
ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾಳೆ. ಪುರುಷರ ಜೊತೆ ಹೆಜ್ಜೆ ಹಾಕ್ತಿದ್ದಾಳೆ. ಮಹಿಳೆ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡ್ತಿದ್ದರೂ ಆಕೆ ಮೇಲಾಗ್ತಿರುವ ಶೋಷಣೆ ಕಡಿಮೆ ಆಗಿಲ್ಲ. ಮಹಿಳೆ ಮನೆಯಲ್ಲಿ, ಬಸ್ ನಲ್ಲಿ, ಲಿಫ್ಟ್ ನಲ್ಲಿ, ರಸ್ತೆಯಲ್ಲಿ ಹೀಗೆ ಎಲ್ಲ ಕಡೆ ದೌರ್ಜನ್ಯಕ್ಕೊಳಗಾಗ್ತಿದ್ದಾಳೆ. ಆಕೆಯನ್ನು ಕಾಮದ ದೃಷ್ಟಿಯಲ್ಲಿ ನೋಡುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. ಒಂಟಿಯಾಗಿ ಹಗಲಿನಲ್ಲಿ, ನಿರ್ಜನ ಪ್ರದೇಶದಲ್ಲಿ ಹೋಗುವುದೇ ಕಷ್ಟವಾಗಿದೆ. ಇನ್ನು ಮಧ್ಯರಾತ್ರಿ ಒಂಟಿ ಹೆಣ್ಣು ರಸ್ತೆಗಿಳಿದ್ರೆ ಸುರಕ್ಷಿತವಾಗಿ ವಾಪಸ್ ಬರೋದು ಸುಲಭವಲ್ಲ. ಮಹಿಳೆ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳು ಪಾಲಕರ ನಿದ್ರೆಗೆಡಿಸಿದೆ. ಇದೇ ಕಾರಣಕ್ಕೆ ಅನೇಕ ಪಾಲಕರು, ಹೆಣ್ಮಕ್ಕಳನ್ನು ಹೊರಗೆ ಬಿಡಲು ಹೆದರುತ್ತಿದ್ದಾರೆ. ರಾತ್ರಿ ಹೆಣ್ಮಕ್ಕಳನ್ನು ಮನೆಯಿಂದ ಹೊರಗೆ ಹೋಗದಂತೆ ತಡೆಯುತ್ತಾರೆ. ಆದ್ರೆ ಅನೇಕ ಮಹಿಳೆಯರಿಗೆ ರಾತ್ರಿ ಮನೆಯಿಂದ ಹೊರಗಿರುವುದು ಅನಿವಾರ್ಯವಾಗಿದೆ. ಕಚೇರಿ ಕೆಲಸ, ತರಬೇತಿ ಅಥವಾ ಬೇರೆ ಕೆಲಸಗಳಿಂದ ಆಕೆ ತಡರಾತ್ರಿ ಮನೆಗೆ ಬರಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ತನ್ನ ಸುರಕ್ಷತೆಯನ್ನು ತಾನೇ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದ್ರೆ ಪ್ರತಿ ದಿನ ಮನೆಯವರು ಆಕೆಗೆ ರಕ್ಷಣೆ ನೀಡಲು ಸಾಧ್ಯವಿಲ್ಲ. ಒಂಟಿಯಾಗಿ ಓಡಾಡುವ ಮಹಿಳೆಯರು ಕೆಲ ವಿಷ್ಯಗಳನ್ನು ಸದಾ ತಿಳಿದಿರಬೇಕು.
ಲಿಫ್ಟ್ (Lift) ನಲ್ಲಿ ನಿಮ್ಮ ರಕ್ಷಣೆ (Protection) ಹೀಗೆ ಮಾಡ್ಕೊಳ್ಳಿ : ಲಿಫ್ಟ್ ನಲ್ಲಿ ಅನೇಕ ಬಾರಿ ಅಪರಿಚಿತ ವ್ಯಕ್ತಿ ಜೊತೆ ಹೋಗುವ ಅನಿವಾರ್ಯತೆ ಎದುರಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಹೆದರಬಾರದು. ಪ್ರತಿ ಮಹಡಿಯ ಬಟನ್ ಪ್ರೆಸ್ ಮಾಡಿರಬೇಕು. ಆಗ ಪ್ರತಿಯೊಂದು ಮಹಡಿಗೆ ಬಂದಾಗ್ಲೂ ಲಿಫ್ಟ್ ಓಪನ್ ಆಗುತ್ತದೆ. ಅಪರಿಚಿತ ವ್ಯಕ್ತಿಗೆ ಏನು ಮಾಡಲೂ ಸಾಧ್ಯವಾಗುವುದಿಲ್ಲ. ಒಂದ್ವೇಳೆ ಪರಿಸ್ಥಿತಿ ಸರಿಯಿಲ್ಲ ಎನ್ನಿಸಿದ್ರೆ ಲಿಫ್ಟ್ ನಿಂದ ಹೊರ ಬರುವುದು ಒಳ್ಳೆಯದು. ಜನರಿರುವ ಮಹಡಿಯಲ್ಲಿ ಮಾತ್ರ ಇಳಿಯಬೇಕು ಎಂಬುದು ನೆನಪಿರಲಿ. ಸಾಧ್ಯವಾದ್ರೆ ಕುಟುಂಬಸ್ಥರ ಜೊತೆ ಮಾತನಾಡ್ತಾ ಲಿಫ್ಟ್ ನಲ್ಲಿ ನಿಮ್ಮ ಸುರಕ್ಷತೆ ನೋಡಿಕೊಳ್ಳಿ.
ಒಂಟಿಯಾಗಿ ಆಟೋ, ಕ್ಯಾಬ್ ಏರಿದ್ರೆ ಏನು ಮಾಡ್ಬೇಕು ಗೊತ್ತಾ? : ಮೊದಲೇ ಹೇಳಿದಂತೆ ಪ್ರತಿ ಬಾರಿ, ಎಲ್ಲ ಕಡೆ ನಿಮ್ಮೊಂದಿಗೆ ಇನ್ನೊಬ್ಬರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ನೀವು ಒಂಟಿಯಾಗಿ ತಿರುಗಾಡುವುದು ಅಗತ್ಯ. ಇಂಥ ಸಂದರ್ಭದಲ್ಲಿ ನೀವು ಆಟೋ ಏರುವ ಮುನ್ನ ಆಟೋ ನಂಬರನ್ನು ನಿಮ್ಮ ಆಪ್ತರಿಗೆ ಕಳುಹಿಸಬೇಕು. ಒಂದ್ವೇಳೆ ಫೋನ್ ಮೆಸ್ಸೇಜ್ ಹೋಗ್ತಿಲ್ಲ, ಕರೆ ಮಾಡಲು ಸಾಧ್ಯವಾಗ್ತಿಲ್ಲವೆಂದ್ರೂ ಕರೆ ಮಾಡ್ತಿರುವಂತೆ ನೀವು ನಾಟಕವಾಡಬೇಕು. ಆಗ ಆಟೋ ಚಾಲಕರು ತಪ್ಪು ಮಾಡಲು ಹೆದರುತ್ತಾರೆ.
FEMALE MASTURBATION : ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸೂಕ್ಷ್ಮ ವಿಷಯಗಳಿವು
ರಾತ್ರಿ ದಾರಿ ಬದಲಿಸಿದ್ರೆ ಏನು ಮಾಡ್ಬೇಕು ? : ರಾತ್ರಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕ ಯಾವ ರಸ್ತೆಯಲ್ಲಿ ಹೋಗ್ತಿದ್ದಾನೆ ಎಂಬುದನ್ನು ನೀವು ಗಮನಿಸಬೇಕು. ಆತ ನಿರ್ಜನ ಪ್ರದೇಶ ಅಥವಾ ತಪ್ಪು ದಾರಿಯಲ್ಲಿ ಪ್ರಯಾಣ ಶುರು ಮಾಡಿದ್ರೆ ಆಪ್ತರಿಗೆ ಕರೆ ಮಾಡಿ ಮಾಹಿತಿ ನೀಡಿ. ಅವರ ಜೊತೆ ಸಂಪರ್ಕದಲ್ಲಿರಿ. ನಿಮ್ಮ ಪರ್ಸ್ ದಾರ ಅಥವ ದುಪ್ಪಟ್ಟ ಬಳಸಿ ಆತನ ಕುತ್ತಿಗೆಯನ್ನು ಹಿಂದೆ ಎಳೆಯಿರಿ. ನಿಮ್ಮ ಹಠಾತ್ ಕೆಲಸದಿಂದ ದಂಗಾಗುವ ಚಾಲಕ, ವಾಹನ ನಿಲ್ಲಿಸುತ್ತಾನೆ. ಆತನ ಡ್ರೆಸ್ ಕಾಲರ್ ಹಿಡಿದು ಕೂಡ ಎಳೆಯಬಹುದು.
ಹಿಂದಿದೆ ಬರ್ತಿದ್ದರೆ ಹೀಗೆ ಮಾಡಿ : ಅನೇಕ ಬಾರಿ ಒಂಟಿಯಾಗಿ, ನಿರ್ಜನ ಪ್ರದೇಶದಲ್ಲಿ ನಡೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಅಪರಿಚಿತರು ನಿಮ್ಮ ಬೆನ್ನು ಹತ್ತಬಹುದು. ಒಂದ್ವೇಳೆ ಹಾಗೆ ಆದಲ್ಲಿ, ಹತ್ತಿರದಲ್ಲಿ ಮನೆ ಅಥವಾ ಅಂಗಡಿಯಿದ್ರೆ ಅವರ ಸಹಾಯಕೇಳಿ. ಬೇರೆ ವ್ಯಕ್ತಿಗಳು ನಡೆದು ಹೋಗ್ತಿದ್ದರೆ ಅವರ ಜೊತೆ ಮಾತನಾಡ್ತಾ ಅವರ ಸಹಾಯ ಕೇಳಬಹುದು.
ಮನೆಯಲ್ಲೇ ದಾಳಿ ನಡೆದ್ರೆ.. : ಮನೆಯಲ್ಲಿ ಒಂಟಿಯಾಗಿದ್ದಾಗ ಮನೆಗೆ ದುಷ್ಟರು ನುಗ್ಗಿದ್ರೆ ನೀವು ಮೊದಲು ಅಡುಗೆ ಮನೆಗೆ ಹೋಗಿ. ಕಾಳು ಮೆಣಸಿನ ಪುಡಿ ಅಥವಾ ಅರಿಶಿನ ಪುಡಿ ಅಥವಾ ಮೆಣಸಿನ ಪುಡಿ ತೆಗೆದುಕೊಂಡು ವ್ಯಕ್ತಿ ಮುಖಕ್ಕೆ ಹಾಕಿ. ಪಾತ್ರೆಗಳನ್ನು ಆತನ ಮೇಲೆ ಎಸೆದು ಆತನಿಂದ ರಕ್ಷಣೆ ಪಡೆಯುವ ಪ್ರಯತ್ನ ನಡೆಸಬಹುದು. ಪಾತ್ರೆ ಶಬ್ಧ ಕೇಳಿ ನೆರೆಹೊರೆಯವರು ನಿಮ್ಮ ಸಹಾಯಕ್ಕೆ ಬರಬಹುದು.
Kitchen Hacks: ಪಾತ್ರೆ ಕಲೆ ತೆಗೆಯೋಕೆ ಇಲ್ಲಿದೆ ಟಿಪ್ಸ್
ಮೊಬೈಲ್ ಅಪ್ಲಿಕೇಷನ್ : ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಕೆಲ ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ. ಅದನ್ನು ನಿಮ್ಮ ಮೊಬೈಲ್ ಫೋನ್ ನಲ್ಲಿ ಇಟ್ಟುಕೊಂಡು ನೀವು ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಸಹಾಯ ಕೇಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.