ಅಮೆರಿಕದ ಮಹಿಳೆಯೊಬ್ಬರು 6 ತಿಂಗಳ ಅಂತರದಲ್ಲಿ ತಮ್ಮ ಇಬ್ಬರು ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ.
ಅಪರೂಪದ ಪ್ರಕರಣ ಇದಾಗಿದ್ದು, ನ್ಯೂಯಾರ್ಕ್‌ನ 42 ವರ್ಷದ ನಿರ್ಮಾಣ ಕಂಪನಿಯ ಮಾಲಕಿ ಎರಿನ್ ಕ್ಲಾನ್ಸಿ, ಆರು ತಿಂಗಳ ಅಂತರದಲ್ಲಿ ತಮ್ಮ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಈ ಮಕ್ಕಳ ನಡುವೆ 6 ತಿಂಗಳ ಅಂತರ ಮಾತ್ರವಲ್ಲ, ಜನಿಸಿದಾಗ 1448 ದೂರ ಅಂತರ ಕೂಡಾ ಇತ್ತು.
ಜನವರಿ 2016ರಲ್ಲಿಆನ್‌ಲೈನ್ ಡೇಟಿಂಗ್ ಸೈಟ್ ಮೂಲಕ ಬ್ರಿಯಾನ್ ಎಂಬಾತನನ್ನು ಭೇಟಿಯಾದ ಎರಿನ್ 2020ರಲ್ಲಿ ಅವರೊಂದಿಗೆ ವಿವಾಹವಾದರು. 2021ರಲ್ಲಿ ಗರ್ಭಿಣಿಯಾಗುವ ಅವಿರತ ಪ್ರಯತ್ನ ಯಶಸ್ವಿಯಾಗಲಿಲ್ಲ.
ಗರ್ಭಪಾತವಾದ ಬಳಿಕ ಆಕೆ ಐವಿಎಫ್, ಬಾಡಿಗೆ ತಾಯ್ತನಗಳನ್ನು ಪರಿಗಣಿಸಿದರು. ಐವಿಎಫ್ ಮೂಲಕ ಎರಿನ್ ಗರ್ಭಿಣಿ ಎಂದು ಗೊತ್ತಾಯಿತಾದರೂ ಎರಡು ತಿಂಗಳಾಗುವಾಗ ರಕ್ತಸ್ರಾವವಾದ ಕಾರಣ ಅವರು ಬಾಡಿಗೆ ತಾಯ್ತನವನ್ನು ಮತ್ತೆ ಪರಿಗಣಿಸಿದರು. ಆದರೆ, ಎರಿನ್ ಗರ್ಭ ನಿಂತಿತು, ಅದೇ ಸಮಯದಲ್ಲಿ ಬಾಡಿಗೆ ತಾಯಿಯೂ ಇವರಿಬ್ಬರ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು.
ಎರಡೂ ಗರ್ಭಧಾರಣೆಗಳು ಯಶಸ್ವಿಯಾಗಿದ್ದವು ಮತ್ತು ಮೇ 2023 ರಲ್ಲಿ, ಎರಿನ್ ಡೈಲನ್‌ಗೆ ಜನ್ಮ ನೀಡಿದರು. ನಂತರ ಆರು ತಿಂಗಳಲ್ಲಿ ಬಾಡಿಗೆ ತಾಯಿಯೂ ಇವರಿದ್ದ ಸ್ಥಳದಿಂದ 1448.41 ಕಿಲೋಮೀಟರ್ ದೂರದಲ್ಲಿ ಡೆಕ್ಲಾನ್ ಎಂಬ ಮಗುವನ್ನು ಹೆತ್ತರು. ಅಂತೂ ಎರಡೂ ಮಕ್ಕಳು ಸಹೋದರರಾದರೂ ಅವರ ನಡುವೆ 6 ತಿಂಗಳ ಅಂತರವಿರುವುದನ್ನು ಕೇಳಿದವರು ಅಚ್ಚರಿ ಪಡುತ್ತಾರೆ. ಇದು ಹೇಗೆ ಸಾಧ್ಯ ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಈ ಬಗ್ಗೆ ಎಲ್ಲರಿಗೂ ಉತ್ತರಿಸಿ ಸಾಕಾದ ಬಳಿಕ ಎರಿನ್ ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಆ ಬಳಿಕ ಪೋಸ್ಟ್ ವೈರಲ್ ಆಗಿದೆ.