
ಪ್ರತಿ ತಿಂಗಳು ಪಿರಿಯಡ್ಸ್ ಗೆ ಒಳಗಾಗುವ ಮಹಿಳೆಯರ ಅನುಭವ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಮಹಿಳೆಯರು ಬೆನ್ನು ನೋವು, ಕಿರಿಕಿರಿ, ಉದ್ವೇಗ, ದೌರ್ಬಲ್ಯ ಮುಂತಾದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಟ್ಟಿನ ಸಮಯದಲ್ಲಿ ಕೆಲಸ ಮಾಡುವುದು ಸವಾಲಿನ ಕೆಲಸ. ಒಂದ್ಕಡೆ ದೈಹಿಕ ನೋವು, ಇನ್ನೊಂದು ಕಡೆ ಮಾನಸಿಕ ಸಮಸ್ಯೆ ಮಹಿಳೆಯರು ವಿಶ್ರಾಂತಿ ಬಯಸುವಂತೆ ಮಾಡುತ್ತದೆ.
ಮಹಿಳೆಯರ ಪಿರಿಯಡ್ಸ್ (Periods) ಸಮಸ್ಯೆಯನ್ನು ಮನಗಂಡ ಹಲವು ಕಂಪನಿ (Company) ಗಳು ಈಗಾಗಲೇ ಪಿರಿಯಡ್ಸ್ ಲೀವ್ ನೀಡುತ್ತವೆ. ಸ್ವಿಗ್ಗಿ ಮತ್ತು ಜೊಮಾಟೊ ನಂತರ ಇದೀಗ ಭಾರತ (India) ದ ಮತ್ತೊಂದು ಕಂಪನಿ ಮಹಿಳಾ ಉದ್ಯೋಗಿ (Employee) ಗಳಿಗೆ ಮುಟ್ಟಿನ ರಜೆ ಘೋಷಣೆ ಮಾಡಿದೆ.
ಮುಟ್ಟಿನ ರಜೆ ಘೋಷಣೆ ಮಾಡಿದ ಕಂಪನಿ ಯಾವುದು? : ಬಹುತೇಕ ಮಹಿಳೆಯರು ಪಿರಿಯಡ್ಸ್ ನೋವನ್ನು ಮುಚ್ಚಿಡಲು ನೋಡ್ತಾರೆ. ಈ ಬಗ್ಗೆ ಧೈರ್ಯವಾಗಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವುದಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ದೆಹಲಿ ಮೂಲಕ ಕಂಪನಿಯು ಹೊಸ ನೀತಿಯನ್ನು ಪ್ರಕಟಿಸಿದೆ. ಓರಿಯಂಟ್ ಎಲೆಕ್ಟ್ರಿಕ್ ಕಂಪನಿ ಮಹಿಳೆಯರಿಗಾಗಿ ಹೊಸ ಹೆಜ್ಜೆ ಇಟ್ಟಿದೆ. ಗ್ರಾಹಕ ಎಲೆಕ್ಟ್ರಿಕಲ್ ಉತ್ಪನ್ನಗಳಲ್ಲಿ ವ್ಯವಹಾರ ನಡೆಸುವ ಓರಿಯಂಟ್ ಎಲೆಕ್ಟ್ರಿಕ್ ತನ್ನ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದೆ. ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಅಗತ್ಯವಿದೆ ಎಂಬುದನ್ನು ಮನಗಂಡ ಏಕೈಕ ದೇಶ ಭಾರತವಲ್ಲ. ಜಪಾನ್, ದಕ್ಷಿಣ ಕೊರಿಯಾ, ಸ್ಪೇನ್, ತೈವಾನ್, ಇಂಡೋನೇಷ್ಯಾ ಮತ್ತು ಇಟಲಿ ಸೇರಿದಂತೆ ಅನೇಕ ದೇಶಗಳು ಮಹಿಳೆಯರಿಗೆ ಮುಟ್ಟಿನ ರಜೆಯನ್ನು ನೀಡುತ್ತವೆ.
ಮುಟ್ಟಿನ ರಜೆ ಅಂದ್ರೇನು? : ಕಂಪನಿ ನೀತಿ ಪ್ರಕಾರ, ಮಹಿಳಾ ಉದ್ಯೋಗಿಗಳು ಮುಟ್ಟಿನ ಸಮಯದಲ್ಲಿ ಒಂದು ಅಥವಾ ಎರಡು ದಿನ ರಜೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆನ್‌ಲೈನ್ ಆಹಾರ ವಿತರಣಾ ಸೇವೆಗಳನ್ನು ಒದಗಿಸುವ ಝೊಮಾಟೊ ಮಹಿಳಾ ಉದ್ಯೋಗಿಗಳಿಗೆ 10 ದಿನಗಳ ರಜೆ ನೀಡುತ್ತದೆ. ಯಾವುದೇ ಅವಮಾನ ಅಥವಾ ಕಳಂಕವಿಲ್ಲದೆ ಮಹಿಳೆಯರು ರಜೆಗೆ ಅರ್ಜಿ ಸಲ್ಲಿಸಬಹುದು.
WOMEN HEALTH : ಮುಟ್ಟಿನ ದಿನಾಂಕ ಟ್ರ್ಯಾಕ್ ಮಾಡಿ, ಆರೋಗ್ಯವಾಗಿರಿ
ಮುಟ್ಟಿಗೆ ಸಂಬಂಧಿಸಿದಂತೆ ಯಾವ ದೇಶದಲ್ಲಿ ಯಾವ ನಿಯಮವಿದೆ ಗೊತ್ತಾ? :
ಚೀನಾ : ವಿಶ್ವವಿಖ್ಯಾತ ಚೀನಾ ದೇಶದ ಮಹಿಳೆಯರು ಪಿರಿಯಡ್ಸ್ ಆದ ದಿನಗಳಲ್ಲಿ ರಜೆ ಪಡೆಯಲು ದೊಡ್ಡ ಮಟ್ಟದ ಚಳವಳಿಯನ್ನು ಹಮ್ಮಿಕೊಂಡಿದ್ದರು. ಸರ್ಕಾರ ಕೊನೆಯಲ್ಲಿ ಮಹಿಳೆಯರ ಹೋರಾಟಕ್ಕೆ ಮಣಿಯಿತು. ಸರ್ಕಾರ ಅವರ ಬೇಡಿಕೆಗಳನ್ನು ಒಪ್ಪಿಕೊಂಡಿದ್ದಲ್ಲದೆ ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ 2-3 ದಿನಗಳ ರಜೆಯನ್ನು ನೀಡುತ್ತ ಬಂದಿದೆ.
ಇಂಡೋನೇಷ್ಯಾ : ಇಂಡೋನೇಷ್ಯಾ ಸರ್ಕಾರ, ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ 2 ದಿನಗಳ ರಜೆ ನೀಡುವುದಾಗಿ ಘೋಷಿಸಿದೆ. ಈ ಕಾನೂನನ್ನು ನಿರ್ಲಕ್ಷಿಸುವ ಕಂಪನಿಗಳ ವಿರುದ್ಧ ಮಾನಸಿಕ ಕಿರುಕುಳದ ಪ್ರಕರಣವನ್ನು ದಾಖಲಿಸಲಾಗುತ್ತದೆ. ಕಂಪನಿ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಲಾಗುತ್ತದೆ.
ದಕ್ಷಿಣ ಕೊರಿಯಾ : ದಕ್ಷಿಣ ಕೋರಿಯಾದಲ್ಲೂ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಜೆ ನೀಡಲಾಗುತ್ತದೆ. 2001 ರಲ್ಲಿಯೇ ಅಲ್ಲಿನ ಸರ್ಕಾರ ರಜೆ ನೀತಿಯನ್ನು ಘೋಷಣೆ ಮಾಡಿದೆ. ಈ ನಿಯಮ ಜಾರಿಗೆ ಬಂದ ನಂತ್ರ ಉದ್ಯೋಗ ಅರಸಿ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.
ಹೊಲಿಗೆ ಮಷಿನ್ ದಾರ ಪದೇ ಪದೇ ಕಟ್ ಆಗ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ
ತೈವಾನ್ : ತೈವಾನ್‌ನಲ್ಲಿ 2013 ರಲ್ಲಿ ಮುಟ್ಟಿನ ರಜೆ ನೀಡುವ ಪ್ರಕ್ರಿಯೆ ಶುರುವಾಯ್ತು. ಅಲ್ಲಿನ ಕಂಪನಿಗಳು ಮಹಿಳೆಯರಿಗೆ ಮನೆಯಿಂದಲೇ ಕಚೇರಿ ಕೆಲಸ ಮಾಡಲು ಅವಕಾಶ ನೀಡಿವೆ.
ಜಪಾನ್ : ಮುಟ್ಟಿನ ಸಮಯದಲ್ಲಿ ಇಲ್ಲಿನ ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ಅವಕಾಶವಿದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಜೆ ನೀಡುವ ನಿಯಮ ಜಾರಿಗೆ ತರಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.