ಗಂಡ ಊರಲ್ಲಿಲ್ಲ ಅಂದ್ರೆ ಹೆಂಡ್ತಿಗೆ ಹಾಲಿ ಡೇ, ಜಾಲಿ ಡೇ

By Suvarna NewsFirst Published Feb 21, 2020, 6:36 PM IST
Highlights

ಹೆಂಡ್ತಿ ತವರಿಗೋದ್ರೆ ಗಂಡನಿಗೆ ಎಷ್ಟು ಖುಷಿಯಾಗುತ್ತೋ ಅಷ್ಟೇ ಖುಷಿ ಹೆಂಡ್ತಿಗೆ ಗಂಡ ಒಂದೆರಡು ದಿನ ಮನೆಯಲಿಲ್ಲ ಅಂದ್ರೆ ಆಗುತ್ತೆ.ಬೆಳಗ್ಗೆ ಬೇಗ ಎದ್ದೇಳುವ ಅಗತ್ಯವಿಲ್ಲ,ಊಟ,ತಿಂಡಿ ತಲೆಬಿಸಿನೂ ಇಲ್ಲ. ಏನೋ ಮನಸ್ಸಿಗೆ ಬಂದಿದ್ದನ್ನು ತಿಂದುಂಡು ಮಲಗಿದರಾಯ್ತು.ಹೇಳೋರು,ಕೇಳೋರು,ಕ್ಯಾತೆ ತೆಗೆಯೋರು ಯಾರೂ ಇಲ್ಲ.

ಗಂಡ ಒಂದೆರಡು ದಿನ ಮನೆಯಲ್ಲಿಲ್ಲ ಅಂದ್ರೆ ಅದೆಷ್ಟು ನೆಮ್ಮದಿ ಮಹಿಳೆಗೆ. ಬೆಳಗ್ಗೆ ಬೇಗ ಏಳುವ ರಗಳೆಯಿಲ್ಲ,ಇಂಥ ತಿಂಡಿನೇ ಆಗಬೇಕು ಎಂದು ಹೇಳುವವರು ಅಥವಾ ಮಾಡಿದ ತಿಂಡಿ ಬಗ್ಗೆ ಟೀಕೆ ಟಿಪ್ಪಣೆ ಮಾಡುವವರು ಯಾರೂ ಇರೋದಿಲ್ಲ. ಹೀಗಾಗಿ ಮಲಗೋದು,ಏಳೋದು,ತಿನ್ನೋದು ಎಲ್ಲದರಲ್ಲೂ ಸಂಪೂರ್ಣ ಸ್ವಾತಂತ್ರ.ಗೃಹಿಣಿಗೇನು ಸ್ವಾತಂತ್ರ್ಯ ಕಡಿಮೆನಾ? ಗಂಡ ಆಫೀಸ್‍ಗೆ, ಮಕ್ಕಳು ಸ್ಕೂಲ್‍ಗೆ ಹೋದ ಮೇಲೆ ಯಾರಿದ್ದಾರೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಹೌದು, ಗಂಡ ಮತ್ತು ಮಕ್ಕಳು ಬೆಳಗ್ಗೆ ಹೋದ್ರೆ ಸಂಜೆ ಮನೆಗೆ ಹಿಂತಿರುಗುವ ತನಕ ಆಕೆ ಒಬ್ಬಂಟಿನೇ.ಆದ್ರೆ ತಲೆಗೆ ಒಂದು ನಿಮಿಷವೂ ಪುರುಸೊತ್ತಿರುವುದಿಲ್ಲ.ಸಂಜೆ ಸ್ಕೂಲಿಂದ ಬರುವ ಮಕ್ಕಳಿಗೆ ಏನು ಸ್ನಾಕ್ಸ್ ರೆಡಿ ಮಾಡೋದು,ರಾತ್ರಿ ಊಟಕ್ಕೆ ಏನ್ ಮಾಡೋದು? ನಾಳೆ ಬೆಳಗ್ಗೆ ತಿಂಡಿಗೆ ಏನು? ಆ ತಿಂಡಿ ಮಾಡಿದ್ರೆ ಗಂಡ ಯಾವ ರಾಗ ತೆಗೆಯುತ್ತಾನೋ? ಆತನ ಬಟ್ಟೆಗಳಿಗೆ ಇಸ್ತ್ರಿ ಯಾವಾಗ ಹಾಕೋದು ಸೇರಿದಂತೆ ಹತ್ತಾರು ಯೋಚನೆಗಳು ಬೆಳಗ್ಗೆಯಿಂದಲೇ ತಲೆಯಲ್ಲಿ ಬಿಡಾರ ಹೂಡಿರುತ್ತವೆ. ಇನ್ನು ಕೈ ಕಾಲುಗಳಿಗಂತೂ ಬಿಡುವಿಲ್ಲದಷ್ಟು ಕೆಲಸ ಇದ್ದೇಇರುತ್ತದೆ.ಇವೆಲ್ಲದರ ನಡುವೆ ಒಂಚೂರು ಬಿಡುವು ಮಾಡಿಕೊಂಡರೂ ಅದರ ಖುಷಿಯನ್ನು ಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ ಬಿಡಿ.

ಕೈತುತ್ತು ತಿನಿಸುವವನಿಗಿಂತ ಕೈ ತುಂಬಾ ಎಣಿಸುವವನೇ ಪ್ರಿಯ, ಏನಿವಾಗ?

ಗಂಡ-ಮಕ್ಕಳ ರಜೆ ಮಹಿಳೆಗೆ ಸಜೆ: ಗಂಡ-ಮಕ್ಕಳಿಗೆ ವಾರದಲ್ಲಿ ಒಂದೋ ಇಲ್ಲ ಎರಡು ದಿನವಾದರೂ ಬಿಡುವಿರುತ್ತದೆ. ಮಹಿಳೆಗೆ ಅದೂ ಇಲ್ಲ.ಅವರಿಗೆ ರಜೆಯಾದ್ರೆ ಇವಳಿಗದು ಸಜೆಯೇ.ಏಕೆಂದರೆ ಗಂಡ-ಮಕ್ಕಳ ರಜೆಯ ದಿನ ಕೆಲಸದ ಹೊರೆ ಇನ್ನಷ್ಟು ಹೆಚ್ಚಿ,ದೇಹ ಹಾಗೂ ಮನಸ್ಸು ಎರಡೂ ಬೆಂಡಾಗಿ ಮುದುಡಿ ಹೋಗಿರುತ್ತವೆ. 

ಮನೆಯಲ್ಲಿದ್ರೆ ತಾತ್ಸಾರ ಜಾಸ್ತಿ: ಉದ್ಯೋಗಸ್ಥೆ ಮಹಿಳೆ ಹಣೆಬರಹ ಇನ್ನೊಂತರಹ ಬಿಡಿ. ಆಫೀಸ್‍ಗಷ್ಟೆ ರಜೆ ಮನೆಕೆಲಸಕ್ಕೇನೂ ರಜೆಯಿಲ್ಲ. ಅದು 24*7 ನಿರಂತರ ಸೇವೇನೆ. ಆದರೆ, ಉದ್ಯೋಗಸ್ಥ ಮಹಿಳೆ ಮನೆಯಿಂದ ಹೊರಹೋಗುವ ಕಾರಣ ಹೊಸ ಮುಖಗಳು, ಆಫೀಸ್‍ನಲ್ಲಿ ಒಂದಿಷ್ಟು ಸ್ನೇಹಿತರು,ಆತ್ಮೀಯರ ಜೊತೆ ಬೆರೆಯುವ, ಹರಟೆ ಹೊಡೆಯುವ ಅವಕಾಶ ಸಿಗುತ್ತದೆ. ಜೊತೆಗೆ ಆ ಪರಿಸರದಲ್ಲಿ ಮನೆಗೆ ಸಂಬಂಧಿಸಿದ ವಿಚಾರಗಳು ಅಷ್ಟಾಗೇನೂ ಬಾಧಿಸುವುದಿಲ್ಲ. ಆದರೆ,ಮನೆಯಲ್ಲಿ ಕುಳಿತಾಕೆ ಪಾಡು ಹಾಗಲ್ಲ ನೋಡಿ. ಏನಾದರೂ ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಗಂಡನ ಬಾಯಿಯಿಂದ ಈ ಮಾತೊಂದು ಪಕ್ಕಾ-‘ಏನೇ ಬೆಳಗ್ಗೆಯಿಂದ ಮನೆಯಲ್ಲೇ ಬಿದ್ದಿರ್ತಿಯಾ, ಏನ್ ಮಾಡ್ತ ಇರ್ತಿಯಾ, ಒಂದ್ ಕೆಲ್ಸನೂ ನೆಟ್ಟಗೆ ಮಾಡೋದಿಲ್ಲ.’ ಸೋ,ಹೀಗಾಗಿ ಪ್ರತಿ ಕೆಲಸ ಮಾಡುವಾಗಲೂ ಗಂಡ ಏನಾದರೂ ಹೇಳ್ಬಹುದಾ ಎಂಬ ಲೆಕ್ಕಾಚಾರವಂತೂ ಮನಸ್ಸಿನಲ್ಲಿ ನಡೆಯುತ್ತಲೇ ಇರುತ್ತದೆ.

ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ ಅನ್ನೋ ಹೆಣ್ಣಿಗಿರುತ್ತೆ ರೋಗ

ಗಂಡ ಊರಲಿಲ್ಲದ ದಿನವೇ ಹಾಲಿಡೇ, ಜಾಲಿ ಡೇ: ನಿಜ ಕಣ್ರೀ, ನೀವು ಯಾವ ಮಹಿಳೆಯನ್ನು ಬೇಕಾದ್ರೆ ವಿಚಾರಿಸಿ, ಗಂಡ ಊರಲಿಲ್ಲದ ದಿನ ತನಗೆ ಹಾಲಿಡೇ ಎಂದೇ ಹೇಳುತ್ತಾರೆ. ಬೆಳಗ್ಗೆ ಎಂದಿನ ಗಡಿಬಿಡಿಯಿರುವುದಿಲ್ಲ.ತಿಂಡಿಗೆ, ಊಟಕ್ಕೆ ಇಂಥದ್ದೇ ಆಗಬೇಕೆಂದೇನೂ ಇಲ್ಲ. ಏನೋ ಒಂದು ತಿಂದು ಸುಮ್ಮನಿದ್ದರಾಯಿತು.ಇನ್ನು ಮಕ್ಕಳು ಸ್ವಲ್ಪ ಮಟ್ಟಿಗೆ ಕಿರಿಕಿರಿ ಮಾಡಿದರೂ ಹೇಗೋ ಸುಧಾರಿಸಬಹುದು.ಬುದ್ಧಿ ಬಲಿತಿದ್ದರೂ ದೊಡ್ಡ ಮಗುವಿನಂತೆಯೇ ಆಡುವ ಗಂಡಂದಿರಿಗಿಂತ ಮಕ್ಕಳನ್ನು ಸಂಭಾಳಿಸುವುದು ಸುಲಭದ ಕೆಲಸವಾಗಿರುವ ಕಾರಣ ಮಕ್ಕಳು ಆಕೆ ಸ್ವಾತಂತ್ರ್ಯಕ್ಕೆ ಅಷ್ಟೇನೂ ಭಂಗ ತರುವುದಿಲ್ಲ ಬಿಡಿ. ಇನ್ನು ಸಾಂಬಾರ್‍ಗೆ ಉಪ್ಪು ಕಡಿಮೆ, ಟೀಗೆ ಸಕ್ಕರೆ ಜಾಸ್ತಿ ಎಂಬ ಕಮೆಂಟ್‍ಗಳಿರುವುದಿಲ್ಲ. ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಏನೂ ಆಗಿಲ್ಲ ಎಂಬಂತೆ ಆರಾಮವಾಗಿ ಸುತ್ತಾಡಿಕೊಂಡಿರಬಹುದು.ಎಲ್ಲಕ್ಕಿಂತ ಮುಖ್ಯವಾಗಿ ಕೆಲಸಗಳು ಜಾಸ್ತಿಯಿಲ್ಲದ ಕಾರಣ ರಾತ್ರಿ ಬೇಗ ಮಲಗಿ ಬೆಳಗ್ಗೆ ಲೇಟಾಗಿ ಏಳುವ ಅವಕಾಶ ಮನಸ್ಸಿಗೆ ರಿಲ್ಯಾಕ್ಸ್ ನೀಡುತ್ತದೆ. ಇನ್ನು ಸಂಜೆ ಹೊತ್ತು ಪತಿಗಾಗಿ ಕಾದು ಕುಳಿತುಕೊಳ್ಳಬೇಕಾದ ಅಗತ್ಯವಿಲ್ಲ. ಆರಾಮವಾಗಿ ಸುತ್ತಾಡಿಕೊಂಡು ಪಾನಿಪೂರಿ, ಬೇಲ್ ಪೂರಿ, ಐಸ್‍ಕ್ರೀಂ, ಜ್ಯೂಸ್ ಎಂದು ಹೊರಗಡೆಯೇ ಹೊಟ್ಟೆ ತುಂಬಿಸಿಕೊಂಡು ಬಂದ್ರೆ ರಾತ್ರಿ ಅಡುಗೆ ಕೆಲಸವೂ ಉಳಿಯುತ್ತದೆ. ಸೋ, ಟೋಟಲಿ ಫುಲ್ ರೆಸ್ಟ್. 

ಹೆಣ್ಣೇಕೆ ಲವ್ ಪ್ರಪೋಸ್ ಮಾಡೋದ್ರಲ್ಲಿ ಹಿಂದೆ?

ಒತ್ತಡರಹಿತ ದಿನಚರಿ: ಪ್ರತಿ ವಿಷಯಕ್ಕೂ ಕ್ಯಾತೆ ತೆಗೆಯುವ ಗಂಡನಿದ್ದರಂತೂ ದಿನ ಬೆಳಗಾದ್ರೆ ಏನೋ ಟೆನ್ಷನ್, ನೆಮ್ಮದಿಹರಣ. ಆತ ಮನೆಯಲ್ಲಿ ಇಲ್ಲದಿದ್ರೆ ಗಲಾಟೆ, ರಂಪಾಟವಿರದ ಕಾರಣ ಒತ್ತಡ ತಗ್ಗುತ್ತದೆ,ಮನಸ್ಸು ರಿಲ್ಯಾಕ್ಸ್ ಆಗಿ ಹಕ್ಕಿಯಂತೆ ಹಾರುತ್ತದೆ.ಸಿಂಪಲಾಗಿ ಹೇಳೋದಾದ್ರೆ ಗಂಡ ಕಡೇಪಕ್ಷ ತಿಂಗಳಿಗೊಮ್ಮೆಯಾದರೂ ಒಂದೆರಡು ದಿನಗಳ ಮಟ್ಟಿಗೆ ಟೂರ್, ಮೀಟಿಂಗ್ ನೆಪದಲ್ಲಿ ಊರು ಬಿಟ್ರೆ ಹೆಂಡ್ತಿಗೆ ಹಬ್ಬ.ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತಿ. ಸೋ, ಗಂಡ ಟ್ರಾವೆಲ್ ಹೋಗ್ತೀನಿ ಅಂದ್ರೆ ಖುಷಿಯಿಂದ ಕಳುಹಿಸಿ, ಪೂರ್ಣ ಸ್ವಾತಂತ್ರ್ಯವನ್ನು ಎಂಜಾಯ್ ಮಾಡಿ.

click me!