
ಎಲ್ಲವೂ ಅಂದರೆ ಕೈಕಾಲು ಕಣ್ಣು ಮೂಗುಗಳಿರುವ ನಾವೇ ಬಹುತೇಕ ಸಂದರ್ಭಗಳಲ್ಲಿ ಅದು ಸಾಧ್ಯವಿಲ್ಲ ಇದು ಸಾಧ್ಯವಿಲ್ಲ ಎಂದು ನಿರಾಶರಾಗುತ್ತೇವೆ. ದೇವರು ಕಷ್ಟವನ್ನೆಲ್ಲಾ ನನಗೆಯೇ ಕೊಟ್ಟಿದ್ದೇನೆ ಎಂದು ದುಃಖಿತರಾಗುತ್ತೇವೆ. ಆದರೆ ಕೈಕಾಲು, ಕಣ್ಣುಗಳು ಇಲ್ಲದವರೇ ಅಸಾಧ್ಯವೂ ಸಾಧ್ಯ ಎಂಬುದನ್ನು ತೋರಿಸಿದ ಅನೇಕ ಘಟನೆಗಳು ಇವೆ. ಮನುಷ್ಯನ ಯೋಚನೆ, ಮನೋಬಲ, ಇಚ್ಛಾಶಕ್ತಿಯ ಮುಂದೆ ಯಾವುದು ಅಸಾಧ್ಯವೆನಿಸುವುದಿಲ್ಲ, ಆದರೂ ನಮ್ಮಿಂದಾಗಲ್ಲ ಎನ್ನುವ ನಮ್ಮ ಯೋಚನೆಯೇ ನಮ್ಮನ್ನು ಪಾತಾಳಕ್ಕೆ ತಳ್ಳುತ್ತದೆ. ಆದರೆ ಇಲ್ಲೊಂದು ಪುಟಾಣಿ ಕಂದ ತನಗೆ ಎರಡು ಕೈಗಳಿಲ್ಲ, ಕಾಲುಗಳಿಲ್ಲದಿದ್ದರೂ ತನ್ನಿಂದ ಸಾಧ್ಯವಾಗುವುದನ್ನು ಮಾಡಲು ಪ್ರಯತ್ನಿಸುತ್ತಿದ್ದಾನೆ. ಆದರೆ ತನ್ನ ಕಂದನಿಗೆ ಕೈಕಾಲುಗಳಿಲ್ಲ ಆತನ ಬದುಕಿನಲ್ಲಿ ಸಾಧನೆ ಮಾಡುವುದಕ್ಕೆ ಮಿತಿಗಳಿವೆ ಎಲ್ಲವೂ ಆತನಿಂದ ಸಾಧ್ಯವಿಲ್ಲ ಎಂದು ಭಾವಿಸಿದ್ದ ತಾಯಿಗೆ ಪುಟ್ಟ ಕಂದನ ಸಣ್ಣ ಪ್ರಯತ್ನವೇ ಅಚ್ಚರಿ ಮೂಡಿಸಿದೆ. ಅವರು ತಮ್ಮ ಪುಟ್ಟ ಕಂದ ಕೈಗಳಿಲ್ಲದಿದ್ದರೂ ಡ್ರಮ್ ಬಾರಿಸಲು ಯತ್ನಿಸುತ್ತಿರುವ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿ ಪೋಸ್ಟ್ ಮಾಡಿದ್ದು, ಆ ವೀಡಿಯೋ ಈಗ ಬಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಪುಟಾಣಿ ಕಂದನಿಗೆ ಶುಭ ಹಾರೈಸಿದ್ದಾರೆ.
ಹೌದು ಕೆಲವೊಮ್ಮೆ ಬಾಲ್ಯದ ಪ್ರೋತ್ಸಾಹ, ತರಬೇತಿ, ಮಕ್ಕಳು ಬೆಳೆದ ವಾತಾವರಣ ಮುಂದೆ ಮಕ್ಕಳು ಏನಾಗಬಹುದು ಎಂಬುದರ ಸಣ್ಣ ಸೂಚನೆ ನೀಡಬಹುದು. ಕೈಕಾಲುಗಳಿಲ್ಲದಿದ್ದರೂ ಅನೇಕರು ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ, ಸೊಗಸಾಗಿ ಪೇಂಟಿಂಗ್ ಮಾಡಿದಂತಹ ಅನೇಕ ಉದಾಹರಣೆಗಳಿವೆ. ಕೈಕಾಲುಗಳೇ ಇಲ್ಲದ ಮಕ್ಕಳು ಜನಿಸಿದರೆ ಪೋಷಕರಿಗೆ ಅದೇ ಒಂದು ದೊಡ್ಡ ಕೊರಗಾಗಿರುತ್ತದೆ. ನಮ್ಮ ಕಾಲ ಕಳೆದ ನಂತರ ಆ ಕಂದನ ಆರೈಕೆ ಮಾಡುವರು ಯಾರೋ ಎಂದು ಅನೇಕ ತಾಯಂದಿರು ಖಿನ್ನತೆಗೆ ಜಾರುತ್ತಾರೆ. ಆದರೆ ಅಂತಹ ಸಂದರ್ಭದಲ್ಲೂ ಪುಟ್ಟ ಮಕ್ಕಳು ಅಸಾಧ್ಯವೆನಿಸಿದ್ದನ್ನು ಮಾಡಿದಾಗ ತಾಯಿಯಷ್ಟು ಹೆಮ್ಮೆ ಪಡುವವಳು ಈ ಜಗತ್ತಿನಲ್ಲಿ ಬೇರೆ ಯಾರು ಇರಲು ಸಾಧ್ಯವಿಲ್ಲ. ಇದರ ಜೊತೆಗೆ ಬಾಲ್ಯದಲ್ಲಿ ಮಕ್ಕಳಿಗೆ ನೀಡುವ ತರಬೇತಿಗಳು, ನಮ್ಮ ಕಾಲ ಕಳೆದ ನಂತರವೂ ಇಂತಹ ಮಕ್ಕಳು ಯಾರ ಅವಲಂಬನೆಯೂ ಇಲ್ಲದೇ ಸ್ವಾವಲಂಬಿಯಾಗಿ ಬದುಕಬಹುದು ಎಂಬುದನ್ನು ಸಾಬೀತುಪಡಿಸಿದ ಅನೇಕ ಘಟನೆಗಳಿವೆ.
ಅದೇ ರೀತಿ ಇಲ್ಲೊಂದು ಪುಟ್ಟ ಕಂದನಿಗೆ ಕೈಕಾಲುಗಳಿಲ್ಲ, ಹಾಗಂತ ಈ ಮಗು ಇನ್ನೂ ಏನೋ ಮಹಾನ್ ಸಾಧನೆ ಮಾಡಿಲ್ಲ, ಆದರೆ ಅದು ಸಾಧಿಸುವ ಹಾದಿಯಲ್ಲಿದೆ. ತಾಯಿ ಡ್ರಮ್ ಬಾರಿಸುವುದನ್ನು ನೋಡುವ ಕಂದ ತನಗೆ ಕೈಗಳಿಲ್ಲದಿದ್ದರೂ ಡ್ರಮ್ ಬಾರಿಸುವ ಪ್ರಯತ್ನ ಮಾಡುತ್ತಿದೆ. starfish.chronicles ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಅವರು ಹೀಗೆ ಬರೆದುಕೊಂಡಿದ್ದಾರೆ. 'ಬ್ರೈಸನ್‌ಗೆ ಮಿತಿ ಇದೆ ಎಂದು ನಾವು ಭಾವಿಸಿದಾಗಲೆಲ್ಲಾ, ಅವನು ನಮ್ಮ ಯೋಚನೆ ತಪ್ಪು ಎಂದು ಸಾಬೀತುಪಡಿಸುತ್ತಾನೆ. ನಮ್ಮ ಕೈಯಲ್ಲಿ ಭವಿಷ್ಯದ ಡ್ರಮ್ಮರ್ ಇದ್ದಾನೆಯೇ??!' ಎಂದು ಬರೆದು ವೀಡಿಯೋವನ್ನು ಆತನ ತಾಯಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅವರು ವೀಡಿಯೋದ ಮೇಲೆ ನನ್ನ ಕೈಗಳಿಲ್ಲದ ಪುತ್ರ ನಾನು ಡ್ರಮ್ ಬಾರಿಸುವುದನ್ನು ನೋಡಿ ತಾನು ಅದೇ ರೀತಿ ಮಾಡಬೇಕೆಂದು ಬಾರಿ ಆಸೆ ಪಟ್ಟಿದ್ದಾನೆ ಆದರೆ ಆಗಲಿಲ್ಲ ಆದರೆ ಆತ ನಿರ್ಧರಿಸಿದರೆ ಸಾಧ್ಯವಿದೆ ಎಂದು ಅವರು ಬರೆದುಕೊಂಡಿದ್ದಾರೆ.
ವೀಡಿಯೋದಲ್ಲಿ ಕೈಕಾಲುಗಳೆರಡೂ ಇಲ್ಲದ ಪುಟ್ಟ ಕಂದ ಬ್ರೈಸನ್ ಡ್ರಮ್ ಬಾರಿಸುವುದಕ್ಕೆ ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ನೋಡಬಹುದು. ಹಾಗೂ ಮಗನ ಪ್ರಯತ್ನವನ್ನು ತಾಯಿ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದು, ಭಾವುಕಳಾಗಿದ್ದಾಳೆ. ಇವರ ಇನ್ಸ್ಟಾಗ್ರಾಮ್ ಪ್ರೊಫೈಲ್ ತುಂಬೆಲ್ಲಾ ಪುಟ್ಟ ಕಂದನ ಹಲವು ವೀಡಿಯೋಗಳಿದ್ದು, ಇವರು ಕೈಕಾಲುಗಳಿಲ್ಲದ ತಮ್ಮ ಮಗನನ್ನು ಸ್ವಾವಲಂಬಿಯಾಗಿ ಬೆಳೆಸುವುದಕ್ಕೆ ಬಾಲ್ಯದಲ್ಲೇ ಹಲವು ರೀತಿಯಲ್ಲಿ ಪ್ರಯತ್ನಿಸುವುದನ್ನು ಇವರ ಪ್ರೊಫೈಲ್‌ನಲ್ಲಿ ಇರುವ ವೀಡಿಯೋಗಳಲ್ಲಿ ಕಾಣಬಹುದಾಗಿದೆ. ಇನ್ನು ಈ ಪುಟ್ಟ ಕಂದನ ವೀಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುಟ್ಟ ಕಂದನ ಪ್ರಯತ್ನಕ್ಕೆ ವಾವ್ ಎಂದ ನೆಟ್ಟಿಗರು
ಇದೊಂದು ಅದ್ಭುತ. ನೀವು ಅವನಿಗೆ ಅಡ್ಡಿಪಡಿಸಲಿಲ್ಲ ಮತ್ತು ಅವನ ಕೌಶಲ್ಯ ಮತ್ತು ತಾಳ್ಮೆಯನ್ನು ಅಭ್ಯಾಸ ಮಾಡಿ ನಂತರ ಅವನ ಗುರಿಯನ್ನು ಸಾಧಿಸಲು ನೀವು ಅವಕಾಶ ಮಾಡಿಕೊಟ್ಟಿದ್ದೀರಿ. ಅವನ ಸ್ವಂತ ಆತ್ಮವಿಶ್ವಾಸ, ಶಕ್ತಿ ಮತ್ತು ದೃಢೀಕರಣದ ಆಂತರಿಕ ಪ್ರಜ್ಞೆ ಎಷ್ಟು ಅದ್ಭುತ. ಅದ್ಭುತ ಕೆಲಸ ತಾಯಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವನು ಅದನ್ನು ಮತ್ತೊಮ್ಮೆ ಮಾಡಿ ತನಗೆ ಸಾಧ್ಯ ಎಂದು ಸಾಬೀತುಪಡಿಸಿದನು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನು ಎಂದಿಗೂ ಬಿಟ್ಟುಕೊಡಬಾರದು ಎಂಬುದನ್ನು ಎಳವೆಯಿಂದಲೇ ಕಲಿಯುತ್ತಿದ್ದಾನೆ. ಅವನು ಬಲಿಷ್ಠ ವ್ಯಕ್ತಿ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಜಗತ್ತಿಗೆ ಬೇಕಾಗಿರುವುದು ಇದೇ ರೀತಿಯ ವಿಷಯ. ಎಂತಹ ಅದ್ಭುತ ಪುಟ್ಟ ವ್ಯಕ್ತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಪಿತೃಗಳಿಗೆ ಪಿಂಡಪ್ರದಾನ ಮಾಡಿದ ವಿದೇಶಿ ಪ್ರವಾಸಿಗರು: ವೀಡಿಯೋ ವೈರಲ್
ಇದನ್ನೂ ಓದಿ: ಪ್ಯಾಲೇಸ್ತೀನ್ ದೇಶ ಎಂದು ಗುರುತಿಸಲು ನಿರಾಕರಿಸಿದ ಜಾರ್ಜಿಯಾ ಮೆಲೋನಿ: ಪ್ರತಿಭಟನಾಕಾರರ ಆಕ್ರೋಶಕ್ಕೆ ತತ್ತರಿಸಿದ ಇಟಲಿ
ಇದನ್ನೂ ಓದಿ: ತಿಂಗಳಲ್ಲಿ ಎರಡೆರಡು ಬಾರಿ ಉಕ್ಕಿದ ಭಾರತದ ಏಕೈಕ ಜೀವಂತ ಜ್ವಾಲಾಮುಖಿ: ಈ ಜ್ವಾಲಾಮುಖಿ ಇರೋದೆಲ್ಲಿ ಗೊತ್ತಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.