
ನಮ್ಮೊಳಗಿರುವ ಮಗುವನ್ನು ಎಂದಿಗೂ ಜೀವಂತವಾಗಿ ಇಡಬೇಕಂತೆ. ಅದನ್ನು ನಮ್ಮ ದೇಹದ ವಯಸ್ಸಿನೊಂದಿಗೆ ತಳುಕು ಹಾಕದೆ ಮಗುವಿನ ಜೀವಂತಿಕೆಯನ್ನು ಕ್ಷಣಕಾಲವಾದರೂ ಅನುಭವಿಸಬೇಕಂತೆ. ಇದು ಬಹುಶಃ ಎಲ್ಲರಿಗೂ ಒಪ್ಪಿಗೆಯಾಗುವ ಮಾತು. ಆದರೂ ಕೆಲವರು ಮಾತ್ರವೇ ಅನುಸರಿಸುತ್ತಾರೆ, ಉಳಿದವರೆಲ್ಲ ವಯಸ್ಸು, ಮಾಗುವಿಕೆ, ಪ್ರಬುದ್ಧತೆ ಇತ್ಯಾದಿ ಹೆಸರುಗಳ ಅಡಿ ಗಂಭೀರತೆಯ ಸೋಗು ಹಾಕುತ್ತಾರೆ. ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟು ಜೀವಂತಿಕೆ ಉಳಿಸಿಕೊಳ್ಳುವುದು ಕೆಲವರಿಗೆ ಮಾತ್ರವೇ ಸಾಧ್ಯವಾಗುತ್ತದೆ. ಕೇರಳದಲ್ಲಿ ಒಬ್ಬ ಮಹಿಳೆಯಿದ್ದಾರೆ. ಈಕೆ ವಯಸ್ಸಾದ ಅಜ್ಜಿ. ಆದರೆ, ದೇವಸ್ಥಾನದಲ್ಲಿ ಮೈಮರೆತು ನರ್ತಿಸುವುದನ್ನು ನೋಡಿದರೆ ಅಬ್ಬಾ ಎನಿಸದೇ ಇರದು. ಲೈಂಗಿಕ ಆರೋಗ್ಯ ಶಿಕ್ಷಕಿಯಾಗಿರುವ ಸ್ವಾತಿ ಜಗದೀಶ್ ಎನ್ನುವವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಅಜ್ಜಿ ನರ್ತಿಸುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಂತರ್ಜಾಲದ ಜಗತ್ತಿನಲ್ಲಿ ಸಾಕಷ್ಟು ವೈರಲ್ ಆಗಿದೆ.
ಅಜ್ಜಿಯ ಸಖತ್ ಸ್ಟೆಪ್ಸ್ (Dance)
ಕೇರಳದ ಎಥನೂರು ಕುಮ್ಮತ್ತಿ (Ethanur Kummatti) ಎನ್ನುವ ಗ್ರಾಮದ (Village) ದೇವಸ್ಥಾನದಲ್ಲಿ (Temple) ಈ ವಿಡಿಯೋ ಶೂಟ್ ಮಾಡಲಾಗಿದೆ. ಬಹುಶಃ ಯಾವುದೋ ಹಬ್ಬದ ಸಮಯ ಇರಬೇಕು ಎನಿಸುತ್ತದೆ. ಏಕೆಂದರೆ, ದೇವಸ್ಥಾನವನ್ನು ಹೂವು, ತಳಿರುತೋರಣದಿಂದ ಸಿಂಗರಿಸಿರುವುದು ಕಂಡುಬರುತ್ತದೆ. ಸಾಕಷ್ಟು ಜನ ನೆರೆದಿದ್ದಾರೆ. ಕೆಲವರು ಸಾಂಪ್ರದಾಯಿಕವಾಗಿ ಜಾಗಟೆ, ಗಂಟೆಗಳನ್ನು ಬಾರಿಸುತ್ತಿರುವುದು ತಿಳಿದುಬರುತ್ತದೆ. ಬಹುಶಃ ಮಂಗಳಾರತಿ ನಡೆಯುತ್ತಿರುವ ಸಮಯವಿರಬೇಕು.
ಮದ್ವೆ ಮಂಟಪದಲ್ಲೇ ವಧು-ವರರ ಗನ್ ಸ್ಟಂಟ್, ಕ್ಷಣದಲ್ಲೇ ಎಂಥಾ ಅನಾಹುತವಾಯ್ತು ನೋಡಿ!
ಜೋರಾದ ಬೀಟ್ಸ್ (Beats) ಕೇಳಿಬರುತ್ತಿದೆ, ಅದಕ್ಕೆ ಬಿಳಿ ಸೀರೆಯುಟ್ಟ ಈ ಅಜ್ಜಿ (Old Woman) ಮೈಮರೆತು, ಖುಷಿಯಾಗಿ, ತಮಗೆ ಬೇಕಾದಂತೆ ಸ್ಟೆಪ್ಸ್ ಹಾಕಿದ್ದಾರೆ. ಯಾರಾದರೂ ತಮ್ಮನ್ನು ನೋಡುತ್ತಿದ್ದಾರೆ ಎಂದೂ ಸಹ ಅವರು ಭಾವಿಸಿದಂತೆ ಕಂಡುಬರುವುದಿಲ್ಲ. “ಹೀಗೆ ತಮ್ಮನ್ನು ತಾವೇ ಅರ್ಪಿಸಿಕೊಂಡಂತೆ ಡಾನ್ಸ್ ಮಾಡಿರುವ ಮಹಿಳೆಯರನ್ನು ನಾನು ನೋಡಿಲ್ಲ’ ಎಂದು ಸ್ವಾತಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಶೇರ್ (Share) ಮಾಡಿರುವ ಸ್ವಾತಿ ಜಗದೀಶ್, “ಎಲ್ಲ ವಯಸ್ಸಲ್ಲೂ ಡಾನ್ಸ್ ಮಾಡಬಹುದು. ವಾಟ್ಸಾಪ್ ಗ್ರೂಪ್ (Whatsapp Group) ನಲ್ಲಿ ಈ ವಿಡಿಯೋ ಸಿಕ್ಕಿತು. ಅಜ್ಜಿಯ ಅನುಮತಿ ಮೇರೆಗೆ ಈ ವಿಡಿಯೋ ಮಾಡಲಾಗಿದೆ ಎನ್ನುವ ಬಗ್ಗೆ ನನಗೆ ಖಾತರಿಯಿಲ್ಲ’ ಎಂದು ಬರೆದುಕೊಂಡಿದ್ದಾರೆ.
“ಆದರೆ, ಅಜ್ಜಿಯ ಈ ಡಾನ್ಸ್ ನೋಡಿದರೆ ಎಷ್ಟು ಖುಷಿಯಾಗುತ್ತದೆ. ಯಾರಾದರೂ ಈ ಅಜ್ಜಿಯ ಬಗ್ಗೆ ತಿಳಿದಿದ್ದು, ಇಲ್ಲಿಂದ ತೆಗೆಯಬೇಕು ಎಂದಾದರೆ, ತೆಗೆಯುತ್ತೇನೆ. ಅಲ್ಲಿಯವರೆಗೆ, ಸ್ವಲ್ಪ ಖುಷಿಗಾಗಿ, ಸ್ಫೂರ್ತಿಗಾಗಿ ಈ ವಿಡಿಯೋವನ್ನು ಎಲ್ಲರೂ ನೋಡಲಿ’ ಎಂದು ಆಶಿಸಿರುವ ಅವರು, “ಯಾವುದೇ ವಯಸ್ಸಿನಲ್ಲಿ ಮಹಿಳೆ (Woman) ತನ್ನದೇ ರೀತಿಯಲ್ಲಿ ಸಂತಸ ಹೊಂದಲು ಸಾಧ್ಯ’ ಎಂದೂ ಅವರು ಹೇಳಿದ್ದಾರೆ.
ಫ್ಯಾನ್ ಸಹಾಯದಿಂದ ಐಸ್ ಕ್ರೀಂ ಮಾಡಿದ ಮಹಿಳೆ, ಆನಂದ್ ಮಹೀಂದ್ರಾ ವಿಡಿಯೋ ವೈರಲ್
ಜೀವನವೊಂದೇ, ಅಜ್ಜಿ ಜೀವಿಸುತ್ತಿದ್ದಾರೆ
ಇದೀಗ, ಸಾಕಷ್ಟು ಗಮನ ಸೆಳೆದಿರುವ ಈ ವಿಡಿಯೋಕ್ಕೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಈ ಅಜ್ಜಿಯ ಆತ್ಮವಿಶ್ವಾಸ (Confidence) ಎಲ್ಲರಿಗೂ ಖುಷಿ ಮೂಡಿಸಿದೆ. ಈ ಅಜ್ಜಿಯನ್ನು ನೋಡುತ್ತಿದ್ದರೆ ನಮ್ಮೊಳಗೂ ಆತ್ಮವಿಶ್ವಾಸ ಮೂಡುವುದು ಗ್ಯಾರೆಂಟಿ ಎಂದು ಹಲವರು ಹೇಳಿದ್ದಾರೆ. “ನೀನು ನಿನ್ನ ಕೆಲಸ ಮಾಡು ಎನ್ನುವ ಮಾತಿಗೆ ಇದು ಸಾಕ್ಷಿಯಾಗಿದೆ’ ಎಂದು ಒಬ್ಬಾತ ಹೇಳಿದ್ದರೆ, ಮತ್ತೊಬ್ಬರು, “ಎಂತಹ ಮುಕ್ತ ಆತ್ಮ (Free Soul), ಇದಕ್ಕೇ ಅಲ್ಲವೇ ನಾವೆಲ್ಲರೂ ಹಾತೊರೆಯುವುದು? ನಾವೆಲ್ಲರೂ ಆಗಬೇಕಿರುವುದು ಇದೇ ಆಗಿದೆ. ಒಂದೇ ಜೀವನ (Life), ಅದನ್ನು ಇವರು ಜೀವಿಸುತ್ತಿದ್ದಾರೆ’ ಎಂದು ಅದ್ಭುತವಾಗಿ ಬರೆದುಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.