ನವದೆಹಲಿ: ಸಾಮಾನ್ಯವಾಗಿ ಸಾಹಸ ಕ್ರೀಡೆಗಳನ್ನು ಆಡುವಾಗ ಅದಕ್ಕೆ ತಕ್ಕನಾದ ಧಿರಿಸನ್ನೇ ಬಹುತೇಕರು ಧರಿಸುತ್ತಾರೆ. ದೇಶ ಬಿಟ್ಟು ವಿದೇಶಕ್ಕೆ ಹೋದ ಅನೇಕರು ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ತಮ್ಮ ವೇಷ ಭೂಷಣವನ್ನು ಬದಲಿಸಿಕೊಳ್ಳುತ್ತಾರೆ. ವೆನ್ ಇನ್ ರೋಮ್, ಡು ಎಸ್ ದ ರೋಮನ್ ಡು ಎಂಬುದು ಅಂಗ್ಲ ಭಾಷೆಯಲ್ಲಿ ತುಂಬಾ ಜನಪ್ರಿಯವಾಗಿರುವ ಮಾತು. ಇದರ ಅರ್ಥ ನೀವು ನಿಮ್ಮದಲ್ಲದ ಬೇರೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜೀವನಶೈಲಿಯನ್ನು ವೇಷಭೂಷಣವನ್ನು ಅಳವಡಿಸಿಕೊಳ್ಳಿ ಎಂಬುದು ಇದರ ಅರ್ಥ. ಅದರಂತೆ ತಮ್ಮದಲ್ಲದ ಸ್ಥಳಕ್ಕೆ ಪ್ರವಾಸಿ ತಾಣಗಳಿಗೆ ಹೋಗುವ ವೇಳೆ ತಮ್ಮ ವೇಷ ಭೂಷಣಗಳನ್ನು ಜನ ಬದಲಿಸಿಕೊಳ್ಳುತ್ತಾರೆ. ಜೀವನಶೈಲಿಯನ್ನು ಬದಲಿಸಿಕೊಳ್ಳುತ್ತಾರೆ. ಇದರ ಉದ್ದೇಶ ಆ ಸಂಸ್ಕೃತಿಯೊಂದಿಗೆ ಬೆರೆಯುವುದರ ಜೊತೆ ಎಂಜಾಯ್ ಮಾಡುವುದು ಹಾಗೂ ವಿಭಿನ್ನವಾದ ಜೀವನಶೈಲಿಯನ್ನು ಆನಂದಿಸುವುದಾಗಿದೆ.
ಅದಾಗ್ಯೂ ಕೆಲವರು ಎಲ್ಲೇ ಹೋದರೂ ನಮ್ಮತನ ನಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡಬಾರದು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ವರ್ಗಾಯಿಸಬೇಕು. ನಮ್ಮತನವನ್ನು ಉಳಿಸಿಕೊಂಡು ಬದುಕಬೇಕು ಎಂದು ಬಯಸುತ್ತಾರೆ. ಇದಕ್ಕೆ ತಕ್ಕಂತೆ ಕೆಲವರು ತಾವು ಎಲ್ಲಿಗೆ ಹೋದರೂ ತಮ್ಮ ಸಂಸ್ಕೃತಿ ಸಂಪ್ರದಾಯ (Tradition) ವೇಷಭೂಷಣಗಳನ್ನು ಬದಲಿಸದೇ ತಮ್ಮತನವನ್ನು ಕಾಯ್ದುಕೊಳ್ಳುತ್ತಾರೆ. ಗುಂಪಿನೊಂದಿಗೆ ಬೆರೆತು ಹೋಗುವ ಬದಲು ಗುಂಪಿನಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಸಾಹಸ ಕ್ರೀಡೆಯಾದ (Adventures Sports) ಸ್ಕೀಯಿಂಗ್ ಆಡುವಾಗಲೂ ಸೀರೆ ಧರಿಸಿದ್ದಾರೆ, ಮಹಿಳೆ ಭಾರತೀಯ ಧಿರಿಸು ಧರಿಸಿ ಬಿಂದಾಸ್ ಆಗಿ ಸ್ಕೀಯಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಲೇ ನಾರಿ..ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಒಡಿದ ಒಡಿಯಾ ಮಹಿಳೆ!
ಇತ್ತೀಚಿನ ಜನರೇಷನ್ ಸಾರಿ ಅಂದ್ರೆ ಮಾರು ದೂರ ಓಡುತ್ತಾರೆ. ಏಕೆಂದರೆ ಸಾರಿಯನ್ನು ಉಟ್ಟ ನಂತರ ನಿರ್ವಹಿಸುವುದು ಅನುಭವ ಇಲ್ಲದಿದ್ದರೆ ಸ್ವಲ್ಪ ಕಷ್ಟದ ಕೆಲಸ. ಸಾರಿ ಧರಿಸಿ ಅನುಭವ ಇಲ್ಲದೇ ಮೊದಲ ಬಾರಿ ಅಥವಾ ಅಪರೂಪಕ್ಕೆ ಸೀರೆಯುಟ್ಟರೇ ಎಲ್ಲಿ ಉಟ್ಟ ಸೀರೆಯನ್ನೇ ಮೆಟ್ಟಿ ಬಿದ್ದು ಬಿಡುತ್ತೇವೋ ಎಂದು ಅನೇಕರು ಭಯಪಡುತ್ತಾರೆ. ಹೀಗಿರುವಾಗ ಎನ್‌ಆರ್‌ಐ ಒಬ್ಬರು ಸೀರೆಯುಟ್ಟು ಬಿಂದಾಸ್ ಆಗಿ ಸಾಹಸ ಕ್ರೀಡೆಯಾದ ಸ್ಕೀಯಿಂಗ್ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ದಿವ್ಯ ಮಯ್ಯ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಅವರು ಬಿಂದಾಸ್ ಆಗಿ ಸ್ಕೀಯಿಂಗ್ (skiing) ಮಾಡುವುದನ್ನು ಕಾಣಬಹುದಾಗಿದೆ. ವಿಡಿಯೋ ಶೇರ್ ಮಾಡಿದ ಅವರು ಹೀಗೆ ಬರೆದುಕೊಂಡಿದ್ದಾರೆ. "ಚಳಿಗಾಲವು ಮುಕ್ತಾಯವಾಗುತ್ತಿದ್ದಂತೆ, ಈ ಋತುವಿನಲ್ಲಿ ನನ್ನನ್ನು ಬೆಂಬಲಿಸಿದ ಮತ್ತು ನನ್ನನ್ನು ಹುರಿದುಂಬಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಲ್ಲದೆ, ನಾನು ಈ ರೀತಿಯ ಸ್ಕೀ ಮಾಡುವುದನ್ನು ನೋಡಲು ಬಯಸಿದ ವ್ಯಕ್ತಿಗಾಗಿ ಒಂದು ಚಪ್ಪಾಳೆ, ಇದು ನಿನಗಾಗಿ, ಸೀರೆಯಲ್ಲಿ ಕಂದು ಬಣ್ಣದ ಮಹಿಳೆಯನ್ನು ನೋಡುವುದು ಹೇಗೆ ಸ್ಪೂರ್ತಿದಾಯಕವಾಗಿದೆ ಎಂದು ನಿಮ್ಮಲ್ಲಿ ಬಹಳಷ್ಟು ಜನರು ನನಗೆ ಕೇಳಿದ್ದೀರಿ ಆದರೆ ಇದು ತುಂಬಾ ಸ್ಫೂರ್ತಿದಾಯಕವಾಗಿದೆ. ನಾನು ಕೂಡ. ಒಬ್ಬ ಕ್ರೀಡಾ ವ್ಯಕ್ತಿಯಾಗಿ ಮತ್ತು ಡಾನ್ಸರ್ ಆಗಿ, ಈ ಎರಡು ಪ್ರಪಂಚಗಳು ಒಟ್ಟಿಗೆ ಸೇರುತ್ತಿರುವಂತೆ ನನಗೆ ಭಾಸವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಸಾರಿಯಲ್ಲಿ ನಾರಿಯ ಕರಾಮತ್ತು..ಸೀರೆಯುಟ್ಟು ಗೋಲ್ ಹೊಡೆದ ಮಹಿಳಾಮಣಿಗಳು
ಈ ವಿಡಿಯೋವನ್ನು 2 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ದಿವ್ಯಾ ಮಯ್ಯ (Divya maiya) ಅವರು ಡಬ್ಬಲ್ ಶೇಡ್‌ನ ಕೇಸರಿ ಹಾಗೂ ನೇರಳೆ ಸಂಯೋಜನೆಯ ಕಚ್ಚೆ ಸೀರೆಯುಟ್ಟು, ತಲೆಗೆ ಹೆಲ್ಮೆಟ್ ಇಟ್ಟುಕೊಂಡು ಮಂಜಿನಲ್ಲಿ ಬಿಂದಾಸ್ ಆಗಿ ಸ್ಕೀಯಿಂಗ್ ಮಾಡುವುದನ್ನು ಇಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ದಿವ್ಯಾಗೆ ಭೇಷ್ ಎಂದಿದ್ದು, ಈ ದೃಶ್ಯವನ್ನು ಸೆರೆ ಹಿಡಿದವರಿಗೂ ಧನ್ಯವಾದ ತಿಳಿಸಿದ್ದಾರೆ. ಇದಕ್ಕೆ ಗೋ ಪ್ರೋ ಕ್ಯಾಮರಾದಲ್ಲಿ ಇದನ್ನು ತಾನೇ ಸ್ವತಃ ಸೆರೆ ಹಿಡಿದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.