ನಟಿ ಸಮೀರಾ ರೆಡ್ಡಿಯನ್ನೂ ಕಾಡಿತ್ತಂತೆ ಈ ಪ್ರಾಬ್ಲಂ

By Suvarna NewsFirst Published Mar 11, 2020, 10:43 AM IST
Highlights

ಪ್ರೆಗ್ನೆನ್ಸಿಯಲ್ಲಿ ತೂಕ ಹೆಚ್ಚಾಗುವುದು ನೈಸರ್ಗಿಕ ಪ್ರಕ್ರಿಯೆ.ಆದ್ರೆ, ಹೆರಿಗೆ ಬಳಿಕವೂ ತೂಕ ಕಡಿಮೆಯಾಗದಿದ್ರೆ ಎಂಬ ಆತಂಕ ಕೆಲವು ಮಹಿಳೆಯರನ್ನು ಕಾಡುತ್ತದೆ. ಕೆಲವೊಮ್ಮೆ ಇದು ಅವರನ್ನು ಖಿನ್ನತೆಗೂ ದೂಡಬಹುದು. ನಟಿ ಸಮೀರಾ ರೆಡ್ಡಿ ಕೂಡ ಇಂಥದ್ದೇ ಸಮಸ್ಯೆಗೆ ಒಳಗಾಗಿದ್ದು,ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದಾರೆ.

ಮಗುವಾದ ತಕ್ಷಣ ಮಹಿಳೆಗೆ ಸಹಜವಾಗಿ ಆಂಟಿ ಲುಕ್ ಬರುತ್ತೆ ಎಂಬ ಮಾತನ್ನು ಬಹುತೇಕರು ಹೇಳುತ್ತಾರೆ. ಇದೇ ಕಾರಣಕ್ಕೆ ಫಿಗರ್, ಲುಕ್ ಬಗ್ಗೆ ಹೆಚ್ಚಿನ ಒತ್ತು ನೀಡುವ ಮಾರ್ಡನ್ ಹುಡುಗಿಯರು ಪ್ರೆಗ್ನೆನ್ಸಿ, ತಾಯ್ತನ ಅಂದ್ರೆ ಸ್ವಲ್ಪ ಮಟ್ಟಿಗೆ ಭಯಬೀಳುತ್ತಾರೆ ಕೂಡ. ಗರ್ಭಿಣಿಯಾದ ಬಳಿಕ ನನ್ನ ದೇಹದ ತೂಕ ಸಿಕ್ಕಾಪಟ್ಟೆ ಹೆಚ್ಚಾದ್ರೆ ಏನ್ ಮಾಡೋದು? ಮಗುವಾದ ಬಳಿಕ ನನ್ನ ಶರೀರ ಮತ್ತೆ ಹಿಂದಿನ ಶೇಪ್‍ಗೆ ಮರಳುತ್ತಾ ಎಂಬ ಆತಂಕ ಬಹುತೇಕ ಮಹಿಳೆಯರಿಗಿರುತ್ತದೆ. ಇನ್ನು ಸೆಲೆಬ್ರೆಟಿಗಳಿಗೆ ಇಂಥದೊಂದು ಆತಂಕ ಕಾಡದೆ ಬಿಟ್ಟಿತೇ. ಹಾಗಂತ ಎಲ್ಲ ಸೆಲೆಬ್ರೆಟಿಗಳು ತಾಯಿಯಾದ ಮೇಲೆ ತಮ್ಮ ಮೊದಲಿನ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಹೇಳಲಾಗದು. ತಾಯಿಯಾದ ಬಳಿಕವೂ ತಮ್ಮ ಮೊದಲಿನ ಸೌಂದರ್ಯವನ್ನು ಮರಳಿ ಪಡೆಯುವ ಜೊತೆಗೆ ಅದೇ ಫಿಟ್‍ನೆಸ್ ಕಾಯ್ದುಕೊಳ್ಳಬಹುದು ಎಂಬುದನ್ನು ಶಿಲ್ಪಾ ಶೆಟ್ಟಿ ಹಾಗೂ ಕರೀನಾ ಕಪೂರ್ ತೋರಿಸಿ ಕೊಟ್ಟಿದ್ದಾರೆ. ಆದರೂ ತಾಯಿಯಾದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಬಾಡಿ ಶೇಮಿಂಗ್‍ಗೊಳಗಾಗುವ ಭಯ ನಟಿಯರನ್ನು ಕಾಡೇ ಕಾಡುತ್ತದೆ. ನಟಿ ಸಮೀರಾ ರೆಡ್ಡಿ ಕೂಡ ಇಂಥದೊಂದು ಆತಂಕಕ್ಕೊಳಗಾಗಿದ್ದು ಮಾತ್ರವಲ್ಲ, ಇದು ಅವರನ್ನು ಪ್ರಸವದ ಬಳಿಕ ಕಾಡುವ ಖಿನ್ನತೆಯತ್ತ ನೂಕಿತ್ತು ಎಂಬುದನ್ನು ಸ್ವತಃ ಅವರೇ ಇತ್ತೀಚೆಗೆ ಹೇಳಿಕೊಂಡಿದ್ದಾರೆ. 

ನಾಳೆ ಬೆಳಗ್ಗೆ ಏನ್ ತಿಂಡಿ ಮಾಡೋದು? ನಾರಿ ಕಾಡೋ ಚಿಂತೆ

ಈ ಬಗ್ಗೆ ಸಮೀರಾ ರೆಡ್ಡಿ ಹೀಗೆ ಹೇಳ್ತಾರೆ
ನಾನು ಮೊದಲ ಬಾರಿಗೆ ಪ್ರೆಗ್ನೆಂಟ್ ಆದಾಗ ತಾಯಿಯಾದ ಬಳಿಕ ನನ್ನ ಶರೀರ ಹೇಗಿರಬೇಕು ಎಂಬ ಕುರಿತು ನನ್ನ ತಲೆಯಲ್ಲೊಂದು ಕಲ್ಪನೆಯಿತ್ತು. ಅದೇನೆಂದ್ರೆ ತೆಳ್ಳಗಿನ ಶರೀರ ಹೊಂದಿರುವ ಕೂಲ್ ಮಾಮ್ ನಾನಾಗಬೇಕು ಎಂಬುದು. ಆದ್ರೆ ನಾನಂದ್ಕೊಂಡತೆ ಏನೂ ನಡೆಯಲಿಲ್ಲ. ಪ್ರೆಗ್ನೆನ್ಸಿಯಲ್ಲಿ ನಾನು ತುಂಬಾ ವೇಟ್ ಗೇನ್ ಆದೆ. ವೈದ್ಯರು ಎಂಟು ತಿಂಗಳ ಕಾಲ ಬೆಡ್ ರೆಸ್ಟ್ನಲ್ಲಿರುವಂತೆ ಸೂಚಿಸಿದ್ದರು. ಜೊತೆಗೆ ಈ ಸಮಯದಲ್ಲಿ ನನಗೆ ಅನೇಕ ಹಾರ್ಮೋನ್ ಇಂಜೆಕ್ಷನ್‍ಗಳನ್ನು ನೀಡಿದ್ದರು. ಇದರ ಪರಿಣಾಮವಾಗಿ ನನ್ನ ತೂಕ 72 ಕೆ.ಜಿ.ಯಿಂದ 105 ಕೆ.ಜಿ.ಗೆ ಏರಿಕೆಯಾಯ್ತು. ಇದು ನನ್ನ ತಲೆಯನ್ನು ಕೊರೆಯಲಾರಂಭಿಸಿತ್ತು. ಸಿ-ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದೆ. ಆದ್ರೆ ಈ ಸಮಯದಲ್ಲಿ ನಾನು ಖಿನ್ನತೆಗೊಳಗಾದೆ. ನನ್ನ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಪರಿವೇ ಇಲ್ಲದೆ ನಾನು ನನ್ನದೇ ಲೋಕದಲ್ಲಿದ್ದೆ. ಎಲ್ಲಿಯ ತನಕ ಅಂದ್ರೆ ಮಗುವನ್ನು ನನ್ನ ಕೈಯಲ್ಲಿಟ್ಟಾಗ ಆ ಖುಷಿಯ ಕ್ಷಣವನ್ನು ಅನುಭವಿಸಲು ಕೂಡ ನನಗೆ ಸಾಧ್ಯವಾಗಲಿಲ್ಲ. ಆ ಮಗುವಿನೊಂದಿಗೆ ನನಗೆ ಸಂಪರ್ಕವೇ ಇಲ್ಲ ಎಂಬಂತೆ ವರ್ತಿಸಿದೆ. ಮಗುವನ್ನು ಪತಿಯ ಕೈಗೆ ನೀಡಿದ ನಾನು ಈ ಮಗು ಹುಟ್ಟಿರುವುದಕ್ಕೆ ನನಗೆ ಖುಷಿಯ ಅನುಭವವೇನೂ ಆಗುತ್ತಿಲ್ಲ. ದಯವಿಟ್ಟು ಈ ಮಗುವನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಹೇಳಿದ್ದೆ. ನನ್ನೊಳಗೆ ಏನೋ ತೊಂದರೆಯಾಗುತ್ತಿದೆ ಎಂಬುದನ್ನು ಅರಿಯಲು ಹೆರಿಗೆ ಬಳಿಕ ಒಂದು ವಾರವೇ ಹಿಡಿಯಿತು. ಹೆರಿಗೆ ಬಳಿಕ ಹೀಗೆಲ್ಲ ಆಗಬಹುದು ಎಂಬ ಬಗ್ಗೆ ನನಗೆ ಯಾರೂ ಮಾಹಿತಿ ನೀಡಿರಲಿಲ್ಲ. ಸಮೀರಾ, ಹೆರಿಗೆ ಬಳಿಕ ಖಿನ್ನತೆ ಕಾಡಬಹುದು, ಹಾರ್ಮೋನ್‍ಗಳ ಬದಲಾವಣೆ ಕಾರಣಕ್ಕೆ ಮನಸ್ಥಿತಿಯಲ್ಲಿ ಏರುಪೇರಾಗಬಹುದು ಎಂಬ ಬಗ್ಗೆ ಯಾರೊಬ್ಬರೂ ನನ್ನೊಂದಿಗೆ ಮಾತನಾಡಿರಲಿಲ್ಲ. ಇದೇ ಕಾರಣಕ್ಕೆ ಇಂದು ನಾನು ಈ ಕುರಿತು ಮಾತನಾಡುತ್ತಿದ್ದೇನೆ. ಹೆರಿಗೆ ಬಳಿಕ ಕಾಡುವ ಖಿನ್ನತೆ ಬಗ್ಗೆ ಪ್ರತಿ ಮಹಿಳೆಯೂ ತಿಳಿದಿರಬೇಕು.

ಹೇ ಹುಡುಗಿ, ನಿನ್ನ ಲವ್ ಲೈಫ್ ಕೀಲಿಕೈ ನಿನ್ನ ಕೈಲೇ ಇರಲಿ

ನನ್ನ ಶರೀರದ ಬಗ್ಗೆ ನನಗೇ ಜಿಗುಪ್ಸೆ ಹುಟ್ಟಿತ್ತು. ಕನ್ನಡಿ ಮುಂದೆ ನಿಂತು ‘ಸಮೀರಾ ರೆಡ್ಡಿಗೆ ಏನಾಯಿತು’ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ. ಇದಕ್ಕೆ ಕಾರಣ ಆ ಸಮಯದಲ್ಲಿ ಎಲ್ಲರೂ ನಾನು ಹಿಂದೆ ಹೇಗಿದ್ದೆ ಎಂಬುದನ್ನು ನೆನಪಿಸುತ್ತಿದ್ದರು. ಇದು ನನ್ನನ್ನು ಇನ್ನಷ್ಟು ಕಂಗೆಡಿಸಿತ್ತು. ಹೊರಗಿನವರ ಜೊತೆಗೆ ನನ್ನೊಳಗಿನ ಮಹಿಳೆ ಕೂಡ ನನ್ನನ್ನು ಪ್ರಶ್ನಿಸುವಂತಾಯಿತು. ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರಬರಲು ಸಾಕಷ್ಟು ಸಾಹಸವನ್ನೇ ಮಾಡಬೇಕಾಯಿತು. ಅಂತೂ ಇಂತೂ ನನ್ನ ಶರೀರದೊಂದಿಗೆ ಸಂಧಾನ ಮಾಡಿಕೊಂಡ ಬಳಿಕವೇ ನಾನು ಎರಡನೇ ಬಾರಿ ಗರ್ಭಿಣಿಯಾಗಲು ನಿರ್ಧರಿಸಿದೆ. ಈ ಬಾರಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾಯ್ತನವನ್ನು ಎಂಜಾಯ್ ಮಾಡಬೇಕು ಎಂದು ನಾನು ನಿರ್ಧರಿಸಿದೆ. ಯಾವುದೇ ಮಹಿಳೆ ಇಂಥ ಪರಿಸ್ಥಿತಿಯಲ್ಲಿರುವಾಗ ಮಹಿಳೆಯರು ಒಬ್ಬರಿಗೊಬ್ಬರು ಬೆಂಬಲ ನೀಡಬೇಕೇ ಹೊರತು ಯಾರನ್ನೂ ಜಡ್ಜ್ ಮಾಡಲು ಹೋಗಬಾರದು. ಹಾಗೆಯೇ ಕನ್ನಡಿ ಮುಂದೆ ನಿಂತು ನಿಮ್ಮನ್ನೇ ನೀವು ಹಳಿದುಕೊಳ್ಳಬೇಡಿ. ಬದಲಿಗೆ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುವ ಪ್ರಯತ್ನ ಮಾಡಿ. 

click me!