ಗೆಳತಿಯರು ಬೆನ್ನಿಗಿದ್ರೆ ಉದ್ಯೋಗಸ್ಥೆ ಮಹಿಳೆಗೆ ಆನೆಬಲ

By Suvarna NewsFirst Published Feb 8, 2020, 11:15 AM IST
Highlights

ಒಂದು ಹೆಣ್ಣಿನ ಕಷ್ಟವನ್ನು ಇನ್ನೊಂದು ಹೆಣ್ಣು ಮಾತ್ರ ಅರ್ಥಮಾಡಿಕೊಳ್ಳಬಲ್ಲಳು.ಇದೇ ಕಾರಣಕ್ಕೆ ದೊಡ್ಡ ಸ್ನೇಹಿತೆಯರ ಬಳಗವನ್ನು ಹೊಂದಿರುವ ಮಹಿಳೆ ಸದಾ ಉಲ್ಲಾಸದಿಂದಿರುತ್ತಾಳೆ. ಇದಕ್ಕೆ ಪೂರಕವೆಂಬಂತೆ ಹೊಸ ಅಧ್ಯಯನವೊಂದು ಸ್ನೇಹಿತೆಯರ ಬೆಂಬಲವಿದ್ರೆ ಮಹಿಳೆ ತನ್ನ ವೃತ್ತಿ ಬದುಕಿನಲ್ಲಿ ಉನ್ನತ ಸಾಧನೆ ಮಾಡಬಲ್ಲಳು ಎಂದು ಹೇಳಿದೆ. 

ಎರಡು ಜಡೆ ಒಟ್ಟಾದ್ರೆ ಜಗಳವಾಗುತ್ತದೆ ಎಂಬ ಮಾತಿದೆ.ಇದರಲ್ಲಿ ಹುರುಳಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ,ಈ ಒಂದು ಮಾತನ್ನೇ ಅಸ್ತ್ರವಾಗಿಟ್ಟುಕೊಂಡು ಪುರುಷರು ಆಗಾಗ ಮನೆ ಹಾಗೂ ಆಫೀಸ್ ಎರಡೂ ಕಡೆ ಮಹಿಳೆಯರ ಕಾಲೆಳೆದು ಮಜಾ ತೊಗೊಳ್ಳುವುದಂತೂ ಇದ್ದೇಇದೆ. ಆದರೆ,ಇತ್ತೀಚೆಗೆ ನಡೆದ ಅಧ್ಯಯನವೊಂದು ಈ ಹೇಳಿಕೆಗೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಅದರ ಪ್ರಕಾರ ಹೆಚ್ಚು ಗೆಳತಿಯರ ಬೆಂಬಲ ಹೊಂದಿರುವ ಮಹಿಳೆ ವೃತ್ತಿಯಲ್ಲಿ ಯಶಸ್ವಿಯಾಗುವ ಜೊತೆಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ವೇತನ ಪಡೆಯುತ್ತಾಳೆ. ಅಂದ್ರೆ ಮಹಿಳೆಯರು ಜೊತೆಯಾಗಿದ್ರೆ ಹೆಚ್ಚು ಬಲ ಹೊಂದಿರುತ್ತಾರೆ ಎಂದಾಯಿತು. ಮಹಿಳೆಯರು ಒಟ್ಟಿಗೆ ಸೇರಿದಾಗ ಜಗಳ ಮಾಡೋದೇ ಆಗಿದ್ರೆ ಇಂಥ ಬಲ ಸಿಗಲು ಸಾಧ್ಯವಿತ್ತೆ? 

ಉದ್ಯೋಗವೇ ಪುರುಷನ ಮದುವೆಗೆ ಬಲ

ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಬಲಿಷ್ಠವಾದ ಗೆಳತಿಯರನ್ನು ಹೊಂದಿರುವ ಮಹಿಳೆ ವೃತ್ತಿಯಲ್ಲಿ ಯಶಸ್ಸು ಸಾಧಿಸುವ ಜೊತೆಗೆ ಉನ್ನತ ಸ್ಥಾನ ಹಾಗೂ ಉತ್ತಮ ವೇತನ ಪಡೆಯುತ್ತಾಳೆ.'1-3 ಸ್ಟ್ರಾಂಗ್ ಮಹಿಳೆಯರನ್ನು ತನ್ನ ಆತ್ಮೀಯ ಸ್ನೇಹಿತರ ವಲಯದಲ್ಲಿ ಹೊಂದಿರುವ ಮಹಿಳೆ ವೃತ್ತಿಯಲ್ಲಿ ನಾಯಕತ್ವ ವಹಿಸುವಂತಹ ಉನ್ನತ ಸ್ಥಾನ ಹಾಗೂ ಉತ್ತಮ ವೇತನ ಪಡೆಯುವ ಸಾಧ್ಯತೆ ಇತರ ಮಹಿಳೆಯರಿಗಿಂತ 2.5 ಪಟ್ಟು ಹೆಚ್ಚಿದೆ’ ಎಂದು ಸಂಶೋಧಕ ಬ್ರೈನ್ ಉಝ್ಝಿ ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂನಲ್ಲಿ ಬರೆದಿದ್ದಾರೆ.

ಕಾರಣ ಏನು?: ಮಹಿಳೆಗೆ ಕೆಲವೊಂದು ಸಂಗತಿಗಳನ್ನು ಇನ್ನೊಂದು ಮಹಿಳೆ ಬಳಿ ಮಾತ್ರ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಅವಳ ಸಮಸ್ಯೆಯನ್ನು ಇನ್ನೊಬ್ಬ ಮಹಿಳೆ ಮಾತ್ರ ಅರ್ಥಮಾಡಿಕೊಂಡು, ಸೂಕ್ತ ಸಲಹೆ, ಸೂಚನೆಗಳನ್ನು ನೀಡಬಲ್ಲಳು. ಉದಾಹರಣೆಗೆ ಸಮಾನ ವೇತನಕ್ಕೆ ಸಂಬಂಧಿಸಿದ ವಿಷಯ. ಬಹುತೇಕ ಎಲ್ಲ ಉದ್ಯೋಗಸ್ಥ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸಿರುತ್ತಾರೆ. ಈ ಸಮಸ್ಯೆಗೆ ಅವರು ಹೇಗೆ ಪರಿಹಾರ ಕಂಡುಕೊಂಡರು ಎಂಬುದನ್ನು ಕೇಳಿ ತಿಳಿದುಕೊಳ್ಳುವುದರಿಂದ ನಾನೇನು ಮಾಡಬಹುದು ಎಂಬ ಕಲ್ಪನೆ ಮೂಡುತ್ತದೆ. ಮಾನಸಿಕವಾಗಿ ಸದೃಢರಾದ ಸ್ನೇಹಿತೆಯರ ಮಾರ್ಗದರ್ಶನವಿರುವಾಗ ಮಹಿಳೆ ವೃತ್ತಿಯಲ್ಲಿ ಬಯಸಿದ ಸ್ಥಾನಕ್ಕೇರಬಲ್ಲಳು.

ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ

ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಲು ಬಲ: ಇನ್ನೊಂದು ಅಧ್ಯಯನದ ಪ್ರಕಾರ ಹೆಚ್ಚು ಮಹಿಳಾ ಸಹೋದ್ಯೋಗಿಗಳನ್ನು ತನ್ನ ತಂಡದಲ್ಲಿ ಹೊಂದಿರುವ ಮಹಿಳೆ ಹೆಚ್ಚು ಪುರುಷ ಸಹೋದ್ಯೋಗಿಗಳನ್ನು ಹೊಂದಿರುವ ಮಹಿಳೆಗಿಂತ ಕಡಿಮೆ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾಳೆ. ಅಷ್ಟೇ ಅಲ್ಲ, ಅನುಕಂಪ ಹಾಗೂ ಬೆಂಬಲ ನೀಡುವ ಮಹಿಳೆಯರ ಗುಂಪಿನ ನೆರವಿನಿಂದ ಮಹಿಳೆ ಉದ್ಯೋಗ ಸ್ಥಳದಲ್ಲಿ ತನ್ನ ಮೇಲೆ ನಡೆಯುವ ಅನ್ಯಾಯ ಹಾಗೂ ಕಿರುಕುಳಗಳನ್ನು ಸಮರ್ಥವಾಗಿ ಎದುರಿಸಬಲ್ಲಳು. ಆಫೀಸ್‍ನಲ್ಲಿ ಬಾಸ್ ಅಥವಾ ಸಹೋದ್ಯೋಗಿಗಳಿಂದ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳೆ ಈ ವಿಚಾರವನ್ನು ಇನ್ನೊಬ್ಬ ಮಹಿಳೆಯೊಂದಿಗೆ ಹಂಚಿಕೊಂಡಾಗ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ದೊರೆಯುತ್ತದೆ. ಏಕೆಂದರೆ ಆ ಮಹಿಳೆ ಕೂಡ ಆಫೀಸ್‍ನಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಿರಬಹುದು ಅಥವಾ ಆಕೆ ಸಹೋದ್ಯೋಗಿಗಳು ಇದನ್ನು ಹೇಗೆ ಎದುರಿಸಿದ್ದರು ಎಂಬುದನ್ನು ತಿಳಿದಿರಬಹುದು. ಹೀಗಾಗಿ ಇಂಥ ಮಹಿಳೆ ಸೂಕ್ತ ಮಾರ್ಗದರ್ಶನ ನೀಡಬಲ್ಲಳು. ಹೆಣ್ಣು ಅದೆಷ್ಟೇ ಸಾಧನೆ ಮಾಡಿದ್ದರೂ ಪುರುಷ ಸಮಾಜ ಆಕೆಯನ್ನು ನೋಡುವ ದೃಷ್ಟಿ ಇನ್ನೂ ಬದಲಾಗಿಲ್ಲ. ಹೀಗಾಗಿ ಒಂದು ಹೆಣ್ಣು ಎದುರಿಸುವ ಸಾಮಾಜಿಕ, ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಇನ್ನೊಂದು ಹೆಣ್ಣು ಮಾತ್ರ ಸಮರ್ಪಕವಾಗಿ ಅರ್ಥೈಸಿಕೊಳ್ಳಬಲ್ಲಳು. ಇದೇ ಅಧ್ಯಯನವು ಬೆಂಬಲ ನೀಡುವ ಸಹೋದ್ಯೋಗಿಗಳನ್ನು ಹೊಂದಿರುವ ಮಹಿಳೆ ಟೀಕಿಸುವ ಸಹೋದ್ಯೋಗಿಗಳನ್ನು ಹೊಂದಿರುವ ಮಹಿಳೆಗಿಂತ ಸೃಜನಾತ್ಮಕವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲಳು ಎಂದು ಹೇಳಿದೆ. 

ನಂಗೆ ಲೈಫ್ ಅಂದ್ರೆ ಲೆಮನೈಡ್ ಇದ್ದಂಗೆ

ನೋವಿಗೆ ಮದ್ದು: ವೃತ್ತಿ ವಿಚಾರದಲ್ಲಿ ಮಾತ್ರವಲ್ಲ, ಆರೋಗ್ಯ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲೂ ಮಹಿಳೆಗೆ ಸ್ನೇಹಿತೆಯರ ಬೆಂಬಲ ಸಿಕ್ಕರೆ ಜಯ ಗಳಿಸಬಲ್ಲಳು ಎಂಬುದನ್ನು ಇನ್ನೊಂದು ಅಧ್ಯಯನ ತಿಳಿಸಿದೆ. ಹೆಚ್ಚಿನ ಸಾಮಾಜಿಕ ಸಂಪರ್ಕ ಹೊಂದಿರುವ ಮಹಿಳೆಯರು ಬ್ರೆಸ್ಟ್ ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಎಂದು ಬ್ರೆಸ್ಟ್ ಕ್ಯಾನ್ಸರ್ ಡಾಟ್ ಆರ್ಗ್ ಎಂಬ ಸ್ತನ ಕ್ಯಾನ್ಸರ್‍ಗೆ ಸಂಬಂಧಿಸಿದ ಪೋರ್ಟಲ್‍ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. 

click me!