
ಕೃಷಿ (Agriculture)ಯಲ್ಲಿ ಸಂಪಾದನೆ ಕಡಿಮೆ. ತಿಂಗಳು ತಿಂಗಳು ಸಂಬಳ (salary) ಕೈಗೆ ಸಿಗೋದಿಲ್ಲ ಎನ್ನುವ ಕಾರಣಕ್ಕೆ ಕೃಷಿಯನ್ನು ತಾತ್ಸಾರದಿಂದ ನೋಡೋರೇ ಹೆಚ್ಚು. ಹಳ್ಳಿಯಲ್ಲಿದ್ರೆ ಹೆಣ್ಣು ಸಿಗೋದಿಲ್ಲ ಎನ್ನುವ ಕಾರಣಕ್ಕೆ ಅನೇಕ ಯುವಕರು ಪೇಟೆ ಸೇರಿದ್ದಾರೆ. ಅವರೂರಿನಲ್ಲಿ ಬಂಗಾರಂತ ಕೃಷಿ ಭೂಮಿ ಹಾಳಾಗ್ತಿದೆ. ಭಾರತದ ಕೃಷಿ ಭೂಮಿಗಳಲ್ಲಿ ಗಂಡಾಳಿಗಿಂತ ಹೆಣ್ಣಾಳುಗಳೇ ಜಾಸ್ತಿ. ಗದ್ದೆ, ತೋಟದ ಕೆಲಸವನ್ನು ಪ್ರೀತಿಯಿಂದ ಮಾಡುವ ಹೆಣ್ಣು ಮಕ್ಕಳು ನಮ್ಮಲ್ಲಿ ಸಾಕಷ್ಟು ಮಂದಿ. ಕೃಷಿಯಿಂದ ಸಂಪಾದನೆ ಕಡಿಮೆ ಎನ್ನುವವರ ಆಲೋಚನೆ ದಿಕ್ಕನ್ನು ಈ ಮಹಿಳೆ ಬದಲಿಸಿದ್ದಾರೆ. ತಿಂಗಳಿಗೆ ಲಕ್ಷ ಸಂಪಾದನೆ ಮಾಡಿ, ಕೃಷಿಯಲ್ಲೂ ಗಳಿಕೆ ಇದೆ, ಗಳಿಸೋ ವಿಧಾನ ತಿಳಿದಿರಬೇಕು ಎಂಬುದನ್ನು ಮನದಟ್ಟು ಮಾಡಿಸಿದ್ದಾರೆ.
ಅವರು ಮೂಲತಃ ಛತ್ತೀಸ್ಗಢದವರು. ಹೆಸ್ರು ಕೇತ್ಕಿ ಬಾಯಿ ಪಟೇಲ್. ಅವರನ್ನು ಲಖ್ಪತಿ ದೀದಿ ಅಂತಾನೇ ಕರೆಯಲಾಗುತ್ತೆ. ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ "ಬಿಹಾನ್" ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದಾರೆ. ಆರಂಭದಲ್ಲಿ ಕೇತ್ಕಿ ಬಾಯಿ ಕಷ್ಟಪಡಬೇಕಾಯ್ತು. ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಕೇತ್ಕಿ ಬಾಯಿಗೆ ಈಗ ಯಶಸ್ಸು ಸಿಕ್ಕಿದೆ. ಸಮುದಾಯ ಸಂಘಗಳ ಬೆಂಬಲ ಅವರಿಗಿದೆ.
ಕೇತ್ಕಿ ಬಾಯಿ ಗಳಿಕೆ ಎಷ್ಟು?: ಕೇತ್ಕಿ ಬಾಯಿ, ತಮ್ಮ ಹೊಲದಲ್ಲಿ ಬೆಳೆದ ತರಕಾರಿಗಳನ್ನು ವಾರಕ್ಕೆ ನಾಲ್ಕು ಸಲ ಮಾರುಕಟ್ಟೆಗೆ ತೆಗೆದುಕೊಂಡು ಹೋಗ್ತಾರೆ. ಅವರು ಒಂದು ಎಕರೆ ಪ್ರದೇಶದಲ್ಲಿ ತರಕಾರಿ ಬೆಳೆಯುತ್ತಿದ್ದು, ಅವರ ದೈನಂದಿನ ಮಾರಾಟ ಸುಮಾರು 3500 ರೂಪಾಯಿ ಆಗಿದೆ. ಅಂದ್ರೆ ಅವರು ವಾರಕ್ಕೆ ಸುಮಾರು 14 ಸಾವಿರ ರೂಪಾಯಿ ಮತ್ತು ತಿಂಗಳಿಗೆ 32 ಸಾವಿರ ರೂಪಾಯಿಗಳ ನಿವ್ವಳ ಆದಾಯ ಗಳಿಸ್ತಿದ್ದಾರೆ. ವಾರ್ಷಿಕವಾಗಿ ಅವರು ಸುಮಾರು 3.5 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ.
ಕೃಷಿ ಹಣದಲ್ಲೇ ಮನೆ, ಯಂತ್ರ ಖರೀದಿ : ಕೇತ್ಕಿ, ಬೆಳೆಯ ಹಣವನ್ನು ಉಳಿತಾಯ ಮಾಡಿ ಕೃಷಿಗಾಗಿ ಮತ್ತೊಂದಿಷ್ಟು ಜಮೀನು ಖರೀದಿ ಮಾಡಿದ್ದಾರೆ. ಐದು ಎಕರೆ ಜಮೀನು ಖರೀದಿ ಮಾಡಿರುವ ಕೇತ್ಕಿ, ಒಂದು ಮನೆ ಕಟ್ಟಿಸಿದ್ದಾರೆ. ಅಲ್ಲದೆ ಕೆಲ್ಸಕ್ಕಾಗಿ ಅವರು ಒಂದು ಪವರ್ ಲೀಟರ್ ಮಶಿನ್ ಖರೀದಿ ಮಾಡಿದ್ದಾರೆ. ದಿನ ದಿನಕ್ಕೂ ಕೇತ್ಕಿ ಬೆಳೆ ಹೆಚ್ಚಾಗ್ತಿದ್ದು, ಗಳಿಕೆಯಲ್ಲೂ ಏರಿಕೆ ಕಂಡು ಬತ್ತಿದೆ. ಕಣ್ಮುಂದೆ ಜಮೀನಿದ್ರೂ ಕೆಲ್ಸ ಅಂತ ನಿರುದ್ಯೋಗಿಯಾಗಿ ಕುಳಿತಿರುವ ಅದೆಷ್ಟೋ ಯುವಕರು ಕೇತ್ಕಿಯನ್ನು ಸ್ಪೂರ್ತಿಯಾಗಿ ಸ್ವೀಕರಿಸಿ ಕೆಲ್ಸಕ್ಕೆ ಇಳಿದ್ರೆ ಯಶಸ್ಸು ನಿಶ್ಚಿತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.