'ಕನ್ಯತ್ವ ಪರೀಕ್ಷೆ'ಎಂಬ ದುಷ್ಟಪದ್ಧತಿ ಎಷ್ಟೆಲ್ಲ ವಿಕೃತಿ ಹೊಂದಿದೆ ಕೇಳಿದ್ರೆ ಶಾಕ್ ಆಗ್ತೀರಾ!

By Web DeskFirst Published Nov 16, 2019, 3:59 PM IST
Highlights

ಈ ಸಮುದಾಯದಲ್ಲಿ ಹೆಣ್ಣಿನ ಗೌರವವನ್ನು ನೆಲಕ್ಕೆ ಹಾಕಿ ಕಾಲಿನಲ್ಲಿ ತಿವಿಯಲಾಗುತ್ತದೆ, ಒಂದು ಹನಿ ರಕ್ತದಲ್ಲಿ ಅವಳ ಶೀಲಕ್ಕೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಮರ್ಯಾದೆ ಇಲ್ಲದ ಗಂಡಸರು ಗುಂಪಾಗಿ ಹೆಂಗಸರ ಮಾನವಳೆಯಲು ಮಾನದಂಡ ಹಿಡಿದು ಕುಳಿತಿದ್ದಾರೆ... ಏನಿದು ವಿಕೃತ ಆಚರಣೆ? ಇನ್ನೂ ಇಂಥದ್ದೆಲ್ಲ ಇದೆಯಾ ಎಂದ್ರಾ?  ಖಂಡಿತಾ ಇದೆ... 

ಪ್ರಿಯಾಂಕಾಳ ಮದುವೆ ಇನ್ನೂ ಫಿಕ್ಸ್ ಆಗಿಯೇ ಇಲ್ಲ, ಆಗಲೇ ಅವಳನ್ನು ಫಸ್ಟ್ ನೈಟ್ ಕುರಿತ ಭಯ ಕಿತ್ತು ತಿನ್ನುತ್ತಿದೆ. ಏಕೆಂದರೆ ಆಕೆ ಕಂಜರಾಬಾಟ್ ಸಮುದಾಯಕ್ಕೆ ಸೇರಿದವಳು. ಮದುವೆಯಾದ ದಿನವೇ ತನ್ನ ಪ್ಯೂರಿಟಿ ಟೆಸ್ಟ್ ಮಾಡುತ್ತಾರೆ ಎಂಬುದು ಆಕೆಯ ಚಿಂತೆ. ಹಾಗಂಥ ಅವಳು ತಪ್ಪು ಮಾಡಿದ್ದಾಳೆಂದಾಗಲೀ, ಅವಳ ಮೇಲೆ ಅವಳಿಗೇ ನಂಬಿಕೆ ಇಲ್ಲವೆಂದಾಗಲೀ ಅಲ್ಲ. ಆದರೆ, ಕುಟುಂಬದವರು ಎಂದುಕೊಂಡವರೇ ತನ್ನನ್ನು ಮನುಷ್ಯಳಂತೆ ನೋಡದೆ ವಸ್ತುವಿನಂತೆ ನೋಡಿ, ತನ್ನ ಗೌರವವನ್ನು ಕಾಲಿನ ಅಡಿಗೆ ಹಾಕಿಕೊಂಡು ತುಳಿದು ತಿವಿಯುತ್ತಾರಲ್ಲಾ, ಅದನ್ನೆಲ್ಲ ನೋಡಿದ ಮೇಲೆ ಅವರೊಂದಿಗೆ ಪ್ರೀತಿಯಿಂದ ಇರುವುದಾದರೂ ಸಾಧ್ಯವೇ? 

ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ!

ಕಟ್ಟಿಕೊಂಡ ಗಂಡ, ಗಂಡನ ಮನೆಯವರು, ತಾನು ಹುಟ್ಟಿ ಬೆಳೆದ ಮನೆಯವರು, ಅಷ್ಟೇ ಏಕೆ ಊರಿನ ಪಂಚಾಯಿತಿ ಕೂಡಾ ತನ್ನ ಪ್ಯೂರಿಟಿ ಪರೀಕ್ಷೆ ನಡೆಸಿ, 'ಮಾಲು' ಒಳ್ಳೆಯದೋ, ಕೆಟ್ಟದ್ದೋ ನಿರ್ಧರಿಸುತ್ತಾರೆಂದರೆ- ತನ್ನವರೆಂದುಕೊಂಡವರು ಯಾರೂ ತನ್ನವರಲ್ಲ ಎನಿಸದೆ ಇರುವುದೇ?
ಯಾವ ಕಾಲದಲ್ಲಿದ್ದಾರೆ?

ಇದು ಶತಶತಮಾನಗಳಿಂದ ಮಹಿಳೆಯರ ಮೇಲೆ ನಡೆದು ಬಂದಿರುವ ಅವಮಾನ, ಇನ್ನೂ ಸಮಾಜದಲ್ಲಿ ಉಳಿದುಕೊಂಡಿದೆ ಎಂದರೆ ಸಮಾಜವೇ ಅವಮಾನ ಪಡಬೇಕಾದ ಸುದ್ದಿ. ಹೌದು, ಮಹಾರಾಷ್ಟ್ರ(ನಾಸಿಕ್), ಗುಜರಾತ್ ಹಾಗೂ ರಾಜಸ್ಥಾನದ ಕೆಲವೆಡೆ ಹಬ್ಬಿ ಹರಡಿರುವ ಈ ಕಂಜರಾಬಾಟ್ ಸಮುದಾಯದವರು ಮದುವೆಯ ವಿಷಯಕ್ಕೆ ಬಂದರೆ ಇನ್ನೂ ಎರಡು ಶತಮಾನ ಹಿಂದೆಯೇ ಉಳಿದಿದ್ದಾರೆ. ಜಾತಿ ಪಂಚಾಯತಿ ಹೆಸರಿನಲ್ಲಿ ಹೆಣ್ಣಿನ ಕನ್ಯತ್ವ ಪರೀಕ್ಷೆ ನಡೆಸಿ ಆಕೆಯ ಶೀಲಕ್ಕೆ ಸರ್ಟಿಫಿಕೇಟ್ ಕೊಡುವುದನ್ನೇ ಇವರ ಕಸುಬಾಗಿಸಿಕೊಂಡಿದ್ದಾರೆ. 

ಕ್ರೂರ ಪದ್ಧತಿ, ಗಂಡಸರ ವಿಕೃತಿ

ಮದುವೆಯಾದ ಕೂಡಲೇ ವಧುವರರನ್ನು ಕೋಣೆಗೆ ದಬ್ಬುವ ಗಂಡಿನ ಕುಟುಂಬ, ಗಂಡಿನ ಕೈಲಿ ಬಿಳಿ ಬಟ್ಟೆಯೊಂದನ್ನು ಕೊಟ್ಟು ಕಳುಹಿಸುತ್ತದೆ. ಬಿಳಿ ಬಟ್ಟೆ ತೆಗೆದುಕೊಂಡು ಒಳ ಹೋಗುವ ವರ, ಅದರ ಮೇಲೆ ರಕ್ತದ ಕಲೆಗಳೊಂದಿಗೆ ಹೊರಬಂದರೆ ಎಲ್ಲರಿಗೂ ಅದೇನೋ ಗೆದ್ದ ಸಂಭ್ರಮ. ಮಾಲ್ ಒಳ್ಳೆಯದು ಎಂಬ ಘೋಷಣೆ. ಇದಕ್ಕೂ ಮುನ್ನ ವರನ ಕುಟುಂಬವು ಕೋಣೆಯೊಳಗೆ ಇರಬಹುದಾದ ಪ್ರತಿಯೊಂದು ಚೂಪಾದ ವಸ್ತುಗಳನ್ನೂ ಹೊರತೆಗೆದುಕೊಂಡು ಬರುತ್ತದೆ. ಹುಡುಗಿಯ ಕೈಬಳೆಗಳನ್ನು ಕೂಡಾ ತೆಗೆದು ಒಳಕಳುಹಿಸಲಾಗುತ್ತಿದೆ. ಒಂದು ವೇಳೆ ರಕ್ತ ಬರಿಸಲು ಇದ್ಯಾವುದನ್ನಾದರೂ ಬಳಸಿದರೆ ಎಂಬ ಮುಂದಾಲೋಚನೆ ಅದು!

ಪುರುಷರಿಗೂ ಬಂದಿದೆ ಗರ್ಭ ನಿರೋಧಕ ಇಂಜೆಕ್ಷನ್

ಇನ್ನು ವಧುವರ ಕೋಣೆಯೊಳಗಿರುವಾಗ ಗಂಡಿನ ಕುಟುಂಬದ ಜೊತೆಗೆ ಜಾತಿ ಪಂಚಾಯಿತಿಯ ಸದಸ್ಯರು ಕೂಡಾ ಕೋಣೆಯ ಬಾಗಿಲ ಬಳಿ ನಿಂತು 'ರಿಸಲ್ಟ್'ಗಾಗಿ ಕಾಯುತ್ತಾರೆ. ಪ್ರತಿ ಐದರಿಂದ 10 ನಿಮಿಷಕ್ಕೊಮ್ಮೆ ಬಾಗಿಲು ಬಡಿದು ಕನ್ಯತ್ವ ಪರೀಕ್ಷೆ ಆಯ್ತಾ ಇಲ್ವಾ ಎಂದು ಪ್ರಶ್ನಿಸುತ್ತಾರೆ. ಒಂದು ವೇಳೆ ಹೆಚ್ಚು ಸಮಯವಾದರೂ ಏನೂ ಆಗಲಿಲ್ಲವೆಂದರೆ ಹೆಣ್ಣಿನ 'ಮಾನ' ಪರೀಕ್ಷಿಸಲು ತಮ್ಮ 'ಮರ್ಯಾದೆ' ಬಿಟ್ಟು ಕೋಣೆಯೊಳಗೆ ನುಗ್ಗುವ ಈ ಹಿರಿಯರ ತಂಡ ಅವರಿಗೆ ನೀಲಿಚಿತ್ರ ನೋಡಲು ಪ್ರೋತ್ಸಾಹಿಸುವುದರಿಂದ ಹಿಡಿದು, ಇನ್ನೊಂದು ಜೋಡಿಯನ್ನು ಬಿಟ್ಟು ಡೆಮೋ ಕೊಡಿಸುವಲ್ಲಿವರೆಗೆ ನೀಚ ಮಟ್ಟಕ್ಕಿಳಿಯುತ್ತದೆ. ಜೋಡಿಯ ಮನಸ್ಥಿತಿ ಹೇಗಿದೆ, ಅವರಿಗೆ ಆಗ ಅದೆಲ್ಲ ಬೇಕೋ ಬೇಡವೋ ಯಾವುದನ್ನೂ ಇವರು ಕೇಳುವುದಿಲ್ಲ. 

ಬೆಡ್‌ಶೀಟ್ ಬ್ಲಡ್ ಆಗುವುದೇ ಮುಖ್ಯ!

ಕಲೆಯಾದ ಬೆಡ್‌ಶೀಟನ್ನು ವರನು 150-200 ಜನರನ್ನು ಹೊಂದಿದ ಜಾತಿಯ ಕೌನ್ಸಿಲ್ ಎದುರು ಹೋಗಿ ಹಿಡಿದು- ತನ್ನ 'ಪ್ರಾಡಕ್ಟ್' ಪರ್ಫೆಕ್ಟ್ ಆಗಿದೆ ಎಂದು ಪ್ರದರ್ಶನ ಮಾಡಬೇಕು. 
ಒಂದು ವೇಳೆ ಬಿಳಿಯ ಹಾಸು ಕಲೆಯಾಗಲಿಲ್ಲವೆಂದರೆ ವಧುವನ್ನು ಮಾನಗೆಟ್ಟವಳೆಂದು ಹೆಸರಿಸಿ ಆಕೆಗೆ ಹೊಡೆಯುವುದರಿಂದ ಹಿಡಿದು ವಿಚ್ಚೇದನ ನೀಡುವವರೆಗೆ ಹಿಂಸಿಸುತ್ತಾರೆ. ಅಷ್ಟೇ ಸಾಲದೆಂಬಂತೆ ಪಂಚಾಯಿತಿಗೆಳೆದು, ಯಾರಿಂದ ತನ್ನ ಕನ್ಯತ್ವ ಕಳೆದುಕೊಂಡಿದ್ದಾಳೆಂದು ಹೇಳುವವರೆಗೆ ಬಿಡುವುದಿಲ್ಲ. ಕನ್ಯಾಪೊರೆಯು ಕ್ರೀಡೆಯಿಂದ, ಘನ ಕೆಲಸ ಮಾಡುವಾಗಲೂ ಒಡೆಯಬಹುದು, ಲೈಂಗಿಕ ಕ್ರಿಯೆ ನಡೆಸದೆಯೂ ಆಕೆಗೆ ಅರಿವೇ ಇಲ್ಲದೆ ಯಾವಾಗ ಬೇಕಾದರೂ ಹರಿದಿರಬಹುದು, ಮೊದಲ ಬಾರಿ ರಕ್ತ ಎಲ್ಲರಿಗೂ ಬರುವುದಿಲ್ಲ ಎಂಬ ವಿಜ್ಞಾನದ ಮಾತುಗಳ್ಯಾವುದನ್ನೂ ಇವರು ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಮದುವೆಯ ಮೊದಲ ದಿನ ಆಕೆಗೆ ಬ್ಲೀಡ್ ಆಗಲಿಲ್ಲವೆಂಬ ಒಂದೇ ಕಾರಣ ಸಾಕು, ಆಕೆಯ ಕುಟುಂಬವನ್ನು ಕೀಳಾಗಿ ಕಾಣಲು. ಇನ್ನು ಅವಳ ಕುಟುಂಬ ಕೂಡಾ ಈಕೆಯಿಂದ ತಮ್ಮ ಮರ್ಯಾದೆ ಹೋಯಿತೆಂದು ಅವಳನ್ನು ಕೀಳಾಗಿ ಕಾಣುತ್ತಾರೆ. ಅವಳನ್ನು ಕೋಣೆಯಲ್ಲಿ ಕೂಡಿಹಾಕುತ್ತಾರೆ. ಈ ಸಂದರ್ಭಗಳಲ್ಲಿ ಈಕೆ ಒಂದು ವಸ್ತುವೋ, ಕಲ್ಲೋ ಇದ್ದಂತಿರಬೇಕು ಅಷ್ಟೇ. 

ಗರ್ಭನಿರೋಧಕ ಮಾತ್ರೆ ಕೆಲವೊಮ್ಮೆ ತರುತ್ತೆ ಕುತ್ತು

ಒಟ್ಟಿನಲ್ಲಿ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿ ಬಳಿಕ ತಿರಸ್ಕರಿಸುವ ಹಕ್ಕು ಈ 'ಮೀಸೆ ಪ್ರಾಣಿ'ಗಳದ್ದು. ಗಂಡು ಮಾತ್ರ ಎಷ್ಟು ಬಾರಿ ಬೇಕಾದರೂ ವಿವಾಹವಾಗಬಹುದು. ಆದರೆ, ಪ್ರತಿ ಬಾರಿ ವಿವಾಹವಾಗುವ ಹೆಣ್ಣೂ ಕನ್ಯತ್ವ ಪರೀಕ್ಷೆ ಪಾಸ್ ಮಾಡಿ ಗೆದ್ದು ಬರಬೇಕು. ಆತ ಬೇರೆ ಬೇರೆ ಯುವತಿಯರೊಂದಿಗೆ ಮಲಗುವ ಚಟದಿಂದಲೇ ಒಬ್ಬರನ್ನು ಮದುವೆಯಾಗುವುದು, ಆಕೆ ವರ್ಜಿನ್ ಅಲ್ಲವೆಂದು ತಿರಸ್ಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬಹುದಲ್ಲಾ... ಇಷ್ಟೆಲ್ಲ ಆದ ಮೇಲೂ ಯಾರೊಬ್ಬರೂ ಗಂಡಿನ ವರ್ಜಿನಿಟಿ ಬಗ್ಗೆ ಚಕಾರವೆತ್ತುವುದಿಲ್ಲ. ಅದಕ್ಕಾಗಿ ಯಾವ ಪರೀಕ್ಷೆಯೂ ಇಲ್ಲ. 

ವಿರೋಧಿಸಿದವರಿಗೆ ಕಿರುಕುಳ

ಇನ್ನು ವಿದ್ಯಾವಂತರಾಗಿ ಓದು ಅರಿತ ಸಮುದಾಯದ ಯುವಕ ಯುವತಿಯರೇನಾದರೂ ಈ ಪದ್ಧತಿ ವಿರುದ್ಧ ದನಿ ಎತ್ತಿದರೆ ಅವರಿಗೂ ಬಹಿಷ್ಕಾರ ಶಿಕ್ಷೆಯೇ. ವಿದ್ಯೆಯಿದೆ ಎಂದು ನೂರಾರು ವರ್ಷಗಳಿಂದ ಬಂದ ಸಂಪ್ರದಾಯ ಮುರಿಯುತ್ತಿದ್ದಾರೆಂದು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ಅವರಿಗೆ ಹೊಡೆದು ಅವರ ವಾಹನಗಳನ್ನು ಜಕಂಗೊಳಿಸಿ ಸಾಧ್ಯವಾದಷ್ಟು ಕಿರುಕುಳ ನೀಡುತ್ತಾರೆ. ಈಗ ಕಾನೂನು ಜೋರಾಗಿರುವುದರಿಂದ ಒಂದು ವೇಳೆ ಹುಡುಗಿಯ ಕಡೆಯವರು ತಮ್ಮ ಮೇಲೆ ಇಂಥ ದೌರ್ಜನ್ಯವಾಯಿತೆಂದು ಠಾಣೆ ಮೆಟ್ಟಿಲೇರಿದರೆ, ನಂತರದಲ್ಲಿ ಆ ಕುಟುಂಬದಿಂದ ಯಾರೂ ಯಾವ ಹೆಣ್ಣನ್ನೂ ಮದುವೆಗೆ ಒಪ್ಪುವುದಿಲ್ಲ. ಇದಕ್ಕೆ ಹೆದರಿ ಪೋಲೀಸರ ಸಹಾಯ ಪಡೆಯಲು ಬಲಿಪಶುಗಳು ಹೆದರುತ್ತಾರೆ. 

ಸೆಟಲ್ಡ್ ಮ್ಯಾರೇಜ್

ಇವರಲ್ಲೇ ಇನ್ನೊಂದು ರೀತಿಯ ಮದುವೆ ನಡೆಯುತ್ತದೆ. ಒಂದು ವೇಳೆ ಜೋಡಿಯು ಮದುವೆಗೆ ಮುಂಚೆಯೇ ಲೈಂಗಿಕ ಕ್ರಿಯೆ ನಡೆಸಿದ್ದರೆ ಈ ಬಗ್ಗೆ ಕುಟುಂಬಗಳು ಹೋಗಿ ಪಂಚಾಯಿತಿಗೆ ತಿಳಿಸುತ್ತಾರೆ. ಆಗ ಎರಡೂ ಕುಟುಂಬಗಳು ಒಂದಿಷ್ಟು ಶುಲ್ಕ ಕಟ್ಟಿ ಮದುವೆಗೆ ಒಪ್ಪಿಗೆ ಪಡೆಯಬೇಕು. ಆಗ ಪರೀಕ್ಷೆ ಇರುವುದಿಲ್ಲ. ಆದರೆ, ತಮ್ಮ ವೈಯಕ್ತಿಕ ವಿಷಯಗಳನ್ನು ಜಗಜ್ಜಾಹೀರು ಮಾಡಬೇಕಾದ ಅನಿವಾರ್ಯತೆ ಪ್ರೇಮಿಗಳದ್ದು. 

ಫ್ಯಾಮಿಲಿ ಪ್ಲಾನಿಂಗ್ ಇನ್ನು ಕಿವಿಯೋಲೆ ಧರಿಸಿದಷ್ಟೇ ಸುಲಭ!

ಇಂಥ ಜಾತಿ ಪಂಚಾಯತಿಗಳು ಬ್ಯಾನ್ ಆಗ್ಬೇಕು

ಜಾತಿ ಪಂಚಾಯಿತಿಯ ಸದಸ್ಯರು ಹೆಣ್ಣಿನ ಶೀಲದ ಹೆಸರಿನಲ್ಲಿ ಹೆಣ್ಮಕ್ಕಳ ಮೇಲೆ ಮಾಡುವ ಮಾನಸಿಕ ಅತ್ಯಾಚಾರವಲ್ಲವೇ ಇದು? ಕೋಣೆಯ ಹೊರಗೆ ನಿಂತು ಒಳಗೆ ಅವರೇನು ಮಾಡುತ್ತಿದ್ದಾರೆ ಎಂದು ಕಲ್ಪಿಸಿಕೊಂಡು ಅದರ ಬಗ್ಗೆ ಪದೇ ಪದೆ ವಿಚಾರಿಸುವ ಸ್ಯಾಡಿಸ್ಟ್‌ಗಳಿಗೆ ಶಿಕ್ಷೆಯಾಗಬೇಡವೇ? ಹೆಣ್ಣನ್ನೊಂದು ವಸ್ತುವಿನಂತೆ ಬಗೆವ ಇವರ ಪಾಪಕ್ಕೆ ಶಿಕ್ಷೆ ನೀಡಲು ಮತ್ತೊಂದು ಪಂಚಾಯಿತಿ ಹುಟ್ಟುಹಾಕಬೇಕು. ಇಷ್ಟಕ್ಕೂ ಹೆಣ್ಣಿನ ಗೌರವ ಒಂದು ಹನಿ ರಕ್ತದಲ್ಲಿದೆಯೇ? ಇಂಥ ಪಂಚಾಯಿತಿಗಳ ಮೇಲೆ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇವುಗಳು ಬೇರು ಸಮೇತ ನಾಶವಾಗುವಂತೆ ಕ್ಷಿಪ್ರ ಕಾರ್ಯಾಚರಣೆ ನಡೆಯಲಿ. 21ನೇ ಶತಮಾನದ ಡಿಜಿಟಲ್ ಇಂಡಿಯಾಗೆ ಕಪ್ಪುಚುಕ್ಕೆಯಾಗಿರುವ ಇಂಥ ಪದ್ಧತಿಗಳಿಗೆ ತಿಲಾಂಜಲಿ ಇಡುವುದು ಸಮಾಜದ ಆದ್ಯತೆಯಾಗಲಿ. 

click me!