40 ವರ್ಷದ ಹಿಂದೆ ಇಂದಿರಾ ಹೇಳಿದ್ದ ಭವಿಷ್ಯ ನಿಜ ಮಾಡ್ತಾರಾ ಪ್ರಿಯಾಂಕಾ? ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದು, ವಯನಾಡಿನಿಂದ ಚುನಾವಣೆಯಲ್ಲಿ ಗೆಲ್ಲಲ್ಲು ತಯಾರಿ ನಡೆಸುತ್ತಿದ್ದಾರೆ ಇಂದಿರಾ ಗಾಂಧಿ ಮೊಮ್ಮಗಳು!
------------
‘ನೋಡ್ತಿರಿ, ಮುಂದಿನ ಶತಮಾನ ಅವಳದ್ದೇ. ಈ ದೇಶದ ಜನ ಅವಳಲ್ಲಿ ನನ್ನನ್ನು ಕಾಣುತ್ತಾರೆ. ಈ ದೇಶ ಆಳುವುದು ಅವಳೇ’-
- ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮೊಮ್ಮಗಳು ಪ್ರಿಯಾಂಕಾಗಾಂಧಿ ಬಗ್ಗೆ ನುಡಿದಿದ್ದ ಭವಿಷ್ಯ. ಅದೂ ಇಂದಿರಾ ಹತ್ಯೆಯಾಗುವ ಕೇವಲ ಒಂದು ತಿಂಗಳ ಮುಂಚೆ ತಮ್ಮ ಆಪ್ತ ಮಾಕನ್ ಲಾಲ್ ಪೋತೇದಾರ್ ಜತೆ ತನ್ನ ಮೊಮ್ಮಗಳು ಪ್ರಿಯಾಂಕಾ ಬಗ್ಗೆ ಆಡಿದ್ದ ಮಾತುಗಳು.
1984, ಸೆಪ್ಟೆಂಬರ್ 27 ಮೊಮ್ಮಕ್ಕಳೊಂದಿಗೆ ಇಂದಿರಾಗಾಂಧಿ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಮರಳಿ ಇಂದಿರಾಗಾಂಧಿ ದೆಹಲಿಗೆ ವಾಪಸ್ಸಾಗುತ್ತಿದ್ದರು.
1984, ಸೆಪ್ಟೆಂಬರ್ 28 ರಂದು ಇಂದಿರಾ, ಮೊಮ್ಮಕ್ಕಳೊಂದಿಗೆ ಹರಿಪರ್ವತ್ನಲ್ಲಿರುವ ನೆಹರು ಮನೆತನದ ಕುಲದೇವಿ ಶಾರಿಕಾ ಭಗವಾನ್ ಹಸ್ತದಾಸ್ ದೇಗುಲಕ್ಕೆ ಭೇಟಿ ನೀಡಿದ್ದರು. ಬಳಿಕ ಸೂಫಿ ಸಂತ ಮಖಧೂಮ್ ಸಾಹಿಬ್ ದರ್ಗಾಕ್ಕೂ ಭೇಟಿ ನೀಡಿ ಪ್ರಾರ್ಥಿಸಿದ್ರು.
ಅಲ್ಲಿಂದ ಗೆಸ್ಟ್ಹೌಸ್ಗೆ ವಾಪಸ್ಸಾಗುತ್ತಿದ್ದ ವೇಳೆ ಇಂದಿರಾ, ಪೋತೇದಾರ್ ಜತೆ ಮಾತನಾಡುತ್ತಾ, ‘ಪೋತೇದಾರ್ಜೀ, ನಾನು ಹೆಚ್ಚು ಕಾಲ ಬದುಕದೇ ಇರಬಹುದು, ಆದರೆ, ಪ್ರಿಯಾಂಕಾಳಲ್ಲಿ ನೀವು ನನ್ನನ್ನು ಕಾಣುತ್ತೀರಿ,’ ಎಂದಿದ್ದರಂತೆ. ಅದಕ್ಕೆ ಪೋತೆದಾರ್, ‘ಅಷ್ಟು ವರ್ಷ ನಾನು ಬದುಕಿರುತ್ತೇನೆ ಅಂದುಕೊಂಡಿದ್ದೀರಾ?’ ಎಂದು ಕೇಳಿದ್ದರಂತೆ!
ವಯನಾಡಿಗೆ ಪ್ರಿಯಾಂಕಾ: ರಾಜೀವ್ ಚಂದ್ರಶೇಖರ್ ಕಿಡಿ
undefined
ಅದಕ್ಕೆ ನಗುತ್ತಾ ಇಂದಿರಾ, ‘ಪ್ರಿಯಾಂಕಾ ರಾಷ್ಟ್ರಮಟ್ಟದಲ್ಲಿ ಬೆಳೆಯುವುದನ್ನು ನೀವು ಕಾಣುತ್ತೀರಿ. ಮುಂದಿನ ಶತಮಾನದಲ್ಲಿ ಅವಳು ಮಿಂಚುತ್ತಾಳೆ ಮತ್ತು ಮುಂದಿನ ಶತಮಾನ ಅವಳದ್ದೇ. ಆಗ ಜನರು ನನ್ನನ್ನು ಮರೆತುಬಿಡುತ್ತಾರೆ,’ ಎಂದಿದ್ದರಂತೆ. ಬೇಸರದ ಸಂಗತಿ ಅಂದ್ರೆ, 1984, ಸೆಪ್ಟೆಂಬರ್ 28 ರಂದು ಪ್ರಿಯಾಂಕಾ ಭವಿಷ್ಯ ನುಡಿದಿದ್ದ ಇಂದಿರಾಗಾಂಧಿ, 1984, ಅಕ್ಟೋಬರ್ 31ರಂದು ಹತರಾಗುತ್ತಾರೆ.
ಇಂದಿರಾ ಹತ್ಯೆ ಬಳಿಕ, 1990ರಲ್ಲಿ ಪೋತೇದಾರ್, ರಾಜೀವ್ಗಾಂಧಿ ಬಳಿಯೂ ಈ ವಿಷಯ ಹೇಳಿದಾಗ, ‘ಪ್ರಿಯಾಂಕಾ ಬಗ್ಗೆ ನಿಜಕ್ಕೂ ಅಮ್ಮ ಹೀಗೆ ಹೇಳಿದಳಾ?’ ಎಂದು ರಾಜೀವ್ ಅಚ್ಚರಿಪಟ್ಟರಂತೆ. 40 ವರ್ಷಗಳ ಹಿಂದಿನ ಇಂದಿರಾಗಾಂಧಿ ಭವಿಷ್ಯ ನಿಜವಾಗುತ್ತಿದೆ ಅನ್ನೋ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಇದೀಗ ಕೇಳಿಬರುತ್ತಿದೆ.
ಇಂದಿರಾಗಾಂಧಿ ಮಾತನ್ನೇ ನಂಬಿ, ಪ್ರಿಯಾಂಕಾಗಾಂಧಿಯಲ್ಲಿ ಇಂದಿರೆಯನ್ನೇ ಕಾಣುತ್ತಾ ಬಂದಿರುವ ಕಾಂಗ್ರೆಸ್ ಪಾಳಯದಲ್ಲಿ ಹೊಸ ಉತ್ಸಾಹ, ಭರವಸೆಯ ಬೆಳಗಾಗಿ ಕಾಣುತ್ತಿದ್ದಾರೆ ಪ್ರಿಯಾಂಕಾ ಗಾಂಧಿ. ಅಜ್ಜಿ ಇಂದಿರೆಯ ಆ ಕನಸನ್ನು ನನಸು ಮಾಡುವತ್ತ ಪ್ರಿಯಾಂಕಾ ಗಾಂಧಿ ಇಟ್ಟಿರುವ ರಾಜಕೀಯ ಹೆಜ್ಜೆಯೇ ಇದಕ್ಕೆ ಕಾರಣ.
ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ, ಚುನಾವಣಾ ರಾಜಕೀಯಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಮೇಲೆ ಕಾಂಗ್ರೆಸ್ ಬೆಟ್ಟದಷ್ಚು ನಿರೀಕ್ಷೆ ಇಟ್ಟಿದೆ. ರಾಜಕಾರಣದಲ್ಲಿ ದೂರವೇ ಉಳಿದಿದ್ದ ಪ್ರಿಯಾಂಕಾ ಗಾಂಧಿ, ಚುನಾವಣಾ ಕಣಕ್ಕಿಳಿಯಲು ಮನಸ್ಸು ಮಾಡಿರಲಿಲ್ಲ. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡರೂ, ಕಣಕ್ಕಿಳಿಯಲು ಹಿಂಜರಿಯುತ್ತಿದ್ದರು. ಆದರೆ, ಈ ಬಾರಿಯ ಲೋಕಸಭೆ ಫಲಿತಾಂಶ ಕಾಂಗ್ರೆಸ್ ವಲಯಕ್ಕೆ ಆಕ್ಸಿಜನ್ ಕೊಟ್ಟಿದೆ. ಇದು, ರಾಹುಲ್- ಪ್ರಿಯಾಂಕಾ ಜೋಡಿಯ ಉತ್ಸಾಹವನ್ನೂ ಹೆಚ್ಚಿಸಿದ್ದು, ಪಕ್ಷವನ್ನು ಸಂಘಟಿಸಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎದುರಿಸಲು ಪ್ರಿಯಾಂಕಾ ಗಾಂಧಿಯಿಂದ ಮಾತ್ರ ಸಾಧ್ಯ ಎಂಬುದು ಹಲವು ಕಾಂಗ್ರೆಸ್ಸಿಗರ ಬಲವಾದ ನಂಬಿಕೆ. ಆ ನಂಬಿಕೆ ಪುಷ್ಟಿ ಕೊಡುವಂತೆ ಪ್ರಿಯಾಂಕಾ, ಚುನಾವಣಾ ರಣಕಣಕ್ಕೆ ಧುಮುಕಿದ್ದಾರೆ.
ರಾಜಕೀಯ ಅಖಾಡಕ್ಕೆ ಪ್ರಿಯಾಂಕಾ, ಚುನಾವಣೇಲಿ ಸ್ಪರ್ಧಿಸುತ್ತಿರೋ ಗಾಂಧಿ ಕುಟುಂಬದ ಹತ್ತನೇ ಸದಸ್ಯೆ!
‘ದೇಶದ ಜನ ಈಕೆಯಲ್ಲಿ ನನ್ನನ್ನು ಕಾಣಲಿದ್ದಾರೆ,’ ಎಂಬ ಇಂದಿರಾ ಗಾಂಧಿ ಮಾತು ಈ ಬಾರಿಯ ಉಪಚುನಾವಣೆಯಲ್ಲಿ ನೆರವೇರಬಹುದೆಂಬ ನಿರೀಕ್ಷೆ ಕಾಂಗ್ರೆಸ್ಸಿಗರದ್ದು. ಲೋಕಸಭಾ ಕಲಾಪಗಳಲ್ಲಿ ಪ್ರಿಯಾಂಕಾ ಪರಿಣಾಮಕಾರಿಯಾಗಿ ಮಾತನಾಡಬಲ್ಲರೆಂಬುದು ಹಲವರ ನಂಬಿಕೆ. ಸುಷ್ಮಾ ಸ್ವರಾಜ್ ಅವರಂತೆ ಪ್ರಿಯಾಂಕಾ ಸದನದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಾರೆಂಬ ವಿಶ್ವಾಸವನ್ನೂ ಕೈ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.
ಹಿಂದಿಯಲ್ಲಿ ಪ್ರಿಯಾಂಕಾ ಹಿಡಿತ!
ರಾಹುಲ್ಗಾಂಧಿಗೆ ಭಾಷೆಯೇ ದೊಡ್ಡ ಶತ್ರು. ರಾಹುಲ್ಗೆ ಇಂಗ್ಲೀಷ್ ಮೇಲಿರುವ ಹಿಡಿತ ಹಿಂದಿಯಲಿಲ್ಲ ಅನ್ನೋದು ಕಾಂಗ್ರೆಸ್ಸಿಗರ ಬೇಸರಕ್ಕೆ ಕಾರಣ. ಆದ್ರೆ, ಪ್ರಿಯಾಂಕಾ ವಿಷಯದಲ್ಲಿ ಆ ಭಯ ಇಲ್ಲ. ಪ್ರಿಯಾಂಕಾ ಹಿಂದಿಯಲ್ಲೇ ನಿರರ್ಗಳವಾಗಿ ಮಾತನಾಡುವ ಛಾತಿ ಇದೆ. ಇದಕ್ಕೆ ಕಾರಣ, ಆಕೆಯ ವಿದ್ಯಾಭ್ಯಾಸ. ಬಾಲ್ಯದಲ್ಲಿ ಹಿಂದಿ ವಿದ್ವಾಂಸ ಹರಿವಂಶ್ ರಾಯ್ ಬಚ್ಚನ್ (ಅಮಿತಾಬ್ ಬಚ್ಚನ್ ತಂದೆ) ಅವರ ಮನೆಯಲ್ಲಿ ಪ್ರಿಯಾಂಕಾ ಗಾಂಧಿ ಕಳೆದಿದ್ದರು. ಹೀಗಾಗಿ ಪ್ರಿಯಾಂಕಾಗೆ ಹಿಂದಿ ಭಾಷೆಯಲ್ಲಿ ಹಿಡಿತವಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯ ಹಿಂದಿ ಭಾಷಣಗಳು ವೈರಲ್ ಆಗಿತ್ತು. 2022ರಲ್ಲಿ ಪ್ರಿಯಾಂಕಾ ಆಡಿದ ‘ಲಡ್ಕೀ ಹೂ, ಲಡ್ ಸಕ್ತೀ ಹೂಂ’ ಹೇಳಿಕೆ ಭಾರಿ ಮೆಚ್ಚುಗೆ ಗಳಿಸಿತ್ತು. ಇನ್ನು, ಕರ್ನಾಟಕ ಸೇರಿ ಆಂಧ್ರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶದಲ್ಲೂ ಪ್ರಿಯಾಂಕಾಗಾಂಧಿ ಬೆಂಬಲಿಸುವ ದೊಡ್ಡ ಮತದಾರರ ಪಡೆಯೇ ಇದೆ. ಈಗಲೂ ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರು ಹಾಗೂ ಕಾಂಗ್ರೆಸ್ ನಾಯಕ ಗುಂಪೊಂದು, ಇಂದಿರಾ ಮೊಮ್ಮಗಳಲ್ಲಿ ಅಜ್ಜಿಯನ್ನು ಕಾಣುತ್ತಿದೆ. ಬಹುಶಃ ಅಜ್ಜಿಯ ಭವಿಷ್ಯ ನಿಜವಾಗುವ ಕಾಲ ಸನ್ನಿಹಿತವಾಗುತ್ತಿದೆ.
ಪ್ರಿಯಾಂಕಾ ಸ್ಪರ್ಧಿಸಿದ್ದರೆ ಮೋದಿಗೆ 3 ಲಕ್ಷ ಮತಗಳ ಸೋಲು: ರಾಹುಲ್ ಗಾಂಧಿ