
ತುರ್ತು ನಿಧಿ ಹೆಸರೇ ಸೂಚಿಸುವಂತೆ ತುರ್ತು ಸಂದರ್ಭದಲ್ಲಿ ಬಳಕೆಯಾಗುವ ಹಣ. ಕೊರೊನಾ ಸಮಯದಲ್ಲಿ ಅನೇಕರಿಗೆ ತುರ್ತು ನಿಧಿ ಮಹತ್ವದ ಅರಿವಾಗಿದೆ. ಹಠಾತ್ ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಇನ್ನಾವುದೋ ಸಮಸ್ಯೆ ಬಂದಾಗ ಹಣದ ಅಗತ್ಯವಿರುತ್ತದೆ. ನಮ್ಮ ಬಳಿ ಬಿಡಿಕಾಸೂ ಇಲ್ಲ ಎಂದಾಗ ಬೇರೆಯವರ ಬಳಿ ಕೈಚಾಚಬೇಕು. ಕೆಲವು ಸಂದರ್ಭದಲ್ಲಿ ನಾವು ಯಾರ ಬಳಿ ಬೇಡಿದ್ರೂ ನಮ್ಮ ಕೈಗೆ ಹಣ ಸಿಗೋದಿಲ್ಲ. ಪ್ರತಿಯೊಬ್ಬರೂ ತುರ್ತು ನಿಧಿ ಸಂಗ್ರಹಕ್ಕೆ ಮಹತ್ವ ನೀಡಬೇಕು. ಒಂದು ಸಣ್ಣ ಮೊತ್ತವಾದ್ರೂ ಪ್ರತಿ ತಿಂಗಳು ತುರ್ತು ನಿಧಿ ಸೇರಿದ್ರೆ ಬೇರೆಯವರ ಬಳಿ ಕೈಚಾಚುವುದಾಗ್ಲಿ ಇಲ್ಲವೆ ಆ ಸಮಯದಲ್ಲಿ ತೊಂದರೆಗೊಳಗಾಗುವ ಅಗತ್ಯವಾಗ್ಲಿ ಬರೋದಿಲ್ಲ. ಸಾಮಾನ್ಯವಾಗಿ ಮಹಿಳೆಯರು ಉಳಿತಾಯಕ್ಕೆ ಹೆಚ್ಚು ಆದ್ಯತೆ ನೀಡೋದಿಲ್ಲ. ಆದ್ರೆ ಈಗ ಉಳಿತಾಯ ಅತ್ಯಗತ್ಯ. ಪ್ರತಿಯೊಬ್ಬ ಯುವತಿ ಕೆಲಸ ಸಿಕ್ಕಿದ ಮೊದಲ ತಿಂಗಳಿನಿಂದಲೇ ತುರ್ತು ನಿಧಿಗಾಗಿ ಹಣ ಸಂಗ್ರಹಿಸಲು ಶುರು ಮಾಡ್ಬೇಕು.
ಒಂದು ಆರು ತಿಂಗಳು ನೀವು ಯಾವುದೇ ಸಮಸ್ಯೆ ಇಲ್ಲದೆ ಜೀವನ (Life) ಮಾಡುವಷ್ಟು ಹಣ ನಿಮ್ಮ ತುರ್ತು ನಿಧಿಯಲ್ಲಿ ಇರಬೇಕು ಎನ್ನುತ್ತಾರೆ ತಜ್ಞರು. ಮಾಸಿಕ (Monthly) ವೆಚ್ಚವನ್ನು ಕಡಿಮೆ ಮಾಡಿ, ಸಂಬಳದ ಒಂದು ಭಾಗವನ್ನು ತುರ್ತು ನಿಧಿಗೆ ಹಾಕ್ತಾ ಬಂದಲ್ಲಿ ನಿಮ್ಮ ತುರ್ತು (Emergency) ನಿಧಿಯಲ್ಲಿ ಹಣ ಸಂಗ್ರಹಿಸುವ ಗುರಿಯನ್ನು ನೀವು ಮುಟ್ಟಬಹುದು. ಆರು ಅಥವಾ ಕನಿಷ್ಠ ಮೂರು ತಿಂಗಳಿಗಾದ್ರೂ ಅಗತ್ಯವಿರುವ ಹಣ ಅದ್ರಲ್ಲಿರಬೇಕು.
ಮಹಿಳಾ ಹೂಡಿಕೆದಾರರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್ : ಹೂಡಿಕೆಗೂ ಮುನ್ನ ಈ 4 ಕೆಲಸ ಮಾಡಿ
ತುರ್ತು ನಿಧಿ ಮಹಿಳೆಯರಿಗೆ ಏಕೆ ಅಗತ್ಯ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ವಿಚ್ಛೇದನ ಪಡೆದಾಗ ಇಲ್ಲವೆ ಪತಿ ಸಾವನ್ನಪ್ಪಿದಾಗ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮಗೆ ಹೊಸ ಬದುಕಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹಣಕಾಸಿನ ಮುಗ್ಗಟ್ಟೂ ಎದುರಾದ್ರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಮಕ್ಕಳ ಭವಿಷ್ಯಕ್ಕೂ ಈ ಹಣ ಬಳಕೆಯಾಗುತ್ತದೆ.
ಅನೇಕ ಮಹಿಳೆಯರು ಮದುವೆಯಾದ್ಮೇಲೆ ಇಲ್ಲವೆ ಮಕ್ಕಳಾದ್ಮೇಲೆ ವೃತ್ತಿ ಜೀವನ ಕೈಬಿಡುತ್ತಾರೆ. ಮತ್ತೆ ಕೆಲ ಮಹಿಳೆಯರು ವಯಸ್ಸು ಹೆಚ್ಚಾಗ್ತಿದ್ದಂತೆ ಕೆಲಸ ಬಿಟ್ಟು ಮನೆಯಲ್ಲಿರಲು ಬಯಸ್ತಾರೆ. ಈಗಿನ ದಿನಗಳಲ್ಲಿ ವಯಸ್ಸಾದ ಮಹಿಳೆಯರಿಗೆ ಕೆಲಸ ಸಿಗೋದು ಕಷ್ಟವಾಗಿದೆ. ಎಐ ಹಾವಳಿ ಹೆಚ್ಚಾಗಿರುವ ಕಾರಣ ನಿರುದ್ಯೋಗ ಸೃಷ್ಟಿಯಾಗುವ ಸಾಧ್ಯತೆಯೂ ದಟ್ಟವಾಗಿದೆ. ಕೆಲಸ ಬಿಟ್ಟ ನಂತ್ರ ಕೈನಲ್ಲಿ ಹಣವಿಲ್ಲದೆ ಹೋದ್ರೆ ಕುಟುಂಬ ನಿರ್ವಹಣೆ ಕಷ್ಟವಾಗಬಹುದು. ಅದೇ ತುರ್ತು ಹಣ ನಿಮ್ಮ ಬಳಿ ಇದ್ರೆ ಇದು ಸಹಾಯಕ್ಕೆ ಬರುತ್ತದೆ.
ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯ ಸಮಸ್ಯೆ ಕಾಡುವುದು ಹೆಚ್ಚು. ಆರೋಗ್ಯ ವಿಮೆ ತೆಗೆದುಕೊಳ್ಳದ ಜನರಿಗೆ ತುರ್ತು ನಿಧಿ ಸಹಾಯಕ್ಕೆ ಬರುತ್ತದೆ. ರೋಗ, ಅಪಘಾತದಲ್ಲಿ ಈ ಹಣ ಬಳಕೆಯಾಗುತ್ತದೆ. ಅತಿವೃಷ್ಟಿ, ಭೂಕಂಪ ಅಥವಾ ಇನ್ನಾವುದೇ ರೀತಿಯ ಪ್ರಾಕೃತಿಕ ವಿಕೋಪದಿಂದ ಅಥವಾ ಇತರ ಕಾರಣಗಳಿಂದಾಗಿ ಮನೆ ಹಾಳಾಗಿದ್ದರೆ ಅದ್ರ ರಿಪೇರಿಗೆ ನೀವು ಈ ತುರ್ತು ಹಣವನ್ನು ಬಳಸಿಕೊಳ್ಳಬಹುದು.
ಬೀಜಿಂಗ್ ಹಿಂದಿಕ್ಕಿ ಏಷ್ಯಾದ ಬಿಲಿಯನೇರ್ಸ್ ರಾಜಧಾನಿಯಾದ ವಾಣಿಜ್ಯ ನಗರಿ ಮುಂಬೈ
ತುರ್ತು ನಿಧಿ ಸಂಗ್ರಹ ಹೇಗೆ? : ಕೆಲಸ ಸಿಕ್ಕ ಆರಂಭದ ತಿಂಗಳಿನಿಂದಲೇ ನೀವು ತುರ್ತು ನಿಧಿಗೆ ಹಣ ಹಾಕಲು ಶುರು ಮಾಡ್ಬೇಕು. ಆರಂಭದಲ್ಲಿ ಖರ್ಚು ಕಡಿಮೆ ಇರುವ ಕಾರಣ ನೀವು ಹೆಚ್ಚಿನ ಪ್ರಮಾಣದ ಹಣ ಸಂಗ್ರಹಿಸಬಹುದು. ಮೊದಲು ನಿಮ್ಮ ಖರ್ಚು, ವೆಚ್ಚದ ಪಟ್ಟಿ ಮಾಡಿ. ಸಂಬಳದಲ್ಲಿ ಎಷ್ಟು ಹಣ ಉಳಿಸಬಹುದು ಎಂಬುದನ್ನು ಪ್ಲಾನ್ ಮಾಡಿ.
ಯಾವುದೇ ಕಾರಣಕ್ಕೂ ತುರ್ತು ನಿಧಿಗೆ ಹೋಗುವ ಹಣವನ್ನು ತಪ್ಪಿಸಬೇಡಿ. ಅಗತ್ಯವಿದ್ದಲ್ಲಿ ಮಾತ್ರ ಆ ಹಣವನ್ನು ಬಳಕೆ ಮಾಡಿ. ಹೆಚ್ಚಿನ ಹಣ ನಿಮ್ಮ ಬಳಿ ಇದ್ದಲ್ಲಿ ಅನಗತ್ಯ ಖರ್ಚಾಗುತ್ತದೆ. ಹಾಗಾಗಿ ನೀವು ಆ ಹಣವನ್ನು ತುರ್ತು ನಿಧಿಗೆ ಹಾಕಲು ಪ್ರಯತ್ನಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.