ಕಂಪನಿ ಈಗಾಗಲೇ ತನ್ನ ಗುರಿಗಿಂತ ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸುವತ್ತ ಸಾಗಿದೆ. ಇದು ವಿನೂತನಾ ಲಸಿಕೆ ಶೋಧನಾ ಪದ್ಧತಿಯಾಗಿದೆ. ಇಲ್ಲಿ ವಿಜ್ಞಾನಿಗಳು ವಿಶೇಷವಾಗಿ ರೂಪಿಸಿದ ಸಂದೇಶವಾಹಕ ಆರ್‌ಎನ್‌ಎ (ವಂಶವಾಹಿ)ಗಳನ್ನು ರೋಗಿಗಳ ದೇಹಕ್ಕೆ ರವಾನಿಸುವ ಮೂಲಕ ಆ್ಯಂಟಿಬಾಡಿಗಳನ್ನು ಉತ್ಪಾದಿಸುವಂತೆ ಸೂಚಿಸಲಾಗುತ್ತದೆ. ಇವು ದೇಹಕ್ಕೆ ಪ್ರವೇಶಿಸಿ ನಮ್ಮ ಜೀವರಕ್ಷಕ ವ್ಯವಸ್ಥೆಗೆ ಸಂದೇಶ ರವಾನಿಸುತ್ತವೆ. ಈ ಮೂಲಕ ನಮ್ಮ ದೇಹವು ಕೊರೋನಾ ಸೋಂಕಿನ ವಿರುದ್ಧ ಹೋರಾಡುವಂತೆ ಪ್ರಚೋದಿಸುತ್ತದೆ. ಈ ಔಷಧಿ ಈಗ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟಿದೆ. ಜೊತೆಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾ ಪ್ರಾಧಿಕಾರದಿಂದ 2 ಮತ್ತು 3ನೇ ಹಂತದ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ಪಡೆದುಕೊಂಡಿದೆ.

ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!

ಫೈಜರ್‌ ಲಸಿಕೆ

ಫೈಜರ್‌ ಕಂಪನಿ ತನ್ನ ಜರ್ಮನ್‌ ಪಾಲುದಾರ ಬಯೋಎನ್‌ಟೆಕ್‌ ಜೊತೆಗೂಡಿ 4 ಮಾದರಿ ಲಸಿಕೆ ಅಭಿವೃದ್ಧಿಪಡಿಸಿದೆ. ಇವು ವಿವಿಧ ರೀತಿಯ ಆರ್‌ಎನ್‌ಎ ಸಂದೇಶವಾಹಕ ಮತ್ತು ಆ್ಯಂಟಿಜೆನ್‌ಗಳನ್ನು ಒಳಗೊಂಡಿದೆ. ಇವುಗಳನ್ನು ಒಮ್ಮೆಗೆ ಪ್ರಯೋಗಿಸುವ ಮೂಲಕ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದರ ಅಧ್ಯಯನದಲ್ಲಿ ಕಂಪನಿ ತೊಡಗಿದೆ. ಅಮೆರಿಕದಲ್ಲಿ ಈಗಾಗಲೇ 1 ಮತ್ತು 2ನೇ ಹಂತದ ಪ್ರಾಯೋಗಿಕ ಪರೀಕ್ಷೆಯನ್ನು ಕಂಪನಿ ಆರಂಭಿಸಿದೆ. ಜರ್ಮನಿಯಲ್ಲೂ ಇದೇ ರೀತಿಯ ಪ್ರಯೋಗ ಆರಂಭವಾಗಿದೆ. ಆದರೂ ಕಂಪನಿ ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಔಷಧಿ ಉತ್ಪಾದನೆ ಆರಂಭಿಸುವ ಮೂಲಕ ತನ್ನ ಸಂಶೋಧನೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುವ ವಿಶ್ವಾಸದಲ್ಲಿದೆ.

ಸಿನೋವ್ಯಾಕ್‌ ಬಯೋಟೆಕ್‌ ಲಸಿಕೆ

ಚೀನಾ ಮೂಲದ ಈ ಔಷಧ ಉತ್ಪಾದನಾ ಕಂಪನಿ ಈಗಾಗಲೇ 1 ಮತ್ತು 2ನೇ ಹಂತದ ಪ್ರಾಯೋಗಿಕ ಪರೀಕ್ಷೆ ಆರಂಭಿಸಿದೆ. ಅಲ್ಲದೆ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಇತರೆ ದೇಶಗಳಲ್ಲೂ 3ನೇ ಹಂತದ ಪ್ರಾಯೋಗಿಕ ಪರೀಕ್ಷೆಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆಯಾ ದೇಶಗಳ ಸರ್ಕಾರದ ಅನುಮತಿಯನ್ನು ಕೋರಿದೆ. ಈ ಹಿಂದೆ 2003ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್‌ಗೆ ಈ ಕಂಪನಿ ಔಷಧಿ ಅಭಿವೃದ್ಧಿಪಡಿಸುವ ಹಂತದಲ್ಲಿದೆ. ನೋವಲ್‌ ಕೊರೋನಾ ತೀವ್ರವಾದ ಬಳಿಕ ತನ್ನ ಸಂಶೋಧನೆಯನ್ನು ಈ ದಿಕ್ಕಿಗೆ ತಿರುಗಿಸಿದ ಕಾರಣ, ಈ ಕಂಪನಿ ಕೂಡಾ ಔಷಧ ಸಂಶೋಧನೆಯಲ್ಲಿ ಇತರರಿಗಿಂತ ಮುಂಚೂಣಿಯಲ್ಲಿದೆ.

ಸಿದ್ಧವಾಗುತ್ತಿರುವ 4 ಔಷಧಗಳು

1.ಚಿಂಪಾಂಜಿ ವೈರಸ್‌ನಿಂದ ಆಕ್ಸ್‌ಫರ್ಡ್‌ ವಿವಿ ಔಷಧ

2. ಮೊಡೆರ್ನಾ ಆರ್‌ಎನ್‌ಎ ಲಸಿಕೆ

3. ಫೈಜರ್‌ ಲಸಿಕೆ

4. ಸಿನೋವ್ಯಾಕ್‌ ಬಯೋಟೆಕ್‌ ಲಸಿಕೆ

click me!