
ಬೆಂಗಳೂರು (ಡಿ.1) : ರಾಜ್ಯದಲ್ಲಿನ ತಾಯಂದಿರ ಮರಣ ಅನುಪಾತ (ಎಂಎಂಆರ್)ದಲ್ಲಿ ಇಳಿಕೆ ದಾಖಲಾಗಿರುವುದಕ್ಕೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
2017-19ರ ಮಧ್ಯೆ ರಾಜ್ಯದಲ್ಲಿ ಪ್ರತಿ ಲಕ್ಷ ಗರ್ಭಿಣಿಯರಲ್ಲಿ 83 ಮಂದಿ ಮರಣವನ್ನಪ್ಪಿದ್ದರೆ 2018-20ರ ಸಾಲಿನಲ್ಲಿ ಮರಣವನ್ನಪ್ಪಿದವರ ಪ್ರಮಾಣ 69ಕ್ಕೆ ಇಳಿದಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯ ಮಾನದಂಡದ ಪ್ರಕಾರ 2030ರೊಳಗೆ ಪ್ರತಿ ಲಕ್ಷ ಬಾಣಂತಿಯರಲ್ಲಿನ ಮರಣ ದರ 70ಕ್ಕಿಂತ ಕಡಿಮೆಗೊಳಿಸಬೇಕಿದ್ದು ರಾಜ್ಯ ಈ ಗುರಿ ತಲುಪಿದೆ. ಆದರೆ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಬಾಣಂತಿಯರ ಮರಣ ಅನುಪಾತ ಕರ್ನಾಟಕದಲ್ಲಿದೆ.
ಡಿ.14ಕ್ಕೆ 'ನಮ್ಮ ಕ್ಲಿನಿಕ್'ಗೆ ಸಿಎಂ ಚಾಲನೆ: ಸಚಿವ ಸುಧಾಕರ್
ಕೇರಳದಲ್ಲಿ 19, ತೆಲಂಗಾಣ 43, ಆಂಧ್ರಪ್ರದೇಶ 45 ಮತ್ತು ತಮಿಳುನಾಡಿನಲ್ಲಿ 54 ಮರಣ ಅನುಪಾತವಿದೆ. ದಕ್ಷಿಣ ಭಾರತದ ರಾಜ್ಯಗಳ ಮರಣ ಅನುಪಾತ 49 ಇದೆ. ರಾಜ್ಯದ ಎಂಎಂಆರ್ ಶೇ. 16.87ರ ಪ್ರಗತಿ ಕಂಡಿದ್ದರೂ ಕೂಡ ತನ್ನ ನೆರೆಹೊರೆಯ ರಾಜ್ಯಗಳಿಂದ ಸಾಕಷ್ಟುಹಿಂದಿದೆ. 2014-16ರ ಸಾಲಿನಲ್ಲಿ 108 ಇದ್ದ ಮರಣ ಅನುಪಾತದಲ್ಲಿ ನಿರಂತರ ಇಳಿಕೆ ಕಂಡು 70ರೊಳಗೆ ಬಂದಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ‘2017-19ರ ಸಾಲಿನಲ್ಲಿ ಪ್ರತಿ ಲಕ್ಷಕ್ಕೆ 83 ಇದ್ದ ಮರಣ ಅನುಪಾತ 2018-20ರ ಸಾಲಿನಲ್ಲಿ 69ಕ್ಕೆ ಇಳಿಕೆ ಆಗಿರುವ ಸುದ್ದಿಯನ್ನು ಹಂಚಿಕೊಳ್ಳಲು ಸಂತಸ ಆಗುತ್ತದೆ. ರಾಜ್ಯಾದ್ಯಂತ ತಾಯಂದಿರು ಮತ್ತು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸುವ, ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞ ವೈದ್ಯರು ಮತ್ತು ಅರವಳಿಕೆ ತಜ್ಞರ ನೇಮಿಸುವ ನಮ್ಮ ಕ್ರಮಗಳಿಂದ ಮಾತೃ ಕಾಳಜಿಯ ಮೂಲಭೂತ ಸೌಕರ್ಯಗಳು ಮತ್ತು ಸಾಂಸ್ಥಿಕ ವ್ಯವಸ್ಥೆಯ ಗುಣಮಟ್ಟಗಳು ಗಣನೀಯ ಅಭಿವೃದ್ಧಿಯಾಗಿದೆ. ಭವಿಷ್ಯದಲ್ಲಿ ಮಹಿಳೆಯರಿಗೆ ಮೀಸಲಾಗಿರುವ ಕ್ಲಿನಿಕ್‌ಗಳು ಮತ್ತು ನಗರದಲ್ಲಿನ ನಮ್ಮ ಕ್ಲಿನಿಕ್‌ಗಳು ಗರ್ಭಿಣಿ, ಬಾಣಂತಿಯರ ಆರೋಗ್ಯ ಕಾಳಜಿಯನ್ನು ಇನ್ನಷ್ಟುಸುಧಾರಿಸಲಿದೆ’ ಎಂದಿದ್ದಾರೆ.
ನಮ್ಮ ಕ್ಲಿನಿಕ್ನಲ್ಲಿ ಎಲ್ಲರಿಗೂ ಶುಗರ್ ಟೆಸ್ಟ್: ಸಚಿವ ಸುಧಾಕರ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.