ಆಟವಾಡುವಾಗ ಕಾಲುಜಾರಿ ಕೆರೆಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಮಕ್ಕಳನ್ನು ರಕ್ಷಣೆ ಮಾಡಿ ಮರುಜನ್ಮ ನೀಡಿದ ಮಹಾತಾಯಿ, ಕೊನೆಗೆ ತಾನೇ ಈಜುಬಾರದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
ತುಮಕೂರು (ಜು.02): ಭಾನುವಾರವಾದ್ದರಿಂದ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಕೆರೆಯ ಬಳಿ ಬಟ್ಟೆಯನ್ನು ತೊಳೆಯಲು ಹೋಗಿದ್ದ ಮಹಿಳೆ, ತನ್ನ ಇಬ್ಬರು ಮಕ್ಕಳು ಆಟವಾಡುತ್ತಾ ಕೆರೆ ಬಿದ್ದಿದ್ದನ್ನು ನೋಡಿ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾಳೆ. ಆದರೆ, ಮಕ್ಕಳ ಜೀವವನ್ನು ಉಳಿಸಿದ ಮಹಿಳೆ, ಕೊನೆಗೆ ಈಜು ಬಾರದೇ ಆಳಕ್ಕೆ ಬಿದ್ದು ಪ್ರಾಣತ್ಯಾಗ ಮಾಡಿದ್ದಾಳೆ.
ಮೃತ ಮಹಿಳೆಯನ್ನು ಮನು (30) ಎಂದು ಗುರುತಿಸಲಾಗಿದೆ. ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ. ಮೃತ ಮಹಿಳೆ ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಳು. ಇಬ್ಬರು ಮಕ್ಕಳು ಕೆರೆ ದಡದಲ್ಲಿ ಆಟವಾಡುತ್ತಿದ್ದರು. ಹೀಗಾಗಿ, ತನ್ನ ಬಟ್ಟೆ ಒಗೆಯುವ ಕಾರ್ಯವನ್ನು ಮುಂದುವರೆಸಿದ್ದಳು. ಆದರೆ, ಇದ್ದಕ್ಕಿಂತೆ ನೀರಿಗೆ ಮಕ್ಕಳು ಬಿದ್ದಿರುವ ಘಟನೆ ನಡೆದಿದ್ದು, ಇದನ್ನು ಕಂಡು ಗಾಬರಿಯಾದ ಮಹಿಳೆ ತನಗೆ ಈಜು ಬರುವುದಿಲ್ಲ ಎಂಬ ಅರಿವೂ ಇಲ್ಲದೆಯೇ ಕೆರೆಗೆ ಹಾರಿ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾಳೆ.
ದೇಶದಲ್ಲಿ ಜಿಎಸ್‌ಟಿ ತೆರಿಗೆಯಂತೆ, ರಾಜ್ಯದಲ್ಲಿ ವೈಎಸ್‌ಟಿ ತೆರಿಗೆ ಜಾರಿ
ಈಜು ಬಾರದಿದ್ದರೂ ಕೆರೆಗೆ ಧುಮಿಕಿ ಮಕ್ಕಳ ರಕ್ಷಣೆ: ಇನ್ನು ಮಕ್ಕಳು ಮುಳುಗುವುದನ್ನು ನೋಡಿ ಕೆರೆಗೆ ಧುಮಿಕಿ ಮಕ್ಕಳನ್ನು ಹೊರಗೆ ಎಸೆದಿದ್ದಾಳೆ. ಆಗ, ಇತರರು ಮಕ್ಕಳನ್ನು ಎಳೆದುಕೊಂಡಿದ್ದಾರೆ. ಆದರೆ, ತಾನು ಕೆರೆಯ ನೀರಿನಿಂದ ಮೇಲಕ್ಕೆ ಬರುವಾಗ ಕಾಲು ಜಾರಿ ಬಿದ್ದಿದ್ದಾಳೆ. ಈ ವೇಳೆ ಈಜು ಬಾರದ ಹಿನ್ನೆಲೆಯಲ್ಲಿ ಮಹಿಳೆ ಕೆರೆಯಲ್ಲಿಯೇ ಮುಳುಗಿದ್ದಾಳೆ. ಉಳಿದಂತೆ ಬಟ್ಟೆ ಒಗೆಯಲು ಹೋಗಿದ್ದ ಇತರೆ ಮಹಿಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಯಾರೊಬ್ಬರೂ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಮಹಿಳೆ ಜೀವ ಬಿಟ್ಟಿದ್ದಾಳೆ.
ಮಕ್ಕಳನ್ನು ಆಸ್ಪತ್ರೆಗೆ ರವಾನಿಸಿದ ಪೋಷಕರು: ಕೆಲವು ಕ್ಷಣಗಳ ನಂತರ ಸ್ಥಳಕ್ಕೆ ಆಗಮಿಸಿದ ನುರಿತ ಈಜುಗಾರರು ಕೆರೆಗೆ ಹಾರಿ ಮಹಿಳೆಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ, ಈ ವೇಳೆಗಾಗಲೇ ಮಹಿಳೆ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನು ನೀರಿನಲ್ಲಿ ಮುಳುಗಿ ಪ್ರಾಣಾಪಾಯದಿಂದ ಪಾರಾದ ಮಕ್ಕಳನ್ನು ಚಿಕಿತ್ಸೆಗಾಗಿ ಕೂಡಲೇ ಶಿರಾ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಬಟ್ಟೆ ತೊಳೆಯಲು ಹೋಗಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಾಸನ ಆಸ್ಪತ್ರೆಯ ನವಜಾತ ಶಿಶು ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಬಹುದೊಡ್ಡ ದುರಂತ!
ಮಕ್ಕಳನ್ನು ಕೊಲೆ ಮಾಡುವ ನೀಚರಿಗೆ ಬುದ್ಧಿಪಾಠ: ಇನ್ನು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕುಟುಂಬದಲ್ಲಿ ಕಷ್ಟ ಇದೆ ಎಂದು ಅಥವಾ ತಂದೆ ಅಥವಾ ತಾಯಿ ಯಾರಾದರು ಒಬ್ಬರು ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ನೆಪವೊಡ್ಡಿ ಮಕ್ಕಳನ್ನು ಕೊಲೆ ಮಾಡಿ ತಾವೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಅನೇಕ ತಂದೆ- ತಾಯಿಯರನ್ನು ನಾವು ನೋಡಿದ್ದೇವೆ. ಆದರೆ. ಇಲ್ಲಿ ಮಕ್ಕಳಿಗೆ ಜನ್ಮಕೊಟ್ಟ ತಾಯಿ, ಮತ್ತೊಮ್ಮೆ ಮರುಜನ್ಮ ನೀಡಿ ಕೊನೆಗೆ ತಾನೇ ಕೊನೆಯುಸಿರೆಳೆದಿದ್ದಾಳೆ. ಈ ಘಟನೆಯಿಂದ ತಾಯಿಯ ಮಹಾತ್ಯಾಗ ಎಂಥದ್ದು ಎಂಬುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಮಕ್ಕಳಿಗೆ ತನ್ನ ಆಯಸ್ಸು ಮುಡಿಪಾಗಿಟ್ಟು ತಾಯಿ ಇಹಲೋಕವನ್ನೇ ತ್ಯಜಿಸಿದ್ದಾಳೆ.