ಐಐಎಸ್‌ಸಿ ಸ್ಥಾಪನೆ ಮತ್ತು ಮಹಿಳಾ ಸಬಲೀಕರಣದ ಹಿಂದಿನ ಶಕ್ತಿ ಮಹಾರಾಣಿ ಕೆಂಪನಂಜಮ್ಮಣ್ಣಿ: ಲೇಖಕ ಗಿರೀಶ್ ಲಿಂಗಣ್ಣ ಬರಹ

By Suvarna News  |  First Published Mar 8, 2024, 6:43 PM IST

ಇತಿಹಾಸಕಾರರು ತಮ್ಮ ಬರಹಗಳಲ್ಲಿ ಮೈಸೂರನ್ನು 1981ರಿಂದ 1984ರಲ್ಲಿ ನಿಧನರಾಗುವ ತನಕ ಆಳಿದ ಚಾಮರಾಜೇಂದ್ರ ಒಡೆಯರ್, 1902ರಿಂದ 1940ರ ತನಕ ಸಂಸ್ಥಾನವನ್ನು ಆಳಿದ ಅವರ ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ಸಾಕಷ್ಟು ವಿವರಗಳನ್ನು ಒದಗಿಸಿದ್ದಾರೆ. ಆದರೆ, ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ವಿವರಗಳು ಮಾತ್ರ ಬಹುಪಾಲು ನಿರ್ಲಕ್ಷ್ಯಕ್ಕೆ ಒಳಗಾಗಿವೆ. 


ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2024ರ ಸಂದರ್ಭದಲ್ಲಿ, ನಾವು ಆಧುನಿಕ ಜಗತ್ತನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರು ಮತ್ತವರ ಸಾಧನೆಗಳನ್ನು ಸ್ಮರಿಸುತ್ತೇವೆ. ಇಂತಹ ಮಹಾನ್ ಸಾಧಕ ಮಹಿಳೆಯರಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸ್ಥಾಪನೆಯ ಹಿಂದಿನ ಪ್ರೇರಕ ಶಕ್ತಿ, ಮೈಸೂರಿನ ಮಹಾರಾಣಿ, ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಅವರೂ ಒಬ್ಬರು. ಅವರ ಮಗ ಇನ್ನೂ ಎಳೆಯ ವಯಸ್ಸಿನ ರಾಜಕುಮಾರನಾಗಿದ್ದಾಗ, ಆಡಳಿತದ ಸೂತ್ರ ಹಿಡಿದಿದ್ದ ಮಹಾರಾಣಿಯವರು ಭೂಮಿ ಮತ್ತು ಅವಶ್ಯಕ ಹಣವನ್ನು ಒದಗಿಸಿದ್ದು, ಸಮಾಜದ ಅಭಿವೃದ್ಧಿಗಾಗಿ ಅನ್ವೇಷಣೆ ಮತ್ತು ಜ್ಞಾನದ ವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ವಿವರಿಸುತ್ತದೆ. 20ನೇ ಶತಮಾನದ ಆರಂಭದಲ್ಲಿ ಮಹಿಳೆಯೊಬ್ಬರು ನಡೆಸಿದ ಲೋಕೋಪಕಾರಿ ಕಾರ್ಯಗಳು ಇಂದಿಗೂ ಜಗತ್ತಿನ ಮೇಲೆ ಮಹಿಳೆ ಬೀರಬಹುದಾದ ಪ್ರಭಾವವನ್ನು ನೆನಪಿಸುತ್ತದೆ.

Tap to resize

Latest Videos

ಕೆಂಪನಂಜಮ್ಮಣ್ಣಿ ಯಾರು? ಮೈಸೂರು ರಾಜ್ಯದ ಆಡಳಿತಕ್ಕೆ ಅವರ ಕೊಡುಗೆಗಳೇನು?: ಇತಿಹಾಸಕಾರರು ತಮ್ಮ ಬರಹಗಳಲ್ಲಿ ಮೈಸೂರನ್ನು 1981ರಿಂದ 1984ರಲ್ಲಿ ನಿಧನರಾಗುವ ತನಕ ಆಳಿದ ಚಾಮರಾಜೇಂದ್ರ ಒಡೆಯರ್, 1902ರಿಂದ 1940ರ ತನಕ ಸಂಸ್ಥಾನವನ್ನು ಆಳಿದ ಅವರ ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ಸಾಕಷ್ಟು ವಿವರಗಳನ್ನು ಒದಗಿಸಿದ್ದಾರೆ. ಆದರೆ, ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ವಿವರಗಳು ಮಾತ್ರ ಬಹುಪಾಲು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಚಾಮರಾಜೇಂದ್ರ ಒಡೆಯರ್ ಅವರ ಪತ್ನಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿಯಾದ ಕೆಂಪನಂಜಮ್ಮಣ್ಣಿಯವರು ಮೈಸೂರು ರಾಜ್ಯದ ಆಡಳಿತದಲ್ಲಿ ಅತ್ಯಂತ ಮಹತ್ವದ, ಆದರೆ ಕಡಿಮೆ ದಾಖಲಿಸಲ್ಪಟ್ಟ ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲೂ, ಚಾಮರಾಜೇಂದ್ರ ಒಡೆಯರ್ ಅವರ ನಿಧನ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ನಡುವಿನ ಅವಧಿಯಲ್ಲಿ ಕೆಂಪನಂಜಮ್ಮಣ್ಣಿ ರಾಜ್ಯದ ಆಡಳಿತ ಸೂತ್ರ ನಿರ್ವಹಿಸಿದ್ದರು.

ನಿಮ್ಮ ಹೆಣ್ಣುಮಗುವಿಗೆ ಇದಕ್ಕಿಂತ ಉತ್ತಮ ಉಡುಗೊರೆ ಬೇರಿಲ್ಲ;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಆಕೆ ಭವಿಷ್ಯ ಭದ್ರ

ಜಿ ಆರ್ ಜೋಸ್ಯೆರ್ ಅವರು 1950ರಲ್ಲಿ ಪ್ರಕಟಿಸಿದ 'ಹಿಸ್ಟರಿ ಆಫ್ ಮೈಸೂರು ಆ್ಯಂಡ್ ದ ಯಾದವ ಡೈನಾಸ್ಟಿ' ಕೃತಿ ಕೆಂಪನಂಜಮ್ಮಣ್ಣಿ ಅವರ ಮದುವೆಯ ಸಂದರ್ಭದ ವಿವರಗಳನ್ನು ಒದಗಿಸುತ್ತದೆ. ಈ ಕೃತಿ, 1876ರಲ್ಲಿ ತನ್ನ 14ನೇ ಎಳೆಯ ವಯಸ್ಸಿನಲ್ಲಿ ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು ಮಹಾರಾಣಿ ಅವರ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತನ್ನ ಪರಿವಾರದೊಡನೆ ದೆಹಲಿಗೆ ತೆರಳಿದ್ದನ್ನು ವರ್ಣಿಸುತ್ತದೆ. ಅವರು ದೆಹಲಿಯಿಂದ ಮರಳಿದ ಬಳಿಕ, ಅವರಿಗಾಗಿ ಆ ಕಾಲದಲ್ಲಿ ರಾಜ್ಯಾಡಳಿತದ ಪ್ರದೇಶವಾಗಿದ್ದ ರೇವಾದ (ಪ್ರಸ್ತುತ ಮಧ್ಯ ಪ್ರದೇಶ) ರಾಜಕುಟುಂಬದಿಂದ ಸೂಕ್ತ ವಧುವನ್ನು ಹುಡುಕಲು ಆರಂಭಿಸಲಾಯಿತು.

ಜಾಯ್ಸರ್ ಅವರು ತನ್ನ ಕೃತಿಯಲ್ಲಿ, ರೇವಾದ ಮಹಾರಾಣಿ ತನಗೆ ಪರಿಚಯವಿಲ್ಲದ ಕುಟುಂಬದೊಡನೆ ವೈವಾಹಿಕ ಸಂಬಂಧ ಬೆಳೆಸುವುದನ್ನು ವಿರೋಧಿಸಿದ್ದರು. ಇದರ ಪರಿಣಾಮವಾಗಿ, ಚಾಮರಾಜೇಂದ್ರರ ನಿಯೋಗ ತಮಗೆ ಸಮೀಪದಲ್ಲಿರುವ ಪ್ರದೇಶದಿಂದಲೇ ಸೂಕ್ತ ವಧುವನ್ನು ಆರಿಸಿತು. ಅವರು ಮದ್ದೂರು ಪ್ರದೇಶದ, ಮೂಲತಃ ಕಳಲೆಯ ಶ್ರೀಮಂತ ಕುಟುಂಬವೊಂದರ ಶಿಕ್ಷಿತ ವಧುವನ್ನು ಆರಿಸಿದ್ದರು. ಅವೆರಡೂ ಪ್ರದೇಶಗಳು ಪ್ರಸ್ತುತ ಮೈಸೂರು ಜಿಲ್ಲೆಯ ಭಾಗವಾಗಿವೆ. ಬಳಿಕ, ಮೇ 1878ರಲ್ಲಿ 15ರ ಹರೆಯದ ಚಾಮರಾಜೇಂದ್ರರು 12 ವರ್ಷದ ಕೆಂಪನಂಜಮ್ಮಣ್ಣಿ ಅವರನ್ನು ವಿವಾಹವಾದರು. ಮದುವೆಯ ಬಳಿಕ, ಕೆಂಪನಂಜಮ್ಮಣ್ಣಿ ಅವರಿಗೆ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ಎಂಬ ಬಿರುದು ನೀಡಲಾಯಿತು.

ತಂದೆಯವರ ನಿಧನಾನಂತರ ಚಾಮರಾಜೇಂದ್ರರಿಗೆ ಪರಂಪರಾಗತ ಒಡೆಯರ್ ಬಿರುದು ನೀಡಲಾಯಿತಾದರೂ, ಒಡೆಯರ್ ಮನೆತನ ದೀರ್ಘಾವಧಿಯಲ್ಲಿ ಮೈಸೂರಿನ ಆಡಳಿತದಿಂದ ದೂರ ಉಳಿದಿತ್ತು. ಬ್ರಿಟಿಷ್ ಸಾಮ್ರಾಜ್ಯ ಮೈಸೂರು ಸಂಸ್ಥಾನದ ಬಹುಪಾಲನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರೆ, ಉಳಿದ ಭಾಗಗಳನ್ನು ಮದ್ರಾಸ್ ಸಂಸ್ಥಾನ ಮತ್ತು ಹೈದರಾಬಾದ್ ನಿಜಾಮರಿಗೆ ವರ್ಗಾಯಿಸಲಾಗಿತ್ತು. ಮಾರ್ಚ್ 26, 1881ರಂದು, ಚಾಮರಾಜೇಂದ್ರ ಒಡೆಯರ್ ಬಹಳಷ್ಟು ನಿರ್ಬಂಧಗಳ ನಡುವೆ ಮೈಸೂರು ಸಂಸ್ಥಾನದ ಸಿಂಹಾಸನವನ್ನು ಅಲಂಕರಿಸಿದರು. ಬ್ರಿಟಿಷರ ಹಿಂಜರಿತ ಕೇವಲ ನಾಮಕಾವಸ್ಥೆ ಮಾತ್ರವೇ ಆಗಿದ್ದು, ಅವರಿನ್ನೂ ಮೇಲುಸ್ತುವಾರಿಯ ಹಕ್ಕುಗಳನ್ನು ಹೊಂದಿದ್ದರು. ಮಹಾರಾಜರು ಮತ್ತು ಅವರ ಉತ್ತರಾಧಿಕಾರಿಗಳು ಬ್ರಿಟಿಷ್ ಸಿಂಹಾಸನಕ್ಕೆ ನಿಷ್ಠೆ ಮತ್ತು ಅಧೀನತೆಗಳನ್ನು ತೋರಿ, 'ರಕ್ಷಣೆಗಾಗಿ' ವಾರ್ಷಿಕ 35 ಲಕ್ಷ ರೂಪಾಯಿಗಳ ಮೊತ್ತ ಒದಗಿಸಬೇಕಾಗಿತ್ತು.

ಇನ್ನು ರಾಜ್ಯಾಡಳಿತದ ವಿಚಾರದಲ್ಲಿ, ಮಹಾರಾಜರು ಬ್ರಿಟಿಷ್ ಗವರ್ನರ್ ಜನರಲ್ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕಾಗಿತ್ತು. ಅದರೊಡನೆ, ರೆಸಿಡೆಂಟ್ ಎಂದು ಕರೆಯಲಾಗುವ ಓರ್ವ ಬ್ರಿಟಿಷ್ ಅಧಿಕಾರಿಯನ್ನೂ ಈ ಷರತ್ತುಗಳ ಪಾಲನೆಯನ್ನು ಗಮನಿಸಿಕೊಳ್ಳುವ ನಿಟ್ಟಿನಲ್ಲಿ ಸಾಮ್ರಾಜ್ಯದಲ್ಲಿ ಇರಿಸಲಾಗುತ್ತಿತ್ತು. ಈ ನಿಬಂಧನೆಗಳಲ್ಲಿ ಏನಾದರೂ ಏರುಪೇರು ಕಂಡುಬಂದರೆ, ಬ್ರಿಟಿಷರು ಸಾಮ್ರಾಜ್ಯದ ಮೇಲಿನ ಹಕ್ಕನ್ನು ಮರಳಿ ಪಡೆಯಲು ಅವಕಾಶವಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡ ಚಾಮರಾಜೇಂದ್ರರು ತನ್ನ ಸಾಮರ್ಥ್ಯ ಪ್ರದರ್ಶಿಸಿ, ಉತ್ತಮ ಮಹಾರಾಜರೆನಿಸಿದರು. 1876ರ ಕ್ಷಾಮ ದೀರ್ಘಾವಧಿಯ ಅಡ್ಡ ಪರಿಣಾಮಗಳನ್ನು ಬೀರಿದ್ದರೂ, ರಾಜ್ಯ 1891ರ ವೇಳೆಗೆ ಪುಟಿದೆದ್ದಿತ್ತು. ಚಾಮರಾಜೇಂದ್ರರ ಆಡಳಿತಾವಧಿಯಲ್ಲಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಗಮನಾರ್ಹವಾಗಿ, ಈ ಅವಧಿಯಲ್ಲಿ ಮಹಿಳಾ ಶಿಕ್ಷಣದ ಆರಂಭಿಕ ಸಂಸ್ಥೆಗಳೂ ಆರಂಭಗೊಂಡವು.

ರಸ್ತೆ, ರೈಲ್ವೇ, ನೀರಾವರಿ ವ್ಯವಸ್ಥೆ ಮತ್ತು ನೂತನ ಉದ್ಯಮ ಸಂಸ್ಥೆಗಳ ಮೇಲೆ ಹೂಡಿಕೆ ನಡೆಸುವುದರಿಂದ ಆರ್ಥಿಕ ಪ್ರಗತಿಯೂ ಹೆಚ್ಚತೊಡಗಿತು. ಇದರಿಂದಾಗಿ ಭೂಕಂದಾಯ ಮತ್ತು ಕೃಷಿ ಭೂಮಿಗಳ ಪ್ರಮಾಣವೂ ಹೆಚ್ಚಾಯಿತು. ಅಬಕಾರಿ ತೆರಿಗೆಯ ಆದಾಯ ನಾಲ್ಕು ಪಟ್ಟು ಹೆಚ್ಚಾದರೆ, ಅರಣ್ಯ ಸಂಪನ್ಮೂಲಗಳು, ಸ್ಟ್ಯಾಂಪ್‌ಗಳು ಮತ್ತು ನೋಂದಣಿ ಶುಲ್ಕಗಳ ಆದಾಯ ದ್ವಿಗುಣಗೊಂಡವು. ಚಾಮರಾಜೇಂದ್ರ ಒಡೆಯರ್ ತನ್ನ 31ನೇ ವಯಸ್ಸಿನಲ್ಲಿ, ಡಿಸೆಂಬರ್ 28, 1894ರಂದು ಅನಿರೀಕ್ಷಿತವಾಗಿ ಮೃತಪಟ್ಟರು. ಅವರು ಆಗಿನ ಭಾರತ ಸಂಸ್ಥಾನದ ರಾಜಧಾನಿಯಾಗಿದ್ದ ಕಲ್ಕತ್ತಾಗೆ ಚಳಿಗಾಲದ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಸುನೀಗಿದ್ದರು. ಪ್ರಯಾಣದುದ್ದಕ್ಕೂ ಚಾಮರಾಜೇಂದ್ರರು ಹೊಂದಿದ್ದ ಗಂಟಲು ನೋವು ಕಲ್ಕತ್ತಾಗೆ ತಲುಪುತ್ತಿದ್ದಂತೆ ಡಿಫ್ತೀರಿಯಾ ಆಗಿ ಬದಲಾಗಿತ್ತು. ಅದು ವೈದ್ಯಕೀಯ ಶುಶ್ರೂಷೆಗೂ ಬಗ್ಗದೆ, ಉಲ್ಬಣಗೊಂಡು, ಚಾಮರಾಜೇಂದ್ರರ ಸಾವಿಗೆ ಕಾರಣವಾಯಿತು.

ಚಾಮರಾಜೇಂದ್ರ ಒಡೆಯರ್ ನಿಧನ ಅವರ ಪತ್ನಿ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ, ಅವರ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಸೇರಿದಂತೆ, ಸಂಪೂರ್ಣ ಪರಿವಾರವೇ ಆಘಾತಕ್ಕೊಳಗಾಗುವಂತೆ ಮಾಡಿತು. ಆ ಪ್ರಯಾಣದಲ್ಲಿ ಮಹಾರಾಜರೊಡನೆ ತೆರಳಿದ್ದ ದಿವಾನ್ ಸರ್ ಕೆ ಶೇಶಾದ್ರಿ ಅಯ್ಯರ್ ಸೇರಿದಂತೆ ಸಮಸ್ತ ಪರಿವಾರದವರು ಕಂಗಾಲಾಗಿದ್ದರು. ಕಾಳಿಘಾಟ್‌ನಲ್ಲಿ ಮಹಾರಾಜರ ಅಂತ್ಯಸಂಸ್ಕಾರ ನೆರವೇರಿಸಿ, ಅವರು ಮೈಸೂರಿಗೆ ಮರಳಿದರು. ಅವರ ಮುಂದೆ ಮಹಾರಾಜರಿಲ್ಲದೆ ಮುಂದಿನ ಭವಿಷ್ಯದ ಕುರಿತ ಚಿಂತೆ ಮೂಡಿತ್ತು. ವಿಕ್ರಮ್ ಸಂಪತ್ ಅವರ ಕೃತಿ, 'ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು: ದ ಅನ್ ಟೋಲ್ಡ್ ಸ್ಟೋರಿ ಆಫ್ ದ ಒಡೆಯರ್ಸ್' ಈ ಘಟನೆಗಳ ವಿಸ್ತೃತ ವಿವರಗಳನ್ನು ಒದಗಿಸಿ, ಒಡೆಯರ್ ಸಾಮ್ರಾಜ್ಯದ ಮೇಲಾದ ಪರಿಣಾಮಗಳನ್ನು ವಿವರಿಸುತ್ತದೆ.

"ಕೆಂಪನಂಜಮ್ಮಣ್ಣಿ ಅವರಿಗೆ ಪತಿಯ ನಿಧನದ ವಾರ್ತೆಯನ್ನು ದರ್ಬಾರ್ ಬಕ್ಷಿ ನರಸಿಂಹ ಅಯ್ಯಂಗಾರ್ ತಲುಪಿಸಿದರು. ದುಃಖದ ಉನ್ಮಾದಕ್ಕೆ ಒಳಗಾದ ಮಹಾರಾಣಿ ಪತಿಯ ಮೃತ ಶರೀರವನ್ನು ಹಿಡಿದುಕೊಂಡು ರೋಧಿಸುತ್ತಿದ್ದರು. ಗಾಬರಿಗೊಂಡ ದಿವಾನರು ಮಹಾರಾಣಿಯವರನ್ನು ಸಂತೈಸಲು ಪ್ರಯತ್ನಿಸಿದರು. ದುಃಖದಲ್ಲಿ ಅಳುತ್ತಾ, ಮಹಾರಾಣಿಯವರು ಪ್ರಜ್ಞೆ ಕಳೆದುಕೊಂಡು ಕುಸಿದರು. ದಿವಾನರು ಮಹಾರಾಜರ ಸಾವಿನ ವಾರ್ತೆಯನ್ನು ವಿದೇಶಾಂಗ ಕಾರ್ಯದರ್ಶಿ ಕನ್ನಿಂಗ್‌ಹ್ಯಾಮ್ ಅವರಿಗೆ ತಿಳಿಸಿದರು. ಅವರು ಅದನ್ನು ವೈಸರಾಯ್‌ಗೆ ತಲುಪಿಸಿದರು. ಈ ಸುದ್ದಿ ಮೈಸೂರು ಸಂಸ್ಥಾನ ತಲುಪಿದಾಗ, ಜನರಿಗೆ ಇದನ್ನು ಒಪ್ಪಿಕೊಳ್ಳುವುದೇ ಕಷ್ಟಕರವಾಗಿತ್ತು. ಅವರ ಯುವ, ವರ್ಚಸ್ವಿ ಮಹಾರಾಜ ಇನ್ನಿಲ್ಲವಾಗಿದ್ದರು" ಎಂದು ವಿಕ್ರಮ್ ಸಂಪತ್ ವಿವರಿಸುತ್ತಾರೆ.

ಚಾಮರಾಜೇಂದ್ರ ಒಡೆಯರ್ ಅವರು ಕಲೆ ಮತ್ತು ಸಂಗೀತಕ್ಕೆ ಅಪಾರ ಶ್ಲಾಘನೆ, ನೆರವು ನೀಡುವ ಮೂಲಕ ಹೆಸರಾಗಿದ್ದರು. ಅವರು ವ್ಯಾಪಕವಾಗಿ ಪ್ರವಾಸಗಳನ್ನು ಕೈಗೊಂಡು, ದೇಶಾದ್ಯಂತ ಪ್ರಭಾವಿ ವ್ಯಕ್ತಿಗಳೊಡನೆ ಸಂಪರ್ಕ ಏರ್ಪಡಿಸಿದ್ದರು. ಈ ರೀತಿಯ ಜಾಗತಿಕ ಅರಿವು ಮತ್ತು ಸಂವಾದಗಳು ಕೆಂಪನಂಜಮ್ಮಣ್ಣಿ ಅವರ ಮೇಲೂ ಪ್ರಭಾವ ಬೀರಿರಬಹುದು. ಆದರೆ, ಐತಿಹಾಸಿಕ ದಾಖಲೆಗಳು ಅವರನ್ನು ಮದುವೆಯ ಸಂದರ್ಭದಲ್ಲಿ ಮತ್ತು ಜಯಲಕ್ಷ್ಮಮ್ಮಣ್ಣಿ, ಕೃಷ್ಣರಾಜಮ್ಮಣ್ಣಿ, ಕೃಷ್ಣರಾಜ, ಕಂಠೀರವ ನರಸಿಂಹರಾಜ ಮತ್ತು ಚೆಲುವಾಜಮ್ಮಣ್ಣಿ ಎಂಬ ಐವರು ಮಕ್ಕಳ ತಾಯಿ ಎಂದು ವಿವರಿಸುವಲ್ಲಿ ಮಾತ್ರವೇ ಉಲ್ಲೇಖಿಸಿವೆ. ಬಳಿಕ, ಇತಿಹಾಸದಲ್ಲಿ ಅವರು ಮಹಾರಾಜರ ನಿಧನದ ಬಳಿಕವೇ ಕಾಣಿಸಿಕೊಳ್ಳುತ್ತಾರೆ. ಈ ವೇಳೆಗೆ ಅವರ ಜವಾಬ್ದಾರಿಗಳೂ ಬಹಳಷ್ಟು ಹೆಚ್ಚಿರುತ್ತವೆ.

1894ರಲ್ಲಿ, ಮಹಾರಾಜರ ಅನಿರೀಕ್ಷಿತ ನಿಧನದ ಬಳಿಕ, ಮಹಾರಾಣಿ ಅವರನ್ನು ರಾಜಪ್ರತಿನಿಧಿಯಾಗಿ (ರೀಜೆಂಟ್) ಘೋಷಿಸಲಾಯಿತು. ಪುತ್ರ ಪ್ರಾಪ್ತ ವಯಸ್ಕನಾಗುವ ತನಕ ಅವರು ಇದೇ ಪಾತ್ರದಲ್ಲಿ ಮುಂದುವರಿಯಬೇಕಾಗಿತ್ತು. ಮಹಾರಾಜರ ನಿಧನದ ಕೇವಲ ಎರಡು ದಿನಗಳ ಬಳಿಕ, ಡಿಸೆಂಬರ್ 30, 1984ರಂದು, ಬ್ರಿಟಿಷ್ ಸರ್ಕಾರ ಮೈಸೂರಿನ ಜನತೆಗೆ ಚಾಮರಾಜೇಂದ್ರ ಒಡೆಯರ್ ಮತ್ತು ಕೆಂಪನಂಜಮ್ಮಣ್ಣಿ ಅವರ ಹಿರಿಯ ಮಗ, ಇನ್ನೂ ಹತ್ತರ ಹರೆಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮಹಾರಾಜರೆಂದು ಘೋಷಿಸಿತು. ಕೃಷ್ಣರಾಜ ಒಡೆಯರ್ ಪ್ರಾಪ್ತ ವಯಸ್ಕರಾಗುವ ತನಕ, ಆಗ 26 ವರ್ಷ ವಯಸ್ಸಿನ ಮಹಾರಾಣಿ ರೀಜೆಂಟ್ ಆಗಿ ಮುಂದುವರಿಯಬೇಕಾಯಿತು. ಈ ಅವಧಿಯಲ್ಲಿ, ರಾಜ್ಯದ ಆಡಳಿತ ದಿವಾನ್ ಕೆ ಶೇಶಾದ್ರಿ ಅಯ್ಯರ್ ಅವರ ಉಸ್ತುವಾರಿಯಲ್ಲಿ ಮುಂದುವರಿಯಿತು.

ದಿವಾನರು ಮಹತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ರೆಸಿಡೆಂಟರ ಸಲಹೆಗಳನ್ನು ಪಡೆಯಬೇಕಾಗಿತ್ತು. 'ಸಾಧ್ಯವಿದ್ದಲ್ಲಿ ಮತ್ತು ಸೂಕ್ತವಾದಲ್ಲಿ' ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ಅವರ ಆಯ್ಕೆಗಳನ್ನು ಪರಿಗಣಿಸಬಹುದಾಗಿತ್ತು. ಹಲವಾರು ನಿರೂಪಣೆಗಳು, ಮಹಾರಾಣಿಯವರ ಕಾರ್ಯ ಮಗ ಪ್ರಾಪ್ತ ವಯಸ್ಸಿಗೆ ಬಂದು, ರಾಜ್ಯಾಡಳಿತದ ಜವಾಬ್ದಾರಿ ವಹಿಸಿಕೊಳ್ಳುವ ತನಕ ಹಡಗು ಮುಳುಗದಂತೆ ಸಮತೋಲನ ಕಾಪಾಡಿಕೊಳ್ಳುವುದಾಗಿತ್ತು ಎನ್ನುತ್ತವೆ. ಆ ಮೂಲಕ, ಮಹಾರಾಣಿಯವರು ಕೇವಲ ತಾತ್ಕಾಲಿಕ ಉಸ್ತುವಾರಿಯಾಗಿದ್ದರು ಎನ್ನುತ್ತವೆ. ಮಹಾರಾಜರ ಸಾವಿನ ಹೊರತಾಗಿಯೂ, ಯಾವುದೇ ಸಮಸ್ಯೆಗಳು ಉಂಟಾಗದ ರೀತಿಯಲ್ಲಿ ನಡೆದುಕೊಂಡು ಹೋಗುವಂತಹ ಆಡಳಿತ ವ್ಯವಸ್ಥೆ ಹೊಂದಿದ್ದರೂ, ಮಹಾರಾಣಿಯವರ ಪಾತ್ರ ಇತಿಹಾಸದಲ್ಲಿ ವಿವರಿಸಿದ್ದಕ್ಕಿಂತಲೂ ದೊಡ್ಡದಾಗಿತ್ತು.

ರೀಜೆಂಟ್ ಆಗಿ ನೇಮಕಗೊಂಡ ಬಳಿಕ, ಮಹಾರಾಣಿ ಆಡಳಿತದಲ್ಲಿ ದಿವಾನರಿಗೆ ನೆರವಾಗಲು ಮೂವರು ಸದಸ್ಯರ ಸಮಿತಿಯನ್ನು ನೇಮಿಸಿದರು. ಅವರ ನಾಯಕತ್ವದಲ್ಲಿ ಪ್ಲೇಗ್ ಹರಡುವಿಕೆಯನ್ನು ತಗ್ಗಿಸಲಾಯಿತು, ಬೆಂಗಳೂರಿನ ಹೆಚ್ಚುತ್ತಿದ್ದ ಜನಸಂಖ್ಯೆಗಾಗಿ ಹೊಸ ಪ್ರದೇಶಗಳನ್ನು ನಿರ್ಮಿಸಲಾಯಿತು, ಮತ್ತು ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ನಿರ್ಮಿಸಲಾಯಿತು. ಅದರೊಡನೆ, ಅವರ ಆಡಳಿತದಲ್ಲಿ ಕಾವೇರಿ ವಿದ್ಯುತ್ ಯೋಜನೆ, ಮೈಸೂರು ಮತ್ತು ಬೆಂಗಳೂರಿಗೆ ನೀರು ಸರಬರಾಜು ಯೋಜನೆಗಳು, ಮಾರಿಕಣಿವೆ ನೀರಾವರಿ ಯೋಜನೆಗಳೂ ಮುಖ್ಯವಾಗಿದ್ದವು.

ಮಹಾರಾಣಿಯವರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ ಬಹಳಷ್ಟು ಪ್ರಗತಿ ಕಂಡಿತು. ಗ್ರಾಮೀಣ ಪ್ರದೇಶಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಯಿತು, ವಿದೇಶಗಳಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು, ಮತ್ತು ದಾಮೋದರ್ ದಾಸ್ ಸ್ಕಾಲರ್ಶಿಪ್ ಯೋಜನೆಯನ್ನು ಪರಿಚಯಿಸಲಾಯಿತು. ಅದರೊಡನೆ, ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಗಣನೀಯವಾಗಿ ಹೆಚ್ಚಳ ಕಂಡಿತು. ಜಾಸ್ಯೆರ್ ಅವರ ಪ್ರಕಾರ, 1881ರಿಂದ, 1902ರಲ್ಲಿ ರೀಜೆನ್ಸಿ ಅವಧಿ ಮುಕ್ತಾಯಗೊಳ್ಳುವ ವೇಳೆಗೆ ಶಿಕ್ಷಣ ಕ್ಷೇತ್ರದ ಮೇಲಿನ ಹೂಡಿಕೆ ನಾಲ್ಕು ಪಟ್ಟು ಹೆಚ್ಚಳ ಕಂಡಿತ್ತು, ಸಾರ್ವಜನಿಕ ಕಾರ್ಯಗಳ ಮೇಲಿನ ಹೂಡಿಕೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿತ್ತು, ರಾಜ್ಯದ ಆದಾಯ ಮತ್ತು ಖರ್ಚುಗಳೂ ದ್ವಿಗುಣಗೊಂಡಿದ್ದವು.

ಮಹಾರಾಣಿ ತನ್ನ ಹಿರಿಯ ಪುತ್ರಿ ಜಯಲಕ್ಷ್ಮಮ್ಮಣ್ಣಿಯ ವಿವಾಹವನ್ನು ತನ್ನ ಸೋದರ ಎಂ ಕಾಂತರಾಜ್ ಅರಸ್ ಅವರೊಡನೆ ನೆರವೇರಿಸಿದರು. ಕಾಂತರಾಜ್ ಅರಸ್ ಮಹಾರಾಣಿಯವರ ಖಾಸಗಿ ಕಾರ್ಯದರ್ಶಿಯಾಗಿ, 1918ರಿಂದ 1922ರ ತನಕ ದಿವಾನ್ ಆಗಿ ಕಾರ್ಯಾಚರಿಸಿದರು. ಅವರ ವಿವಾಹದ ಸಂದರ್ಭದಲ್ಲಿ, ಅಂಬಾ ವಿಲಾಸ ಅರಮನೆ ಅಗ್ನಿ ಅವಘಡದಿಂದ ಸುಟ್ಟುಹೋಗಿತ್ತು. ಮಹಾರಾಣಿ ಅದರ ಪುನರ್ ನಿರ್ಮಾಣದ ಜವಾಬ್ದಾರಿಯನ್ನು ವಾಸ್ತುಶಿಲ್ಪ ಹೆನ್ರಿ ಇರ್ವಿನ್ ಅವರಿಗೆ ವಹಿಸಿದರು. 1912ರಲ್ಲಿ ಪೂರ್ಣಗೊಂಡ ಅಂಬಾ ವಿಲಾಸ ಅರಮನೆ ಇಂದಿಗೂ ಮೈಸೂರು ರಾಜಮನೆತನದ ಹಿರಿಮೆಯನ್ನು ಜ್ಞಾಪಿಸುತ್ತದೆ, ಪ್ರತಿದಿನವೂ ನೂರಾರು, ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ.

1901ರಲ್ಲಿ ದಿವಾನ್ ಶೇಶಾದ್ರಿ ಅಯ್ಯರ್ ಅವರ ನಿಧನದ ಬಳಿಕ, ಮಹಾರಾಣಿ ರಾಜ್ಯದ ಯಶಸ್ಸಿಗೆ ಅವರ ಕೊಡುಗೆಗಳನ್ನು ಪ್ರಾಮಾಣಿಕವಾಗಿ ಶ್ಲಾಘಿಸಿ, ಮೈಸೂರಿನ ಆಡಳಿತ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಜಾರಿಗೆ ತಂದ ಹಲವು ಕ್ರಮಗಳು ಅಯ್ಯರ್ ಅವರ ಕೌಶಲಗಳು, ಯೋಜನೆಗಳ ಕಾರಣದಿಂದ‌ ಯಶಸ್ಸು ಕಂಡವು ಎಂದಿದ್ದರು. ದಿವಾನರ ಕೊಡುಗೆಗಳು ಶ್ಲಾಘನೀಯವೇ ಆಗಿದ್ದರೂ, ಅವರು ಮಾತ್ರವೇ ಎಲ್ಲ ಸಾಧನೆಗಳಿಗೆ ಕಾರಣಕರ್ತರಲ್ಲ ಎಂದು ಜಾಸ್ಯೆರ್ ವಿವರಿಸುತ್ತಾರೆ. ದಿವಾನರು ಪ್ರಭಾವಿ ಉಪಸ್ಥಿತಿ ಹೊಂದಿದ್ದರೂ, ಅವರು ಕೈಗೊಳ್ಳಬೇಕು ಎಂದುಕೊಂಡ ಹಲವು ಕ್ರಮಗಳಿಗೆ ವಿವಿಧ ಪಕ್ಷಗಳ ಅನುಮತಿ ಬೇಕಾಗುತ್ತಿತ್ತು. ಇದರಲ್ಲಿ ಸುಲಭವಾಗಿ ಒಪ್ಪಿಸಲು ಸಾಧ್ಯವಿಲ್ಲದ ಸಮಿತಿಯ ಸದಸ್ಯರು, ಮಹಾರಾಣಿ ರೀಜೆಂಟ್, ರೆಸಿಡೆಂಟ್, ಬಹುತೇಕ 300 ದೃಢ ವ್ಯಕ್ತಿತ್ವದವರನ್ನು ಹೊಂದಿದ್ದ ಶಾಸನಸಭೆಯ ಸದಸ್ಯರು ಸೇರಿದ್ದರು.

ಜಾಸ್ಯೆರ್ ಮಹಾರಾಣಿಯವರನ್ನು ವಿಕ್ಟೋರಿಯಾ ರಾಣಿಯೊಡನೆ ಹೋಲಿಸಿ ಶ್ಲಾಘಿಸುವ ಓರ್ವ ಯುರೋಪಿಯನ್ ವೀಕ್ಷಕನ ಹೇಳಿಕೆಯನ್ನೂ ದಾಖಲಿಸಿದ್ದಾರೆ. "ನನ್ನ ಪ್ರಕಾರ, ಮೈಸೂರಿನ ಮಹಾರಾಣಿಯವರಿಗಿಂತಲೂ ಹೆಚ್ಚಿನ ಉದಾತ್ತತೆ ಹೊಂದಿರುವ ಯಾವ ಮಹಿಳೆಯೂ ಭಾರತದಲ್ಲಿಲ್ಲ. ಅವರ ಹೆಸರು ಭಾರತದ ಅತ್ಯಂತ ಗೌರವಾನ್ವಿತ ಮತ್ತು ವಿಶಿಷ್ಟ ಮಹಿಳೆಯಾಗಿ ಸದಾಕಾಲವೂ ಸ್ಮರಣೀಯವಾಗಿರಲಿದೆ" ಎಂದಿದ್ದಾರೆ. ಅವರು ತನ್ನ ಮಕ್ಕಳನ್ನು ಮತ್ತು ಮೈಸೂರು ರಾಜ್ಯದ ಜನತೆಯನ್ನು ಸಮಾನವಾಗಿ ಕಂಡ ಉದಾತ್ತ ರಾಣಿ ಎಂದು ಶ್ಲಾಘಿಸಲ್ಪಟ್ಟಿದ್ದಾರೆ. ಅವರ ರೀಜೆನ್ಸಿ ಅವಧಿಯ ಮುಕ್ತಾಯದ ವೇಳೆಗೆ, ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಕರ್ಜ಼ನ್ ಮಹಾರಾಣಿಯವರನ್ನು ಗೌರವಿಸಿ, ಅವರು ಸಾರ್ವಜನಿಕ ಮತ್ತು ವೈಯಕ್ತಿಕ ಜೀವನಗಳೆರಡರಲ್ಲೂ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ. 

ಮಹಾರಾಣಿಯವರಿಂದ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದ, ನ್ಯಾಯಾಧೀಶರಾಗಿದ್ದ ಟಿ ಆರ್ ಎ ತಂಬೂ ಚೆಟ್ಟಿಯವರು ಮಹಾರಾಣಿಯವರನ್ನು ಬುದ್ಧಿವಂತೆ, ಮಾಹಿತಿಯುಕ್ತ, ಮತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ನಾಯಕಿ ಎಂದು ಶ್ಲಾಘಿಸಿದ್ದಾರೆ. "ನನ್ನ ಬಹಳಷ್ಟು ಅಧಿಕೃತ ಭೇಟಿಗಳ ಸಂದರ್ಭದಲ್ಲಿ, ನಾನು ನಿರಂತರವಾಗಿ ಮಹಾರಾಣಿಯವರ ವ್ಯಾವಹಾರಿಕ ಕುಶಾಗ್ರಮತಿ, ಅಪಾರ ಜ್ಞಾನ, ಮತ್ತು ಶಾಂತ ವರ್ತನೆಗಳಿಂದ ಪ್ರಭಾವಿತನಾಗಿದ್ದೇನೆ. ಅವರು ತಾಳ್ಮೆಯಿಂದ ಮಾತುಗಳನ್ನು ಕೇಳಿಸಿಕೊಂಡು, ತೀಕ್ಷ್ಣ ಮತ್ತು ನಿರ್ಣಾಯಕವಾಗಿ ನಡೆದುಕೊಳ್ಳುತ್ತಿದ್ದರು. ಯಾವುದೇ ವಿಚಾರವಾಗಿದ್ದರೂ, ಅವರು ಅದನ್ನು ಕ್ಷಿಪ್ರವಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ಮಾತುಕತೆಗಳು ಸೂಕ್ತ ನಿರ್ಣಯದಲ್ಲಿ ಅಂತ್ಯಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಅವರ ಒಳನೋಟವುಳ್ಳ ಸಲಹೆಗಳು ನನ್ನನ್ನು ಹಲವಾರು ಬಾರಿ ಆಶ್ಚರ್ಯಚಕಿತನಾಗಿಸಿದೆ.

ಹಲವಾರು ಸಮಸ್ಯೆಗಳಿಗೆ ಮಹಾರಾಣಿ ಸ್ಪಷ್ಟ ಪರಿಹಾರಗಳನ್ನು ಒದಗಿಸುತ್ತಿದ್ದರು. ಅವರು ಸಾಮ್ರಾಜ್ಯದ ಅಭಿವೃದ್ಧಿ ಮತ್ತು ಕ್ಷೇಮಕ್ಕಾಗಿ ಬದ್ಧರಾಗಿದ್ದರು. ಪ್ರತಿಯೊಂದು ಬಾರಿ ಅವರನ್ನು ಭೇಟಿಯಾದ ಬಳಿಕವೂ, ನಮ್ಮಲ್ಲಿ ಅವರ ಕುರಿತು ಅಪಾರ ನಿಷ್ಠೆ, ಅಭಿಮಾನ ಮತ್ತು ಅವರ ನೈತಿಕ ಮಾನದಂಡಗಳು ಮತ್ತು ಬುದ್ಧಿಮತ್ತೆಯ ಕುರಿತು ಅಪಾರ ಗೌರವದ ಭಾವಗಳು ಮೂಡುತ್ತಿದ್ದವು" ಎಂದು ಚೆಟ್ಟಿ ದಾಖಲಿಸಿದ್ದಾರೆ. ರಿಜೆನ್ಸಿ ಅವಧಿ ಆಗಸ್ಟ್ 8, 1902ರಂದು ಪೂರ್ಣಗೊಂಡಿತು. ಆಡಳಿತದ ಸಂಪೂರ್ಣ ಜವಾಬ್ದಾರಿ ಅಧಿಕೃತವಾಗಿ ಯುವಕರಾಗಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹಸ್ತಾಂತರಗೊಂಡಿತು. ಈ ಸಂದರ್ಭದಲ್ಲಿ, ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಕುರಿತ ಐತಿಹಾಸಿಕ ದಾಖಲೆಗಳು ಕಡಿಮೆಯಾಗುತ್ತಾ ಬರುತ್ತಾವಾದರೂ, ಅವರು ಮೈಸೂರು ಸಂಸ್ಥಾನದ ಮೇಲೆ ಅಪಾರ ಪ್ರಭಾವವನ್ನು ಹೊಂದಿದ್ದರು. 

ಅವರ ಪುತ್ರ, ಮಹಾರಾಜ ಆಡಳಿತದ ವಿಚಾರದಲ್ಲಿ ತಾಯಿಯ ಸಲಹೆಯನ್ನು ನಿರಂತರವಾಗಿ ಕೇಳುತ್ತಿದ್ದರು. ಮಹಾರಾಣಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ವಿರಳವಾಗಿತ್ತು. ಗಮನಾರ್ಹವಾಗಿ, 1917ರಲ್ಲಿ ಅವರು ಮಹಾರಾಣಿ ಮಹಿಳಾ ಕಾಲೇಜನ್ನು ಉದ್ಘಾಟಿಸಿದ್ದರು. ಈ ಸಂಸ್ಥೆ ವಿದ್ಯಾರ್ಥಿನಿಯರಿಗೆ ತಲೆ ಮತ್ತು ವಿಜ್ಞಾನ ಶಿಕ್ಷಣ ಒದಗಿಸುವ ಪ್ರಮುಖ ಕಾಲೇಜ್ ಆಗಿತ್ತು. ಕೆಂಪನಂಜಮ್ಮಣ್ಣಿ ಅವರು ಜುಲೈ 7, 1934ರಂದು ನಿಧನ ಹೊಂದಿದರು. ಅವರ ಸಾವು ಒಂದು ಪರಂಪರೆಯ ಕೊನೆಯಾಗಿತ್ತು. ಅವರ ನಿಧನದ ಮುಂದಿನ ವರ್ಷ, ಅಂದರೆ 1935ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಬಳಿ ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆಗೊಂಡಿತು. ಮುಂದಿನ ವರ್ಷಗಳಲ್ಲಿ ಹಲವಾರು ಸಾರ್ವಜನಿಕ ಯೋಜನೆಗಳಿಗೆ ವಾಣಿ ವಿಲಾಸ ಎಂದು ಹೆಸರಿಟ್ಟು, ಅವರನ್ನು ಸ್ಮರಿಸಲಾಯಿತು.

ಮಗು ಈಗೇಕೆ ಉದ್ಯೋಗವೇ ಓಕೆ ಅನ್ನೋ ಹೆಂಗಳೆಯರಿಗೆ ರಾಮ್‌ಚರಣ್ ಪತ್ನಿ ಕಿವಿಮಾತು

2024ರ ಮಹಿಳಾ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ, ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಮಹಿಳಾ ಶಿಕ್ಷಣದ ಕುರಿತು ಅವರ ನಿರಂತರ ಬೆಂಬಲ, ಮಹಾರಾಣಿ ಮಹಿಳಾ ಕಾಲೇಜಿನ ಸ್ಥಾಪನೆ, ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣದ ಹಿಂದೆ ಅವರು ವಹಿಸಿದ್ದ ಪಾತ್ರ ಮಹಿಳೆಯರ ಏಳಿಗೆಯ ಕುರಿತು ಅವರು ಹೊಂದಿದ್ದ ದೃಢಸಂಕಲ್ಪವನ್ನು ಪ್ರದರ್ಶಿಸುತ್ತದೆ. ಇತಿಹಾಸ ಹಲವು ಸಂದರ್ಭಗಳಲ್ಲಿ ಅವರ ಕೊಡುಗೆಗಳನ್ನು ಸ್ಮರಿಸದಿದ್ದರೂ, ಮಹಾರಾಣಿಯವರು ಮಹಿಳಾ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಸಮಾಜ ಮರೆಯಲು ಸಾಧ್ಯವಿಲ್ಲ. ಈ ಮಹಿಳಾ ದಿನದಂದು ನಾವು ಮಹಾರಾಣಿಯವರ ದೂರ ದೃಷ್ಟಿ, ಮಹಿಳಾ ಸಬಲೀಕರಣದ ಹಿಂದೆ ಅವರ ಪ್ರಯತ್ನಗಳು, ಎಲ್ಲ ಮಹಿಳೆಯರಿಗೂ ಶಿಕ್ಷಣ, ಆರೋಗ್ಯ, ಮತ್ತು ಉತ್ತಮ ಸಮಾಜ ನಿರ್ಮಿಸಲು ಅವಕಾಶಗಳು ಲಭಿಸುವಂತಾಗಬೇಕು ಎಂಬ ಅವರ ಅಭಿಪ್ರಾಯವನ್ನು ಸ್ಮರಿಸೋಣ.

click me!