
ಬದಲಾಗಬೇಕಿರುವುದು ಮನೋಸ್ಥಿತಿಯೋ, ಮನೆಸ್ಥಿತಿಯೋ?
ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಒಂದು ಮಾತನ್ನ ಹೇಳ್ತಾರೆ ಬ್ರಿಟಿಷರಿಂದ ಪಡೆದಂತಹ ಸ್ವಾತಂತ್ರ್ಯ ನಿಜವಾದ ಸ್ವಾತಂತ್ರ್ಯ ಅಲ್ಲ. ಯಾವಾಗಾ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ ಎಂದರೆ ಒಂದು ಹೆಣ್ಣು ಮದ್ಯ ರಾತ್ರಿಯಲ್ಲಿ ಒಂಟಿಯಾಗಿ ಬಂದು ಸುರಕ್ಷತೆಯಿಂದ ಮನೆ ಸೇರುತ್ತಾಳೆ ಆಗ ಈ ಸಮಾಜ ನಿಜವಾಗಿಯೂ ಸ್ವಾತಂತ್ರ್ಯ ಹೊಂದುತ್ತದೆ ಎಂದು. ಹಾಗೆ ನೋಡಿದರೆ ಇಂದಿನ ಪ್ರಸ್ತುತ ಸಮಯದಲ್ಲಿ ಒಂದು ಹೆಣ್ಣು ರಾತ್ರಿಯ ಸಮಯದಲ್ಲಿ ಅಲ್ಲ ಹಗಲಿನ ಸಮಯದಲ್ಲೇ ಒಬ್ಬಂಟಿಯಾಗಿ ಓಡಾಡುವುದಕ್ಕೆ ಭಯಪಡುವಂತಹ ಸನ್ನಿವೇಶ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗುತ್ತಿದೆ. ಯಾಕೆಂದರೆ ಪ್ರತಿನಿತ್ಯ ಪತ್ರಿಕೆಗಳಗಲ್ಲಿ ಅಥವಾ ವಾಹಿನಿಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಪ್ರಕರಣಗಳು ನೋಡುತ್ತಲೇ ಇರುತ್ತೇವೆ. ವರ್ಷಕ್ಕೆ ದೌರ್ಜನ್ಯಕ್ಕೆ ಒಳಗಾದವರ ಪಟ್ಟಿಯನ್ನು ತೆಗೆದು ನೋಡಿದರೆ ಆ ಸಂಖ್ಯೆ ಲಕ್ಷಕ್ಕೆ ಮುಟ್ಟಿರುತ್ತದೆ. ಪ್ರತಿಬಾರಿಯೂ ಯಾವುದೋ ಒಂದು ಪ್ರಕರಣ ಆದಾಗ ರೋಡಿಗೆ ಇಳಿದು ಪ್ರತಿಭಟನೆ ಮಾಡಿ, ಹೊಸ ಹೊಸ ಕಾನೂನುಗಳನ್ನ ತಂದು ಮುಂದೆ ಈ ರೀತಿಯಾದಂತಹ ಘಟನೆಗಳು ಆಗದಂತೆ ನಡೆದುಕೊಳ್ಳುತ್ತೇವೆ ಎಂಬ ಆಶ್ವಾಸನೆಗಳು ಕೇವಲ ಮಾತು ಹಾಗೂ ಹಾಳೆಗಳಲ್ಲೇ ಉಳಿದುಹೊಗುವ ಕಾನೂನುಗಳಿಗೆ ಮಾತ್ರ ಸೀಮಿತವಾಗಿಬಿಡುತ್ತವೆ.
2023ರಲ್ಲಿ ದೈಹಿಕ ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ 199,954 2024 ರಲ್ಲಿ 214,113 ಅಂದರೆ ಸುಮಾರು 7% ನಷ್ಟು ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ಹೆಚ್ಚಾಗಿದ್ದು ಕಾನೂನು ವ್ಯವಸ್ಥೆ ಕೈ ಕಟ್ಟಿ ಕೂತಿದೆಯಾ ಎಂಬ ಪ್ರಶ್ನೆ ಉದ್ಬವವಾಗುತ್ತದೆ. 2023 ರಿಂದ 2024ಕ್ಕೆ ಒಂದೇ ವರ್ಷದಲ್ಲಿ 3,054 ರೇಪ್ ಕೇಸ್‌ಗಳು ದಾಖಲಾಗಿವೆ. ತಮಗಾದ ದೌರ್ಜನ್ಯವನ್ನ ತೋಡಿಕೊಳ್ಳುವವರು ಒಂದು ಕಡೆಯಾದರೆ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಮತ್ತು ಸಮಾಜವನ್ನು ಎದುರಿಸುವುದಕ್ಕೆ ಆಗದೆ ತಮಗಾದ ಅನ್ಯಾಯವನ್ನು ಎಲೆಮರೆಯಲ್ಲಿಯೇ ಮುಚ್ಚಿ ಹಾಕಿಕೊಳ್ಳುವವರು ಒಂದು ಕಡೆ ಇದ್ದಾರೆ. ವಯಸ್ಸಿನ ಮಿತಿ ಸಹ ಕಾಮುಕರಿಗೆ ಇಲ್ಲದಂತಾಗಿದೆ ಹೆಣ್ಣಿನ ಮೇಲೆ ಎರೆಗುತ್ತಿದ್ದಾರೆ ಸಮಾಜ ಹೆಣ್ಣಿನ ವಿಷಯದಲ್ಲಿ ಯಾಕೆ ಈ ರೀತಿಯಾದಂತಹ ದುರ್ವರ್ತನೆ ತೋರುತ್ತಿದೆ. ಹೆಣ್ಣು ಮಕ್ಕಳಿಗಾಗಿ ಇಷ್ಟೇಲ್ಲಾ ಕಾನೂನು ಕಟ್ಟಲೆಗಳಿವೆ. ಇಷ್ಟೆಲ್ಲಾ ಕಾನೂನುಗಳು ಇದ್ದ ಮೇಲೆ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕೆ ಹೊರತು ಹೆಚ್ಚಾಗುತ್ತರುವುದಕ್ಕೆ ಕಾರಣವಾದರೂ ಏನು? ಇಲ್ಲಿ ಬದಲಾಗಬೇಕಿರುವುದು ಯಾರು?
ಹೆಣ್ಣು ಮಕ್ಕಳ ರಕ್ಷಣೆಗೆ ಎಷ್ಟೇಲ್ಲಾ ಕಾನೂನು ಕಟ್ಟಳೆಗಳಿವೆ. ಆದರೂ ಸಹ ಸಮಾಜದಲ್ಲಿ ಈ ರೀತಿಯಾದಂತಹ ದೌರ್ಜನ್ಯಗಳು ನಡೆಯುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಕಾಡದೇ ಇರಲಾರದು. ಇಲ್ಲಿ ಮೂಲಭೂತವಾಗಿ ಬದಲಾಗಬೇಕಿರುವುದು ಕಾನೂನಿಗಿಂತ ವ್ಯಕ್ತಿಯ ಮನಸ್ಥಿತಿ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ದೇವರು ಅನ್ನೋ ನಾಣ್ಣುಡಿ ನಮ್ಮಲ್ಲಿದೆ ಯಾವುದೇ ಒಬ್ಬ ವ್ಯಕ್ತಿಗೆ ಮನೆಯ ಮೊದಲ ಪಾಠಶಾಲೆಯಾಗಿರುತ್ತದೆ ಇತ್ತೀಚಿನ ದಿನಗಳಲ್ಲಿ ಮನೆಯಿಂದ ಹೇಳಿಕೊಡುವಂತಹ ಮೌಲ್ಯಗಳು ಒಳ್ಳೆಯ ವಿಚಾರಗಳನ್ನು ಮಕ್ಕಳಲ್ಲಿ ತುಂಬುವಂತಹ ಕ್ರಮ ನಮ್ಮ ಆಧುನಿಕ ಬದುಕಿನಲ್ಲಿ ಕಡಿಮೆಯಾಗುತ್ತಿದೆ. ಯಾವುದೇ ಒಬ್ಬ ವ್ಯಕ್ತಿಯ ವಿಚಾರಗಳು ಆಚಾರಗಳ ಮೂಲ ಆತನ ಮನೆ ಮನೆಯಲ್ಲಿ ಉತ್ತಮ ವಾತಾವರಣವಿದ್ದರೆ ಸಮಾಜದಲ್ಲಿಯೂ ಅವನೊಬ್ಬ ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತಾನೆ. ಈಗೀಗ ಹಣ ಖ್ಯಾತಿ ಮನೋರಂಜನೆಯ ಹಿಂದೆ ಬಿದ್ದು ಮನುಷ್ಯ ಮೌಲ್ಯಗಳನ್ನು ಮರೆಯುತ್ತಿದ್ದಾನೆ ಒಂದು ಮರಕ್ಕೆ ಹೇಗೆ ಬೇರೆ ಮೂಲವಾಗಿರುತ್ತದೆಯೋ ಆ ಗಟ್ಟಿಯಾದ ಬೇರಿಂದಲೇ ಅದು ಅಷ್ಟು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿರುತ್ತದೆ ಹಾಗೆ ವ್ಯಕ್ತಿ ಆಚಾರ ವಿಚಾರಗಳು ಆ ವ್ಯಕ್ತಿಯ ವ್ಯಕ್ತಿತ್ವ ಮೌಲ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳಿಗೆ ಮೌಲ್ಯಗಳು ಹೆಣ್ಣಿಗೆ ಕೊಡುವಂತಹ ಗೌರವ ಒಳ್ಳೆಯ ವಿಚಾರಗಳನ್ನು ಹೇಳಿ ಬೆಳೆಸಿದರೆ ಮುಂದಿನ ದಿನಗಳಲ್ಲಿ ಆತ ಒಬ್ಬ ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಬಹುದು ಅದರಿಂದಾದರೂ ಸಮಾಜದಲ್ಲಿ ಹೆಣ್ಣು ಸುರಕ್ಷಿತವಾಗಿ ಬದುಕಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.