
ನಾನು ಡ್ಯಾನ್ಸ್ ಮಾಡುತ್ತಾ ಮುಂದಿನ ಗ್ರಹಕ್ಕೆ ಪ್ರಯಾಣ ಮಾಡುತ್ತೇನೆ...
ಹಾಗಂತ ಆಕೆ ತನ್ನ ಸಾವಿನ ಬಗ್ಗೆ ಹೇಳುತ್ತಿದ್ದಳು. ಸಾವು ಎಂಬುದು ಸಾವಲ್ಲ. ಅದು ಇನ್ನೊಂದು ಅವಸ್ಥೆಯನ್ನೋ ಜನ್ಮವನ್ನೋ ಸ್ಥಿತಿಯನ್ನೋ ಸಾಧಿಸಲು ನಡುವೆ ಸೃಷ್ಟಿಯಾಗವ ಒಂದು ಮಧ್ಯಂತರ ಬಿಂದು ಎಂಬುದು ಅವಳ ಮಾತು ಆಗಿತ್ತು, ಸಾಯುವಾಗ ಆಕೆಯ ವಯಸ್ಸು ನೂರ ಒಂದು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೋಗ ಟೀಚರ್ ಎಂಬ ಹೆಗ್ಗಳಿಕೆ. ಮಹಾತ್ಮ ಗಾಂಧಿ ಅವರೊಡನೆ ಹೆಜ್ಜೆ ಹಾಕಿದ ಪುಣ್ಯಾತ್ಮೆ. ಸದಾ ತಾರುಣ್ಯದಿಂದ ನಳನಳಿಸುತ್ತಿದ್ದ ಆಕೆ ಬಾಲ್‌ರೂಮ್ ಡ್ಯಾನ್ಸರ್ ಕೂಡ ಆಗಿದ್ದು, ವರ್ಣರಂಜಿತ ಬದುಕನ್ನು ಅಷ್ಟೇ ಸಂತೃಪ್ತಿಯಿಂದ ಬದುಕಿದಾಕೆ. ಈಕೆಯ ಹೆಸರು ತಾವೋ ಪೋರ್ಚೊನ್ ಲಿಂಚ್.
ಅಧ್ಯಾತ್ಮದಿಂದ ಕ್ಯಾನ್ಸರ್ ಗೆಲ್ಲಬಹುದಾ!
ತಾವೋ ಪೋರ್ಚೊನ್ ಲಿಂಚ್‌ಳ ತಂದೆತಾಯಿಗಳ ಮೂಲ ಭಾರತ ಹಾಗೂ ಫ್ರಾನ್ಸ್, ಫ್ರೆಂಚ್ ಆಡಳಿತದ ಭಾರತದ ಪಾಂಡಿಚೇರಿಯಲ್ಲಿ, ಫ್ರಾನ್ಸ್‌ನ ತಂದೆ ಹಾಗೂ ಮಣಿಪುರದ ತಾಯಿಯಲ್ಲಿ ಜನಿಸಿದವಳು. ಈಕೆ ನೆಲೆಸಿದ್ದು ಅಮೆರಿಕದಲ್ಲಿ. ಯೋಗದ ಜೊತೆಗೆ ಈಕೆಗೆ ಬಾಂಧವ್ಯ ಆರಂಭವಾದದ್ದು ೮ನೇ ವಯಸ್ಸಿನಲ್ಲೇ. ಪಾಂಡಿಚೇರಿ ಬೀಚಿನಲ್ಲಿ ಯೋಗ ಮಾಡುತ್ತಿದ್ದ ಕೆಲವು ಪರಿಣತರನ್ನು ನೋಡಿ ಈಕೆಗೆ ಯೋಗ ಕಲಿಯುವ ಆಸೆಯಾಯ್ತು. ಕಲಿತಳು. ಮೊನ್ನೆ ಮೊನ್ನೆಯವರೆಗೂ ನ್ಯೂಯಾರ್ಕಿನಲ್ಲಿರೋ ತನ್ನ ಸ್ಟುಡಿಯೋದಲ್ಲಿ ಯೋಗ ಮತ್ತು ಬಾಲ್‌ರೂಮ್ ಡ್ಯಾನ್ಸ್ ಹೇಳಿಕೊಡ್ತಾನೇ ಇದ್ದಳು.
ವಯಸ್ಸಾಯ್ತಲ್ವಾ ಎಂದು ಕೇಳಿದ್ದಕ್ಕೆ ಆಕೆ ಹೇಳುತ್ತಿದ್ದ ಮಾತು- ನನಗೆ ವಯಸ್ಸಾಗುವುದರಲ್ಲಿ ನಂಬಿಕೆಯಿಲ್ಲ. ನಿಮ್ಮ ಸುತ್ತಮುತ್ತಲೂ ಇರೋ ಮರಗಳನ್ನು ನೋಡಿ. ಅವುಗಳಿಗೆ ವಯಸ್ಸಾಯ್ತು ಅನಿಸುತ್ತದೇನು? ಚಳಿಗಾಲದಲ್ಲಿ ಎಲೆ ಉದುರಬಹುದು. ಆದರೆ ವಸಂತದಲ್ಲಿ ಮತ್ತೆ ಚಿಗುರುತ್ತದೆ. ಹಾಗೇ ನಾವು ನಮ್ಮನ್ನು ನವೀಕರಿಸಿಕೊಳ್ತಾ ಇರಬೇಕು.
8ರ ಆಯಸ್ಸಿಗೆ ಲೋಕ ಬಿಟ್ಟೆಯಾ?: ಪುಟ್ಟ ಕಂದನ ಬದುಕು ಕಸಿದ ಪ್ರೊಜೆರಿಯಾ!
ಈಕೆ ಬದುಕಿಗಾಗಿ ಹಲವು ಕೆಲಸಗಳನ್ನು ಮಾಡಿದಳು. ಅಮೆರಿಕಕ್ಕೆ ಹೋದಳು. ಅಲ್ಲಿ ಮಾಡೆಲಿಂಗ್ ಮಾಡಿದಳು, ನಂತರ ಹಾಲಿವುಡ್ ಫಿಲಂಗಳಲ್ಲಿ ನಟಿಸಿದಳು. ಯೋಗ- ಧ್ಯಾನ- ಬಾಲ್‌ರೂಮ್ ಡ್ಯಾನ್ಸ್ ಸಮಗ್ರವಾಗಿ ಕಲಿತು, ಅದನ್ನು ಹೇಳಿ ಕೊಡಲು ಆರಂಭಿಸಿದಳು. ಅಮೆರಿಕಕ್ಕೆ ತೆರಳುವ ಮುನ್ನ, ಈಕೆಯ ಅಂಕಲ್ ಜೊತೆಗೆ ಮಹಾತ್ಮ ಗಾಂಧಿಯ ಕೆಲವು ಚಳವಳಿಗಳಲ್ಲಿ ಭಾಗವಹಿಸಿ ಅವರ ಜತೆಗೆ ಹೆಜ್ಜೆ ಹಾಕಿದಳು. ಇದರ ನಡುವೆ ಪಾಂಡಿಚೇರಿಗೂ ಬಂದು ಹೋಗುತ್ತ, ಮಹರ್ಷಿ ಅರವಿಂದರ ಜೊತೆಗೂ ಯೋಗದ ಬಾಂಧವ್ಯ ಹೊಂದಿದ್ದಳು. ಆಗ ಬಾಲಿವುಡ್‌ನ ನಟ ದೇವಾನಂದ್ ಜೊತೆಗೂ ಆತ್ಮೀಯತೆ ಹೊಂದಿದ್ದಳು. ಆದರೆ ಆತನನ್ನು ಮದುವೆ ಆಗಲಿಲ್ಲ. ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ಧಿಯನ್ನೂ ಪಡೆದಳು.
ಒಂದು ಹಂತದಲ್ಲಿ ನಟನೆ ಹಾಗೂ ಮಾಡೆಲಿಂಗ್ ಪೂರ್ತಿಯಾಗಿ ಬಿಟ್ಟು ಯೋಗದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಳು. ಈಕೆ ಯೋಗ ಮಾಸ್ಟರ್ ಬಿಕೆಎಸ್ ಅಯ್ಯಂಗಾರ್ ಅವರ ಶಿಷ್ಯೆ ಆಗಿದ್ದಳು. 2012ರಲ್ಲಿ ಈಕೆ ಹೆಸರು ವಿಶ್ವದ ಅತ್ಯಂತ ಹಿರಿಯ ಯೋಗ ಟೀಚರ್ ಎಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ನಮೂದಾಯಿತು. ನಂತರ ಈಕೆಗೆ ಭಾರತ ಸರಕಾರವೂ ಪದ್ಮಶ್ರೀ ಪ್ರಶಸ್ತಿ ನೀಡಿತು. 1962ರಲ್ಲಿ ಮದುವೆಯಾದ ಈಕೆಯ ಗಂಡ 1982ರಲ್ಲೇ ಸತ್ತ. ಈಕೆಗೆ ಮಕ್ಕಳೂ ಇಲ್ಲ. ಸಾಯುವ ಕೊನೆಯ ಕ್ಷಣದವರೆಗೂ ಚುರುಕಾಗಿ, ನಗುತ್ತಾ ನಗಿಸುತ್ತಾ, ಯೋಗ ಹೇಳಿಕೊಡ್ತಾ ಇದ್ದಳು. ಆಕೆಗೆ ನಾಲ್ಕು ಹಿಪ್ ಜಾಯಿಂಟ್ ಆಪರೇಶನ್ ಕೂಡ ಆಗಿತ್ತು ಎಂದ್ರೆ ನಂಬ್ತೀರಾ?
ಹಾಗಿದ್ರೆ ಲಿಂಚ್ ಥರ ಹ್ಯಾಪಿಯಾಗಿ ಬಹುಕಾಲ ಬದುಕೋದು ಹೇಗೆ? ಅವಳೇ ಹೇಳ್ತಾಳೆ- ಪ್ರತಿದಿನವೂ ಇದು ನನ್ನ ಬೆಸ್ಟ್ ಡೇ ಅಂದುಕೊಂಡೇ ಎದ್ದೇಳ್ತೀನಿ. ಹಾಗೇ ಆಗುತ್ತೆ. ನನ್ನ ಬದುಕೇ ನನ್ನ ಧ್ಯಾನ. ನನ್ನ ಮನಸ್ಸು ಏನೇನೋ ಅಡ್ಡಿ ಉಂಟು ಮಾಡೋಕೆ ಪ್ರಯತ್ನ ಮಾಡುತ್ತೆ. ಆದರೆ ನಾನು ಅದರ ಮಾತನ್ನು ಕೇಳೊಲ್ಲ. ಯಾರೊಬ್ಬರನ್ನೂ ಇವರು ಹೀಗೇ ಅಂತ ಜಡ್ಜ್ ಮಾಡೊಲ್ಲ. ಪ್ರತಿಯೊಬ್ಬರಿಂದಲೂ ಏನೋ ಕಲೀತೀನಿ. ಬದುಕಿನಲ್ಲಿ ಎಷ್ಟೊಂದಿದೆ ಸುಂದರವಾದದದ್ದು- ನೋಡೋದಕ್ಕೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.