ಡೈವೋರ್ಸ್ ಫೋಟೋಶೂಟ್ ಮಾಡಿದ ಶಾಲಿನಿಯ ನರಕದ ಬದುಕು!

By Shobha MCFirst Published May 5, 2023, 1:37 PM IST
Highlights

ಡಿವೋರ್ಸಿ ಅಂತ ಫೋಟೋ ಶೂಟ್ ಮಾಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡ ಕೂಡಲೇ ಟ್ರೋಲ್ ಮಾಡಿದವರೇ ಹೆಚ್ಚು. ಆದರೆ, ಆ ಹೆಣ್ಣು ಗಂಡನಿಂದ ಅನುಭವಿಸಿದ ನೋವು ಎಂಥದ್ದು ಎನ್ನೋ ಕಲ್ಪನೆ ನಿಮಗಿದ್ಯಾ?

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿರೋ ತಮಿಳು ಕಿರುತೆರೆ ನಟಿ ಶಾಲಿನಿಯ ಡಿವೋರ್ಸ್ ಫೋಟೋಶೂಟ್ ಪರ- ವಿರುದ್ಧ ದೊಡ್ಡ ಚರ್ಚೆಯೇ ನಡೆದಿದೆ. ಗಂಡನಿಂದ ಡೈವೋರ್ಸ್ ಸಿಕ್ಕಿದ್ದನ್ನು ಸಂಭ್ರಮಿಸಿದ ನಟಿ ಶಾಲಿನಿಯ ದಾಂಪತ್ಯ ಬದುಕಿನಲ್ಲಿ ಅನುಭವಿಸಿದ್ದು ಬರೀ ಕಷ್ಟ, ಕಿರುಕುಳ, ಶೋಷಣೆಯೇ ಹೊರತು ಸಂತೋಷವನ್ನಲ್ಲ. ಅಷ್ಟಕ್ಕೂ ಶಾಲಿನಿ ಯಾರು? ಆಕೆ ಮದುವೆ ಆಗಿದ್ದು ಯಾರನ್ನು? ಡಿವೋರ್ಸ್ ಕೊಟ್ಟಿದ್ದು ಯಾವ ಕಾರಣಕ್ಕೆ? ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಶಾಲಿನಿಯೇ ಉತ್ತರ ಕೊಟ್ಟಿದ್ದಾರೆ.

ತಮಿಳು ಕಿರುತೆರೆಯಲ್ಲಿ ನಟಿಸುತ್ತಿದ್ದ ಶಾಲಿನಿ, ಮೀಡಿಯಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಸಲುವಾಗಿ ದುಬೈಗೆ ಶಿಫ್ಟ್​ ಆಗಿದ್ದಳು. 2015ರಲ್ಲಿ ಅದೇ ಕಂಪನಿಯಲ್ಲಿ ಈ ಭಾರತೀಯ ಹೆಣ್ಣು ಮಗಳಿಗೆ ಸಿಕ್ಕಿದ್ದೇ ರಿಯಾಜ್​ ಮೊಹಮ್ಮದ್​. ಫ್ಯಾಮಿಲಿ ಬಿಟ್ಟು ದುಬೈನಲ್ಲಿದ್ದ ಶಾಲಿನಿಗೆ ಆತ್ಮೀಯನಾದ ರಿಯಾಜ್​, ನಿಧಾನಕ್ಕೆ ಶಾಲಿನಿಯನ್ನು ಪ್ರೇಮದ ಬಲೆಯಲ್ಲಿ ಕೆಡವಿದ. ರಿಯಾಜ್​ಗೆ ಅದಾಗಲೇ ಮದುವೆಯಾಗಿ, ಮೊದಲ ಪತ್ನಿಗೆ ತಲಾಖ್ ನೀಡಿದ್ದ. ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಶಾಲಿನಿ, ರಿಯಾಜ್​ ಪ್ರೇಮದ ಬಲೆಗೆ ಬಿದ್ದು, ಮದುವೆಯೂ ಆಗಿಬಿಟ್ಟಳು. ರಿಯಾಜ್​ಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಾಲಿನಿ, ತನ್ನ ಹೆಸರನ್ನು ಸಾರಾ ಮೊಹ್ಮದ್​ ರಿಯಾಜ್​ (Sara Muhammad Riaz) ಎಂದು ಬದಲಿಸಿಕೊಂಡಳು.  

ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಿಲ್ಲ, ಸುಪ್ರೀಂ ಬಿಗ್‌ ತೀರ್ಪು!

ಮದುವೆಯಾದ ಕೆಲ ದಿನಗಳಲ್ಲೇ ಶುರುವಾಯ್ತು ನೋಡಿ ನರಕಯಾತನೆ. ವಿಪರೀತ ಕುಡಿಯುತ್ತಿದ್ದ ರಿಯಾಜ್​, ಶಾಲಿನಿಯ ಸಣ್ಣ ಪುಟ್ಟ ತಪ್ಪುಗಳನ್ನು ಮುಂದಿಟ್ಟು ಸಿಕ್ಕಾಪಟ್ಟೆ ಹೊಡೆಯುತ್ತಿದ್ದ. ರಾಕ್ಷಸಿ ಮನಸ್ಥಿತಿಯ ರಿಯಾಜ್​, ಗರ್ಭಿಣಿಯಾದಾಗಲೂ ಶಾಲಿನಿಯನ್ನು ಬಿಡದೇ ಮನಸೋ ಇಚ್ಚೆ ಬಡಿಯುತ್ತಿದ್ದ. ಅವನು ಹೇಳಿದಂತೆ ಕೆಲಸ ಬಿಟ್ಟೆ, ಫೇಸ್​ಬುಕ್​, ಇನ್​ಸ್ಟಾಗ್ರಾಂ ಎಲ್ಲದರಿಂದ ಹೊರಬಂದೆ. ನನ್ನ ಮೊಬೈಲ್ ನಂಬರ್ ಅಷ್ಟೇ ಅಲ್ಲ, ನಮ್ಮ ತಾಯಿಯ ಮೊಬೈಲ್​ ನಂಬರ್​ ಅನ್ನೂ ಬದಲಿಸಿದ್ದ. ಅವನು ಹೇಳಿದವರ ನಂಬರ್​ನಷ್ಟೇ ಸೇವ್​ ಮಾಡಿ ಕೊಂಡಿದ್ದೆ. ಬೇರೆ ನಂಬರ್​ನಿಂದ ಫೋನ್​ ಬಂದು ಬಿಟ್ಟರೆ ರಿಯಾಜ್ ನನ್ನನ್ನು ಹುರಿದು ಮುಕ್ಕಿಬಿಡುತ್ತಿದ್ದ. 

‘ನಾನು ನಗುವುದನ್ನೂ ಸಹಿಸುತ್ತಿರಲಿಲ್ಲ. ಅದಕ್ಕಾಗಿ ನಗುವುದನ್ನೇ ಮರೆತಿದ್ದೆ. ಸದಾ ಬುರ್ಖಾ, ಪರದೆಯ ಹಿಂದೆಯೇ ಇರುತ್ತಿದ್ದೆ. ಆತನ ಹೊಡೆತ ಸಹಿಸಲಾಗದೇ, ಪಾರ್ಕಿಂಗ್​ ಲಾಟ್​ಗೆ ಓಡಿ ಹೋಗಿ ಅವಿತು ನಿಲ್ಲುತ್ತಿದ್ದೆ. ಅವನ ಕೋಪ ಕಡಿಮೆಯಾಗಲಿ, ಸಮಾಧಾನವಾಗಲಿ ಅಂತ ಕಾಯುತ್ತಿದ್ದೆ. ಆತನ ಏಟಿನಿಂದ ನನ್ನ ಇಡೀ ದೇಹ ತತ್ತರಿಸಿ ಹೋಗಿತ್ತು. ಈ ಮಧ್ಯೆ, ಮಗಳು ಹುಟ್ಟಿದಳು. ಅವಳು ಬಂದ ಮೇಲೂ ನನ್ನ ಜೀವನ ಬದಲಾಗಲಿಲ್ಲ. ಅವನ ಕುಡಿತ, ಅನುಮಾನದ ನಡವಳಿಕೆಯಿಂದ ಬೇಸತ್ತು ಹೋಗಿದ್ದೆ. ಹೀಗೆ ಒಂದು ದಿನ, ಸಣ್ಣ ವಿಷಯಕ್ಕೆ ಜಗಳ ಶುರುವಾಗಿತ್ತು. ನನ್ನ ಮೇಲೆ ಏರಿ ಬಂದ. ಆತನ ಒಂದೊಂದು ಹೊಡೆತ ನೋಡಿ ಮಗಳು ಬೆಚ್ಚಿ ಬಿದ್ದಳು. ಅಮ್ಮನನ್ನು ಹೊಡೆಯಬೇಡ ಅಂತ ಕಾಲು ಹಿಡಿದರೂ ರಿಯಾಜ್ ಮನಸ್ಸು ಕರಗಲಿಲ್ಲ. ಇದು ನನ್ನನ್ನು ಕೆರಳುವಂತೆ ಮಾಡಿತು.

ದಾಂಪತ್ಯಕ್ಕೆ ಸಮಯವೆಲ್ಲಿ ಕೊಟ್ಟಿದ್ದೀರಿ: ವಿಚ್ಛೇದನಕ್ಕೆ ಮುಂದಾದ ಟೆಕ್ಕಿ ದಂಪತಿಯ ಪ್ರಶ್ನಿಸಿದ ಕೋರ್ಟ್

ನನ್ನ ಮಗಳ ಕಣ್ಣೀರು, ಭಯ ನನ್ನನ್ನು ರಿಯಾಜ್​ನನ್ನು ತೊರೆಯುವಂತೆ ಮಾಡಿತು. ಅಂದೇ ಅವನಿಗೆ ಹೇಳಿಬಿಟ್ಟೆ, ಇನ್ನು ನಿನ್ನೊಂದಿಗೆ ಬದುಕಲಾರೆ ಎಂದು. ಡಿವೋರ್ಸ್ (Divorce) ಸಿಗುವವರೆಗೂ ನಾನು ಅವನೊಂದಿಗೇ ಇದ್ದೆ. ಮನೆ ಬಿಟ್ಟು ಬಂದು, ರಸ್ತೆಯಲ್ಲಿ ನಿಲ್ಲುವುದು ನನಗೆ ಇಷ್ಟ ಇರಲಿಲ್ಲ. ಡಿವೋರ್ಸ್ ಪಡೆದು ಮಗಳೊಂದಿಗೆ ಭಾರತಕ್ಕೆ ವಾಪಸ್ಸಾದೆ.  ತನ್ನಂತೆಯೇ ನರಳುತ್ತಿರುವವರಿಗೆ ಸಾಂತ್ವನ ಮತ್ತು ಧೈರ್ಯ (Courage) ನೀಡಲು ಈ ವಿನೂತನ ಪರಿಕಲ್ಪನೆಯ ಫೋಟೋ ಶೂಟ್ ಮಾಡಿಸಿದೆ, ಅಂತಾರೆ ಶಾಲಿನಿ. ಈಗ ಹೇಳಿ, ಶಾಲಿನಿ ಮಾಡಿದ್ದು ತಪ್ಪಾ?

click me!