ಜಿಲ್ಲಾಧಿಕಾರಿಯಾಗ್ಬೇಕು, ಐಎಎಸ್ ಪರೀಕ್ಷೆ ಪಾಸಾಗ್ಬೇಕೆಂದು ಅನೇಕರು ಕನಸು ಹೊಂದಿರುತ್ತಾರೆ. ಆದ್ರೆ ಮದುವೆ, ಮಕ್ಕಳ ನೆಪದಲ್ಲಿ ಕನಸನ್ನು ಕೈಬಿಡ್ತಾರೆ. ಅಂಥವರಿಗೆ ಚಿತ್ರದುರ್ಗದ ಡಿಸಿ ದಿವ್ಯಾ ಪ್ರಭು ಸ್ಫೂರ್ತಿಯ ಸೆಲೆಯಾಗ್ತಾರೆ.
ಪ್ರತಿಯೊಬ್ಬ ಸಾಧಕರ ಹಿಂದೆ ಕಷ್ಟದ ಕಥೆಯೊಂದಿರುತ್ತದೆ. ಗುರಿ ಮುಟ್ಟೋದು ಅಷ್ಟು ಸುಲಭವಲ್ಲ. ದಾರಿಯಲ್ಲಿ ಬರುವ ಅನೇಕ ಅಡೆತಡೆಗಳನ್ನು ಎದುರಿಸಿ, ಗೆಲ್ಲುವ ಗುರಿಯೊಂದಿಗೆ ಮುನ್ನುಗ್ಗಿ, ಸಾಧಿಸಿ ತೋರಿಸಿದ ಅನೇಕರು ನಮ್ಮಲ್ಲಿದ್ದಾರೆ. ನಮ್ಮಲ್ಲಿ ಸಾಕಷ್ಟು ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ, ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದಲ್ಲದೆ, ಅನೇಕ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಅದ್ರಲ್ಲಿ ಚಿತ್ರದುರ್ಗ ಜಿಲ್ಲೆಯ ಐ.ಎ.ಎಸ್ ಅಧಿಕಾರಿ ಶ್ರೀಮತಿ ದಿವ್ಯಾ ಪ್ರಭು ಕೂಡ ಸೇರಿದ್ದಾರೆ. ದಾವಣಗೆರೆಯಲ್ಲಿ ಜೀ ಕನ್ನಡ ವಾಹಿನಿ ನಡೆಸಿಕೊಟ್ಟ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಐ.ಎ.ಎಸ್. ಅಧಿಕಾರಿ ದಿವ್ಯಾ ಪ್ರಭು, ಕೋಟ್ಯಾಂತರ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಮಾತುಗಳನ್ನು ಆಡಿದ್ದಾರೆ.
ಶ್ರೀಮತಿ ದಿವ್ಯಾ ಪ್ರಭು (Divya Prabhu) ಯಾರು? : ಚಿತ್ರದುರ್ಗ (Chitradurga) ದ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮೂಲತಃ ತಮಿಳುನಾಡಿನವರು. ಕೊಯಮತ್ತೂರಿನಲ್ಲಿ ಬಿಎಸ್ಸಿ ಎಗ್ರಿಕಲ್ಚರ್ ಮುಗಿಸಿದ ದಿವ್ಯಾ, ಫಾರೆಸ್ಟ್ ಆಫೀಸರ್ ಆಗಿ ಕೆಲಸ ಮಾಡಿದ್ದರು. ಗುರಿ ಬಿಡದ ದಿವ್ಯಾ 2012ರಲ್ಲಿ ಬ್ಯಾಚ್ ನಲ್ಲಿ ಐ.ಎ.ಎಸ್ (I.A.S) ಪರೀಕ್ಷೆ ಪಾಸ್ ಆಗಿ, ನಾನಾ ಹುದ್ದೆಗಳನ್ನು ಅಲಂಕರಿಸಿ ಈಗ ದುರ್ಗದ ಜಿಲ್ಲಾಧಿಕಾರಿ ಹುದ್ದೆಯನ್ನು ಸಂಭಾಳಿಸ್ತಿದ್ದಾರೆ.
ಮದ್ಯಪಾನದ ಜೊತೆ ಮರ್ಲಿನ್ ಮೇಲೆ ಪ್ರೀತಿ! ಮೋಸಗಾರ ದೆವ್ವಕ್ಕೆ ಡಿವೋರ್ಸ್ ಕೊಟ್ಟ ಪತ್ನಿ
ಗರ್ಭಿಣಿಯಾಗಿದ್ದಾಗ್ಲೇ ಪರೀಕ್ಷೆ ಬರೆದ ದಿವ್ಯಾ ಪ್ರಭು : ನನ್ನಂತೆ ಹೆಣ್ಣು ಮಕ್ಕಳು ಐ.ಎ.ಎಸ್ ಅಧಿಕಾರಿಯಾಗಿ ಅಧಿಕಾರಕ್ಕೆ ಬಂದ್ರೆ ನನಗೆ ಖುಷಿ ಎನ್ನುವ ದಿವ್ಯಾ, ತಮ್ಮ ಸಾಧನೆಯ ಕಥೆಯನ್ನು ಹೇಳಿದ್ದಾರೆ. ಬಾಲ್ಯದಲ್ಲಿಯೇ ದಿವ್ಯಾ ಐ.ಎ.ಎಸ್ ಅಧಿಕಾರಿಯಾಗ್ಬೇಕು ಎಂದು ಕನಸು ಕಂಡಿದ್ದರಂತೆ. ಕಾಲೇಜ್ ಮುಗಿಸಿ, ಐಎಫ್ ಎಸ್ ಪರೀಕ್ಷೆ ತೆಗೆದುಕೊಂಡ ಅವರು ಮೊದಲ ಬಾರಿಗೆ ಪರೀಕ್ಷೆ ಪಾಸ್ ಆಗಿ ಫಾರೆಸ್ಟ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆದ್ರೆ ಮನಸ್ಸಿನಲ್ಲಿ ಐ.ಎ.ಎಸ್ ಆಗ್ಬೇಕೆಂಬ ಛಲ ಹಾಗೇ ಇತ್ತು. ಈ ಮಧ್ಯೆ ಮದುವೆಯಾದ ದಿವ್ಯಾ, ಗರ್ಭಿಣಿಯಾದ್ರು. ಮಗು ಹೊಟ್ಟೆಯಲ್ಲಿ ಇರುವಾಗ್ಲೇ ಐ.ಎ.ಎಸ್ ಕನಸನ್ನು ನನಸು ಮಾಡಿಕೊಳ್ಳಲು ಮುಂದಾದ ದಿವ್ಯಾ, ಹೆರಿಗೆಗೆ ಒಂದು ವಾರ ಇರುವಾಗ ಪೂರ್ವಭಾವಿ ಪರೀಕ್ಷೆ ಬರೆದಿದ್ದರು. ಪ್ರಯಾಣ ಅಪಾಯ ಎಂದು ವೈದ್ಯರು ಹೇಳಿದ್ರೂ ರಿಸ್ಕ್ ತೆಗೆದುಕೊಂಡು ಪರೀಕ್ಷೆ ಬರೆದ ದಿವ್ಯಾ, ಆ ಪರೀಕ್ಷೆ ಪಾಸ್ ಆಗಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಬೇಕಿತ್ತು. ಮಗು ಸಣ್ಣದಿರುವ ಕಾರಣ ಓದುವುದು ಕಷ್ಟವೆಂದು ಅನೇಕರು ಹೇಳಿದ್ರೂ ಕೇಳದ ದಿವ್ಯಾ, ಮಗು ನಾಲ್ಕನೇ ತಿಂಗಳಿನಲ್ಲಿರುವಾಗ ಮುಖ್ಯ ಪರೀಕ್ಷೆ ಬರೆದು ತೇರ್ಗಡೆಯಾದ್ರು. ಮಗು 7ನೇ ತಿಂಗಳಿನಲ್ಲಿರುವಾಗ ಸಂದರ್ಶನಕ್ಕೆ ಹಾಜರಾಗಿದ್ದ ದಿವ್ಯಾ ಪ್ರಭು, ಮಗು 9ನೇ ತಿಂಗಳಿರುವಾಗ ಟ್ರೈನಿಂಗ್ ಗೆ ಹಾಜರಾದ್ರು.
Inspiring Story : ಟ್ಯಾಕ್ಸಿ ಓಡಿಸ್ತಾನೇ ಯುಕೆ ವಿವಿಗೆ ಪ್ರವೇಶ ಪಡೆದ ದಿಟ್ಟೆ
ದಿವ್ಯಾ ಪ್ರಭು ಹೇಳುವ ಕಿವಿ ಮಾತೇನು? : ಪುರುಷರಿಗೆ ಹೋಲಿಕೆ ಮಾಡಿದ್ರೆ ಎಲ್ಲ ಕೆಲಸದಲ್ಲೂ ಹೆಣ್ಣು ಹೆಚ್ಚಿಗೆ ಎಫರ್ಟ್ ಹಾಕ್ಬೇಕು. ಇದು ಸತ್ಯ ಎನ್ನುವ ದಿವ್ಯಾ, ನಮ್ಮ ಕನಸಿಗೆ ನಾವೇ ಜವಾಬ್ದಾರರು. ನಮ್ಮ ಕನಸನ್ನು ಬೇರೆಯವರು ನನಸು ಮಾಡಲು ಸಾಧ್ಯವಿಲ್ಲ. ನಾವೇ ನನಸು ಮಾಡಬೇಕು. ನಾನು ಕಂಡ ಕನಸನ್ನು ನನಸು ಮಾಡಬೇಕೆಂದು ನಾನು ಪಣತೊಟ್ಟಿದ್ದೆ. ಗರ್ಭಿಣಿಯಾಗಿರುವಾಗ ಪರೀಕ್ಷೆ ಯಾಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಮಗುವನ್ನು ನೋಡಿಕೊಂಡು ಮುಖ್ಯಪರೀಕ್ಷೆ ಪಾಸ್ ಆಗೋದು ಸಾಧ್ಯವೇ ಇಲ್ಲ ಎಂದಿದ್ದರು. ಆದ್ರೆ ನಾನು ಸಾಧಿಸಿ ತೋರಿಸಿದ್ದೇನೆ ಎನ್ನುತ್ತಾರೆ ದಿವ್ಯಾ ಪ್ರಭು. ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ ಈ ವಿಶ್ವದಲ್ಲಿ ಸಾಧಿಸದೆ ಇರುವ ಯಾವುದೇ ವಿಷ್ಯವಿಲ್ಲ. ನಿಮ್ಮ ಕನಸು ಸ್ಪಷ್ಟವಾಗಿರಬೇಕು. ರಾತ್ರಿ ಮಲಗಿದಾಗ ಕಾಣೋದು ಕನಸಲ್ಲ. ರಾತ್ರಿ ಮಲಗಲು ಬಿಡದ ಕನಸು ಕನಸು ಎನ್ನುವ ದಿವ್ಯಾ, ನಿಮ್ಮ ಕನಸನ್ನು ನನಸು ಮಾಡಲು ಪ್ರಯತ್ನಿಸಿ ಎನ್ನುತ್ತಾರೆ.