
ಉದ್ಯೋಗ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡುವುದು ಒಂದು ಕಲೆ. ಅದರಲ್ಲೂ ಉದ್ಯೋಗಿ ತಾಯಂದಿರು ಮಕ್ಕಳ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸುತ್ತಾ, ತಮ್ಮ ಕರಿಯರ್‌ಗೂ ಮಹತ್ವ ನೀಡುತ್ತಾ, ಪತಿಯನ್ನೂ ಕಡೆಗಣಿಸದೆ ಮನೆ ನೋಡಿಕೊಂಡು ಹೋಗುವುದಿದೆಯಲ್ಲ... ಸಾಮಾನ್ಯ ವಿಷಯವಲ್ಲ. ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದ ಮಹಿಳೆಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ಮದುವೆ, ಮಗು, ಪತಿ, ಮನೆಯನ್ನು ಆಕೆಯೇ ನಿಭಾಯಿಸಬೇಕು. ಆ ರೋಲ್ ಬದಲಾಗುವುದಿಲ್ಲ. ಹಾಗಾಗಿ, ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಹಟಕ್ಕೆ ಮಹಿಳೆ ಬೀಳಲೇಬೇಕು. ವರ್ಕ್ ಫ್ರಂ ಹೋಂ ಹಾಗೂ ಮೆಟರ್ನಲ್ ಲೀವ್ಸ್ ಆಕೆಯ ಸಹಾಯಕ್ಕೆ ಬರುವುದಾದರೂ ಮಹಿಳೆ ತಾಯಿಯಾಗುತ್ತಲೇ, ಬಹಳಷ್ಟು ಬದಲಾಗುತ್ತದೆ. ಈ ಹೆಚ್ಚಿನ ಜವಾಬ್ದಾರಿ ನಿಭಾಯಿಸಲು ಸಹಾಯಕ್ಕೆ ಬರಬಲ್ಲ ಕೆಲ ಸಲಹೆಗಳು ಇಲ್ಲಿವೆ.
ಪ್ಲ್ಯಾನರ್
ಪ್ಲ್ಯಾನರ್ ಬಳಕೆ ಪ್ರತಿದಿನ ಅಭ್ಯಾಸ ಮಾಡಿಕೊಂಡರೆ ಅದರಿಂದ ಬಹಳಷ್ಟು ಕೆಲಸಗಳು ಸುಲಭವಾಗುತ್ತವೆ. ಪ್ರತಿದಿನ ಆಗಬೇಕಾದ ಮಗುವಿನ ಕೆಲಸಗಳು, ನಿಮ್ಮ ಕೆಲಸಗಳು, ವಾರದಲ್ಲಿ ಮಾಡಬೇಕಾದ ಅಡುಗೆ, ತಿಂಡಿಗಳ ಪಟ್ಟಿ, ಸೆಲ್ಫ್ ಕೇರ್ ರೂಟಿನ್ ಎಲ್ಲವನ್ನೂ ಪ್ಲ್ಯಾನರ್‌ನಲ್ಲಿ ಬರೆದುಕೊಂಡು ಮಾಡುತ್ತಾ ಹೋದರೆ ಬಹಳ ಶಿಸ್ತಿನಿಂದ ಕೆಲಸಗಳು ಸಾಗುತ್ತವೆ. ಬ್ಯುಸಿ ಶೆಡ್ಯೂಲ್‌ನಲ್ಲಿ ಮರೆತುಹೋಗುವ ಪ್ರಮೇಯ ತಪ್ಪುತ್ತದೆ.
ಗಂಡ ಊರಲ್ಲಿಲ್ಲ ಅಂದ್ರೆ ಹೆಂಡ್ತಿಗೆ ಹಾಲಿ ಡೇ, ಜಾಲಿ ಡೇ...
ಬಾಸ್ ಜೊತೆ ಮಾತನಾಡಿ
ಉದ್ಯೋಗ ಸ್ಥಳದಲ್ಲಿ ಎಲ್ಲರೊಂದಿಗೆ ಮುಕ್ತ ಮಾತುಕತೆ ಆಡಿಕೊಂಡಿರುವುದು ಮುಖ್ಯ. ನಿಮ್ಮ ಬಾಸ್ ಜೊತೆ ಮಾತನಾಡಿ ನಿಮಗೆ ಮಗು ಹಾಗೂ ಉದ್ಯೋಗ ಎರಡರ ಬಗ್ಗೆಯೂ ಸಮಾನ ಕಾಳಜಿ ಇರುವುದರ ಕುರಿತು ಅರಿವು ಮೂಡಿಸಿ. ಡಾಕ್ಟರ್ ಅಪಾಯಿಂಟ್‌ಮೆಂಟ್, ಶಾಲೆಯ ಕಾರ್ಯಕ್ರಮಗಳು ಸೇರಿದಂತೆ ಮಗುವಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ನೀವು ಭಾಗಿಯಾಗಲೇಬೇಕೆಂಬುದನ್ನು ತಿಳಿಸಿ.
ಮಕ್ಕಳಿಗೆ ಕರೆ ಮಾಡಿ
ತಾಯ್ತನ ಅಂದುಕೊಂಡಷ್ಟು ಸುಲಭದ್ದಲ್ಲ. ಮಗುವನ್ನು ಸುರಕ್ಷಿತವಾಗಿಡುವ ಕಾಯಕ ಅದು ಹೊಟ್ಟೆಯಲ್ಲಿರುವಾಗಲೇ ಶುರುವಾಗುತ್ತದೆ. ತದನಂತರದಲ್ಲಿ ಪ್ರತಿ ಕ್ಷಣ ಅವರ ಸುರಕ್ಷತೆಯ ಬಗ್ಗೆ ಯೋಚನೆಗಳು ಕಾಡುತ್ತಲೇ ಇರುತ್ತವೆ. ಹೀಗಾಗಿ, ಮಕ್ಕಳಿಂದ ದೂರದಲ್ಲಿರುವಾಗ ಕನಿಷ್ಠ ಎರಡು ಬಾರಿಯಾದರೂ ಕರೆ ಮಾಡಿ. ಇದರಿಂದ ನಿಮಗೂ ಸಮಾಧಾನ ಸಿಗುವ ಜೊತೆಗೆ ಅವರಿಗೂ ಅಗತ್ಯ ಬಿದ್ದಾಗ ನೀವಿದ್ದೀರಿ ಎಂಬ ಸುರಕ್ಷತಾಭಾವ ಮೂಡುತ್ತದೆ.
ಜೀವನದ ಪಾಸಿಟಿವ್ ಸಂಗತಿಗಳತ್ತ ಗಮನ ಹರಿಸಿ
ಗಂಟೆಗಟ್ಟಲೆ ಕಚೇರಿಯಲ್ಲಿ ಕೆಲಸ ಮಾಡಿ, ಮನೆಯಲ್ಲಿ ಮಗು ಹಾಗೂ ಅಡುಗೆ ಕೆಲಸ ನಿಭಾಯಿಸಿದ ನಂತರವೂ ಒಂದಿಷ್ಟು ಕೆಲಸಗಳು ಬಾಕಿ ಉಳಿದಿದ್ದಕ್ಕಾಗಿ ಗಿಲ್ಟ್ ಕಾಡಬಹುದು. ಆದರೆ, ನೀವು ಮಾಡದಿದ್ದುದಕ್ಕೆ ಕೊರಗುವ ಬದಲು ಎಷ್ಟೊಂದನ್ನು ಮಾಡುತ್ತಿದ್ದೀರಿ ಎಂಬುದಕ್ಕಾಗಿ ನಿಮಗೆ ನೀವು ಮೆಚ್ಚುಗೆ ಕೊಟ್ಟುಕೊಳ್ಳಿ. ಮಗುವಿನ ಕೆಲಸ ಹೆಚ್ಚಾದರೂ ಅದರ ನಗು, ಅದು ನಿಮ್ಮೆಡೆಗೆ ತೋರುವ ಪ್ರೀತಿಯ ಮುಂದೆ ಅವೆಲ್ಲ ದೊಡ್ಡದಲ್ಲ ಎಂಬುದನ್ನು ಗಮನಿಸಿ ನೋಡಿ. ಜೀವನ ನಿಮಗೆ ಕೊಟ್ಟ ಪ್ರತಿ ಅವಕಾಶಗಳು ಹಾಗೂ ಜನರಿಗಾಗಿ ಸಂತೋಷ ಪಡಿ.
ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ ಅನ್ನೋ ಹೆಣ್ಣು: ಇದೊಂದು ರೋಗ...
ಬ್ಯಾಕಪ್ ಇಟ್ಟುಕೊಳ್ಳಿ
ನಿಮ್ಮ ಪತಿ ಯಾವುದೋ ಬೇರೆ ಊರಿಗೆ ಹೋಗಬೇಕಾಗಿದೆ, ನಿಮಗೂ ರಜೆ ಲಭ್ಯವಿಲ್ಲ ಎಂದಾಗ ಮಕ್ಕಳನ್ನೇನು ಮಾಡುವುದು ಎಂಬ ಚಿಂತೆ ದೊಡ್ಡದಾಗಿ ಕಾಡುತ್ತದೆ. ಆದರೆ ನೀವು ನಿಮ್ಮ ತಂದೆತಾಯಿ, ನಿಮ್ಮ ಪತಿಯ ತಂದೆತಾಯಿ, ನಾದಿನಿ, ಮೈದುನ, ಗೆಳೆಯರ ಬಳಿ ಉತ್ತಮ ಸಂಬಂಧ ಹೊಂದಿದ್ದಲ್ಲಿ ಅನಿವಾರ್ಯ ಸಂದರ್ಭಗಳು ತಲೆನೋವಾಗುವುದು ತಪ್ಪುತ್ತದೆ. ಆಗಾಗ ಇವರೆಲ್ಲರ ಮನೆಗೆ ಹೋಗಿ ಬಂದು ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಮಕ್ಕಳಿಗೆ ಕೂಡಾ ಅವರ ಸಂಗ ಅಭ್ಯಾಸವಾಗಿರುತ್ತದೆ.
ಮಕ್ಕಳು ಉತ್ತಮ ಗೆಳೆಯರು
ನೀವಂದುಕೊಂಡಂತೆ ಎಲ್ಲವೂ ಆಗುತ್ತಿಲ್ಲ ಎಂದಾಗೆಲ್ಲ ನೆನಪು ಮಾಡಿಕೊಳ್ಳಿ, ನಿಮ್ಮ ಮೂಡ್ ಸರಿಪಡಿಸಲು ಮಕ್ಕಳಿದ್ದಾರೆ ಎಂದು. ಅವರೊಂದಿಗೆ ಆಟವಾಡಿ, ಅವರು ಹೇಳುವ ಮಾತುಗಳಿಗೆ ಕಿವಿಗೊಡಿ, ಅವರೊಂದಿಗೆ ಮಲಗಿ ಹಾಗೂ ನಿಮ್ಮ ಕೆಲಸಗಳಲ್ಲೂ ಅವರನ್ನು ತೊಡಗಿಸಿಕೊಳ್ಳಿ. ಅನ್‌ಕಂಡಿಶನಲ್ ಲವ್ ಎಂಬುದು ಮಕ್ಕಳಿಂದ ಮಾತ್ರ ಸಿಗಲು ಸಾಧ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.