ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಜಿಲ್ಲೆಯ ವಿವಿಧ ಕ್ಷೇತ್ರಗಳು ಮತ್ತಷ್ಟೂರಂಗೇರುತ್ತಿದ್ದು, ಅಭ್ಯರ್ಥಿಗಳ ಬಿಡುವಿಲ್ಲದ ಓಡಾಟ ಶುರುವಾಗಿದೆ. ಅಖಾಡಕ್ಕಿಳಿದಿರುವ ಪತಿಯರಿಗೆ ಕುಟುಂಬದ ಸದಸ್ಯರು ಸಾಥ್ ನೀಡುತ್ತಿದ್ದು, ಬಿಸಿಲೆನ್ನದೆ ಕ್ಷೇತ್ರಾದ್ಯಂತ ಓಡಾಟ ನಡೆಸಿ, ಮತದಾನಕ್ಕೆ ಮೊರೆ ಇಡುತ್ತಿದ್ದಾರೆ.
ಕೆ.ಎಂ. ಮಂಜುನಾಥ್
ಬಳ್ಳಾರಿ (ಏ.18) : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಜಿಲ್ಲೆಯ ವಿವಿಧ ಕ್ಷೇತ್ರಗಳು ಮತ್ತಷ್ಟೂರಂಗೇರುತ್ತಿದ್ದು, ಅಭ್ಯರ್ಥಿಗಳ ಬಿಡುವಿಲ್ಲದ ಓಡಾಟ ಶುರುವಾಗಿದೆ. ಅಖಾಡಕ್ಕಿಳಿದಿರುವ ಪತಿಯರಿಗೆ ಕುಟುಂಬದ ಸದಸ್ಯರು ಸಾಥ್ ನೀಡುತ್ತಿದ್ದು, ಬಿಸಿಲೆನ್ನದೆ ಕ್ಷೇತ್ರಾದ್ಯಂತ ಓಡಾಟ ನಡೆಸಿ, ಮತದಾನಕ್ಕೆ ಮೊರೆ ಇಡುತ್ತಿದ್ದಾರೆ.
ಈ ಬಾರಿ ಚುನಾವಣೆ ಅಖಾಡ ತೀವ್ರ ಹಣಾಹಣಿಯಿಂದ ಕೂಡಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಕಣದಲ್ಲಿ ಸುಲಭವಾಗಿ ಗೆಲುವು ಯಾರಿಗೂ ದಕ್ಕುವುದಿಲ್ಲ ಎಂಬುದು ಖಾತ್ರಿಯಿದೆ. ಇದು ಅಭ್ಯರ್ಥಿಗಳಲ್ಲಿ ಆತಂಕದ ಬೇಗುದಿ ಮೂಡಿಸಿದ್ದು, ಉರಿಬಿಸಿಲೆನ್ನದೆ ಮತದಾರರ ಮನೆಯ ಕದ ತಟ್ಟುತ್ತಿದ್ದಾರೆ. ಪತಿಯರ ಮತಬೇಟೆಗೆ ಪತ್ನಿಯರು ಸಾಥ್ ನೀಡಿದ್ದು, ಮಹಿಳೆಯರಿಗೆ ಕುಂಕುಮ ತಿಲಕವಿಟ್ಟು ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ; ಒಳ ಮೀಸಲಾತಿ ಹೊಡೆತ ನೀಡಲು ಸಜ್ಜಾದ ಲಂಬಾಣಿ ಸಮುದಾಯ!
ಅಭ್ಯರ್ಥಿಯ ಪತ್ನಿಯೇ ಮತ ಕೇಳಲು ಮನೆ ಬಾಗಿಲಿಗೆ ತೆರಳುವುದರಿಂದ ಮತದಾರರು ಸುಲಭವಾಗಿ ಮನಸೋಲುತ್ತಾರೆ. ಎಲ್ಲ ಕಡೆ ಅಭ್ಯರ್ಥಿಯೇ ತೆರಳಲು ಸಾಧ್ಯವಾಗುವುದಿಲ್ಲ. ಆದರೆ, ಮತದಾರರು ಅಭ್ಯರ್ಥಿಯೇ ಬಂದು ಮತ ಕೇಳಲಿ ಎಂದು ನಿರೀಕ್ಷೆ ಮಾಡುತ್ತಾರೆ. ಹೀಗಾಗಿ ಪತಿಯ ಸಹಕಾರಕ್ಕಾಗಿ ಪತ್ನಿ ಪ್ರಚಾರಕ್ಕೆ ತೆರಳುವುದರಿಂದ ಎಲ್ಲ ಮತದಾರರನ್ನು ಭೇಟಿ ಮಾಡಲು ಸಾಧ್ಯವಾಗಲಿದೆ ಎಂಬುದು ಲೆಕ್ಕಾಚಾರ. ಇದು ಅಭ್ಯರ್ಥಿಗಳ ಪತ್ನಿಯರು ಅರಿಷಿಣ- ಕುಂಕುಮ ಹಿಡಿದು ಮನೆ- ಮನೆ ಸುತ್ತುವಂತೆ ಮಾಡಿದೆ. ಚುನಾವಣೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಪ್ರಚಾರದ ಅಬ್ಬರ ಜೋರಾಗುವ ಸಾಧ್ಯತೆಯಿದೆ.
ಪತ್ನಿಯರ ಸಾಥ್- ಅಭ್ಯರ್ಥಿಗಳು ನಿರಾಳ:
ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕ ಜಿ. ಸೋಮಶೇಖರ ರೆಡ್ಡಿ(G Somashekhar reddy MLA) ಅವರೊಂದಿಗೆ ಪತ್ನಿ ವಿಜಯಮ್ಮ ಜತೆಯಾಗಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ವಾರ್ಡ್‌ಗಳಿಗೆ ತೆರಳಿ ಪತಿಯ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಪತಿ ಶಾಸಕರಾಗಿ ಕೈಗೊಂಡಿರುವ ಅನೇಕ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ವಿಜಯಮ್ಮ ಅವರು ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದು, ಜನಸೇವೆಗೆ ಪತಿಗೆ ಮತ್ತೊಂದು ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಇದ್ದು ಪತಿಯರ ಪರ ಪತ್ನಿಯರು ಪ್ರಚಾರಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್. ಗಣೇಶ್‌ನ ಪತ್ನಿ ಶ್ರೀದೇವಿ, ಬಿಜೆಪಿ ಅಭ್ಯರ್ಥಿ ಟಿ.ಎಚ್. ಸುರೇಶ್‌ಬಾಬು ಪತ್ನಿ ಟಿ.ಎಚ್. ದೀಪಾ ಅವರು ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಅರುಣಾ ಅವರಿಗೆ ಪುತ್ರಿ ಬ್ರಹ್ಮಿಣಿ ರೆಡ್ಡಿ ಸಾಥ್ ನೀಡಿದ್ದು, ತಾಯಿ ಜತೆ ನಿತ್ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಪರ ಪತ್ನಿ ಅನ್ನಪೂರ್ಣ ಅವರು ಕ್ಷೇತ್ರದಲ್ಲಿ ಓಡಾಟ ನಡೆಸಿ, ಪತಿಗೆ ಮತ್ತೆ ಜನಾಶೀರ್ವಾದ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಂಡೂರಿನ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರ ಮೈದುನ ಪ್ರಹ್ಲಾದ್ ಅವರು ಸಾಥ್ ನೀಡಿ ಪ್ರಚಾರದಲ್ಲಿ ತೊಡಗಿದ್ದು ಸಂಬಂಧಿಕರು ಜೊತೆಗಿದ್ದು ಪ್ರಚಾರ ನಡೆಸುತ್ತಿದ್ದಾರೆ.
Karnataka BJP: ವಾರದೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಅಂತಿಮ ಆಗುತ್ತೆ: ಕಟೀಲ್
ಬೆಳಗ್ಗೆಯೇ ಎದ್ದು ತಮ್ಮದೇ ಆದ ಗುಂಪಿನ ಜತೆ ಪ್ರಚಾರಕ್ಕಾಗಿ ತೆರಳುವ ಮಹಿಳಾ ಮಣಿಗಳು ಬಿಸಿಲು ಲೆಕ್ಕಿಸದೆ ಮನೆಮನೆ ಸುತ್ತುತ್ತಿದ್ದಾರೆ. ಮಧ್ಯಾಹ್ನದ ಊಟದ ಬಳಿಕ ಕೆಲ ಹೊತ್ತು ವಿಶ್ರಾಂತಿ ಪಡೆದು, ಸಂಜೆಯಾಗುತ್ತಿದ್ದಂತೆಯೇ ಮತ್ತೆ ಪ್ರಚಾರಕ್ಕಾಗಿ ತೆರಳುತ್ತಿದ್ದಾರೆ.
ಅಭ್ಯರ್ಥಿಗಳು ಒಂದು ಬಡಾವಣೆಯಲ್ಲಿ ಪ್ರಚಾರ ಕೈಗೊಂಡರೆ, ಪತ್ನಿಯರು ಮತ್ತೊಂದು ಬಡಾವಣೆಯಲ್ಲಿ ಮತದಾನಕ್ಕಾಗಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಜಿಲ್ಲೆಯಲ್ಲಿ ಕಂಡುಬರುತ್ತಿವೆ.