
ಹಿಂದೆಲ್ಲಾ ಈಗಿನ ತರಹ ಮಷಿನ್‌ಗಳಿರಲಿಲ್ಲ. ಆದ್ದರಿಂದ ಜನರು ಮನೆಯಲ್ಲೇ ಕುಟ್ಟಿ ಪುಡಿ ಮಾಡಿದ ಹಿಟ್ಟನ್ನು ಬಳಸುತ್ತಿದ್ದರು. ಇದೇ ಕಾರಣಕ್ಕೆ ಹಿಟ್ಟು ಇಂದು ಅಂಗಡಿಯಲ್ಲಿ ಲಭ್ಯವಿರುವ ಹಿಟ್ಟಿಗಿಂತ ಹೆಚ್ಚು ಪೌಷ್ಟಿಕವಾಗಿರುತ್ತಿತ್ತು. ಅಷ್ಟು ಮಾತ್ರವಲ್ಲ, ಅವರು ಹಿಟ್ಟು ಮಾಡಲು ಬೀಸೆಕಲ್ಲು ಬಳಸುತ್ತಿದ್ದರಿಂದ ಮಹಿಳೆಯರಿಗೂ ಒಳ್ಳೆಯ ವ್ಯಾಯಾಮವಾದಂತಾಗುತ್ತಿತ್ತು. ಆದರೆ ಈಗ ಜನರು ಎಲೆಕ್ಟ್ರಿಕ್ ಗ್ರೈಂಡರ್‌ಗಳನ್ನು ಬಳಸಿ ಪುಡಿಮಾಡಿದ ಹಿಟ್ಟನ್ನು ಸೇವಿಸುತ್ತಾರೆ. ಇನ್ನು ನಗರಗಳಲ್ಲಿಯಂತೂ ಪ್ಯಾಕ್ ಮಾಡಿದ ಹಿಟ್ಟೇ ಗತಿ. ಪ್ಯಾಕ್ ಮಾಡಿದ ಹಿಟ್ಟು ಸಾಮಾನ್ಯವಾಗಿ ಹಳೆಯದಾಗಿರುತ್ತದೆ. ಅಷ್ಟೇ ಅಲ್ಲ, ಇದು ಲಾಂಗ್ ಟೈಂ ಬರಲು ಕೆಮಿಕಲ್ ಬಳಸಲಾಗುತ್ತೆ.
ಅಯ್ಯೋ ಇಷ್ಟಕ್ಕೆ ಸುಮ್ಮನಾಗಬೇಡಿ. ಹಿಟ್ಟು ಕೂಡ ಕಲಬೆರಕೆಯಾಗುತ್ತದೆ. ಹಾಗಾದ್ರೆ ಏನ್ ಮಾಡೋದು ಅಂತೀರಾ?. ಒಂದು ವೇಳೆ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯುಳ್ಳವರಾಗಿದ್ದರೆ ಮಿಕ್ಸರ್ ಬಳಸಿ ಮನೆಯಲ್ಲಿಯೇ ಹಿಟ್ಟು ಮಾಡಬಹುದು. ಇಲ್ಲವಾದಲ್ಲಿ ನೀವು ಹಿಟ್ಟು ಮಾಡುವ ಮಷಿನ್ ಸಹ ಖರೀದಿಸಬಹುದು. ಇಂದು ಮಿಕ್ಸರ್‌ನಲ್ಲಿ ಗೋಧಿ ಹಿಟ್ಟನ್ನು ಮಾಡುವ ಸುಲಭವಾದ ಮಾರ್ಗವನ್ನು ನಾವು ನಿಮಗೆ ಹೇಳಲಿದ್ದೇವೆ. ಇದರಿಂದ ನಿಮಗೆ ಮನೆಯಲ್ಲಿಯೇ ಶುದ್ಧ, ತಾಜಾ ಹಿಟ್ಟು ಸಿಗುತ್ತದೆ. ಈ ಹಿಟ್ಟಿನಿಂದ ತಯಾರಿಸಿದ ಚಪಾತಿ ಕೂಡ ಹೆಚ್ಚು ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ. ಒಮ್ಮೆ ನೀವು ಟ್ರೈ ಮಾಡಿ. ಹಾಗಾದ್ರೆ ಮಿಕ್ಸರ್‌ನಲ್ಲಿ ಗೋಧಿ ಹಿಟ್ಟನ್ನು ಮಾಡುವ ವಿಧಾನ ಹೇಗೆಂದು ನೋಡೋಣ ಬನ್ನಿ..
ಹಂತ 1: ನೀರಿನಲ್ಲಿ ನೆನೆಸಿಡಿ
ಮೊದಲು ಗೋಧಿಯನ್ನು 1-2 ಬಾರಿ ಚೆನ್ನಾಗಿ ತೊಳೆಯಿರಿ. ನಂತರ 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ಗೋಧಿಯನ್ನು ಊದಿಕೊಳ್ಳಲು ಮತ್ತು ಹಿಟ್ಟು ಚೆನ್ನಾಗಿ ಪುಡಿಯಾಗಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಗೋಧಿಯಿಂದ ಯಾವುದೇ ರಾಸಾಯನಿಕಗಳು ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ. ಈಗ ಗೋಧಿಯನ್ನು ಬಸಿದು ಹತ್ತಿ ಬಟ್ಟೆಯ ಮೇಲೆ ಬಿಸಿಲಿನಲ್ಲಿ ಹರಡಿ ಒಣಗಲು ಬಿಡಿ.
ಹಂತ 2: ಸ್ವಲ್ಪ ತೇವಾಂಶವಿರಲಿ
ಗೋಧಿ ಸಂಪೂರ್ಣವಾಗಿ ಒಣಗದಂತೆ ಎಚ್ಚರವಹಿಸಿ. ಯಾಕಂದ್ರೆ ಸ್ವಲ್ಪ ತೇವಾಂಶವಿದ್ದರಷ್ಟೇ ಹಿಟ್ಟು ಮೃದುವಾಗುತ್ತದೆ. ಗೋಧಿಯ ತೇವಾಂಶವನ್ನು ಪರೀಕ್ಷಿಸಲು ನಿಮ್ಮ ಮುಷ್ಟಿಯಲ್ಲಿ ಗೋಧಿಯನ್ನು ತುಂಬಿಸಿ. ನಂತರ ಅದನ್ನು ತೆರೆಯಿರಿ. ಎರಡು ಅಥವಾ ಮೂರು ಗೋಧಿ ಧಾನ್ಯಗಳು ನಿಮ್ಮ ಕೈಗೆ ಅಂಟಿಕೊಳ್ಳಬೇಕು. ಹಿಟ್ಟಾಗಲು ನಿಮಗೆ ಇಷ್ಟೊಂದು ತೇವಾಂಶವಿರುವ ಗೋಧಿ ಮಾತ್ರ ಬೇಕಾಗುತ್ತದೆ.
ಹಂತ 3: ಚಮಚದೊಂದಿಗೆ ಬೆರೆಸುತ್ತಾ ಹಿಟ್ಟು ಮಾಡಿ
ಈಗ ಮಧ್ಯಮ ಅಥವಾ ಸಣ್ಣ ಮಿಕ್ಸರ್ ಜಾರ್ ತೆಗೆದುಕೊಳ್ಳಿ. ಜಾರ್‌ಗೆ ಗೋಧಿ ಸೇರಿಸಿ ಮತ್ತು ಅದನ್ನು ಅರ್ಧಕ್ಕಿಂತ ಕಡಿಮೆ ತುಂಬಿಸಿ. ಆಗಾಗ್ಗೆ ರನ್ ಮಾಡಿ ನಿಲ್ಲಿಸಿ. ಹಾಗೆಯೇ ಚಮಚದೊಂದಿಗೆ ಬೆರೆಸುತ್ತಾ ಹಿಟ್ಟು ಮಾಡಿ. ಮಿಶ್ರಣವು ಹಿಟ್ಟಿನಷ್ಟು ನುಣ್ಣಗೆ ಆಗುವವರೆಗೆ ರುಬ್ಬುವುದನ್ನು ಮುಂದುವರಿಸಿ. ನೆನಪಿಡಿ. ಹಿಟ್ಟನ್ನು ಬೆರೆಸುತ್ತಲೇ ಇರಲು ಮರೆಯಬೇಡಿ.
ಹಂತ 4: ನಿಮಗೆ ಬೇಕಾದ ಜರಡಿಯಲ್ಲಿ ಶೋಧಿಸಿ
ಕೊನೆಯಲ್ಲಿ ಈ ಹಿಟ್ಟನ್ನು ಜರಡಿ ಅಥವಾ ಸಣ್ಣೆ ಮೂಲಕ ಶೋಧಿಸಿ. ಬೇಕಾದರೆ ಉಳಿದ ಒರಟಾದ ಗೋಧಿಯನ್ನು ರುಬ್ಬುವ ಗಿರಣಿಗೆ ಮತ್ತೆ ಹಾಕಿ. ಎಲ್ಲಾ ಹಿಟ್ಟನ್ನು ಇದೇ ರೀತಿ ಪುಡಿಮಾಡಿ. ನಿಮ್ಮ ಆದ್ಯತೆಗೆ ಅನುಗುಣವಾಗಿ ಹಿಟ್ಟನ್ನು ಉತ್ತಮ ಅಥವಾ ಒರಟಾದ ಜರಡಿ ಮೂಲಕ ಶೋಧಿಸಿ. ಗೋಧಿ ಹಿಟ್ಟು ರೆಡಿಯಾಗಿರುತ್ತದೆ. ನೀವು ಅದರಿಂದ ಚಪಾತಿ ಮಾಡಿದಾಗ ಅವು ವಿಶಿಷ್ಟ ರುಚಿಯನ್ನು ಹೊಂದಿರುವುದನ್ನ ನೀವು ಗಮನಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.