
ನೀರೂ ಸೈನಿ ಚಂಡೀಗಢದವರು. ಇವತ್ತು ಇನ್‌ಸ್ಟಾ ತೆಗೆದು ನೋಡಿದರೆ ಇವರ ಡ್ಯಾನ್ಸ್ ರೀಲ್ಸ್ ಇರುತ್ತೆ. ಲಕ್ಷಾಂತರ ಮಂದಿಯ ವೀಕ್ಷಣೆ ಸಾವಿರಾರು ಮಂದಿಯ ಕಾಮೆಂಟ್ ಎಲ್ಲವುಗಳಿಂದ ಇವರ ಅಕೌಂಟ್ ತುಂಬಿ ಹೋಗಿರುತ್ತೆ. ಕೂದಲು ಬೆಳ್ಳಗಾಗಿರುವ ಐವತ್ತ ನಾಲ್ಕರ ಹರೆಯ ಈ ಮಹಿಳೆ ಬಾಲಿವುಡ್ ಹಾಡುಗಳಿಗೆ ಬಿಂದಾಸ್ ಆಗಿ ಸ್ಟೆಪ್ಸ್ ಹಾಕುತ್ತಿದ್ದರೆ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುವವರೂ ಕಡಿಮೆ ಏನಲ್ಲ. ಆದರೆ ಇವರು ಅದಕ್ಕೆಲ್ಲ ತಲೆಕೆಡಿಸಿಕೊಂಡವರೇ ಅಲ್ಲ. ಮಗುವಿನ ಖುಷಿಯಿಂದ ಡ್ಯಾನ್ಸ್ ಮಾಡ್ತಾರೆ, ಅದನ್ನೇ ರೀಲ್ಸ್ ಮಾಡಿ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡ್ತಾರೆ. ಎಷ್ಟೋ ಮಂದಿ ನಮಗೆ ನೀವೇ ಸ್ಫೂರ್ತಿ ಅಂತ ಹೇಳಿ ಇವರ ಜೀವನಪ್ರೀತಿಯನ್ನೇ ತಮ್ಮ ಬದುಕಿನ ಪ್ರೇರಣೆ ಆಗಿಸಿಕೊಳ್ತಾರೆ.
ಇದೆಲ್ಲ ಸರಿ. ಆದರೆ ಇವರು ಇಷ್ಟು ಸಮಯ ಎಲ್ಲಿದ್ದರು, ದಿಢೀರನೆ ಎಲ್ಲಿಂದ ಬಂದ್ರು, ಇವರ ಹಿನ್ನೆಲೆ ಏನು? ಯಾಕೆ ಈ ವಯಸ್ಸಲ್ಲಿ ರೀಲ್ಸ್ ಮಾಡೋ ಹುಚ್ಚು? ಹೀಗೆ ಸಾವಿರ ಪ್ರಶ್ನೆ ನಿಮ್ಮ ತಲೆಗೆ ಬರಬಹುದು. ಅದಕ್ಕೆ ಉತ್ತರ ಇದ್ದೇ ಇದೆ. ಇವರ ಬದುಕೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಅಂತಲೂ ಹೇಳಬಹುದು.
ವಯಸ್ಕರ ಚಿತ್ರದಿಂದ ಹೊರಬಂದಿದ್ದು ಯಾಕೆ, ಲೀಲಾಜಾಲ ಬಿಟ್ಟ ಸೀಕ್ರೆಟ್ ಹೇಳ್ಬಿಟ್ರು ಸನ್ನಿ ಲಿಯೋನ್..!
ನೀರೂ ಸೈನಿ ಹುಟ್ಟಿದ್ದು 1970 ರಲ್ಲಿ. ಅಂದರೆ ಈಗ ಇವರಿಗೆ 54 ವರ್ಷ ವಯಸ್ಸು. ಮದುವೆ ಆದಾಗ ಈಕೆಗೆ ಕೇವಲ 20 ವರ್ಷ. ಗಂಡನಿಗೆ ಭಾರತೀಯ ನೌಕಾದಳದಲ್ಲಿ ಕೆಲಸ. ಗಂಡನ ಜೊತೆಗೆ ನೀರೂ 23 ದೇಶಗಳನ್ನು ಸುತ್ತಿದ್ದಾರೆ. ಗಂಡ ಸಖತ್ ಶಿಸ್ತಿನ ಮನುಷ್ಯ. ಹಾಗಂತ ಬಹಳ ಸೆನ್ಸಿಬಲ್ ವ್ಯಕ್ತಿಯೂ (Sensible Person) ಹೌದು. ತನ್ನ ಹೆಂಡತಿಗೆ ಬಾಲ್ಯದಿಂದಲೇ ಡ್ಯಾನ್ಸ್ ಅಂದರೆ ಪ್ರೀತಿ ಅಂತ ಮದುವೆ ಆದಮೇಲೆ ಡ್ಯಾನ್ಸ್ ಕಲಿಯಲು ಒತ್ತಾಸೆಯಾಗಿ ನಿಲ್ಲುತ್ತಾರೆ. ಈಕೆಯ ತರಲೆ, ತುಂಟಾಟಗಳನ್ನೆಲ್ಲ ಪಾಸಿಟಿವ್ ಆಗಿಯೇ ತಗೊಳ್ತಾರೆ. ಲೈಫು ಚೆನ್ನಾಗಿಯೇ ಸಾಗುತ್ತಿದೆ ಅಂದಾಗ ಒಂದು ಆಘಾತದ ಸುದ್ದಿ ಇವರಿಗೆ ಬದುಕಿನ ಬಗ್ಗೆಯೇ ಆಸಕ್ತಿ ಕಳೆದುಕೊಳ್ಳುವ ಹಾಗೆ ಮಾಡುತ್ತೆ. ಆಗ ನೀರೂಗೆ 28 ವರ್ಷ. ಪತಿ ಪ್ರದೀಪ್‌ಗೆ ಕ್ಯಾನ್ಸರ್ ಇದೆ ಎಂಬ ಸುದ್ದಿ ಸಿಡಿಲಿನಿಂದ ಬಂದೆರಗುತ್ತೆ. ತನ್ನ ಬಳಿ ಇದ್ದ ಹಣ, ಒಡವೆ ಎಲ್ಲವನ್ನೂ ಗಂಡನ ಮೆಡಿಸಿನ್‌ಗಾಗಿ ಖರ್ಚು ಮಾಡುತ್ತಾರೆ. ಅಷ್ಟೊತ್ತಿಗಾಗಲೇ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿರುತ್ತಾರೆ. ಅವರ ಜವಾಬ್ದಾರಿಯೂ ಹೆಗಲೇರಿರುತ್ತೆ.
ನೀರೂ ಗಂಡನನ್ನು ಉಳಿಸಿಕೊಳ್ಳಲು ಎಷ್ಟೋ ಹೋರಾಟ ಮಾಡಿದರೂ ಗಂಡನನ್ನು ಮರಣದಿಂದ ಪಾರು ಮಾಡಲಾಗುವುದಿಲ್ಲ. ೨೦೦೨ರಲ್ಲಿ ಆತ ಅಸುನೀಗುತ್ತಾರೆ. ಮಕ್ಕಳಿಗೆ ಟ್ಯೂಶನ್ ಹೇಳಿಕೊಡುತ್ತಾ ಅದರಲ್ಲಿ ಬಂದ ಹಣದಲ್ಲಿ ತನ್ನ ಇಬ್ಬರು ಮಕ್ಕಳನ್ನು ಸಾಕುತ್ತಾ ಅವರಿಗೆ ಶಿಕ್ಷಣ ಸರಿಯಾಗಿ ಸಿಗುವಂತೆ ನೋಡಿಕೊಳ್ಳುತ್ತಾರೆ. ಒಂದು ಹಂತದ ಬಳಿಕ ಇಬ್ಬರು ಮಕ್ಕಳೂ ಓದಿ ನೌಕರಿಗೆ ಸೇರಿ ಹೊಸ ಬದುಕು ಕಟ್ಟಿಕೊಳ್ಳುತ್ತಾರೆ. ಅಲ್ಲೀವರೆಗೆ ಕೆಲಸದಲ್ಲೇ ಮುಳುಗಿಹೋಗಿದ್ದ ನೀರೂಗೆ ಆಗ ಸಡನ್ನಾಗಿ ಬದುಕಿನ ಎಲ್ಲ ಜವಾಬ್ದಾರಿ ಮುಗಿದುಹೋಗಿದೆ, ತನಗೇನೂ ಇಲ್ಲ, ತನಗ್ಯಾರೂ ಇಲ್ಲ ಎಂಬ ಡಿಪ್ರೆಶನ್ (Depression) ಶುರುವಾಗುತ್ತದೆ. ಜೊತೆಗೆ ಪತಿಯ ನೆನಪೂ ಹಣ್ಣು ಮಾಡುತ್ತದೆ.
27 ವರ್ಷಗಳಿಂದ ಸೀರೆನೇ ಕೊಳ್ಳದ ಸುಧಾ ಮೂರ್ತಿ ಸೀರೆ ಬಗ್ಗೆ ಎಷ್ಟು ತಿಳ್ಕೊಂಡಿದಾರೆ ಗೊತ್ತಾ?
ಇಂಥಾ ಸಮಯದಲ್ಲಿ ನೀರೂ ನೆರವಿಗೆ ಬಂದದ್ದೇ ಡ್ಯಾನ್ಸ್. ಈಕೆ ಆ ವಯಸ್ಸಲ್ಲಿ ಮತ್ತೆ ಡ್ಯಾನ್ಸ್‌ಗೆ ಸೇರುತ್ತಾರೆ. ತನ್ನ ಸಂಪೂರ್ಣ ಶ್ರದ್ಧೆ ಪ್ರೀತಿ ಆಸಕ್ತಿಯನ್ನು ಸುರಿದು ಡ್ಯಾನ್ಸ್ ಕಲಿಯುತ್ತಾರೆ. ಈಗ ಈಕೆಗೆ ೫೪ ವರ್ಷ. ಮಾನಸಿಕವಾಗಿ ಬಹಳ ಚಟುವಟಿಕೆಯಿಂದ ಇರೋದು ಮಾತ್ರ ಅಲ್ಲ, ಸಾವಿರಾರು ಮಂದಿಗೆ ಸ್ಫೂರ್ತಿಯೂ ಆಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.