
ಬೆಂಗಳೂರು: ನಡು ವಯಸ್ಸಲ್ಲಿ ಮಹಿಳೆ ಅನುಭವಿಸೋ ನೋವು ಒಂದೆರಡಲ್ಲ. ಮಕ್ಕಳು ಸ್ವಲ್ಪ ದೊಡ್ಡವು ಆಗಿವೆ, ಅವರ ಕೆಲಸ ಅವರು ಮಾಡಿಕೊಳ್ಳುತ್ತಾರೆಂದು ನಿರುಮ್ಮಳ ಆಗುವಾಗಲೇ, ಯಾಕೋ ಅನಗತ್ಯ ಸುಸ್ತು ಅವಳನ್ನು ಕಾಡಲು ಶುರುವಾಗುತ್ತೆ. ಕೆಲಸ ಮಾಡಲು ಮನಸ್ಸೇ ಇಲ್ಲ. ಮಲಗಿಯೇ ಇರೋಣವೆಂದೆನಿಸುವ ಆಲಸ್ಯ ಕಾಡುತ್ತೆ. ತಪ್ಪದೇ ಆಗುತ್ತಿದ್ದ ಪಿರಿಯಡ್ಸ್‌ನ ರಿದಂ ತಪ್ಪುತ್ತಿರುವುದು ಗಮನಕ್ಕೆ ಬರುತ್ತೆ. ದೇಹ ಭಾರ. ಹೆಚ್ಚಾಗೋ ತೂಕ. ಮನಸಲ್ಲಿ ನಿಲ್ಲದ ತೊಳಲಾಟ, ಸಂಕಟ. ಸಿಟ್ಟು ಸೆಡವು. 'ಏನಾಗಿದೆ ಅಮ್ಮನಿಗೆ?' ಮಕ್ಕಳ ತಾತ್ಸಾರ. ಬರ್ತಾ ಬರ್ತಾ ಯಾಕೋ ಹೆಂಡತಿ ಎಲ್ಲವುದಕ್ಕೂ ನಿರಾಸಕ್ತಿ ತೋರುತ್ತಿದ್ದಾಳೆ. ಮನೆ ಮುಂದೆ ಎಂದಿಗೂ ತಪ್ಪದ ರಂಗೋಲಿ ಚುಕ್ಕಿ ತಪ್ಪುತ್ತಿದೆ. ಮಾಡುತ್ತಿರುವ ಅಡುಗೆಯಲ್ಲಿ ರುಚಿ ಇಲ್ಲ. ಯಾವಾಗಲೂ ಸುಸ್ತು ಅಂತಾಳೆ. ಏನು ರೋಗ ಇವಳಿಗೆಂದು ಅರ್ಥ ಮಾಡಿಕೊಳ್ಳುವಲ್ಲಿ ತೊಳಲಾಡುವ ಗಂಡ. ನಾನ್ಯಾಕೆ ಹೀಗೆ ಎಂದು ಅರ್ಥ ಮಾಡುಕೊಳ್ಳುವುದರಲ್ಲಿಯೇ ವಿಫಲವಾಗುವ ಹೆಣ್ಣು ಗಿಲ್ಟಿ ಫೀಲ್ ಮಾಡಿಕೊಂಡೇ ತತ್ತರಿಸುತ್ತಾಳೆ. ಇವೆಲ್ಲವಕ್ಕೂ ಯೂನಿವರ್ಸಲಿ ಕಾರಣವೊಂದೇ. ಮೆನೋಪಾಸ್ ಹಾಗೂ ಅದಕ್ಕೂ ಮುನ್ನ ಕಾಡುವ ಸ್ಥಿತಿ. ಹೆತ್ತು, ಹೊತ್ತು, ಎಲ್ಲ ಎದುರಾಗುವ ಸಮಸ್ಯೆಗಳನ್ನು ಅಂಜದೇ, ಒಬ್ಬಂಟಿಯಾಗಿ ಮ್ಯಾನೇಜ್ ಮಾಡಿದ ಹೆಣ್ಣಿಗೆ ಮೊದಲ ಬಾರಿಗೆ ನನ್ನ ಕೈಯಲ್ಲಿ ಏನೂ ಆಗುತ್ತಿಲ್ಲ ಎಂಬ ಭಾವ ಕಾಡಲು ಶುರುವಾಗ ಸಮಯವಿದು. ಫಿಸಿಕಲಿ, ಮೆಂಟಲಿ ನಾನು ಅಸಮರ್ಥಳು ಎಂದು ಸುಖಾ ಸುಮ್ಮನೆ ಗಿಲ್ಟ್ ಫೀಲ್ ಆಗುವಂತೆ ಮಾಡೋ ನೈಸರ್ಗಿಕ ಸಮಸ್ಯೆ ಇದು. ಇಂಥದ್ದೊಂದು ವಯೋ ಸಹಜ ತಡೆಯನ್ನು ಹೆಣ್ಣು ದಾಟೋದು ಹೇಗೆ? ಅದಕ್ಕೆ ಅವಳ ಸುತ್ತ ಮುತ್ತಲಿನವರು ಹೇಗೆ ಸಹಕರಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ಆದಿತ್ಯಾ ಬಿರ್ಲಾ ಗ್ರೂಪ್ ಕಂಪನೀಸ್‌ನ ಸಿಇಒ, ಕುಮಾರ ಮಂಗಲಂ ಬಿರ್ಲಾ ಪತ್ನಿ ನೀರಜಾ ಬಿರ್ಲಾ ಎಂಬ್ರೇಸ್ ಎಂಬ ಸಂಸ್ಥೆಯನ್ನು ಹುಟ್ಟಿ ಹಾಕಿದ್ದಾರೆ. ಆ ಮೂಲಕ ಹೆಣ್ಣನ್ನು ಕಾಡುವ ಸಂಸ್ಯೆಗಳನ್ನು ಎದುರಿಸಿ, ಮಾನಸಿಕವಾಗಿ ಸದೃಢವಾಗಲು ಸಹಕರಿಸುತ್ತಿದ್ದಾರೆ. ಈ ಸಂಬಂಧ ನಗರದಲ್ಲಿಯೂ ಅರಿವು ಮೂಡಿಸಲು ಮಹಿಳಾ ಉದ್ಯಮಿಗಳ (Federation of Indian Chambers of Commerce and Industry (FICCI))ಸಂಘಟನೆ ನೀರಜಾ ಬಿರ್ಲಾ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತ್ತು.
ಈ ಸಂದರ್ಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ನೀರಜಾ ಅವರು, ಮೊದಲು ಮಹಿಳೆಯರು ಈ ಮೆನೋಪಾಸ್ ಸಮಸ್ಯೆ ಸಹಜ ಎಂಬುದನ್ನು ಅಕ್ಸೆಪ್ಟ್ ಮಾಡಿಕೊಳ್ಳಬೇಕು. ಯಾರಿಗೂ ಆಗದ್ದು, ತಮಗಾಗಿದೆ ಎಂದು ಭಾವಿಸದಂತೆ ಎಚ್ಚರ ವಹಿಸಬೇಕು. ಎಲ್ಲವುಕ್ಕಿಂತ ಮುಖ್ಯವಾಗಿ ಇಂಥದ್ದೊಂದು ಫೇಸ್ ಎದುರಿಸಲು ಪೂರ್ವ ತಯಾರಿಯೂ ಅಗತ್ಯ. ತಮಗೆ ಒಂದಿಷ್ಟು ಸ್ಪೇಸ್ ಕೊಟ್ಟು ಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ, ತಮ್ಮಿಷ್ಟದ ಕೆಲಸ ಕಾರ್ಯಗಳಲ್ಲಿ ಮಹಿಳೆ ಅಗತ್ಯವಾಗಿ ತೊಡಗಬೇಕು. ದೈಹಿಕ ಹಾಗು ಮಾನಸಿಕ ಆರೋಗ್ಯದೆಡೆಗೆ ಹೆಚ್ಚು ಒತ್ತು ನೀಡಲು ಎಂದಿಗೂ ವರ್ಕ್ ಔಟ್ ನಿಲ್ಲಿಸಬಾರದು. ಮಾನಸಿಕ ನೆಮ್ಮದಿಗೆ ಧ್ಯಾನದ ಮೊರೆ ಹೋದರೆ ಬೆಸ್ಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಔದ್ಯೋಗಿಕ ಕ್ಷೇತ್ರದಲ್ಲಿ ಪುರುಷ ಸಹೋದ್ಯೋಗಿಗಳಿಗೆ ಈ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸಲು ಅಗತ್ಯ ವರ್ಕ್‌ಶಾಪ್ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯದ ಬಗ್ಗೆ ಮಾತನಾಡಿದ ನೀರಜಾ, ಮನೆಯಲ್ಲಿಯೇ ಹೆಣ್ಣು ಮೊದಲು ಈ ಮೆನೆೋಪಾಸ್‌ಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಮುಕ್ತವಾಗಿ ಮತಾನಾಡುವುದನ್ನು ಕಲೀಬೇಕು. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಮಕ್ಕಳೊಟ್ಟಿಗೂ ಮುಕ್ತವಾಗಿ ತನ್ನ ನೋವು, ಸಂಕಟ ಶೇರ್ ಮಾಡಿಕೊಳ್ಳುವಂತಾದರೆ ಆ ಮಟ್ಟಿಗಿನ ಅರಿವು ಮೂಡಿಸುವಲ್ಲಿ ಯಶಸ್ವಿಯಾದಂತೆಯೇ ಸರಿ. ಅಂಜದೇ ಈ ಬಗ್ಗೆ ಓಪನ್ ಅಪ್ ಆಗುವ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು.
ಸದಾ ಆ್ಯಕ್ಟಿವ್ ಆಗಿರುತ್ತಿದ್ದು, ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗುತ್ತಿದ್ದು ನೀರಜಾಗೆ ಒಮ್ಮಿಂದೊಮ್ಮೇಲೆ ಈ ಮೆನೋಪಾಸ್ ಸಮಸ್ಯೆ ತಲೆದೂಗಲು ಆರಂಭಿಸಿದಾಗ ಸ್ತ್ರೀ ರೋಗ ತಜ್ಞೆಯನ್ನು ಭೇಟಿಯಾದರಂತೆ. ಆಗ ಅವರಿಗೆ ಪ್ರತಿಯೊಬ್ಬ ಹೆಣ್ಣೂ ಅನುಭವಿಸಬಹುದಾದ ಈ ಸಮಸ್ಯೆಯ ಆಳ ಅಗಲದ ಬಗ್ಗೆ ಗಮನಕ್ಕೆ ಬಂದಿದ್ದು, ಇದರ ಅರಿವು ಮೂಡಿಸಲು ಕಾರ್ಯಪ್ರವೃತ್ತರಾಗುವಂತೆ ಪ್ರೇರೇಪಿಸಿತೆಂದು ತಮ್ಮ ಎಂಬ್ರೇಸ್ ಎಂಬ ಸಂಸ್ಥೆಯ ಹುಟ್ಟಿಗೆ ಕಾರಣವಾಗಿದ್ದೇನು ಎಂಬುದನ್ನು ವಿವರಿಸಿದರು.
ಅಪ್ಪಿತಪ್ಪಿಯೂ ವರ್ಕ್ ಔಟ್ ಮಾಡೋದ ಬಿಡಿಬೇಡಿ ಎಂದು ಕರೆ ನೀಡುವ ನೀರಜಾ, ಪೌಷ್ಟಿಕಾಂಶ ಆಹಾರದ ಸೇವನೆ ಬಗ್ಗೆಯ ಪ್ರಾಮುಖ್ಯತೆಯನ್ನೂ ತಿಳಿಸಿ ಹೇಳಿದರು. ಎಲ್ಲೆಡೆ ಹೆಣ್ಣಿನ ಮೆನೋಪಾಸ್ ಬಗ್ಗೆ ಚರ್ಚೆಗಳಾಗಬೇಕು. ಅವಳು ಈ ಬಗ್ಗೆ ಮುಕ್ತವಾಗಿ ಮಾತನಾಡಬಹುದಾದ ಸಂದರ್ಭವನ್ನು ಸೃಷ್ಟಿಸಿಕೊಳ್ಳಬೇಕು. ಈ ಬಗ್ಗೆ ಯಾವುದೇ ಗಿಲ್ಟ್ ಫೀಲ್ ಮಾಡಿಕೊಳ್ಳಬಾರದೆಂಬ ಅರಿವು ಮೊದಲ ತಂದು ಕೊಂಡರೆ, ಬಹುತೇಕ ಈ ಸಮಸ್ಯೆಯನ್ನು ನಿವಾರಿಸಬಹುದು ಸುಲಭವಾಗುತ್ತದೆ ಎಂದು ನೀರಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಪಿರಿಯಡ್ಸ್, ಮೆನೋಪಾಸ್ ಬಗ್ಗೆ ಇರುವ ಮೌಢ್ಯ ತೊಡೆದು ಹಾಕಿ, ಹೆಣ್ಣು ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯದೆಡೆಗೆ ಹೆಚ್ಚೆಚ್ಚು ಗಮನ ಹರಿಸಿ, ಆ ಮೂಲಕ ಸಂಸಾರ ಸ್ವಾಸ್ಥ್ಯ ಕಾಪಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಹೆಣ್ಣಿಗೆ ಕುಟುಂಬವೊಂದು ನೀಡಬೇಕಾದ ಗರಿಷ್ಠ ಭದ್ರತಾ ಭಾವನೆಯನ್ನು ನೀಡಿದಲ್ಲಿ, ಇಡೀ ಸಮಾಜವೇ ಆರೋಗ್ಯವಾಗಿರುತ್ತದೆ ಎಂಬುವುದು ನೀರಜಾ ಅವರ ನಿಲುವಾಗಿದೆ.
'Shift Within' ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರವ ಎಂಬ್ರೇಸ್, ಮಹಿಳಾ ಲೀಡರ್‌ಶಿಪ್ ಕೌಶಲ್ಯ ಹೆಚ್ಚಿಸಲು ಆದ್ಯತೆ ನೀಡುತ್ತದೆ. ಸದಾ ಎಲ್ಲ ಕೆಲಸವನ್ನೂ ತನ್ನ ಮೈ ಮೇಲೆ ಎಳೆದುಕೊಂಡು, ಬ್ಯುಸಿ ಆಗಿರುವ ಹೆಣ್ಣನ್ನು ಮೆನೋಪಾಸ್ ತಲ್ಲಣಗೊಳಿಸದಂತೆ ಅಗತ್ಯವಾದ ಬೆಂಬಲವನ್ನು ಈ ಸಂಸ್ಧೆ ಕೊಡುತ್ತದೆ. ಮಹಿಳೆಯರೊಂದಿಗೆ ಸಂವಾದ ಹಾಗೂ ಅಗತ್ಯ ಸಹಕಾರ ನೀಡುವುದು ಈ ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಕೆಲವು. ತಾನು ಮೊದಲು ಬದಲಾದರೆ ಇಡೀ ಕುಟುಂಬ, ಹಾಗೂ ಸಮಾಜದ ಪರಿವರ್ತನೆಗೆ ಸಹಕಾರಿ ಎಂಬುವುದು ಈ ಸಂಸ್ಥೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.