ಮಾಮ್‌ಶೇಮಿಂಗ್‌ಗೆ ಗರಂ ಆದ ತಾಯಂದಿರು, ಇಂಥ ಕಾಮೆಂಟ್ ಮಾಡೋಕ್ ಹೋಗ್ಬೇಡಿ

By Suvarna News  |  First Published Mar 24, 2020, 6:44 PM IST

ನೀವಿನ್ನೊಂದು ಮಗು ಮಾಡ್ಕೋಬಹುದಲ್ಲಾ, ನಿನ್ನ ಹೊಟ್ಟೆ ನೋಡು ಹೇಗೆ ಬೆಳೆಸಿಕೊಂಡಿದ್ದಿ, ಮಗುವಿಗಿನ್ನೊಂದು ವರ್ಷ ಹಾಲು ಕುಡಿಸಬಹುದಲ್ಲಾ, ಮಗುವಿಗೆ ಹಟ ಕಲ್ಸಿದೀಯಾ, ಮಗುಗೂ ನಿನ್ನ ಹಾಗೇ ಹಟ, ಅದೂ ನಿನ್ನಂತೆ ಬಡಕಟ್ಟೆ ಇತ್ಯಾದಿ ಇತ್ಯಾದಿ ಮಾತುಗಳನ್ನು ತಾಯಿಯಾದವಳು ಆಗಾಗ ಕೇಳುತ್ತಲೇ ಇರುತ್ತಾಳೆ. ಅಲ್ಲಾ, ಇದನ್ನೆಲ್ಲಾ ಹೇಳುವವರ ಸಾಮಾನ್ಯ ಪ್ರಜ್ಞೆ ಎಂಬುದು ಯಾವ ಗ್ರಹಕ್ಕೆ ಹಾರಿ ಹೋಗಿರುತ್ತದೆ ಮಾರಾಯ್ರೆ?


ಭಾರತದಲ್ಲಿ ಅತ್ತೆ, ನಾದಿನಿ, ಚಿಕ್ಕಮ್ಮ, ಅಜ್ಜಿ, ಪಕ್ಕದ್ಮನೆ ಆಂಟಿ, ಆಚೆ ಮನೆ ರಂಗಮ್ಮ, ಅಪರಿಚಿತ ಹೆಂಗಸು ಸೇರಿದಂತೆ ಬಹುತೇಕರು ಇನ್ನೊಬ್ಬರ ಬದುಕಿನಲ್ಲಿ ಅನವಶ್ಯಕವಾಗಿ ಮೂಗು ತೂರಿಸುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ತಿಳಿದುಕೊಂಡಿದ್ದಾರೆ. ಇಂಥವರ ಮಧ್ಯೆ ಕಾಮನ್ ಸೆನ್ಸ್, ಪ್ರೈವೆಸಿ, ಅವರವರ ಬದುಕು ಮುಂತಾದ ಪದಗಳು ಅರ್ಥಹೀನವಾಗಿ ಗೋಡೆಗೆ ತಲೆ ಬಡಿದುಕೊಳ್ಳುತ್ತಿರುತ್ತವೆ. ಇಂಥವರ ಮಧ್ಯೆ ಮಗುವೊಂದನ್ನು ಬೆಳೆಸುವುದು ತಾಯಿಯಾದವಳಿಗೆ ಸುಲಭದ ಮಾತಲ್ಲ. ಸಂಬಂಧಿಸದವರ ಹಲವಾರು ಮಾತುಗಳು ಆಕೆಗೆ ದಿನನಿತ್ಯ ಕಿರಿಕಿರಿ ಮಾಡುತ್ತಲೇ ಇರುತ್ತವೆ. ಇವೇ ಮಾಮ್‌ಶೇಮಿಂಗ್. 

ವಿಷಯವೆಂದರೆ ಮಾಮ್‌ಶೇಮಿಂಗ್ ಮಾಡುವವರಿಗೆ ಆ ಬಗ್ಗೆ ಕಿಂಚಿತ್ತೂ ಪರಿಜ್ಞಾನವೇ ಇರುವುದಿಲ್ಲ. ಅವರದ್ದೇನಿದ್ದರೂ ಮಗು ಬೆಳೆಸುವ ಕುರಿತು, ಪೋಷಕತ್ವ ಕುರಿತು ಬಿಟ್ಟಿ ಸಲಹೆ ಕೊಡುವುದು, ಮಾತಾಡಬೇಕಲ್ಲಾ ಎಂದು ಏನೋ ಮಾತಾಡಿಬಿಡುವ ಸ್ವಭಾವ. ಕೆಲವರದು ತಮ್ಮ ಅನುಭವಕ್ಕೆ ಮಾತಾಡದಿದ್ದರೆ ಅಪಮಾನವಾಗುತ್ತಲ್ಲ ಎಂಬ ಯೋಚನೆ. ಒಟ್ಟಿನಲ್ಲಿ ಈ ಮಾತುಗಳಲ್ಲಿ ಕೊಂಕು, ಅಸಹನೆ, ವ್ಯಂಗ್ಯ,  ಅನಗತ್ಯ ಸಲಹೆಗಳಿಂದ ಆಡಿಸಿಕೊಂಡವರು ಮನದೊಳಗೇ ಒಂದು ಮೊನಚಾದ ಪ್ರತಿಕ್ರಿಯೆ ನೀಡಿ ಸುಮ್ಮನಾಗುತ್ತಾರೆ. ಇಂಥ ಮಾಮ್‌ಶೇಮಿಂಗ್‌ಗೆ ನೀವು ಕೂಡಾ ಒಳಗಾಗಿದ್ದರೆ ಕೈ ಎತ್ತಿ. 

Latest Videos

undefined

ಎಕ್ಸಾಂ ಟೆನ್ಷನ್ ಇಲ್ಲ, ಬೆಳಗ್ಗಿನ ಗಡಿಬಿಡಿಯಿಲ್ಲ, ಆದ್ರೂ ಏನೋ ಮಿಸ್ಸಿಂಗ್! ...

ಇಲ್ಲಿ ಗಮನಿಸಬೇಕಾದುದೆಂದರೆ ಮಕ್ಕಳಿಗಾಗಿ ಎಲ್ಲವನ್ನೂ ಮಾಡುವ ತಾಯಂದಿರಿಗೆ ಮತ್ತಷ್ಟು ಮಾತುಗಳು, ಹೆಂಡತಿಗೆ ಅಲ್ಪಸ್ವಲ್ಪ ಸಹಾಯ ಮಾಡುವ ಪತಿಗೆ ಪ್ರಶಂಸೆ. ಹಿಂದಿನ ತಲೆಮಾರಿಗಿಂತ ಆತ ಎಷ್ಟೊಂದು ಸಹಾಯ ಮಾಡುತ್ತಾನೆಂದು! ಈ ಮಾಮ್‌ಶೇಮಿಂಗ್ ಮಾತುಗಳು ಉದ್ದೇಶಪೂರ್ವವಾಗಿರಲಿ, ಇಲ್ಲದಿರಲಿ, ನಿಮ್ಮ ಮಾತಿನಲ್ಲಿ ಸದುದ್ದೇಶವೇ ಇರಲಿ, ಕೆಲವೊಂದು ಮಾತುಗಳು ಇಂದಿನ ಯಾವ ತಾಯಂದಿರಿಗೂ ಇಷ್ಟವಾಗುವುದಿಲ್ಲ. ಅಂಥ ಕೆಲ ಸಾಮಾನ್ಯ ಮಾತುಗಳಿಂದ ತಾವು ಕಿರಿಕಿರಿಗೊಂಡ ಬಗ್ಗೆ ಕೆಲ ತಾಯಂದಿರು ಇಲ್ಲಿ ಹೇಳಿಕೊಂಡಿದ್ದಾರೆ. ಆ ಮಾತುಗಳನ್ನು ಕೇಳಿದಾಗ ತಮ್ಮ ಮನದೊಳಗೆ ಓಡುವ ಮಾತುಗಳನ್ನೂ ಹಂಚಿಕೊಂಡಿದ್ದಾರೆ. 
****

“ನಿಮ್ಮ ಮಗಳಿಗೆ ಶಾರ್ಟ್ಸ್ ಹಾಕಲು ಏಕೆ ಬಿಡ್ತೀರಾ? ಅವಳು ಬಹಳ ಉದ್ದವಾಗಿದ್ದಾಳೆ, ಜೊತೆಗೆ ಅವಳ ಕಾಲುಗಳು ಕೂಡಾ ಉದ್ದವಿದ್ದಾವೆ”
ಅರೆ, ಅವಳಿಗೆ ಉದ್ದ ಕಾಲುಗಳಿವೆ ಎಂದೇ ಶಾರ್ಟ್ಸ್ ಹಾಕುವುದು ಅವಳಿಗಿಷ್ಟ. ಅವಳಿಷ್ಟ ಬಂದ ಉಡುಗೆ ತೊಡೋಕೆ ಅಮ್ಮನಾದ ನನಗೇ ಅಭ್ಯಂತರವಿಲ್ಲ, ನಿಮ್ಮದೇನಪ್ಪಾ ಅಲ್ಲಿ? 

***
“ನಿಮ್ಮ ಮಗಳು ಎಲ್ಲಕ್ಕೂ ಅಷ್ಟೊಂದು ಹಟ ಮಾಡುವುದಕ್ಕೆ ನೀವು ಈಗಲೇ ಬ್ರೇಕ್ ಹಾಕಬೇಕು. ಇಲ್ಲದಿದ್ದಲ್ಲಿ ಮದುವೆಯಾದ ಮೇಲೆ ಇದನ್ನೆಲ್ಲ ಯಾರು ತಾನೇ ಸಹಿಸಿಕೊಳ್ತಾರೆ?”
ನೀವು ಈಗಲೇ ಬಾಯಿಗೆ ಬ್ರೇಕ್ ಹಾಕಲು ಏನು ತೆಗೆದುಕೊಳ್ಳುತ್ತೀರಿ?

***
“ನೀವ್ಯಾಕೆ ಇನ್ನೊಂದು ಮಗು ಹೊಂದಬಾರದು?”
ಇನ್ನೊಬ್ಬ ಮಹಿಳೆಯ ಗರ್ಭಕೋಶ ಖಂಡಿತವಾಗಿಯೂ ನನ್ ಆಫ್ ಯುವರ್ ಬಿಸ್ನೆಸ್. 

***
“ಇನ್ನೂ ಏಕೆ ಎದೆಹಾಲು ಕುಡಿಸ್ತಾ ಇದೀರಿ?”
ಅರೆ, ನಂಗೆ ಕುಡಿಸಬೇಕೆನಿಸುತ್ತೆ, ನನ್ನ ಮಗು. ಮಧ್ಯದಲ್ಲಿ ನಿಮ್ಮದೇನು?

ಕೊರೋನಾ ರಜೆಯಲ್ಲಿ ಮಕ್ಕಳನ್ನು ಬ್ಯುಸಿಯಾಗಿಡಲು ಇಲ್ಲಿವೆ ಐಡಿಯಾಗಳು......

***
“ನಿನ್ನ ಗಂಡ ಮಕ್ಕಳನ್ನು ನೋಡಿಕೊಳ್ಳುತ್ತಾನೆಂಬುದನ್ನು ನಂಬಲೇ ಆಗಲ್ಲ. ಪತಿಯ ಹತ್ತಿರ ಇಂಥ ಕೆಲಸ ಎಲ್ಲ ಮಾಡಿಸ್ತಾರಾ?”
ಸರಿ, ನಾನಲ್ಲಿ ಇಲ್ಲದಾಗಲೂ ಮಕ್ಕಳು ಎಲ್ಲಾದರೂ ಹಾಳು ಬಡಿದುಕೊಂಡು ಹೋಗಲಿ ಎಂದು ಆತ ಪೇಪರ್ ಓದುತ್ತಾ ಕುಳಿತುಕೊಳ್ಳಬೇಕೇ?

***
“ನೋಡೋಕೆ ಸಿಕ್ಕಾಪಟ್ಟೆ ಸುಸ್ತಾದಂತೆ ಕಾಣಿಸ್ತಿದ್ದಿ, ಮುಂಚೆ ಎಷ್ಟು ಚೆನ್ನಾಗಿದ್ದೆ, ಈಗ ನೋಡು ಹೇಗಾಗಿದೀಯಾ”
ಹೆಲ್ಲೋ, ನಾನು ಎರಡು ಮಕ್ಕಳ ತಾಯಿ. ರಾತ್ರಿ ನಿದ್ರೆಯಿಲ್ಲ, ಬೆಳಗ್ಗೆ ಪುರುಸೊತ್ತಿಲ್ಲ. ಈಗಾಗಲೇ ಸುಸ್ತಾಗಿ ಸಾಯ್ತಿದೀನಿ. ಇದರ ಮಧ್ಯೆ ನನ್ನ ಕೀಳರಿಮೆಗೂ ತಳ್ಳಿ ಆನಂದದಿಸಬೇಕಂಥ ಇದೀರಾ?

***
“ಮಕ್ಕಳೊಂದಿಗೆ ಕಳೆಯೋಕೆ ನಿಂಗೆ ಸಮಯ ಸಿಗತ್ತಾ?”
ವರ್ಕಿಂಗ್ ಮದರ್ ಎಂಬುದರ ಕುರಿತು ಪಶ್ಚಾತ್ತಾಪ ಮೂಡಿಸುವ ಉದ್ದೇಶವಷ್ಟೇ ಈ ಪ್ರಶ್ನೆಯದು. ವರ್ಕಿಂಗ್ ಮದರ್ ಎಂದ ಕೂಡಲೇ ಮಕ್ಕಳೊಂದಿಗೆ ಸಮಯ ಕಳೆಯಲ್ಲ ಎಂದಲ್ಲ, ಉಳಿದವರಿಗಿಂತ ಹಾರ್ಡ್ ವರ್ಕ್ ಮಾಡಿ ಎಲ್ಲ ಕೆಲಸಕ್ಕೂ ನ್ಯಾಯ ಸಲ್ಲಿಸುತ್ತೇನೆಂದು. 
***
“ಹೊಟ್ಟೆ ನೋಡು ಹೇಗೆ ಬೆಳೆಸ್ಕೊಂಡಿದ್ದಿ? ”
ಹೌದು ತಾಯಿ, ನನಗೆ ಪ್ರಗ್ನೆನ್ಸಿಯಲ್ಲಿ ದೊಡ್ಡ ಹೊಟ್ಟೆ ನೋಡೀ ನೋಡಿ ಅಭ್ಯಾಸವಾಗಿ, ಇರಲಿ, ಇಲ್ಲದಿದ್ದರೆ ನನ್ನ ಗುರುತು ನನಗೇ ಸಿಗೋಲ್ಲವಲ್ಲ ಎಂದು ಉಳಿಸಿ, ಬೆಳೆಸಿಕೊಂಡಿದ್ದೀನಿ. ನಿಂಗೇನಾದ್ರೂ ಪ್ರಾಬ್ಲಮ್ಮಾ?

click me!