
ನಟಿ ಐಶ್ವರ್ಯ ರೈ ಅವರನ್ನು ನೋಡಿದಾಗ ಮೊಟ್ಟಮೊದಲು ತಲೆಗೆ ಬರುವುದು ಏನು ಹೇಳಿ? ರೂಪವತಿ ಮತ್ತು ಬುದ್ಧಿವಂತೆ ಹೆಣ್ಣು ಅತ ತಾನೆ! ಸೌಂದರ್ಯವಿರುವ ಮಹಿಳೆಯ ತಲೆಯಲ್ಲಿ ಬುದ್ಧಿಯೆಂಬುದು ಇರೊಲ್ಲ ಎಂಬುದು ಸುಳ್ಳು ನಂಬಿಕೆ ಎಂಬುದಕ್ಕೆ ಸಾವಿರಾರು ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ. ಸೌಂದರ್ಯ ಅಡಗಿರುವುದು ನೋಡುಗನ ಕಣ್ಣಲ್ಲಿ ಎಂಬ ಮಾತಿದೆ. ಆತ್ಮವಿಶ್ವಾಸವುಳ್ಳ, ತಾನೆಲ್ಲಿ ಯಾವಾಗ ಹೇಗಿರಬೇಕು ಎಂಬುದರ ಸ್ಪಷ್ಟ ಅರಿವಿರುವ ಧೈರ್ಯವಂತ ಹೆಣ್ಣುಮಕ್ಕಳು ಎದುರು ನಿಂತರೆ ಅವರು ನಿಂತ ಭಂಗಿಯಲ್ಲೇ ಅದ್ಭುತ ಸೌಂದರ್ಯ ಕಾಣಬಹುದು. ಐಶ್ವರ್ಯ ರೈ ಅಂಥ ಒಬ್ಬಾಕೆ ಹೆಣ್ಣುಮಗಳು.
ಆಕೆಯ ಮಾತಿನಲ್ಲಿರುವ ಸ್ಪಷ್ಟತೆ, ವಿಷಯ ತಿಳುವಳಿಕೆಯಲ್ಲಿನ ಆಳ, ಮಾತನಾಡುವ ಭಾಷೆಯ ಮೇಲಿನ ಹಿಡಿತ, ಅದನ್ನು ಪ್ರಸ್ತುತ ಪಡಿಸುವ ರೀತಿ, ಆತ್ಮವಿಶ್ವಾಸದ ನಡೆ ಎಲ್ಲವೂ ಐಶ್‌ರನ್ನು ಆಕೆ ಇರುವುದಕ್ಕಿಂತ ಹೆಚ್ಚು ಸೌಂದರ್ಯವತಿಯನ್ನಾಗಿ ಮಾಡುತ್ತವೆ. ಆಕೆಯೆಡೆಗೆ ಸಮಾಜ ಮೆಚ್ಚುಗೆಯ ನೋಟ ಬೀರುತ್ತದೆ. ಹಾಗಾದರೆ ಒಬ್ಬ ಮಹಿಳೆಯಾಗಿ ನೀವು ನಿಮ್ಮ ವ್ಯಕ್ತಿತ್ವವನ್ನು ಇತರರಿಗೆ ಆಕರ್ಷಕವಾಗಿ ಕಾಣುವಂತೆ ಹೇಗೆ ಪ್ರಸ್ತುತಪಡಿಸಬಹುದು? ಐಶ್ ಈ ಬಗ್ಗೆ ಏನು ಹೇಳಿದ್ದಾರೆ ಕೇಳೋಣ.
1. ಭಾಷೆಯಲ್ಲಿ ಶುದ್ಧತೆ (Languague Purity): ಯಾವುದೇ ಭಾಷೆ ಮಾತಾಡುತ್ತಿರಬಹುದು ಆದರೆ, ಆ ಭಾಷೆಯ ಮೇಲಿನ ಹಿಡಿತ ಮುಖ್ಯ. ಅದು ಆಂಗ್ಲಭಾಷೆಯೇ ಆಗಬೇಕಿಲ್ಲ. ನೀವು ನಿತ್ಯ ವ್ಯವಹರಿಸುವ ಭಾಷೆಯ ಮೇಲಿನ ಪ್ರೀತಿ, ಹಾಗೂ ಅದರ ಮೇಲಿನ ಹಿಡಿತ ನಿಮ್ಮ ಆತ್ಮವಿಶಾವಸವನ್ನು ತೋರಿಸುತ್ತದೆ. ಭಾಷೆಯೊಂದನ್ನು ಬಳಸುವಾಗಿನ ಧೈರ್ಯ, ಕೆಟ್ಟ ಪದಗಳನ್ನು ಬಳಸದಿರುವುದು, ಪದಜೋಡಣೆ ಎಲ್ಲವೂ ನಿಮ್ಮನ್ನು ನಿಮ್ಮ ಇಡೀ ವ್ಯಕ್ತಿತ್ವವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.
2. ದೇಹದ ಭಂಗಿ (Body Language): ಕುಳಿತುಕೊಳ್ಳುವ ನಿಲ್ಲುವ ಭಂಗಿಯೇ ಎಲ್ಲವನ್ನೂ ಹೇಳುತ್ತದೆ. ಹೌದು. ಕಚೇರಿಗೆ ಬಂದು ಅರ್ಧಗಂಟೆಯಾಗುವ ಮೊದಲೇ ಬೆನ್ನು ಬಾಗಿಸಿ, ಅಯ್ಯೋ ಅನ್ನುವಂತೆ ಕೆಲಸ ಮಾಡಿಕೊಂಡಿದ್ದರೆ, ನೋಡುವವರಿಗೆ ಹೇಗಿದ್ದೀತು. ನೋಡುಗರ ದೃಷ್ಟಿಯಿಂದ ಒಮ್ಮೆ ನೋಡಿ, ಆಗಾಗ, ಬಗ್ಗಿದ ಬೆನ್ನು, ಉತ್ಸಾಹವಿಲ್ಲದ ನಡೆಯನ್ನು ನಿಮಗೆ ನೀವೇ ಗಮನಿಸಿಕೊಂಡು ತಿದ್ದಿಕೊಂಡು ಉತ್ಸಾಹದ ಚಿಲುಮೆಯಾಗಿ.
3. ಆತ್ಮವಿಶ್ವಾಸ (Confidence): ಯಾವುದೇ ಕೆಲಸ ಕೊಟ್ಟರೂ ತಾನು ನಿಭಾಯಿಸಬಲ್ಲೆ ಎಂಬ ನಡೆನುಡಿಯೇ ಆಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕಚೇರಿಯಲ್ಲಿರಲಿ, ಮನೆಯಲ್ಲಿರಲಿ, ತುಂಬು ಸಂಸಾರವನ್ನು ನಿಭಾಯಿಸಿಕೊಂಡು ಮಾಡುವ ಕೆಲಸಗಳಿರಬಹುದು ಆಕೆಯೆಡೆಗೆ ಒಂದು ಮೆಚ್ಚುಗೆಯ ನೋಟವನ್ನು ಬೀರುವಂತೆ ಮಾಡುತ್ತದೆ.
ಅಯ್ಯೋ, ಸ್ಟಾರ್ ಹೀರೋಯಿನ್ ಆದ್ರೂ ರಶ್ಮಿಕಾ ಮಂದಣ್ಣ ಅಮ್ಮನ ಬಳಿ ಇದನ್ನು ಕೇಳೋದು ಮಾತ್ರ ಬಿಟ್ಟಿಲ್ವಂತೆ!
4. ಸುಸಂಪನ್ನ ನಡೆನುಡಿ, ಗೌರವ (Respect): ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತಗ್ಗಿಬಗ್ಗಿ ನಡೆಯಬೇಕು ಎಂದು ತಲೆತಲಾಂತರಗಳಿಂದ ಸಂಸ್ಕೃತಿಯ ಜೊತೆಗೆ ಬೆರಕೆ ಮಾಡಿ ಕಲಿಸಿಕೊಂಡೇ ಬಂದಾಗಿದೆ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಓದು, ಬರೆಹ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಎಂದು ಮುಂದುವರಿದಿದ್ದಾಳೆ. ಇತರರಿಗೆ ಗೌರವಿಸಿ ತಾನು ಗೌರವ ಪಡೆದುಕೊಳ್ಳುವುದು ಹೇಗೆಂದು ಅವಳಿಗೆ ಚೆನ್ನಾಗಿ ಗೊತ್ತಿದೆ. ಆಚಾರ ವಿಚಾರಗಳನ್ನು ಗೌರವಿಸುತ್ತಲೇ ತಾನು ಬೆಳೆಯುವುದನ್ನೂ ಕಲಿತಿದ್ದಾಳೆ. ಅದೇ ಆಕೆಯ ಸೌಂದರ್ಯವನ್ನು ನೂರ್ಮಡಿಸುತ್ತದೆ.
5. ಖಚಿತ ಮಾತು: ಮಾತಿನಲ್ಲಿರುವ ಖಚಿತತೆ ನಮ್ಮ ಆತ್ಮವಿಶ್ವಾಸವನ್ನು ತೋರುತ್ತದೆ. ನಮ್ಮ ನಂಬಿಕೆಗಳು, ತಿಳುವಳಿಕೆಗಳನ್ನು ಸ್ಪಷ್ಟವಾಗಿ ಹೇಳಬೇಕಾದ ಸಂದರ್ಭದಲ್ಲಿ ಅಧೀರರಾಗದೆ ಪ್ರಸ್ತುತ ಪಡಿಸಬಹುದಾದ ಆತ್ಮವಿಶ್ವಾಸ, ಚಾಕಚಕ್ಯತೆಯೂ ನಮ್ಮ ಆಕರ್ಷಕ ವ್ಯಕ್ತಿತ್ವದ ಮೂಲ ಗುಟ್ಟು ಎಂಬುದು ನೆನಪಿರಲಿ. ಇದರ ಅರ್ಥ, ನಮ್ಮ ವಾದವನ್ನು ಮಂಡಿಸುತ್ತಾ ಎಲ್ಲೆಡೆ ಜಗಳಗಂಟಿಗಳಾಗಿ ಎಂದಲ್ಲ. ಎಲ್ಲಿ, ಹೇಗೆ, ವಸ್ತುನಿಷ್ಠವಾಗಿ ವಿಷಯ ಮಂಡಿಸಬಹುದು ಎಂಬುದರ ಸ್ಪಷ್ಟ ಕಲ್ಪನೆಯೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.
6. ಇತರರಿಗೆ ಮಾದರಿಯಾಗಿ (Be a Model): ನಮ್ಮ ವ್ಯಕ್ತಿತ್ವ, ಮಾಡುವ ಕೆಲಸ ಒಂದಿಷ್ಟು ಇತರೆ ಮಹಿಳೆಯರಿಗೆ ಸ್ಪೂರ್ತಿಯಾಗುವಂತಿದ್ದರೆ ಅದು ಆಕೆಯೆ ಗೆಲುವು. ಆಕೆಯ ಆಕರ್ಷಕ ವ್ಯಕ್ತಿತ್ವದ ಗೆಲುವು. ಮಹಿಳೆ ಕುಟುಂಬದ ಕಣ್ಣು ಎಂಬುದು ನಿಜವಾದಲ್ಲಿ, ಆಕೆ ಸಮಾಜದ ಕಣ್ಣೂ ಹೌದು. ಮಾದರಿ ವ್ಯಕ್ತಿತ್ವವೇ ಒಂದು ಹೆಣ್ಣಿನ ಸೌಂದರ್ಯದ ನಿಜವಾದ ಗುಟ್ಟು.
ರಾಖಿ ಸಾವಂತ್‌ಳಿಂದ ಸಾನಿಯಾ ಮಿರ್ಜಾವರೆಗೆ.. ಈ ಸೆಲೆಬ್ರಿಟಿಗಳು ತಮ್ಮ ಅಂಡಾಣು ಫ್ರೀಜ್ ಮಾಡಿಕೊಂಡಿದ್ದಾರೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.