
ಹದಿಹರೆಯದಲ್ಲಿ ಪ್ರೀತಿ-ಪ್ರೇಮ ಎಂದು ಜೀವನವನ್ನೇ ಹಾಳು ಮಾಡಿಕೊಂಡವರಿದ್ದಾರೆ. ಹಾಗೆಯೇ, ಆ ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಂಡು ಜೀವನವನ್ನು ಸುಂದರವಾಗಿಸಿಕೊಂಡವರೂ ಇದ್ದಾರೆ. ಓದಿನ ಜತೆಜತೆಗೇ ಪ್ರೀತಿಯನ್ನೂ ಕಾಪಾಡಿಕೊಂಡು, ಜೀವನದಲ್ಲಿ ಸ್ವಂತಿಕೆ ರೂಢಿಸಿಕೊಂಡವರನ್ನು ಅಲ್ಲಲ್ಲಿ ಕಾಣಬಹುದು. ಆದರೆ, ಇದು ಅಪರೂಪ. ಪ್ರೀತಿಸಿದವರಿಗಾಗಿ ಓದನ್ನು ಅರ್ಧಕ್ಕೇ ತೊರೆದವರನ್ನೇ ಹೆಚ್ಚಾಗಿ ಕಾಣಬಹುದು. ಆದರೆ, ಹೈದರಾಬಾದಿನ ಈ ಹುಡುಗಿಯ ಕತೆ ವಿಭಿನ್ನ. ಈಕೆಯೂ ಬಹುತೇಕ ಹುಡುಗಿಯರಂತೆ ಹದಿನೆಂಟು ತುಂಬುವ ಮುನ್ನವೇ ಪ್ರೀತಿಯಲ್ಲಿ ಸಿಲುಕಿದ್ದಳು. ಮನೆಯವರಿಗೆ ತನ್ನ ಪ್ರೇಮದ ಸುಳಿವು ಸಿಕ್ಕಾಗ ಆತನ ಜತೆ ಮನೆಬಿಟ್ಟು ಓಡಿಹೋಗಿದ್ದಳು. ಆದರೆ, ಇನ್ನೂ ಹದಿನೇಳರ ಹುಡುಗಿ ಎಲ್ಲಿಗೆಂದು ಹೋಗಲು ಸಾಧ್ಯ? ಕೊನೆಗೊಂದು ದಿನ ಪೊಲೀಸರು ಆಕೆಯನ್ನು ರಕ್ಷಿಸಿದ್ದರು. ಆದರೆ, ಕೆಳವರ್ಗದ ಹುಡುಗನ ಜತೆ ಆ ವಯಸ್ಸಿನಲ್ಲೇ ಮನೆ ಬಿಟ್ಟು ಹೋದ ಹುಡುಗಿಯನ್ನು ಮನೆಯವರು ವಾಪಸ್ ಸೇರಿಸಿರಲಿಲ್ಲ. ಆಗ ಆಕೆಗೆ ನೆರವಾಗಿದ್ದು ಸರ್ಕಾರಿ ಅನಾಥಾಲಯ. ಅಲ್ಲೇ ಇದ್ದುಕೊಂಡು ಚೆನ್ನಾಗಿ ಓದಿದ ಹುಡುಗಿ ಈಗ ತೆಲಂಗಾಣ ರಾಜ್ಯದ ೧೨ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿ ಸಾಧನೆ ಮಾಡಿದ್ದಾಳೆ.
ಶ್ವೇತಾ (ಹೆಸರು ಬದಲಿಸಲಾಗಿದೆ) ಪ್ರೀತಿಸಿದವನಿಗಾಗಿ (Lover) ಮನೆ (Home), ಓದನ್ನೂ (Education) ಬಿಟ್ಟು ತೆರಳಿದ್ದಳು. ಆದರೆ, ಈಗ ಆಕೆಯ ಕನಸು, ಜೀವನ (Life) ಬದಲಾಗಿದೆ. ಈಕೆಗೆ ವಸತಿ ಕಲ್ಪಿಸಿದ್ದ ಹೆಣ್ಣುಮಕ್ಕಳ ಸರ್ಕಾರಿ ನಿಲಯದಲ್ಲಿ (Girls Home) 25ಕ್ಕೂ ಅಧಿಕ ಅನಾಥರು (Orphans) ಮತ್ತು ಇತರೆ ಹೆಣ್ಣುಮಕ್ಕಳಿದ್ದಾರೆ. ಇವರೆಲ್ಲರೂ ಈ ಬಾರಿ ಎಸ್ ಎಸ್ ಸಿ ಮತ್ತು ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ (Exams) ಉತ್ತಮ ಸಾಧನೆ ಮಾಡಿದ್ದಾರೆ. ಇಲ್ಲಿನ ಹೆಣ್ಣುಮಕ್ಕಳ ಸಾಧನೆ ಕಂಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಜೆಇಇ (JEE) ಮತ್ತು ನೀಟ್ (NEET) ಪರೀಕ್ಷೆ ಬರೆಸುವ ಉತ್ಸಾಹದಲ್ಲಿದೆ.
ಸರ್ಕಾರಿ ನಿಲಯದಲ್ಲಿ ಸೂಕ್ತ ನೆರವು (Help) ದೊರಕಿದ್ದರಿಂದ ಶ್ವೇತಾ ಕಲ್ಲಮ್ ಅಂಜಿ ರೆಡ್ಡಿ ವೊಕೆಷನಲ್ ಜ್ಯೂನಿಯರ್ ಕಾಲೇಜಿಗೆ ಸೇರಿಕೊಂಡಿದ್ದಳು. ಈಗ 945 ಅಂಕ ಪಡೆಯುವ ಮೂಲಕ ಕಾಲೇಜಿಗೆ ಟಾಪರ್ (Topper) ಆಗಿ ಮೂಡಿ ಬಂದಿದ್ದಾಳೆ. ವಿಶೇಷವೆಂದರೆ, ಶ್ವೇತಾಳಿಗೆ ಗಣಿತ (Maths) ಎಂದರೆ ಅಚ್ಚುಮೆಚ್ಚಿನ ವಿಷಯ. ಗಣಿತದಲ್ಲೇ ಹೆಚ್ಚಿನ ಅಧ್ಯಯನ (Study) ಮುಂದುವರಿಸುವ ಆಸೆ ಇವಳದ್ದು. ಬಿಕಾಂ ಓದುವ ಮೂಲಕ ಅಕೌಂಟೆನ್ಸಿಯಲ್ಲಿ (Accountancy) ಹೆಚ್ಚಿನ ಸಾಧನೆ ಮಾಡಿ ಮುಂದೆ ಪ್ರೊಫೆಸರ್ (Professor) ಆಗುವ ಆಕಾಂಕ್ಷೆ ಹೊಂದಿದ್ದಾಳೆ.
ಸಾಧನೆಗೆ ಬಡತನ ಅಡ್ಡಿಯೆಂಬುದು ಸುಳ್ಳು: ಗೌಂಡಿ ಕೆಲಸದಾತನ ಮಗಳಿಗೆ ಡಿಸ್ಟಿಂಕ್ಷನ್!
ಮನೆಗೆ ಕರೆದ ಪಾಲಕರು (Parents)
ಕಳೆದ ಕೆಲವು ತಿಂಗಳಿಂದ ಶ್ವೇತಾ ಪುನಃ ಪಾಲಕರ ಸಂಪರ್ಕಕ್ಕೂ ಬಂದಿದ್ದಾಳೆ. ಈಕೆ ಶಿಕ್ಷಣದಲ್ಲಿ ಮಾಡುತ್ತಿರುವ ಸಾಧನೆ (Achievement) ಕಂಡು ಅವರಿಗೂ ತೃಪ್ತಿಯಾಗಿದೆ. ಕಳೆದ ಎರಡು ವರ್ಷಗಳಿಂದ ಗಳಿಸುತ್ತಿರುವ ಅಂಕಗಳನ್ನು ನೋಡಿ ಈಕೆ ಜೀವನದಲ್ಲಿ ದಾರಿ ತಪ್ಪುತ್ತಿಲ್ಲ ಎನ್ನುವುದು ಮನವರಿಕೆ ಆಗಿದೆ. ಹೀಗಾಗಿ, ಮತ್ತೆ ಮನೆಗೆ ವಾಪಸ್ ಬರುವಂತೆ ಕರೆಯುತ್ತಿದ್ದಾರೆ. ಆದರೆ, ಶ್ವೇತಾ ಈ ಬಗ್ಗೆ ಇನ್ನೂ ಏನನ್ನೂ ನಿರ್ಧಾರ ಮಾಡಿಲ್ಲ. ಓದನ್ನು ಮುಗಿಸಿದ ಬಳಿಕ, ಆದಾಯ ಗಳಿಸುವಂತೆ ಆದಾಗ ಮನೆಗೆ ತೆರಳಬೇಕು ಎನ್ನುವ ಇಚ್ಛೆಯೂ ಆಕೆಗೆ ಇದೆ.
ಸಮಂತಾ 10ನೇ ತರಗತಿ ಮಾರ್ಕ್ಸ್‌ಕಾರ್ಡ್ ವೈರಲ್: ನಟಿ ಪಡೆದ ಅಂಕವೆಷ್ಟು ಗೊತ್ತಾ?
ಸಂಗಾತಿಯೊಂದಿಗೆ ಇದ್ದಿದ್ದರೆ…
ತನ್ನ ಸಂಗಾತಿಯ ಜತೆಗೇ ಇದ್ದಿದ್ದರೆ ಓದನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನಲು ಶ್ವೇತಾ ಸಿದ್ಧಳಿಲ್ಲ. ಅಂಕ (Marks) ಗಳಿಕೆಯಲ್ಲಿ ಇಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಬಗ್ಗೆ ಖಚಿತತೆ ಇಲ್ಲ. ಏಕೆಂದರೆ, ಆತನಿಗೂ ಇವಳ ಮ್ಯಾತ್ಸ್ ಪ್ರೀತಿಯ (Love) ಬಗ್ಗೆ ಗೊತ್ತಿತ್ತು. ಹೀಗಾಗಿ, ಖಂಡಿತ ನೆರವು ನೀಡುತ್ತಿದ್ದ ಎನ್ನುತ್ತಾಳೆ. ಆದರೆ, ಎಲ್ಲವನ್ನೂ ಏಕಾಂಗಿಯಾಗಿ ಹೋರಾಟ ಮಾಡಬೇಕಾಗುತ್ತಿತ್ತು ಎನ್ನುತ್ತಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.